ಶಿಲ್ಪವನದಲ್ಲಿ ಅರಳಿದ ವರ್ಣಲೋಕ

7
ರವೀಂದ್ರ ಕಲಾಕ್ಷೇತ್ರ ಆವರಣ

ಶಿಲ್ಪವನದಲ್ಲಿ ಅರಳಿದ ವರ್ಣಲೋಕ

Published:
Updated:
ಶಿಲ್ಪವನದಲ್ಲಿ ಅರಳಿದ ವರ್ಣಲೋಕ

ಬೆಂಗಳೂರು: ಹಸಿರು ಹುಲ್ಲುಹಾಸಿನ ಮೇಲೆ ವಿಶಾಲವಾಗಿ ಆವರಿಸಿದ್ದ ಮರಗಳ ನೆರಳು.  ಇಲ್ಲಿ ಕಲ್ಲಿನ ಬೆಂಚುಗಳ ಮೇಲೆ ಕ್ಯಾನ್ವಾಸ್‌ ಇಟ್ಟುಕೊಂಡು ಕಲಾವಿದರು  ಚಿತ್ರರಚನೆಯಲ್ಲಿ ತೊಡಗಿದ್ದರೆ,  ಕಲಾಸಕ್ತರು  ಕುತೂಹಲದಿಂದ ಅದನ್ನು ಕಣ್ತುಂಬಿಕೊಂಡರು.

ಕಲಾಕೃತಿಯ ರಚನೆ ಹಾಗೂ ಅರ್ಥದ ಕುರಿತು ಕಲಾಸಕ್ತರು ಕಲಾವಿದರಿಂದಲೇ ನೇರವಾಗಿ ಮಾಹಿತಿ ಪಡೆದರು.

ಬೆಂಗಳೂರು ಕಲಾ ಪ್ರತಿಷ್ಠಾನವು ರವೀಂದ್ರ ಕಲಾಕ್ಷೇತ್ರ ಆವರಣದ ಶಿಲ್ಪವನದಲ್ಲಿ ಭಾನುವಾರ ಆಯೋಜಿಸಿದ್ದ ‘ಲೆಟ್ಸ್‌ ಡ್ರಾ ಟುಗೆದರ್‌’ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು.

ಎಸ್‌.ಜಿ.ವಾಸುದೇವ, ಜೆ.ಎಂ.ಎಸ್‌. ಮಣಿ, ಎಸ್.ಕೃಷ್ಣಪ್ಪ, ಅಮರೇಶ್ ಬಿಜ್ಜಳ, ಕೆ.ಸುರೇಶ್‌ ವೆಲಾ, ರಾಣಿ ರೇಖಾ, ಸುಹಾಸ್‌ ಚೌಹಾಣ್‌, ಡಿ.ಎಂ.ವೀರೇಶ್‌, ವೀರಣ್ಣ ಕರಡಿ, ಪಿ.ಟಿ.ಸ್ಟೀಫನ್‌ ಅವರಂತಹ ಹಿರಿಯ ಕಲಾವಿದರ ಕರಚಳಕದಿಂದ ಕಲಾಕೃತಿಗಳು ಅರಳುವ ಪರಿ ಕಲಾಸಕ್ತರಲ್ಲಿ ಬೆರಗು ಮೂಡಿಸಿತು. 

ತೆಂಗಿನ ಮರ, ಜನ, ಕನ್ನಡ ಅಕ್ಷರ–ಅಂಕಿಗಳನ್ನು ವಾಸುದೇವ ಅವರು ಕುಂಚದಲ್ಲಿ ಮೂಡಿಸಿದರು. ಮಣಿ ಅವರು ಕುದುರೆ ಏರಿ ಬರುವ ರಾಜಕುವರನಿಗಾಗಿ ಕಾತರದಿಂದ ಕಾಯುವ ಕನ್ಯಾಮಣಿಯನ್ನು ಚಿತ್ರಿಸಿದರು. ಯುವ ಕಲಾವಿದ ದುಷ್ಯಂತ ಅವರ ಪೆನ್‌ ಡ್ರಾಯಿಂಗ್‌ನಲ್ಲಿ ಬಸ್‌, ಲಾರಿ, ಕಾರು, ಜೀಪುಗಳು ಮೂಡಿಬಂದವು. ಅಮರೇಶ್  ರಚಿಸಿದ ಹೋರಿ ಕಾಳಗದ ಚಿತ್ರ ಆಸಕ್ತರ ಗಮನ ಸೆಳೆಯಿತು.

ಬಾದಾಮಿಯ ವೀರಣ್ಣ ಕರಡಿ ಅವರು  ನಾಯಿಕೊಡೆ, ಕಂಬಳದ ಕೋಣ, ಎತ್ತಿನ ಮುಖದ ಮನುಜ ಹಾಗೂ ನಗರಗಳಲ್ಲಿ ಹಸುಗಳು ತಿನ್ನುವ ವಸ್ತುಗಳನ್ನು ಅದರ ಹೊಟ್ಟೆಯಲ್ಲೇ ರಚಿಸುವ ಮೂಲಕ ನೋಡುಗರ ಆಸಕ್ತಿ ಕೆರಳಿಸಿದರು. ಎಸ್‌.ಕೃಷ್ಣಪ್ಪ ಅವರ ಕೈಯಿಂದ ಮೂಡಿದ ಜನಪದ ನೃತ್ಯದ ಚಿತ್ರ ಸೊಗಸಾಗಿತ್ತು.

ಕಣ್ಣೆದುರೇ ರೂಪ ತಳೆದ ಈ ಕಲಾಕೃತಿಗಳನ್ನು ಕೆಲವರು ಖರೀದಿಸಿದರು.

‘ಚಿತ್ರ ಪ್ರದರ್ಶನ ನೋಡಲು ಗ್ಯಾಲರಿಗಳಿಗೆ ಹೆಚ್ಚು ಜನರು ಹೋಗುವುದಿಲ್ಲ. ಕಲಾವಿದರೊಂದಿಗೆ ಮಾತನಾಡುವುದಿಲ್ಲ. ಇಂತಹ ಕಾರ್ಯಕ್ರಮಗಳು ಕಲಾಸಕ್ತರು ಮತ್ತು ಕಲಾವಿದರ ನಡುವೆ ಸಂಪರ್ಕ ಏರ್ಪಡಿಸಲು ನೆರವಾಗುತ್ತವೆ’ ಎಂದು ಎಸ್‌.ಜಿ.ವಾಸುದೇವ ಹೇಳಿದರು.

‘ಜನರಲ್ಲಿ ಕಲಾ ಪ್ರೀತಿ ಹೆಚ್ಚಿಸಬೇಕು.  ಪ್ರತಿಮನೆಯ ಗೋಡೆಯಲ್ಲೂ ಕಲಾಕೃತಿಗಳು ರಾರಾಜಿಸುವಂತಾಗಬೇಕು ಎನ್ನುವ ಕಾರಣಕ್ಕೆ  ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದರು.

‘ಇಲ್ಲಿ ಕಲಾವಿದರೊಂದಿಗೆ ಮಾತುಕತೆ ನಡೆಸುವ ಅವಕಾಶವಿದೆ. ಯುವ ಕಲಾವಿದರಿಗೆ ಮಾರ್ಗದರ್ಶನ ದೊರೆಯುತ್ತದೆ’ ಎಂದು ಹೇಮಾ–ಶಶಾಂಕ್‌ ದಂಪತಿ ಅನಿಸಿಕೆ ಹಂಚಿಕೊಂಡರು.

ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಬಿ.ಕಾಳೆ, ‘ನಗರದಲ್ಲಿ ಒತ್ತುವರಿ ತೆರವುಗೊಳಿಸಿರುವ 4,500 ಎಕರೆ ಜಮೀನಿದೆ. ಕಲಾ ಉದ್ಯಾನ ಸ್ಥಾಪಿಸಲು ಪ್ರತಿಷ್ಠಾನದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ಅದನ್ನು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಗಮನಕ್ಕೆ ತಂದು ಇದಕ್ಕೆ ನೆರವಾಗುತ್ತೇನೆ’ ಎಂದು ಭರವಸೆ ನೀಡಿದರು.

* ‘ಲೆಟ್ಸ್‌ ಡ್ರಾ ಟುಗೆದರ್‌’ ಕಾರ್ಯಕ್ರಮವನ್ನು ನಗರದ ಬೇರೆಬೇರೆ ಪ್ರದೇಶಗಳಿಗೆ ವಿಸ್ತರಿಸುತ್ತೇವೆ. ತಿಂಗಳಿನ 3ನೇ ಭಾನುವಾರ ಇದನ್ನು ನಡೆಸುತ್ತೇವೆ.

-ಎಸ್‌.ಜಿ.ವಾಸುದೇವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry