ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲೂ ಹೆಚ್ಚಿದ ಹಾಲು ಉತ್ಪಾದನೆ

Last Updated 5 ಜೂನ್ 2017, 5:13 IST
ಅಕ್ಷರ ಗಾತ್ರ

ದಾವಣಗೆರೆ:  ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು ಸತತ ಎರಡು ವರ್ಷ ಬರದಿಂದ ತತ್ತರಿಸಿದ್ದರೂ ಕ್ಷೀರಧಾರೆ ಹರಿವು ಮಾತ್ರ ಕಡಿಮೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ಅತಿಯಾದ ಉಷ್ಣ ವಾತಾವರಣ ಹೈನುಗಾರಿಕೆಗೆ ಅಡ್ಡಿಯಾಗಿಲ್ಲ. ಹೀಗಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿ ಹೊಂದಿರುವ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್‌)ದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಅಧಿಕ ಪ್ರಮಾಣದ ಹಾಲು ಸಂಗ್ರಹವಾಗುತ್ತಿದೆ.

2015–16ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 4.16 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗಿತ್ತು. ಈ ಸಾಲಿನಲ್ಲಿ ಪ್ರತಿದಿನ ಸರಾಸರಿ 4.96 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅಂದರೆ ನಿತ್ಯವೂ 80 ಸಾವಿರ ಲೀಟರ್‌ ಹಾಲು ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದೆ.

2.15 ಲಕ್ಷ ಲೀಟರ್‌ ಹಾಲನ್ನು ಶಿಮುಲ್‌ ಮಾರಾಟ ಮಾಡುತ್ತಿದೆ. ಉಳಿದ ಹಾಲನ್ನು ಚನ್ನರಾಯಪಟ್ಟಣದ ಮದರ್‌ ಡೇರಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ‘ಶಿಮುಲ್‌’ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್.

ಬರದಿಂದಾಗಿಯೇ ಹೆಚ್ಚಿದ ಉತ್ಪಾದನೆ: ಬರ ಆವರಿಸಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಮೇವಿನ ಕೊರತೆ ಅಷ್ಟಾಗಿ ಕಾಡಿಲ್ಲ. ಆದರೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೇವಿನ ಅಭಾವ ಎದುರಾಗಿದೆ. ರೈತರು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಬರದಲ್ಲಿ ಎದುರಾದ ಆರ್ಥಿಕ ಮುಗ್ಗಟ್ಟನ್ನು ಸಂಭಾಳಿಸಲು ಹಸುಗಳನ್ನು ಅವಲಂಬಿಸಿದ್ದಾರೆ. ಜಾನುವಾರನ್ನು ಚೆನ್ನಾಗಿ ಸಾಕಿ, ಹೆಚ್ಚು ಹಾಲು ಕರೆದಿದ್ದಾರೆ. ಹೀಗಾಗಿ ಉತ್ಪಾದನೆ ಹೆಚ್ಚಾಗಿದೆ ಎಂದು ವಿಶ್ಲೇಷಿಸುತ್ತಾರೆ ‘ಶಿಮುಲ್‌’ ಅಧ್ಯಕ್ಷ ಜಗದೀಶಪ್ಪ ಬಣಕಾರ.

ರೈತ ಬೆಳೆಯುವ ಯಾವ ಬೆಳೆಗೂ ಬೆಲೆ ನಿಗದಿಪಡಿಸಿಲ್ಲ. ಆದರೆ, ಹಾಲಿಗೆ ದರ ನಿಗದಿಪಡಿಸಲಾಗಿದೆ. ರೈತರಿಗೆ ನಿರ್ದಿಷ್ಟ ಆದಾಯ ಸಂಪಾದಿಸುವ ಭರವಸೆ ಹೈನುಗಾರಿಕೆ
ಯಲ್ಲಿದೆ. ನಷ್ಟ ಅನುಭವಿಸುವ ಅಪಾಯ ಕಡಿಮೆ. ಹಸುಗಳಿಗೆ ವಿಮೆ ಸೌಲಭ್ಯವೂ ಸಿಗುತ್ತದೆ. ಪಶುಸಂಗೋಪನೆ ಕೃಷಿಗೂ ಅನುಕೂಲ. ಹೀಗಾಗಿ ರೈತರು ಹಸು ಸಾಕಣೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದು ವಿಶ್ಲೇಷಿಸುತ್ತಾರೆ ಅವರು.

ಪ್ರತಿ ಲೀಟರ್ ಹಾಲಿಗೆ ಶಿಮುಲ್‌ ₹ 25.50 ನೀಡುತ್ತದೆ. ₹ 5 ಸರ್ಕಾರದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹೀಗಾಗಿ ರೈತರಿಗೆ ಉತ್ತಮ ದರ ಸಿಗುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಲು ಇದೂ ಒಂದು ಕಾರಣ ಎನ್ನುತ್ತಾರೆ ಜಗದೀಶಪ್ಪ.

ಶೀತಲೀಕರಣ ಘಟಕಗಳಿಂದ ಅನುಕೂಲ:  ಒಕ್ಕೂಟದ ವ್ಯಾಪ್ತಿಯಲ್ಲಿ 1,080 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 150 ‘ಬಿ’ ಕೇಂದ್ರಗಳಿವೆ. 7 ತಂಪುಕಾರಕ ಕೇಂದ್ರಗಳು ಹಾಗೂ 70 ಬಲ್ಕ್‌ ಮಿಲ್ಕ್‌ ಚಿಲ್ಲಿಂಗ್‌ ಕೇಂದ್ರಗಳಿವೆ.

ತಂಪುಕಾರಕ ಹಾಗೂ ಬಲ್ಕ್‌ ಮಿಲ್ಕ್‌ ಚಿಲ್ಲಿಂಗ್‌ ಕೇಂದ್ರಗಳ ಹಾಲಿನ ಗುಣಮಟ್ಟ ಉತ್ತಮವಾಗಿರುತ್ತದೆ. ಈ ಕೇಂದ್ರಗಳಲ್ಲಿ ಸಂಗ್ರಹಿಸುವ ಹಾಲನ್ನು ನೇರವಾಗಿ ಮೌಲ್ಯ
ವರ್ಧಿತ ಉತ್ಪನ್ನ ತಯಾರಿಸುವ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಹೀಗಾಗಿ ಹಾಲು ಉತ್ಪಾದನೆ ಹೆಚ್ಚಾಗುತ್ತಿದ್ದರೂ ಸಮಸ್ಯೆ ಉಂಟಾಗುತ್ತಿಲ್ಲ ಎಂದು ಮಾಹಿತಿ ನೀಡುತ್ತಾರೆ ಡಾ.ಜಿ.ಟಿ.ಗೋಪಾಲ್.

ರೈತರ ಖಾತೆಗೆ ಹಣ
ಶಿಮುಲ್‌ ವ್ಯಾಪ್ತಿಯ ಶೇ 96ರಷ್ಟು ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಶೇ 4ರಷ್ಟು ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತಿಲ್ಲ. ಅದನ್ನೂ ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸುತ್ತಾರೆ ಜಗದೀಶಪ್ಪ.

ದರ ಕಡಿತವಿಲ್ಲ
ಉತ್ಪಾದನೆ ಹೆಚ್ಚಾದಾಗ ಹಾಲು ಖರೀದಿ ದರ ಕಡಿಮೆ ಮಾಡಲಾಗುತ್ತಿತ್ತು. ಇದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ಕ್ರಮ. ಆದರೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವ ಉದ್ದೇಶ ‘ಶಿಮುಲ್‌’ಗೆ ಇದೆ. ಹೀಗಾಗಿ, ಸದ್ಯದಲ್ಲಿ ಖರೀದಿ ದರ ಕಡಿಮೆ ಮಾಡುವ ಪ್ರಸ್ತಾವ ಶಿಮುಲ್‌ ಮುಂದಿಲ್ಲ ಎಂದು ತಿಳಿಸುತ್ತಾರೆ ಗೋಪಾಲ್.

ಚೀಸ್‌, ಪನ್ನೀರ್, ಕ್ರೀಮ್‌ ಉತ್ಪಾದನೆ ಹೆಚ್ಚಿಸುವುದು ಹಾಗೂ ಐಸ್‌ಕ್ರೀಂ ಉತ್ಪಾದನಾ ಘಟಕ ಆರಂಭಿಸುವ ಉದ್ದೇಶ ಶಿಮುಲ್‌ ಮುಂದಿದೆ. ಇದರಿಂದ ಹಾಲಿಗೆ ಉತ್ತಮ ಮೌಲ್ಯ ಸಿಗಲಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಚರ್ಚೆ ಆರಂಭಿಸಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT