ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನೆಡಲು ಎಲ್ಲಿವೆ 10 ಲಕ್ಷ ಸಸಿಗಳು?

ಮಹಾನಗರ ಪಾಲಿಕೆಯ ಘೋಷಣೆಗೂ ವಾಸ್ತವಕ್ಕೂ ಅಜಗಜಾಂತರ
Last Updated 4 ಜೂನ್ 2017, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಈ ಮಳೆಗಾಲದಲ್ಲಿ 10 ಲಕ್ಷ ಸಸಿ ನೆಡುವುದಾಗಿ ಬಿಬಿಎಂಪಿ ಘೋಷಿಸಿದೆ. ಸಸಿಗಳನ್ನು ಪಡೆಯಲು ನಾಗರಿಕರೂ ಆಸಕ್ತಿ ತೋರಿದ್ದಾರೆ. ಆದರೆ, ನೆಡಲು ಸಿದ್ಧವಾಗಿರುವುದು 2 ಲಕ್ಷ ಸಸಿಗಳು ಮಾತ್ರ!

ಭಾರಿ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ವಿಚಾರದಲ್ಲಿ  ಬಿಬಿಎಂಪಿಯ ಘೋಷಣೆಗೂ ವಾಸ್ತವಕ್ಕೂ  ಅಜಗಜಾಂತರವಿದೆ ಎಂದು ಪರಿಸರ ಕಾರ್ಯಕರ್ತರು ಆರೋಪ ಮಾಡಿದ್ದಾರೆ. 

ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿಯಲಾಗುತ್ತಿದೆ ಎಂಬ ಆಕ್ರೋಶವನ್ನು ತಣಿಸಿ, ಜನರ ವಿಶ್ವಾಸ ಗಳಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಸಸಿಗಳನ್ನು ಬೆಳೆಸುವ  ಯೋಜನೆಯನ್ನು ಬಿಬಿಎಂಪಿ ಬಜೆಟ್‌ನಲ್ಲಿ ಪ್ರಕಟಿಸಿತ್ತು.    ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ‘15 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುತ್ತೇವೆ’ ಎಂದು ಘೋಷಿಸಿದ್ದರು.  ಇದನ್ನು ಕಾರ್ಯರೂಪಕ್ಕೆ ತರಲು ಅಗತ್ಯ  ಸಿದ್ಧತೆ ನಡೆದೇ ಇಲ್ಲ ಎಂಬುದು ಹಸಿರುಪ್ರೇಮಿಗಳ ಆರೋಪ.

ಸಾರ್ವಜನಿಕರಿಗೆ ಉಚಿತವಾಗಿ ಗಿಡಗಳನ್ನು ಪೂರೈಸಲು ಬಿಬಿಎಂಪಿ ಇತ್ತೀಚೆಗೆ ‘ಗ್ರೀನ್‌ ಆ್ಯಪ್‌’ ಬಿಡುಗಡೆ ಮಾಡಿತ್ತು. ಮನೆಯ ಆವರಣ ಅಥವಾ ಸುತ್ತಲಿನ ಖಾಲಿ ಜಾಗದಲ್ಲಿ ಗಿಡ ಬೆಳೆಸಲು ಮುಂದಾಗುವ ನಾಗರಿಕರು ಈ ಆ್ಯಪ್‌ ಮೂಲಕ ಮಾಹಿತಿ ನೀಡಿದರೆ ಅವರಿಗೆ ಪಾಲಿಕೆ ಗಿಡ ಒದಗಿಸಲಿದೆ. ಈ ಮೂಲಕ 9 ಲಕ್ಷ ಗಿಡಗಳನ್ನು ಉಚಿತವಾಗಿ ವಿತರಿಸುವ ಗುರಿ ಪಾಲಿಕೆಯದ್ದು.  ಆದರೆ ಅಷ್ಟೊಂದು ಸಂಖ್ಯೆಯಲ್ಲಿ ಗಿಡಗಳು ಎಲ್ಲಿವೆ ಎಂದು ಪರಿಸರ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

‘ಮಾಗಡಿ ರಸ್ತೆಯ ಭಿಕ್ಷುಕರ ಕಾಲೊನಿ, ಕೂಡ್ಲು ನರ್ಸರಿ,  ಕೆಂಪಾಪುರ, ಯಲಹಂಕದ ಅಟ್ಟೂರು, ಡೇರಿ ಸರ್ಕಲ್‌ನಲ್ಲಿ ಬಿಬಿಎಂಪಿ ನರ್ಸರಿಗಳನ್ನು ಹೊಂದಿದೆ. ಇಲ್ಲಿ ಒಟ್ಟು 10 ಲಕ್ಷ ಸಸಿಗಳು ಇವೆ. ಜನವರಿ ತಿಂಗಳಿನಲ್ಲಿ ಸಸಿ ಬೆಳೆಸುವ ಪ್ರಕ್ರಿಯೆ ಆರಂಭಿಸಿದ್ದೆವು. ಈಗ ಗಿಡಗಳೆಲ್ಲ 3 ಅಡಿಯಷ್ಟು ಎತ್ತರಕ್ಕೆ ಬೆಳೆದಿವೆ. ಒಂದೆರಡು ತಿಂಗಳಲ್ಲಿ ಈ ಗಿಡಗಳು ನೆಡಲು ಸಿದ್ಧವಾಗಲಿವೆ’ ಎಂದು ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಗರದಲ್ಲಿ ನಾವು ಪ್ರತಿವರ್ಷ ಒಂದು ಲಕ್ಷ ಗಿಡಗಳನ್ನು ಬೆಳೆಸುತ್ತೇವೆ. ಆದರೆ, ಈ ವರ್ಷ ದೊಡ್ಡ ಪ್ರಮಾಣದಲ್ಲಿ ಆಂದೋಲನ ನಡೆಸುತ್ತಿದ್ದೇವೆ. ಇದಕ್ಕಾಗಿ ತರಾತುರಿಯಲ್ಲಿ ಸಿದ್ಧತೆ ನಡೆಸಿದೆವು. ಈ ಸಲವೂ ನಗರದ ವಿವಿಧೆಡೆ 1 ಲಕ್ಷ ಸಸಿಗಳನ್ನು ನೆಡುತ್ತೇವೆ. ಉಳಿದ 9 ಲಕ್ಷ ಗಿಡಗಳನ್ನು ಜನರಿಗೆ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಇಷ್ಟೊಂದು ಪ್ರಮಾಣದಲ್ಲಿ ಸಸಿಗಳು ಲಭ್ಯ ಇಲ್ಲ ಎನ್ನುತ್ತಾರೆ ಪರಿಸರ ಕಾರ್ಯಕರ್ತರು.

‘ಐದು ನರ್ಸರಿಗಳಿಗೆ ಭೇಟಿ ನೀಡಿ ಗಿಡಗಳ ಸ್ಥಿತಿಗತಿ ಪರಿಶೀಲನೆ ನಡೆಸಿದ್ದೇವೆ. ಈ ವರ್ಷ 1.5 ಲಕ್ಷ ಗಿಡಗಳು ಸಿಗಬಹುದು. ಉಳಿದ  ಗಿಡಗಳು ಬೆಳವಣಿಗೆ ಹೊಂದಲು ಇನ್ನೂ ಐದಾರು ತಿಂಗಳುಗಳಾದರೂ ಬೇಕು’ ಎಂದು ಪರಿಸರ ಕಾರ್ಯಕರ್ತ ಈಶ್ವರಪ್ಪ ಮಡಿವಾಳಿ ವಿಶ್ಲೇಷಿಸುತ್ತಾರೆ.

‘ದೊಡ್ಡ ಸಾಧನೆ ಮಾಡಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳಲು ಪಾಲಿಕೆ ಹೊರಟಿದೆ. ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡಿಲ್ಲ.  ಐದಾರು ಅಡಿ ಬೆಳೆದ ಗಿಡಗಳು ಮಾತ್ರ ಬದುಕಿ ಉಳಿಯುತ್ತವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಖಾಲಿ ಜಾಗಗಳಲ್ಲಿ, ರಸ್ತೆ ಬದಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ 1 ಲಕ್ಷ ಗಿಡಗಳನ್ನು ಬೆಳೆಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅದಕ್ಕೆ ಇನ್ನೂ ಟೆಂಡರ್‌ ಕರೆದಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಎರಡು ತಿಂಗಳು ಬೇಕು’ ಎಂದು ಅವರು ಹೇಳುತ್ತಾರೆ.

ಗಿಡಗಳ ನಿರ್ವಹಣೆ ಇಲ್ಲ: ಗಿಡಗಳ ಕೊರತೆ ಇದೆ ಎಂದು  ‘ಹಸಿರು ಬೆಂಗಳೂರು’ ಸಂಘಟನೆಯೂ ದೂರಿದೆ. 

‘ಸಸಿ ನೆಟ್ಟ ಬಳಿಕ ಅವುಗಳ ನಿರ್ವಹಣೆ ಮಾಡುವುದಿಲ್ಲ. ಬೇಸಿಗೆಯಲ್ಲಿ ಅವುಗಳಿಗೆ ನೀರು ಉಣಿಸುವುದಿಲ್ಲ. ಈ ಪ್ರಕ್ರಿಯೆಯೇ ದೊಡ್ಡ ನಾಟಕ’ ಎಂದು ಸಂಘಟನೆಯ ಸದಸ್ಯರೊಬ್ಬರು  ಆರೋಪಿಸುತ್ತಾರೆ.

‘ಬಿಬಿಎಂಪಿ ಬಳಿಯಲ್ಲಿ ವೈವಿಧ್ಯಮಯವಾದ ಗಿಡಗಳೇ ಇಲ್ಲ. ಐದಾರು ಪ್ರಭೇದಗಳ ಗಿಡಗಳನ್ನಷ್ಟೇ ಬೆಳೆಸುತ್ತಿದೆ. ಇದರಿಂದ ಹೆಚ್ಚಿನ ಉಪಯೋಗ ಆಗುವುದಿಲ್ಲ’ ಎಂದು ಅವರು ತಿಳಿಸುತ್ತಾರೆ.

‘ಕಳೆದ ವರ್ಷ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಒಂದಷ್ಟು ಸಸಿಗಳನ್ನು ನೆಟ್ಟು ಅಧಿಕಾರಿಗಳು ಸುಮ್ಮನಾದರು. ಈ ಸಸಿಗಳಿಗೆ ರಕ್ಷಾಕವಚಗಳನ್ನು ಅಳವಡಿಸಲಾಗಿದೆಯೇ, ಅವುಗಳ ಪೋಷಣೆ ಜವಾಬ್ದಾರಿ ಯಾರಿಗೆ ಸೇರಿದ್ದು ? ನೆಟ್ಟ ಸಸಿಗಳ ಗತಿ ಏನಾಗಿದೆ ಎಂಬ ಪ್ರಶ್ನೆಗಳಿಗೆ ಯಾವ ಅಧಿಕಾರಿಯ ಬಳಿಯೂ  ಉತ್ತರವಿಲ್ಲ’ ಎಂದು  ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರೀನ್‌ ಆ್ಯಪ್‌: ಲಕ್ಷ ಸಸಿಗೆ ಬೇಡಿಕೆ
ಬಿಬಿಎಂಪಿ ಈ ಬಾರಿ ನಗರದಲ್ಲಿ 10 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸಲು ಆರಂಭಿಸಿರುವ ‘ಗ್ರೀನ್‌ ಆ್ಯಪ್‌’ಗೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಸಸಿಗಳಿಗೆ ನಾಗರಿಕರಿಂದ ಬೇಡಿಕೆ ಬಂದಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಸಸ್ಯ ಕ್ಷೇತ್ರಗಳಲ್ಲಿ ಬೆಳೆಸುತ್ತಿರುವ ಸಸಿಗಳ ಸ್ಥಿತಿಗತಿ ಪರಿಶೀಲಿಸಲು ಮೇಯರ್‌, ಉಪಮೇಯರ್‌ ಅವರನ್ನು ಒಳಗೊಂಡ  ತಂಡ ರಚಿಸಲಾಗಿತ್ತು.

ಯಾವ್ಯಾವ ಗಿಡಗಳು?
ಹೊಂಗೆ, ಮಹಾಗನಿ, ನೇರಳೆ, ನೆಲ್ಲಿಕಾಯಿ, ಹೊಳೆ ದಾಸವಾಳ, ಕಾಡು ಬಾದಾಮಿ, ತಪಸಿ, ಬೇವು, ಹೂ–ಅರಸಿ, ತಬೂಬಿಯಾ, ಚೆರ್ರಿ, ಬಸವನಪಾದ, ಸಂಪಿಗೆ, ಜಕರಂದ, ಶಬೂಬಿಯಾ ಗೈಕಾನಾ, ಸೀಮಾರೂಬಾ ಸಸಿಗಳು ಬಿಬಿಎಂಪಿಯ ನರ್ಸರಿಗಳಲ್ಲಿ ಲಭ್ಯ ಇವೆ.

ಅಂಕಿ ಅಂಶಗಳು

₹38 ಕೋಟಿ
ಬಿಬಿಎಂಪಿ ಬಜೆಟ್‌ನಲ್ಲಿ ಈ ವರ್ಷ ಅರಣ್ಯೀಕರಣಕ್ಕೆ ಮೀಸಲಿಟ್ಟ ಮೊತ್ತ

₹6 ಕೋಟಿ
ರಸ್ತೆ ಬದಿ ಗಿಡ ನೆಡಲು ನಿಗದಿಪಡಿಸಿದ ಹಣ

9 ಲಕ್ಷ
ನಾಗರಿಕರಿಗೆ ವಿತರಣೆ ಮಾಡುವ ಸಸಿಗಳು

1 ಲಕ್ಷ
ಬಿಬಿಎಂಪಿ ನೆಡಲಿರುವ ಸಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT