‘ಬೆಳೆಯಲು ನನಗೂ ಚೂರು ಜಾಗ ಕೊಡಿ’

7

‘ಬೆಳೆಯಲು ನನಗೂ ಚೂರು ಜಾಗ ಕೊಡಿ’

Published:
Updated:
‘ಬೆಳೆಯಲು ನನಗೂ ಚೂರು ಜಾಗ ಕೊಡಿ’

ಬೆಂಗಳೂರು: ‘ನನ್ನ ಸುತ್ತ ಕಾಂಕ್ರೀಟ್‌ ಮೆತ್ತಿ, ಮಳೆಯ ನೀರನ್ನು ಸ್ವಲ್ಪವೂ ಇಂಗದಂತೆ ಮಾಡಿದ್ದೀರಿ. ದಯವಿಟ್ಟು ನನ್ನ ಬೆಳವಣಿಗೆಗೆ ಸ್ವಲ್ಪವಾದರೂ ಜಾಗ ಮೀಸಲಿಡಿ. ಇದು ನಿಮಗೂ ಒಳ್ಳೆಯದು’

–ನಗರದ ಪಾದಚಾರಿ ಮಾರ್ಗಗಳಲ್ಲಿ ಸಿಮೆಂಟ್‌, ಕಲ್ಲು, ಟಾರುಗಳನ್ನು ಮೆತ್ತಿಸಿಕೊಂಡು ಮೂಕವೇದನೆ ಅನುಭವಿಸುತ್ತಿರುವ ಮರಗಳ ಕಳಕಳಿಯ ಮನವಿ ಇದು.

ಪಾದಚಾರಿ ಮಾರ್ಗಗಳನ್ನು ಅಂದಗೊಳಿಸುವ ಸಲುವಾಗಿ ಅದರಲ್ಲಿರುವ ಮರಗಳ ಸುತ್ತ ಸ್ವಲ್ಪವೂ ಜಾಗ ಬಿಡದೆ ಕಾಂಕ್ರೀಟ್‌ ಮೆತ್ತಲಾಗಿದೆ.  ಇಲ್ಲಿರುವ ನಿರ್ಜೀವಿ ವಿದ್ಯುತ್‌ ಕಂಬಗಳಿಗೆ ಸಿಮೆಂಟ್‌ ಹಾಕಿ ಭದ್ರಗೊಳಿಸಿರುವ ರೀತಿಯಲ್ಲಿಯೇ ಮರಗಳಿಗೂ ಬೇರುಗಳು ಕಾಣದಂತೆ ಸಿಮೆಂಟ್‌ ಹಾಕಿದ್ದಾರೆ.

ಮನೆ ಮುಂದೆ ದೂಳು ಏಳಬಾರದು ಎಂಬ ಕಾರಣಕ್ಕೆ ಕೆಲವು ಮಂದಿ ಮರಗಳ ಬುಡದ ಸುತ್ತಲೂ ಟಾರು ಸವರಿ ಚೊಕ್ಕ ಮಾಡಿಕೊಂಡಿದ್ದಾರೆ.

ಈ  ದೃಶ್ಯಗಳು ಬಸವನಗುಡಿ ಬಳಿ ಕಂಡು ಬಂದವು.

 

‘ನಗರದಲ್ಲಿ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಆದರೆ, ರಸ್ತೆಗಳಲ್ಲಿ ನೀರು ಇಂಗುವ ವ್ಯವಸ್ಥೆ ಇಲ್ಲದಿರುವುದರಿಂದ ಅದು ಚರಂಡಿ ಪಾಲಾಗುತ್ತಿದೆ. ಮರಗಳ ಬುಡದ ಮೂಲಕವಾದರೂ ಸ್ವಲ್ಪ ಪ್ರಮಾಣದ ನೀರು ಇಂಗಿ ಅಂತರ್ಜಲ ವೃದ್ಧಿ ಆಗುತ್ತಿತ್ತು. ಮರಗಳ ಸುತ್ತ ಕಾಂಕ್ರೀಟ್‌ ಹಾಕಿ ಅದನ್ನು ತಪ್ಪಿಸಿದ್ದಾರೆ’ ಎಂದು ಬಸವನಗುಡಿ ನಿವಾಸಿ ರವಿ ತಿಳಿಸಿದರು.

‘ನೀರು ಅಮೂಲ್ಯ ಎಂದು ಗೊತ್ತಿದ್ದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಈ ರೀತಿ  ಕೆಲಸ ಮಾಡುತ್ತಿರುವುದು ಬೇಸರವಾಗಿದೆ’ ಎಂದರು.

ವೃಕ್ಷ ಸಂಸ್ಥೆಯ ವಿಜಯ್‌ ನಿಶಾಂತ್‌ ‘ಸುಮಾರು 2,000 ಪ್ರಭೇದಗಳ ಗಿಡಗಳನ್ನು ಬೆಳೆಸುವಷ್ಟು ಫಲವತ್ತತೆ ನಗರದ ಮಣ್ಣಿನಲ್ಲಿದೆ. ಆದರೆ, ಅದರ ಪ್ರಾಮುಖ್ಯತೆ ಇಲ್ಲಿನವರಿಗೆ ಗೊತ್ತಿಲ್ಲ. ಅಭಿವೃದ್ಧಿ ಕಾರಣ ಹೇಳಿ ಮರಗಳನ್ನು ಕಡಿಯುತ್ತಾರೆ. ನೆಟ್ಟ ಸಸಿಗಳನ್ನು ಸರಿಯಾಗಿ ಪೋಷಿಸುವುದೂ ಇಲ್ಲ’ ಎಂದರು.

ನಗರ ಯೋಜನಾ ತಜ್ಞ ವಿ.ರವಿಚಂದರ್‌, ‘ಮರಗಳ ಸುತ್ತ ಕಾಂಕ್ರೀಟ್‌ ಹಾಕಿದರೆ ಅದು ಬೇರನ್ನು ದುರ್ಬಲಗೊಳಿಸುತ್ತದೆ. ಬುಡದ ಸುತ್ತಲೂ ಕನಿಷ್ಠ ಒಂದು ಅಡಿಯಾದರೂ ಜಾಗ ಬಿಡಬೇಕು. ಇಲ್ಲದಿದ್ದರೆ, ಸಣ್ಣ ಸಣ್ಣ ರಂಧ್ರಗಳಿರುವ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಹಾಕಬೇಕು. ಆಗ ಮಳೆ ನೀರು ಇಂಗುತ್ತದೆ’ ಎಂದು ಸಲಹೆ ನೀಡಿದರು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಹರಿಣಿ ನಾಗೇಂದ್ರ, ‘ಮರಗಳನ್ನು ಉಳಿಸಲು  ಪ್ರಯತ್ನಿಸಬೇಕೇ ಹೊರತು, ಅವುಗಳನ್ನು ಸಾಯಿಸುವ ಪ್ರಯತ್ನ ಮಾಡಬಾರದು. ನಗರದಲ್ಲಿರುವ ಬೃಹತ್‌ ಮರಗಳು ನೆರಳು ನೀಡುವ ಜೊತೆಗೆ ಮಾಲಿನ್ಯವನ್ನೂ ನಿಯಂತ್ರಿಸುತ್ತವೆ.’

‘ಅನೇಕ ಸ್ಥಳೀಯ ಹಕ್ಕಿ ಪ್ರಭೇದಗಳು, ಕೀಟಗಳು ಸೇರಿದಂತೆ ವೈವಿಧ್ಯಮಯ ಜೀವಿಗಳಿಗೆ ಮರಗಳು ಆಶ್ರಯ ನೀಡುತ್ತಿವೆ. ತುಂಬಾ ಹಳೆಯ ಮರಗಳು  ಗಾತ್ರದಲ್ಲೂ ಭಾರಿ ದೊಡ್ಡದಾಗಿವೆ. ಇವುಗಳನ್ನು ಕಡಿಯುವುದರಿಂದ ಜೀವವೈವಿಧ್ಯ, ತಾಪಮಾನದ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ಮರ ಗಣತಿಯ ವರದಿಯಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry