ಆಸ್ಪತ್ರೆ ಆವರಣದಲ್ಲೇ ರಾತ್ರಿ ಕಳೆದರು...

7
ಬೌರಿಂಗ್‌ ಆಸ್ಪತ್ರೆ

ಆಸ್ಪತ್ರೆ ಆವರಣದಲ್ಲೇ ರಾತ್ರಿ ಕಳೆದರು...

Published:
Updated:
ಆಸ್ಪತ್ರೆ ಆವರಣದಲ್ಲೇ ರಾತ್ರಿ ಕಳೆದರು...

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿ, ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ ಕಾರಣಕ್ಕೆ ಶನಿವಾರ ರಾತ್ರಿಯಿಡೀ ಆವರಣದಲ್ಲೇ ಮಲಗಿದ್ದರು!

ಹೊಸಕೋಟೆ ತಾಲ್ಲೂಕಿನ ಆಲಪನಹಳ್ಳಿಯ ಮುನಿರಾಜು ಹಾಗೂ ಪತ್ನಿ ರತ್ನಮ್ಮ ಶನಿವಾರ ಮಧ್ಯಾಹ್ನ ನಗರಕ್ಕೆ ಬಂದಿದ್ದರು. ರಾತ್ರಿ ಮನೆಗೆ ಮರಳುವಾಗ  ದಾರಿ ಮಧ್ಯೆ ಅಪಘಾತ ಸಂಭವಿಸಿದ್ದು,  ಇಬ್ಬರೂ ಗಾಯಗೊಂಡಿದ್ದರು.

‘ಪತ್ನಿ ಜೊತೆ  ಆಂಬುಲೆನ್ಸ್‌ನಲ್ಲಿ ರಾತ್ರಿ ಬೌರಿಂಗ್‌ ಆಸ್ಪತ್ರೆಗೆ ಬಂದಿದ್ದೆವು. ಈ ವೇಳೆ  ಸಿಬ್ಬಂದಿಯು ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದರು. ನೋವು ಬಹಳ ಇದ್ದು ದಾಖಲು ಮಾಡಿಕೊಳ್ಳುವಂತೆ ವಿನಂತಿಸಿದೆವು. ಅದಕ್ಕೆ ಒಪ್ಪದ ಅವರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು’ ಎಂದು  ಗಾಯಾಳು ಮುನಿರಾಜು ಅವರು ತಿಳಿಸಿದರು.

‘ಹಿರಿಯ ವೈದ್ಯರ ಬಳಿ ಹೋಗಲು ಸಹ ಸಿಬ್ಬಂದಿ ಅವಕಾಶ ನೀಡಲಿಲ್ಲ. ಭಾನುವಾರ ರಜೆ ಇದ್ದು, ಸೋಮವಾರ ಬನ್ನಿ ಎಂದು  ಸಿಬ್ಬಂದಿ ಹೇಳುತ್ತಿದ್ದರು. ದಿಕ್ಕು ತೋಚದಂತಾಗಿ ಇಬ್ಬರೂ ಆಸ್ಪತ್ರೆಯ ಆವರಣದಲ್ಲೇ ಮಲಗಿದೆವು. ಭಾನುವಾರ ಬೆಳಿಗ್ಗೆಯೂ ಸಿಬ್ಬಂದಿ ದಾಖಲು ಮಾಡಿಕೊಳ್ಳಲಿಲ್ಲ. ಅದಕ್ಕಾಗಿ ಕಾಯುತ್ತ ಆವರಣದಲ್ಲೇ ಕುಳಿತಿದ್ದೆವು’ ಎಂದು ವಿವರಿಸಿದರು.

ಬಾಲಕಿಯದ್ದೂ ಅದೇ ಸ್ಥಿತಿ: ಅಪಘಾತದಲ್ಲಿ ಹೊಸಕೋಟೆಯ ನಂದು ಎಂಬ ಬಾಲಕಿಯೂ  ಗಾಯಗೊಂಡಿದ್ದಳು. ಅವಳನ್ನು ಸಹ ಆಸ್ಪತ್ರೆಯ ಸಿಬ್ಬಂದಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು ಎನ್ನಲಾಗಿದೆ.

ಅದರಿಂದಾಗಿ ದಂಪತಿ ಜತೆ ಬಾಲಕಿಯೂ ರಾತ್ರಿಯಿಡೀ ಆವರಣದಲ್ಲೇ ಮಲಗಿದ್ದಳು.

ಉಗ್ರಪ್ಪ ಎದುರು ಅಳಲು: ನಾಗವಾರದಲ್ಲಿ ನಡೆದಿದ್ದ  ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ್ದ ‘ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ’ಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಎದುರು ದಂಪತಿ ಅಳಲು ತೋಡಿಕೊಂಡರು.

ಸ್ಥಳದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಉಗ್ರಪ್ಪ, ದಂಪತಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಘಟನೆ ಬಗ್ಗೆ  ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯರು, ‘ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅದಕ್ಕೆ ತಕ್ಕ ಚಿಕಿತ್ಸೆ ನೀಡಿದ್ದೆವು. ದಾಖಲು ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ’ ಎಂದು ಸಮಜಾಯಿಷಿ ನೀಡಿದರು.

‘ಊರು ದೂರವಿದ್ದ ಕಾರಣ  ದಂಪತಿ ಆವರಣದಲ್ಲಿ ಮಲಗಿದ್ದಾರೆ.  ಆಸ್ಪತ್ರೆಯ ಸಿಬ್ಬಂದಿ ಯಾವುದೇ ಲೋಪ ಎಸಗಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry