ಸಾಯಿಪ್ರಣೀತ್‌ ಮುಡಿಗೆ ಕಿರೀಟ

7

ಸಾಯಿಪ್ರಣೀತ್‌ ಮುಡಿಗೆ ಕಿರೀಟ

Published:
Updated:
ಸಾಯಿಪ್ರಣೀತ್‌ ಮುಡಿಗೆ ಕಿರೀಟ

ಬ್ಯಾಂಕಾಕ್‌: ಆರಂಭಿಕ ಗೇಮ್‌ನಲ್ಲಿ ಹಿನ್ನಡೆ ಎದುರಾದರೂ ಛಲಬಿಡದೆ ಹೋರಾಡಿದ ಭಾರತದ ಬಿ. ಸಾಯಿ ಪ್ರಣೀತ್‌ ಅವರು ಥಾಯ್ಲೆಂಡ್‌ ಓಪನ್‌ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ಪ್ರಣೀತ್‌ 17–21, 21–18, 21–19ರಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ಅವರ ಸವಾಲು ಮೀರಿನಿಂತರು. ಈ ಮೂಲಕ ಭಾರತದ ಆಟಗಾರ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದರು.

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಜೊನಾಥನ್‌ ಉತ್ತಮ ಆರಂಭ ಪಡೆದುಕೊಂಡರು. ಮೊದಲ ಗೇಮ್‌ನ ಶುರುವಿನಿಂದಲೇ ಚುರುಕಾಗಿ ಆಡಿದ ಅವರು 3–0ರ ಮುನ್ನಡೆ ಗಳಿಸಿದರು.

ಮೂರನೇ ಶ್ರೇಯಾಂಕಿತ ಆಟಗಾರ ಪ್ರಣೀತ್‌ ಇದರಿಂದ ವಿಶ್ವಾಸ ಕಳೆದುಕೊಳ್ಳಲಿಲ್ಲ. ಲಯ ಕಂಡು ಕೊಂಡು ಆಡಿದ ಅವರು 4–4 ಮತ್ತು 7–7ರಲ್ಲಿ ಸಮಬಲ ಮಾಡಿಕೊಂಡರು.

ಈ ಹಂತದಲ್ಲಿ ಜೊನಾಥನ್‌ ಆಟ ರಂಗು ಪಡೆಯಿತು. ಆಕರ್ಷಕ ಸರ್ವ್‌ ಮತ್ತು ಅಮೋಘ ಕ್ರಾಸ್‌ಕೋರ್ಟ್‌ ಹೊಡೆತಗಳನ್ನು ಬಾರಿಸಿದ ಅವರು 14–11ರ ಮುನ್ನಡೆ ತಮ್ಮದಾಗಿಸಿಕೊಂಡರು. ಬಳಿಕ ಪ್ರಣೀತ್‌ ಸತತ ಮೂರು ಪಾಯಿಂಟ್ಸ್‌ ಹೆಕ್ಕಿ 14–14ರಲ್ಲಿ ಸಮಬಲ ಸಾಧಿಸಿದರು. ಇಷ್ಟಾದರೂ ಇಂಡೊ ನೇಷ್ಯಾದ ಆಟಗಾರ ಛಲ ಬಿಡಲಿಲ್ಲ. ಚಾಕಚಕ್ಯತೆ ಯಿಂದ ಆಡಿದ ಅವರು ಗೇಮ್‌ ಜಯಿಸಿ ಮುನ್ನಡೆ ಪಡೆದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 24ನೇ ಸ್ಥಾನ ಹೊಂದಿರುವ ಪ್ರಣೀತ್ ಆರಂಭಿಕ ನಿರಾಸೆಯಿಂದ ಎದೆಗುಂದಲಿಲ್ಲ. ಎರ ಡನೇ ಗೇಮ್‌ನಲ್ಲಿ ಭಾರತದ ಆಟಗಾರ ತುಂಬು ವಿಶ್ವಾಸದಿಂದ ಹೋರಾಡಿದರು.

ದೀರ್ಘ ರ‍್ಯಾಲಿಗಳಿಗೆ ಒತ್ತು ನೀಡಿದ ಅವರು 5–0ರ ಮುನ್ನಡೆ ಪಡೆದರು. ಬಳಿಕ ಇದನ್ನು 9–3ಕ್ಕೆ ಹೆಚ್ಚಿಸಿ ಕೊಂಡರು. ಈ ಹಂತದಲ್ಲಿ ಹೈದರಾ ಬಾದ್‌ನ ಪ್ರಣೀತ್‌ ಹಲವು ತಪ್ಪುಗಳನ್ನು ಮಾಡಿದರು.

ಇದರ ಲಾಭ ಎತ್ತಿಕೊಂಡ ಜೊನಾಥನ್‌ ಸತತ ಆರು ಪಾಯಿಂಟ್ಸ್‌ ಕಲೆಹಾಕಿ 9–9ರ ಸಮಬಲಕ್ಕೆ ಕಾರಣರಾದರು. ಆ ನಂತರ  ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು.

ಹೀಗಾಗಿ 15–15ರಲ್ಲಿ ಸಮಬಲ ಏರ್ಪಟ್ಟಿತು. ಬಳಿಕ  ಪ್ರಣೀತ್‌ ಒತ್ತಡ ಮೀರಿ ನಿಂತರು. ಸಂದಿಗ್ಧ ಪರಿಸ್ಥಿತಿಯಲ್ಲೂ ಲೀಲಾಜಾಲವಾಗಿ ಪಾಯಿಂಟ್ಸ್‌ ಕಲೆಹಾಕಿ ಗೇಮ್‌ ಗೆದ್ದುಕೊಂಡರು. ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಗೇಮ್‌ ಕುತೂಹಲದ ಗಣಿ ಎನಿಸಿತ್ತು.

ಶುರುವಿನಲ್ಲಿ ಇಬ್ಬರೂ 2–2ರಲ್ಲಿ ಸಮಬಲ ಹೊಂದಿದ್ದರು. ಬಳಿಕ ಭಾರತದ ಆಟಗಾರನ ಸರ್ವ್‌ ಮುರಿದ ಜೊನಾಥನ್‌  ತಮ್ಮ ಸರ್ವ್‌ನಲ್ಲಿ ನಿರಂತರವಾಗಿ ಪಾಯಿಂಟ್ಸ್‌ ಸಂಗ್ರಹಿಸಿ 8–3ರ ಮುನ್ನಡೆ ಕಂಡುಕೊಂಡರು.

ಈ ಹಂತದಲ್ಲಿ  ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ತಂತ್ರ ಅನುಸರಿಸಿದ ಪ್ರಣೀತ್‌ ಸತತ ನಾಲ್ಕು ಪಾಯಿಂಟ್ಸ್‌ ಗಳಿಸಿ ಹಿನ್ನಡೆಯನ್ನು 7–8ಕ್ಕೆ ತಗ್ಗಿಸಿಕೊಂಡರು. ನಂತರ 9–9, 17–17, 19–19ರಲ್ಲಿ ಸಮಬಲ ಕಂಡುಬಂದಿದ್ದರಿಂದ ಅಭಿ ಮಾನಿಗಳ ಎದೆಬಡಿತವೂ ಜೋರಾಗಿತ್ತು. 

ರೋಚಕ ಘಟ್ಟದಲ್ಲಿ ನಿರಾತಂಕವಾಗಿ ಆಡಿದ ಭಾರತದ ಆಟಗಾರ ಚುರುಕಾಗಿ ಎರಡು ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ತೋರಣ ಕಟ್ಟಿದರು.

*

ಇದೊಂದು ಕಠಿಣ ಹೋರಾಟ ವಾಗಿತ್ತು. ಜೊನಾಥನ್‌ ತುಂಬಾ ಚೆನ್ನಾಗಿ ಆಡಿದರು. ದೀರ್ಘ ರ‍್ಯಾಲಿಗಳಿಗೆ ಒತ್ತು ನೀಡಿದ್ದರಿಂದ ಎದುರಾಳಿಯ ಸವಾಲು ಮೀರಿನಿಲ್ಲಲು ಸಾಧ್ಯವಾಯಿತು.

-ಬಿ. ಸಾಯಿಪ್ರಣೀತ್‌,

ಭಾರತದ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry