ಪ್ರತಿ ಐಜಿಪಿ ವಲಯದಲ್ಲೂ ಸೈಬರ್ ಲ್ಯಾಬ್ ಸ್ಥಾಪನೆ

7

ಪ್ರತಿ ಐಜಿಪಿ ವಲಯದಲ್ಲೂ ಸೈಬರ್ ಲ್ಯಾಬ್ ಸ್ಥಾಪನೆ

Published:
Updated:
ಪ್ರತಿ ಐಜಿಪಿ ವಲಯದಲ್ಲೂ ಸೈಬರ್ ಲ್ಯಾಬ್ ಸ್ಥಾಪನೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಐಜಿಪಿ ವಲಯ ಮಟ್ಟದಲ್ಲಿ ಪ್ರತ್ಯೇಕ ಸೈಬರ್ ಲ್ಯಾಬ್ ಪ್ರಾರಂಭಿಸಲು ಗೃಹ ಇಲಾಖೆಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ಪ್ರಸ್ತಾವ ಸಲ್ಲಿಸಿದೆ.

‘ಈಗಾಗಲೇ ಸಿಐಡಿ ಅಧೀನದಲ್ಲಿ ಬಳ್ಳಾರಿ, ದಾವಣಗೆರೆ, ಕಲಬುರ್ಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವಲಯದಲ್ಲೂ ಒಂದು ಲ್ಯಾಬ್‌ ಸ್ಥಾಪಿಸಿದರೆ ತ್ವರಿತ ತನಿಖೆಗೂ ಅನುಕೂಲವಾಗುತ್ತದೆ’ ಎಂದು ಎಫ್‍ಎಸ್‍ಎಲ್ ಅಧಿಕಾರಿಗಳು ಹೇಳಿದರು.

‘ಎಫ್‌ಎಸ್‌ಎಲ್‌ನ ಹಿಂದಿನ ನಿರ್ದೇಶಕಿ ಡಾ.ರೋಹಿಣಿ ಕಟೋಚ್ ಸೇಪಟ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್‌.ಕೆ.ದತ್ತ

ಅವರ ಮೂಲಕ ಈ ಪ್ರಸ್ತಾವ ಸಲ್ಲಿಸಿದ್ದಾರೆ. ಇದಕ್ಕೆ ಗೃಹ ಇಲಾಖೆ ಸಹ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕೆಲವೇ ದಿನಗಳಲ್ಲಿ ಲ್ಯಾಬ್‌ಗಳನ್ನು ಪ್ರಾರಂಭಿಸುವ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ’ ಎಂದು ಎಫ್‌ಎಸ್‌ಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತಾವ ಹೀಗಿದೆ:  ‘ಪ್ರತಿ ಲ್ಯಾಬ್‌ನಲ್ಲೂ ಒಬ್ಬರು ಸಹಾಯಕ ನಿರ್ದೇಶಕರು, ಇಬ್ಬರು ತಾಂತ್ರಿಕ ತಜ್ಞರು ಹಾಗೂ ಐವರು ಸಹಾಯಕರನ್ನು ನೇಮಕ ಮಾಡಬೇಕು. ಹೀಗಾದರೆ, ಆಯಾ ವಲಯದ ವ್ಯಾಪ್ತಿಯಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಬಗ್ಗೆ ಪರಿಶೀಲಿಸಿ ವರದಿ ಕೊಡಬಹುದು. ಇದರಿಂದ ಅಲ್ಪ ಸಮಯದಲ್ಲೇ ತನಿಖೆ ಪೂರ್ಣಗೊಳ್ಳುತ್ತದೆ’ ಎಂದು ಪ್ರಸ್ತಾವದಲ್ಲಿದೆ.‌

‘ಆನ್‌ಲೈನ್ ವಂಚನೆ ಸಂಬಂಧ ಸ್ಥಳೀಯ ಠಾಣೆಗಳಲ್ಲೂ ನಿತ್ಯ ಹತ್ತಾರು ದೂರುಗಳು ದಾಖಲಾಗುತ್ತಿವೆ. ಈ ಪೈಕಿ ಶೇ 20ರಷ್ಟು ಪ್ರಕರಣಗಳಲ್ಲಿ ಪೊಲೀಸರು ಎಫ್‌ಎಸ್‌ಎಲ್ ಅಭಿಪ್ರಾಯ ಕೇಳುತ್ತಿದ್ದಾರೆ. ಆದ್ಯತೆ ಮೇರೆಗೆ ಪರಿಶೀಲಿಸಿ ವರದಿ ಕೊಡುತ್ತಿರುವ ಕಾರಣ ಕೆಲ ಪ್ರಕರಣಗಳನ್ನು ಪರಿಶೀಲಿಸಲು ಐದಾರು ತಿಂಗಳು ಸಮಯ ಹಿಡಿಯುತ್ತಿದೆ’ ಎಂದು ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ವರ್ಷಕ್ಕೆ 20 ಸಾವಿರ ವರದಿ!: ‘ಎಫ್‌ಎಸ್‌ಎಲ್‌ನಲ್ಲಿ ಸದ್ಯ 180 ಸಿಬ್ಬಂದಿ ಮಾತ್ರ ಇದ್ದಾರೆ. ಇಷ್ಟು ಸಿಬ್ಬಂದಿ ಪ್ರತಿವರ್ಷ ಸುಮಾರು 20 ಸಾವಿರ ಪ್ರಕರಣಗಳಲ್ಲಿ ಪೊಲೀಸರಿಗೆ ವರದಿ ಕೊಡುತ್ತಿದ್ದಾರೆ.  ಸೈಬರ್ ಅಪರಾಧಗಳಿಗಾಗಿಯೇ ಪ್ರತ್ಯೇಕ ಲ್ಯಾಬ್ ಮಾಡಿದರೆ ಸಿಬ್ಬಂದಿಯ ಒತ್ತಡವೂ ನೀಗುತ್ತದೆ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಈಗ 300 ಸಿಬ್ಬಂದಿ ನೇಮಕಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ತಂತ್ರಜ್ಞಾನ ಪರಿಣತರ ಪ್ರಮಾಣವೇ ಶೇ 80ರಷ್ಟು ಇರಲಿದೆ. ಇನ್ನು ಐದಾರು ತಿಂಗಳಲ್ಲಿ ಎಫ್‌ಎಸ್‌ಎಲ್ ಸಿಬ್ಬಂದಿ ಕೊರತೆಯಿಂದ ಮುಕ್ತವಾಗಲಿದೆ’ ಎಂದು ಮಾಹಿತಿ ಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry