ಗಾರ್ಡನ್ ಏರಿಯಾ ನಿವಾಸಿಗಳ ಗೋಳು

7

ಗಾರ್ಡನ್ ಏರಿಯಾ ನಿವಾಸಿಗಳ ಗೋಳು

Published:
Updated:
ಗಾರ್ಡನ್ ಏರಿಯಾ ನಿವಾಸಿಗಳ ಗೋಳು

ಶಿವಮೊಗ್ಗ: ಮಳೆ ಸುರಿಯಿತೆಂದರೆ ಸಾಕು, ಇಲ್ಲಿನ ವ್ಯಾಪಾರಿಗಳಿಗೆ ಧರ್ಮಸಂಕಟ ಪ್ರಾರಂಭ. ಅಂಗಡಿ ಬಾಗಿಲು ಮುಚ್ಚಿ ವಾಪಸ್‌ ಮನೆಗೆ ತೆರಳಲೂ ಸಾಧ್ಯವಾಗದೇ, ಇತ್ತ ನೆಮ್ಮದಿಯಿಂದ ಅಂಗಡಿ ಒಳಗೂ ಇರಲಾಗದೇ ಗಾರ್ಡನ್ ಏರಿಯಾದ 1ನೇ ತಿರುವಿನ ನಿವಾಸಿಗಳು ಹಾಗೂ ವ್ಯಾಪಾರಿಗಳು ಸಂಕಟ ಅನುಭವಿಸುತ್ತಿದ್ದಾರೆ.

ಮಳೆ ಬಂದ ಸಮಯದಲ್ಲಿ 1ನೇ ತಿರುವಿನ ಒಳಚರಂಡಿಯ ನೀರು ಮುಂದೆಸಾಗದೆ ಅಲ್ಲಿಯೇ ನಿಲ್ಲುತ್ತಿದೆ. ಇದು ಪಾದಚಾರಿಗಳ, ವಾಹನ ಸವಾರರ ಹಾಗೂ ವ್ಯಾಪಾರಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

‘ಈಚಿನ ಕೆಲ ವರ್ಷಗಳಲ್ಲಿ ಮಳೆ ಬಂದಾಗ ಒಳಚರಂಡಿ ನೀರು ರಸ್ತೆ ಮೇಲೆ ಬರುತ್ತಿದೆ. ಪಾದಚಾರಿಗಳು ಹಾಗಿರಲಿ, ವಾಹನ ಸವಾರರೂ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಇಲ್ಲಿನ ಚರಂಡಿ ನೀರು ನೆಹರೂ ರಸ್ತೆಯ ಒಳಚರಂಡಿಗೆ ಸಂಪರ್ಕಿಸಬೇಕು. ಆದರೆ, 5 ವರ್ಷಗಳ ಹಿಂದೆ ನಡೆದ ನೆಹರೂ ರಸ್ತೆ ಕಾಮಗಾರಿ ವೇಳೆ ಈ ಪ್ರದೇಶಕ್ಕೆ ಈ ದುಸ್ಥಿತಿ ಬಂದಿದೆ. ಈ ಬಗ್ಗೆ ಪಾಲಿಕೆಯ ಯಾವ ಅಧಿಕಾರಿಗಳೂ ಗಮನಹರಿಸಿಲ್ಲ’ ಎಂದು ದೂರುತ್ತಾರೆ ಸ್ಥಳೀಯ ಸುರೇಶ್.

‘ಗಾರ್ಡನ್ ಏರಿಯಾ ಶಿವಮೊಗ್ಗಕ್ಕೆ ವಾಣಿಜ್ಯ ವಹಿವಾಟಿಗೆ ಹೆಸರುವಾಸಿ. ಎಲ್ಲಾ ವಾಹನಗಳ ಬಿಡಿಭಾಗಗಳ ಮಾರಾಟ ಅಂಗಡಿ, ಮೆಕ್ಯಾನಿಕ್ ಮಳಿಗೆ ಇಲ್ಲಿವೆ. ನಿತ್ಯವೂ ನೂರಾರು ಗ್ರಾಹಕರು ಹಾಗೂ ಜನರು ಓಡಾಡುತ್ತಾರೆ. ಆದರೆ, ಮಳೆಗಾಲದಲ್ಲಿ ಬರುವ ದುರ್ವಾಸನೆ ಯಿಂದ ಗ್ರಾಹಕರು ಅಂಗಡಿಗೆ ಬುರುವುದೇ ಕಡಿಮೆ.

ಹಾಗೆಂದು ಅಂಗಡಿ ಬಾಗಿಲು ಮುಚ್ಚಿದರೆ ನಮಗೇ ನಷ್ಟವಾಗುತ್ತದೆ. ಒಳ ಚರಂಡಿಯ ಗಬ್ಬುನಾತವನ್ನು ಅನಿವಾರ್ಯವಾಗಿ ಸಹಿಸಿಕೊಂಡಿರಬೇಕಿದೆ’ ಎಂದು ಕಾರ್ತಿಕ್ ಅಟೊಮೊಬೈಲ್ಸ್‌ನ ವ್ಯವಸ್ಥಾಪಕ ಆರ್.ರಮೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಗಾರ್ಡನ್ ಏರಿಯಾಗೆ ಮೊದಲು ಬಿ.ಎಚ್. ರಸ್ತೆ ಒಳಚರಂಡಿಯ ಸಂಪರ್ಕ ಇರಲಿಲ್ಲ. ನೆಹರೂ ರಸ್ತೆ ಹಾಗೂ ಬಿ.ಎಚ್. ರಸ್ತೆ ಕಾಂಕ್ರೀಟ್ ಆದ ನಂತರ ಏರಿಯಾದ ಬಾಕ್ಸ್ ಡ್ರೈನೇಜ್‌ಗಳಲ್ಲಿ ನೀರು ನಿಲ್ಲುತ್ತಿದೆ. ರಸ್ತೆ ನಿರ್ಮಾಣ ವೇಳೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡದೆ ಇರುವುದೇ ಇದಕ್ಕೆ ಕಾರಣ. ಪಾಲಿಕೆ ಯಾವಾಗ ಸಮಸ್ಯೆ ನಿವಾರಿಸಬಹುದು ಎಂದು ಎದುರು ನೋಡುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ಜಯರಾಂ.

‘ಚರಂಡಿ ನೀರು ಮುಂದೆ ಸಾಗದೆ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಸಾಂಕ್ರಾಮಿಕ ರೋಗ ತಗುಲುವ ಭೀತಿಯೂ ಮನೆಮಾಡಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಾಗರಿಕ ಕುಮಾರ್.

‘ಕಾಂಕ್ರೀಟ್ ರಸ್ತೆ ಒಡೆಯಲು ಯಂತ್ರಗಳ ಸಹಾಯ ಅಗತ್ಯ. ನೆಹರೂ ರಸ್ತೆ ನಿರ್ಮಾಣದ ವೇಳೆ ಆದ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಈ ಸಮಸ್ಯೆ ಉದ್ಭವಿಸಿದೆ. ಮೊದಲಿನ ರೀತಿ ಡಾಂಬರು ರಸ್ತೆಯಾಗಿದ್ದರೆ ಬೇಗ ಒಡೆದು ಸರಿಮಾಡಬಹುದಿತ್ತು. ಶೀಘ್ರವೇ ಟೆಂಡರ್ ಕರೆದು, ಮತ್ತೊಮ್ಮೆ ರಸ್ತೆ ಕಾಮಗಾರಿ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಸದಸ್ಯ ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry