ಪಾಕಿಸ್ತಾನ ಎದುರು ಗೆದ್ದ ವಿರಾಟ್ ಬಳಗ

7
ಕಾಡಿದ ಮಳೆಯ ನಡುವೆ ಸ್ಫೋಟಿಸಿದ ಭಾರತದ ನಾಲ್ವರು ಬ್ಯಾಟ್ಸ್‌ಮನ್‌ಗಳು

ಪಾಕಿಸ್ತಾನ ಎದುರು ಗೆದ್ದ ವಿರಾಟ್ ಬಳಗ

Published:
Updated:
ಪಾಕಿಸ್ತಾನ ಎದುರು ಗೆದ್ದ ವಿರಾಟ್ ಬಳಗ

ಲಂಡನ್‌: ಸ್ಫೋಟಿಸಿದ ಬ್ಯಾಟ್ಸ್‌ಮನ್‌ ಗಳು ಮತ್ತು ಮಿಂಚು ಹರಿಸಿದ ಬೌಲರ್‌ಗಳು ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಯ ತಂದುಕೊಟ್ಟರು.

ಎಜ್‌ಬಾಸ್ಟನ್‌ನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಪಾಕಿಸ್ತಾನ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದಡಿ 124 ರನ್‌ಗಳ ಜಯ ಸಾಧಿಸಿತು. ಮಳೆಯಿಂದಾಗಿ 48 ಓವರ್‌ ಗಳಿಗೆ ಸೀಮಿತಗೊಳಿಸಿದ ಪಂದ್ಯದಲ್ಲಿ ಭಾರತ ಕೇವಲ ಮೂರು ವಿಕೆಟ್ ಕಳೆದುಕೊಂಡು 319 ರನ್‌ ಗಳಿಸಿತು.

ಗುರಿ ಬೆನ್ನತ್ತಿದ ಪಾಕಿಸ್ತಾನ ವೇಗಿಗಳಾದ ಉಮೇಶ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ, ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರ ದಾಳಿಗೆ ಸುಲಭವಾಗಿ ಮಣಿಯಿತು. 41 ಓವರ್‌ಗಳಲ್ಲಿ 289 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 33.4 ಓವರ್‌ಗಳಲ್ಲಿ 164 ರನ್‌ಗಳಿಗೆ ಪತನಗೊಂಡಿತು. ಮೊದಲ ವಿಕೆಟ್‌ಗೆ ಅಜರ್ ಅಲಿ (50; 65 ಎಸೆತ, 6 ಬೌಂಡರಿ) ಮತ್ತು ಅಹಮ್ಮದ್ ಶೆಹಜಾದ್ 47 ರನ್‌ ಗಳಿಸಿದ್ದು ಬಿಟ್ಟರೆ ಪಾಕಿಸ್ತಾನ ಇನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟ ಕಂಡುಬರಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಮಹಮ್ಮದ್ ಹಫೀಜ್‌ 33 ರನ್‌ ಗಳಿಸಿದರು.

 

ಉತ್ತಮ ಜೊತೆಯಾಟ

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್‌ ಮೊದಲ ವಿಕೆಟ್‌ ಗೆ 136 ರನ್‌ ಸೇರಿಸಿದರೆ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್‌ ಮೂರನೇ ವಿಕೆಟ್‌ಗೆ 93 ರನ್‌ ಸೇರಿಸಿದರು. ಟಾಸ್‌ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನದ ವೇಗಿ ಮಹಮ್ಮದ್ ಅಮೀರ್ ಮೊದಲ ಓವರ್‌ನಲ್ಲಿ ಒಂದೂ ರನ್ ಬಿಟ್ಟು ಕೊಡದೆ ರೋಹಿತ್ ಶರ್ಮಾ ಅವರನ್ನು ಕಾಡಿದರು.

ಎರಡನೇ ಓವರ್‌ನಲ್ಲೇ ನಾಯಕ ಸರ್ಫರಾಜ್ ಅಹಮ್ಮದ್‌ ಸ್ಪಿನ್‌ ದಾಳಿ ನಡೆಸಲು ನಿರ್ಧರಿಸಿ ಕುತೂಹಲ ಮೂಡಿಸಿದರು. ಹೊಸ ಚೆಂಡನ್ನು ಚೆನ್ನಾಗಿ ಬಳಸಿಕೊಂಡ ಎಡಗೈ ಸ್ಪಿನ್ನರ್‌ ಐಮದ್‌ ವಾಸಿಮ್‌ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಮೊದಲ ನಾಲ್ಕು ಓವರ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ ಗಳು ಆತುರ ತೋರದೆ ಪಿಚ್‌ನಲ್ಲಿ ನೆಲೆಯೂರಲು ಯತ್ನಿಸಿದರು. ಪಿಚ್‌ಗೆ ಹೊಂದಿಕೊಂಡ ನಂತರ ರನ್‌ ಗಳಿಕೆಗೆ ವೇಗ ತುಂಬಿದರು. ಐದನೇ ಓವರ್‌ನ ಎರಡನೇ ಎಸೆತವನ್ನು ಬೌಂಡರಿಗೆ ಅಟ್ಟಿದ ರೋಹಿತ್ ಶರ್ಮಾ ಆಕ್ರಮಣ  ಕಾರಿ ಬ್ಯಾಟಿಂಗ್‌ಗೆ ನಾಂದಿ ಹಾಡಿದರು. ಆರು, ಏಳು ಮತ್ತು ಒಂಬತ್ತನೇ ಓವರ್‌ ನಲ್ಲೂ ಅವರು ತಲಾ ಒಂದೊಂದು ಬೌಂಡರಿ ಸಿಡಿಸಿದರು.

10ನೇ ಓವರ್‌ ನಲ್ಲಿ ಧವನ್‌ ಕೂಡ ಬೌಂಡರಿ ಗಳಿಸಿದರು. 10 ಓವರ್‌ ಮುಕ್ತಾಯ  ಗೊಂಡಾಗ ಭಾರತದ ಮೊತ್ತ 46 ಆಯಿತು. ನಂತರವೂ ಭಾರತದ ಜೋಡಿ ಕೆಟ್ಟ ಹೊಡೆತಗಳಿಗೆ ಕೈ ಹಾಕಲಿಲ್ಲ. ರಿಯಾಜ್ ಹಾಕಿದ 16ನೇ ಓವರ್‌ನಲ್ಲಿ ರೋಹಿತ್ ಮತ್ತು ಧವನ್ ತಲಾ ಒಂದೊಂದು ಬೌಂಡರಿ ಗಳಿಸಿದರು.

ನಂತರ ಒಂದೊಂದೇ ರನ್ ಹೆಕ್ಕಿದ ರೋಹಿತ್‌ 19ನೇ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಅರ್ಧಶತಕ ಪೂರೈಸಿದರು. 20ನೇ ಓವರ್‌ನಲ್ಲಿ ಶಿಖರ್ ಧವನ್‌ ಪ್ರೇಕ್ಷಕರಿಗೆ ರೋಮಾಂಚನ ನೀಡಿದರು.

ರಿಯಾಜ್‌ ಅವರನ್ನು ಮೂರು ಬಾರಿ ಬೌಂಡರಿಗೆ ಅಟ್ಟಿದ ಅವರು ಈ ಓವರ್‌ನಲ್ಲಿ ಒಟ್ಟು 17 ರನ್ ಕದ್ದರು. ಓವರ್‌ನ ಕೊನೆಯ ಎಸೆತದಲ್ಲಿ ಒಂಟಿ ರನ್ ಗಳಿಸಿ ಅರ್ಧಶತಕವನ್ನೂ ಪೂರೈಸಿದರು. ಶಬಾದ್ ಖಾನ್ ಹಾಕಿದ ಮುಂದಿನ ಓವರ್‌ನಲ್ಲಿ ಸಿಕ್ಸರ್ ಸಿಡಿಸಿ ಮಿಂಚಿದರು. 25ನೇ ಓವರ್‌ನಲ್ಲಿ ಶಾಬಾದ್‌ ಖಾನ್ ಅವರಿಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು.

ರೋಹಿತ್‌ಗೆ ಪಾಕ್ ವಿರುದ್ಧ ಹೆಚ್ಚು ಮೊತ್ತ

ಇನ್ನೊಂದು ತುದಿಯಲ್ಲಿ ಸರಾಗವಾಗಿ ಬ್ಯಾಟ್‌ ಬೀಸುತ್ತಿದ್ದ ರೋಹಿತ್‌ 69 ರನ್‌ ಗಳಿಸಿದಾಗ ಎರಡು ಮೈಲಿಗಲ್ಲುಗಳನ್ನು ದಾಟಿದರು. ಇದು ಪಾಕಿಸ್ತಾನ ವಿರುದ್ಧ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಅತ್ಯಧಿಕ ವೈಯಕ್ತಿಕ ಮೊತ್ತ.

ರೋಹಿತ್ ಶರ್ಮಾ ಜೊತೆಗೂಡಿದ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. 37ನೇ ಓವರ್‌ನಲ್ಲಿ ರೋಹಿತ್ ರನೌಟ್ ಆದ ನಂತರ ಯುವರಾಜ್ ಸಿಂಗ್ ಮತ್ತು ಕೊಹ್ಲಿ ಪಂದ್ಯದ ಗತಿಯನ್ನೇ ಬದಲಿಸಿ ದರು. ಇವರಿಬ್ಬರ ಅಬ್ಬರದ ಸಹಾಯ ದಿಂದ ಕೊನೆಯ 10 ಓವರ್‌ಗಳಲ್ಲಿ ಭಾರತಕ್ಕೆ 117 ರನ್‌ಗಳು ಹರಿದು ಬಂದವು.

ಒಂದು ರನ್‌ ಗಳಿಸಿದ್ದಾಗ ಶಾಬಾದ್ ಖಾನ್ ಎಸೆತದಲ್ಲಿ ಹಸನ್ ಅಲಿ ಅವ ರಿಂದ ಜೀವದಾನ ಪಡೆದ ಯುವರಾಜ್‌ ನಂತರ ಬೌಂಡರಿ– ಸಿಕ್ಸರ್‌ಗಳ ಮೂಲಕ ಮಿಂಚಿದರು. ಕೊಹ್ಲಿ ಕೂಡ ಉತ್ತಮ ಹೊಡೆತಗಳ ಮೂಲಕ ರಂಜಿಸಿದರು. ಹಸನ್ ಅಲಿ ಎಸೆತವನ್ನು ಸಿಕ್ಸರ್‌ಗೆ ಎತ್ತಿ ಅವರು ಅರ್ಧಶತಕ ಪೂರೈಸಿದರು. ನಂತರದ ಓವರ್‌ನಲ್ಲಿ ರಿಯಾಜ್ ಅವರನ್ನು ಒಂದು ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು.

ಇದೇ ಓವರ್‌ನಲ್ಲಿ ಬೌಂಡರಿಯೊಂದಿಗೆ ಯುವರಾಜ್ ಸಿಂಗ್‌ ಅರ್ಧಶತಕ ಪೂರೈಸಿದರು. ಹಸನ್ ಅಲಿ ಅವರಿಗೆ ಯುವರಾಜ್ ಸಿಂಗ್ ವಿಕೆಟ್‌ ಒಪ್ಪಿಸಿದಾಗ ಇನಿಂಗ್ಸ್ ಮುಕ್ತಾಯಕ್ಕೆ ಎರಡು ಓವರ್ ಬಾಕಿ ಇತ್ತು. ಈ ಸಂದರ್ಭದಲ್ಲಿ ಕೊಹ್ಲಿ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಸಿಕ್ಸರ್‌ಗಳ ಮೂಲಕ ಗ್ಯಾಲರಿಗಳಲ್ಲಿ ರೋಮಾಂಚನ ಮೂಡಿಸಿದರು.

ಕಾಡಿದ ಮಳೆ

ಭಾರತದ ಇನಿಂಗ್ಸ್ ನಡುವೆ ಎರಡು ಬಾರಿ ಮಳೆ ಕಾಡಿತು. ಭಾರತ 9.5 ಓವರ್‌ಗಳಲ್ಲಿ 46 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. 50 ಓವರ್‌ಗಳ ನಂತರ ಇನಿಂಗ್ಸ್ ಮತ್ತೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಓವರ್‌ಗಳ ಕಡಿತ ಮಾಡಿರಲಿಲ್ಲ.

33.1 ಓವರ್‌ ಆಗಿದ್ದಾಗ ಮತ್ತೊಮ್ಮೆ ಮಳೆ ಸುರಿಯಿತು. ಆಗ ತಂಡದ ಮೊತ್ತ ಒಂದು ವಿಕೆಟ್‌ಗೆ 173 ರನ್ ಆಗಿತ್ತು. ಪಂದ್ಯವನ್ನು 48 ಓವರ್‌ಗಳಿಗೆ ಸೀಮಿತ ಗೊಳಿಸಲಾಯಿತು. ಪಾಕಿಸ್ತಾನ ಇನಿಂಗ್ಸ್‌ನ 4.5 ಓವರ್‌ ಆಗಿದ್ದಾಗಲೂ ಮಳೆ ಸುರಿಯಿತು.

ಆಗ ಪಾಕಿಸ್ತಾನ ವಿಕೆಟ್ ಕಳೆದುಕೊಳ್ಳದೆ 22 ರನ್ ಗಳಿಸಿತ್ತು. ಪಂದ್ಯ ಮತ್ತೆ ಆರಂಭಗೊಂಡಾಗ 41 ಓವರ್‌ಗಳಲ್ಲಿ 289 ರನ್‌ಗಳ ಗುರಿಯನ್ನು ಮರು ನಿಗದಿ ಮಾಡಲಾಯಿತು.

ಸ್ಕೋರ್‌ಕಾರ್ಡ್‌

ಭಾರತ 3ಕ್ಕೆ319 (48 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ರನೌಟ್‌ ಬಾಬರ್ ಆಜಮ್‌/ಸರ್ಫರಾಜ್ ಅಹಮ್ಮದ್‌  91

ಶಿಖರ್ ಧವನ್‌ ಸಿ ಅಜರ್ ಅಲಿ, ಬಿ ಶಾದಾಬ್ ಖಾನ್‌  68

ವಿರಾಟ್ ಕೊಹ್ಲಿ ಔಟಾಗದೆ  81

ಯುವರಾಜ್ ಸಿಂಗ್‌ ಎಲ್‌ಬಿಡಬ್ಲ್ಯು ಬಿ ಹಸನ್ ಅಲಿ  53

ಹಾರ್ದಿಕ್ ಪಾಂಡ್ಯ ಔಟಾಗದೆ  20

ಇತರೆ: (ಲೆಗ್‌ಬೈ 2, ವೈಡ್2, ನೋಬಾಲ್‌2) 06

ವಿಕೆಟ್‌ ಪತನ: 1–136 (ಶಿಖರ್ ಧವನ್‌, 24.3), 2–192 (ರೋಹಿತ್ ಶರ್ಮಾ, 36.4), 3–285 (ಯುವರಾಜ್ ಸಿಂಗ್‌, 46.2)

ಬೌಲಿಂಗ್‌: ಮಹಮ್ಮದ್ ಅಮೀರ್‌ 8.1–1–32–0,  ಇಮಾದ್ ವಾಸಿಮ್‌ 9.1–0–66–0,  ಹಸನ್‌ ಅಲಿ 10–0–70–1, ವಹಾಬ್ ರಿಯಾಜ್‌ 8.4– 0– 87– 0, ಶಾದಾಬ್ ಖಾನ್‌ 10-0-52-1, ಶೋಯಬ್ ಮಲಿಕ್‌ 2–0–10– 0ಪಾಕಿಸ್ತಾನ 164 (33.4 ಓವರ್‌ಗಳಲ್ಲಿ)

ಅಜರ್ ಅಲಿ ಸಿ ಹಾರ್ದಿಕ್ ಪಾಂಡ್ಯ ಬಿ ಜಡೇಜ  50

ಅಹಮ್ಮದ್ ಶಹಜಾದ್‌  ಎಲ್‌ಬಿಡಬ್ಲ್ಯು ಭುವನೇಶ್ವರ್ ಕುಮಾರ್‌  12

ಬಾಬರ್ ಆಜಮ್‌ ಸಿ ಜಡೇಜ ಬಿ ಉಮೇಶ್ ಯಾದವ್‌  8

ಮೊಹಮ್ಮದ್ ಹಫೀಜ್‌ ಸಿ ಭುವನೇಶ್ವರ್‌ ಕುಮಾರ್‌ ಬಿ ಜಡೇಜ  33

ಶೋಯಬ್‌ ಮಲಿಕ್‌ ರನ್‌ ಔಟ್‌ (ಜಡೇಜ)  15

ಸರ್ಫರಾಜ್ ಅಹಮ್ಮದ್‌ ಸಿ ದೋನಿ ಬಿ ಹಾರ್ದಿಕ್ ಪಾಂಡ್ಯ  15

ಇಮಾದ್ ವಾಸಿಮ್‌ ಸಿ ಕೇದಾರ್ ಜಾಧವ್‌ ಬಿ ಹಾರ್ದಿಕ್ ಪಾಂಡ್ಯ  0

ಶಾದಾಬ್ ಖಾನ್‌ ಔಟಾಗದೆ  14

ಮಹಮ್ಮದ್ ಅಮೀರ್‌ ಸಿ ಕೇದಾರ ಜಾಧವ್‌ ಬಿ ಉಮೇಶ್ ಯಾದವ್‌   9

ವಹಾಬ್ ರಿಯಾಜ್‌ ಗಾಯಾಳುವಾಗಿ ನಿವೃತ್ತಿ  ––

ಇತರೆ: (ಲೆಗ್‌ಬೈ 2, ವೈಡ್ 6) 08

ವಿಕೆಟ್‌ ಪತನ: 1–47 (ಶೆಹಜಾದ್‌, 8.6), 2–61 (ಬಾಬರ್; 12.2), 3–91 (ಅಜರ್ ಅಲಿ 20.5), 4–114 (ಶೋಯೆಬ್‌ ಮಲಿಕ್‌, 23.3), 5–131 (ಮಹಮ್ಮದ್ ಹಫೀಜ್‌ 26.3), 6–135 (ಇಮಾದ್ ವಸೀಮ್‌, 27.3), 7–151 (ಸರ್ಫರಾಜ್ ಅಹಮ್ಮದ್‌, 29.3), 8–164 (ಮಹಮ್ಮದ್ ಅಮೀರ್‌, 33.2), 9–164 (ಹಸನ್‌ ಅಲಿ, 33.4)

ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 5–1–23–1,  ಉಮೇಶ್‌ ಯಾಧವ್‌ 7.4–1–30–3,  ಜಸ್‌ಪ್ರೀತ್ ಭೂಮ್ರಾ 5–0–23–0,  ಹಾರ್ದಿಕ್ ಪಾಂಡ್ಯ 8–0–43–2,  ರವೀಂದ್ರ ಜಡೇಜ 8–0–43–2

ಫಲಿತಾಂಶ: ಭಾರತಕ್ಕೆ 124 ರನ್‌ಗಳ ಜಯ

ಪಂದ್ಯಶ್ರೇಷ್ಠ–ಯುವರಾಜ್ ಸಿಂಗ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry