ಪರೀಕ್ಷೆಗಾಗಿ ಪ್ರಶ್ನೆಗಳನ್ನೇ ಕದ್ದ ಕೆಪಿಎಸ್‌ಸಿ!

7

ಪರೀಕ್ಷೆಗಾಗಿ ಪ್ರಶ್ನೆಗಳನ್ನೇ ಕದ್ದ ಕೆಪಿಎಸ್‌ಸಿ!

Published:
Updated:
ಪರೀಕ್ಷೆಗಾಗಿ ಪ್ರಶ್ನೆಗಳನ್ನೇ ಕದ್ದ ಕೆಪಿಎಸ್‌ಸಿ!

ಧಾರವಾಡ: ಮಹಾನಗರ ಪಾಲಿಕೆಗಳ ಸಹಾಯಕ ಎಂಜಿನಿಯರ್‌ ಹಾಗೂ ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ (ಎಡಿಎಲ್‌ಆರ್‌) ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಕಳೆದ ವರ್ಷದ ಶೇ 50ಕ್ಕೂ ಹೆಚ್ಚು ಪ್ರಶ್ನೆಗಳು ಪುನರಾವರ್ತನೆ ಆಗಿವೆ.

ಪರಿಸರ ಎಂಜಿನಿಯರ್‌ಗಳ ನೇಮಕಕ್ಕೆ ನಡೆದ ಪರೀಕ್ಷೆಯಲ್ಲೂ ಶೇ 100ರಷ್ಟು ಪ್ರಶ್ನೆಗಳು ಪುನರಾವರ್ತನೆ ಆಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅದನ್ನು ಮರು ಪರೀಕ್ಷೆ ಮಾಡುವುದಾಗಿ ಕೆಪಿಎಸ್‌ಸಿ ಈಗಾಗಲೇ ಪ್ರಕಟಿಸಿದೆ.

ಈ ಪರೀಕ್ಷೆ ನಡೆದ ದಿನವೇ ಅಂದರೆ ಮೇ 26ರಂದು ಪಾಲಿಕೆಗಳ ಸಹಾಯಕ ಎಂಜಿನಿಯರ್‌ ಹಾಗೂ ಎಡಿಎಲ್‌ಆರ್‌ಗಳ ಪರೀಕ್ಷೆ ನಡೆದಿದ್ದು, ಅದರಲ್ಲಿ ‘ಸಿವಿಲ್‌’ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 2016ರ ಪ್ರಶ್ನೆ ಪತ್ರಿಕೆಗಳಲ್ಲಿನ 51 ಪ್ರಶ್ನೆಗಳು ಪುನರಾವರ್ತನೆ ಆಗಿವೆ.

(ಕೊಳಚೆ ನಿರ್ಮೂಲನಾ ಮಂಡಳಿಯ ಎಂಜಿನಿಯರ್ ಹುದ್ದೆಗೆ ಕೆಪಿಎಸ್‌ಸಿ 2016ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೇಳಲಾಗಿದ್ದ ಅವೇ ಪ್ರಶ್ನೆಗಳು)

‘200 ಅಂಕಗಳಿಗೆ 100 ಪ್ರಶ್ನೆಗಳ ಪತ್ರಿಕೆಯನ್ನು ಕೆಪಿಎಸ್‌ಸಿ ನೀಡಿತ್ತು. ಅದರಲ್ಲಿ 37 ಅಂಕಗಳು 2016ರ ನವೆಂಬರ್‌ನಲ್ಲಿ ನಡೆದ ಕೊಳಚೆ ನಿರ್ಮೂಲನಾ ಮಂಡಳಿಯ ಎಂಜಿನಿಯರ್‌ ಹುದ್ದೆಗಳಿಗೆ ನಡೆದ ಪ್ರಶ್ನೆ ಪತ್ರಿಕೆಯಿಂದ ನಕಲು ಮಾಡಲಾಗಿದೆ. 6 ಪ್ರಶ್ನೆಗಳು 2016ರ ಏಪ್ರಿಲ್‌ನಲ್ಲಿ ನಡೆದ ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್‌ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಿಂದ ಹಾಗೂ ಇದೇ ಮೇ 25ರಂದು ನಡೆದ ಕಿರಿಯ ಎಂಜಿನಿಯರ್‌ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಿಂದ 8 ಪ್ರಶ್ನೆಗಳು ಯಥಾವತ್ತಾಗಿ ತೆಗೆದುಕೊಳ್ಳಲಾಗಿದೆ.

‘ಇಲ್ಲಿನ ಪ್ರಶ್ನೆಗಳು ಹಾಗೂ ಅವುಗಳಿಗೆ ನೀಡಿದ ಆಯ್ಕೆಗಳೂ ಒಂದೇ ರೀತಿ ಇವೆ. ಅಷ್ಟು ಮಾತ್ರವಲ್ಲ, ಆಯ್ಕೆಗಳ ಕ್ರಮಾಂಕವೂ ಬದಲಾಗಿಲ್ಲ. ಗೇಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿಂದ ಕೆಲವೊಂದು ಲೆಕ್ಕಗಳನ್ನು ಆಯ್ಕೆ ಮಾಡಿ ನೀಡಲಾಗಿದೆ. ಆದರೆ ಗೇಟ್‌ ಪರೀಕ್ಷೆಯಲ್ಲಿ ಇಂಥ ಲೆಕ್ಕಗಳಿಗೆ ಕ್ಯಾಲ್ಕುಲೇಟರ್‌ ಬಳಸಲು ಅವಕಾಶವಿದೆ. ಆದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ಕೆಲವು ಕ್ಲಿಷ್ಟ ಲೆಕ್ಕಗಳನ್ನು ಮಾಡುವುದು ಬರಿಗೈಯಲ್ಲಿ ಅಸಾಧ್ಯ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರಿಗೆ ಇಷ್ಟಾದರೂ ಅರ್ಥವಾಗಲಿಲ್ಲವೇ’ ಎಂದು ನೊಂದ ಅಭ್ಯರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಅದರಂತೆಯೇ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 2016ರಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ 17 ಪ್ರಶ್ನೆಗಳನ್ನು ಪುನರಾವರ್ತನೆ ಮಾಡಲಾಗಿದೆ. ‘ಬಿ’ ಶ್ರೇಣಿಯ ಹುದ್ದೆ ಎಂದರೆ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗೆ ಸರಿಸಮಾನವಾದದ್ದು. ಆದರೆ ಆ ಪರೀಕ್ಷೆಗೆ ತೋರಿಸುವ ಆಸಕ್ತಿ ಹಾಗೂ ಕಾಳಜಿ ಇದಕ್ಕಿಲ್ಲ ಏಕೆ ಎಂಬುದೇ ನಮ್ಮ ಪ್ರಶ್ನೆ. ಇಂಥ ಪ್ರಶ್ನೆ ಪತ್ರಿಕೆಗಳನ್ನು ಹೊರತಂದಿರುವುದರ ಹಿಂದೆ ಅವ್ಯವಹಾರದ ಶಂಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ವಿಷಯವನ್ನು ಟ್ವೀಟ್ ಮೂಲಕ ಆಯೋಗದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಗಳು ತಿಳಿಸಿದರು. ‘ಮರುಪರೀಕ್ಷೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry