ಶಿಲೆಯಲ್ಲಿ ಕಲೆ ಅರಳಿಸುತ್ತಿರುವ ಕರಸೇವಕರು

7

ಶಿಲೆಯಲ್ಲಿ ಕಲೆ ಅರಳಿಸುತ್ತಿರುವ ಕರಸೇವಕರು

Published:
Updated:
ಶಿಲೆಯಲ್ಲಿ ಕಲೆ ಅರಳಿಸುತ್ತಿರುವ ಕರಸೇವಕರು

ಬೀದರ್‌: ಸಿಖ್‌ರ ಪವಿತ್ರ ಧಾರ್ಮಿಕ ತಾಣವಾದ ನಗರದ ಗುರುನಾನಕ ಝೀರಾದ ಆವರಣದಲ್ಲಿ ಅಮೃತಶಿಲೆಯ ಗುರುದ್ವಾರ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದೇಶದ ವಿವಿಧೆಡೆಯಿಂದ ಬಂದಿರುವ ಕರಸೇವಕರು ಹಗಲಿರುಳು ಎನ್ನದೇ ಗುರುದ್ವಾರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಪಂಜಾಬ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ರಾಜಸ್ತಾನದಿಂದ ಒಂದು ಸಾವಿರ ಕರಸೇವಕರು ನಗರಕ್ಕೆ ಬಂದಿದ್ದಾರೆ. ಸೂರ್ಯೋದಯದ ವೇಳೆಗೆ ಕಾಯಕದಲ್ಲಿ ತೊಡಗುವ ಅವರು ಸೂರ್ಯಸ್ತದ ವರೆಗೂ ಕಾಯಕದ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.

ಸಿಖ್‌ರು ತಮ್ಮ ಒಬ್ಬ ಪುತ್ರನನ್ನು ಕರಸೇವೆಗೆಂದೇ ಮೀಸಲಿಟ್ಟಿದ್ದಾರೆ. ಹರಕೆ ಹೊತ್ತವರು ಒಂದು, ಎರಡು ತಿಂಗಳು ಹಾಗೂ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕೆಲವರಂತೂ ತಮ್ಮ ಬದುಕನ್ನೇ ದೇವರಿಗೆ ಸಮರ್ಪಿಸಿಕೊಂಡು ಪವಿತ್ರ ಸ್ಥಾನಕ್ಕೆ ಸುಂದರ ರೂಪ ಕೊಡುವಲ್ಲಿ ನಿರತರಾಗಿದ್ದಾರೆ.

‘ಸಿಖ್‌ ಧರ್ಮ ಸನ್ಯಾಸ ಪ್ರತಿಪಾದಿಸುವುದಿಲ್ಲ. ಅದೊಂದು ಸಂಸ್ಕಾರಿಕ ಧರ್ಮವಾಗಿದೆ. ಸಮಾಜದ ನಡುವೆ ಬದುಕಿದರೆ ಮಾತ್ರ ಪ್ರತಿಯಾಗಿ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಲು ಸಾಧ್ಯ ಎನ್ನುವ ವಿಚಾರ ನನ್ನದು. ಮದುವೆ ಮಾಡಿಕೊಂಡಿರುವ ಯುವಕರು ಕರಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗದವರೂ ಗುರುವಿನ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ’ ಎಂದು ಹೇಳುತ್ತಾರೆ ಎಂಟು ವರ್ಷಗಳಿಂದ ಕರಸೇವಕರಾಗಿರುವ ಸಿವಿಲ್‌ ಎಂಜಿನಿಯರ್‌ ದೇವೇಂದ್ರಸಿಂಗ್‌.

‘ಗುರುನಾನಕ ಝೀರಾದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ‘ಗುರು ಗ್ರಂಥ ಸಾಹೇಬ’ ಪವಿತ್ರ ಗ್ರಂಥದ ಗದ್ದುಗೆ ಇದೆ.  ಗುರುನಾನಕ ಪ್ರಬಂಧಕ ಕಮಿಟಿಯು ಬಯಸಿದ್ದರಿಂದ ಪಂಜಾಬ್‌ನಿಂದ ಕರಸೇವಕರು ಬೀದರ್‌ಗೆ ಬಂದು ಗುರುದ್ವಾರ ನಿರ್ಮಾಣ ಮಾಡುತ್ತಿದ್ದಾರೆ. ಕರಸೇವಕರು ಸ್ಥಳೀಯರಿಂದ ಏನನ್ನೂ ಬಯಸದೇ ಕೆಲಸ ಮಾಡುತ್ತಿದ್ದಾರೆ’ ಎಂದು ಚರಣ್‌ಸಿಂಗ್‌ ಹೇಳುತ್ತಾರೆ.

ರಾಜಸ್ತಾನದ ಬಿಕನೇರ ದಿಂದ ಒಂದೂವರೆ ಕೋಟಿ ಮೌಲ್ಯದ ಅಮೃತಶಿಲೆಗಳನ್ನು ತಂದು ಕಟ್ಟಡಕ್ಕೆ ಬಳಲಾಗಿದೆ. ಬೀದರ್‌ನ ಮರಳು ಕಟ್ಟಡ ನಿರ್ಮಾಣಕ್ಕೆ ಸೂಕ್ತವಾಗಿಲ್ಲ. ಹೀಗಾಗಿ ನಾಂದೇಡ್‌ದಿಂದ ಮರಳು ಹಾಗೂ ಜಹೀರಾಬಾದ್‌ನ ಗುಣಮಟ್ಟದ ಇಟ್ಟಿಗೆ ತರಿಸಿಕೊಳ್ಳಲಾಗುತ್ತಿದೆ.

ಪಂಜಾಬ್‌, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ತಾನದ ಕುರಕುಶಲಕರ್ಮಿಗಳು ಅಮೃತಶಿಲೆಯಲ್ಲಿ ಕಲೆಯನ್ನು ಅರಳಿಸುವ ಕಾರ್ಯ ಮಾಡುತ್ತಿದ್ದಾರೆ. ಹೂಬಳ್ಳಿ, ಮರಗಳು, ಹುಲಿ ಹಾಗೂ ನವಿಲಿನ ಚಿತ್ರಗಳು ಶಿಲೆಯಲ್ಲಿ ಅನಾವರಣಗೊಂಡಿವೆ. ಗುರುದ್ವಾರದ ಛಾವಣಿ ಹಾಗೂ ಹೊರ ಭಿತ್ತಿಗೂ ವಿಶಿಷ್ಟ ವಿನ್ಯಾಸ ನೀಡಿದ್ದಾರೆ.

ಕುಶಲಕರ್ಮಿಗಳು ಮುಸ್ಲಿಮರು

ಬೀದರ್‌: ಬೆಳ್ಳಿ ಹಾಗೂ ಚಿನ್ನದ ಲೇಪನ ಮಾಡುತ್ತಿರುವ ಬಹುತೇಕ ಕುಶಲಕರ್ಮಿಗಳು ಮುಸ್ಲಿಂರಾಗಿದ್ದಾರೆ. ರಮ್ಜಾನ್‌ ಪ್ರಯುಕ್ತ ಒಂದು ತಿಂಗಳು ರಜೆಯ ಮೇಲೆ ಹೋಗಿದ್ದಾರೆ. ಅವರು ಮರಳಿ ಬರುತ್ತಲೇ ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಗುರುದ್ವಾರದ ಗುಮ್ಮಟಕ್ಕೆ ಐದು ಕೆ.ಜಿ ಚಿನ್ನದ ಕವಚ ಹಾಕುವ ಕೆಲಸವೂ ಆರಂಭವಾಗಲಿದೆ ಎಂದು ಕರಸೇವಕರಾದ ದೇವೇಂದ್ರಸಿಂಗ್ ಹೇಳುತ್ತಾರೆ

ಛಾವಣಿ ಅಲಂಕಾರ

ಗುರುದ್ವಾರದ ಒಳಛಾವಣಿ ಅಲಂಕಾರಕ್ಕೆ ₹ 80 ಲಕ್ಷ ಹಾಗೂ ಅಮೃತ ಶಿಲೆಗಳಿಗೆ ಒಂದೂವರೆ ಕೋಟಿ ವ್ಯಯಿಸಲಾಗಿದೆ.  ಪಂಜಾಬ್‌ನಲ್ಲಿರುವ ಕರಸೇವಕರ ಮುಖ್ಯಸ್ಥರ ನಿರ್ದೇಶನದಂತೆ ಕಾಮಗಾರಿ ನಡೆದಿದೆ. ನಿರ್ಮಲ ಮನಸ್ಸಿನಿಂದ ಪ್ರತಿಫಲ ಬಯಸದೆ ಸೇವೆ ಮಾಡಿ, ಸ್ಥಳೀಯ ಪ್ರಬಂಧಕ ಕಮಿಟಿಗೆ ಒಪ್ಪಿಸಿ ಹೋಗುವುದು ಮಾತ್ರ ನಮ್ಮ ಜವಾಬ್ದಾರಿ ಎಂದು ದೇವೇಂದ್ರಸಿಂಗ್‌ ತಿಳಿಸುತ್ತಾರೆ.

ಚಿನ್ನದ ಲೇಪನ

1000 ಕರಸೇವಕರು ಧಾರ್ಮಿಕ ಸೇವೆಯಲ್ಲಿ  ನಿರತ

ಭರದ ಸಿದ್ದತೆ

ಗುರುದ್ವಾರದ ಗುಮ್ಮಟಕ್ಕೆ ಐದು ಕೆಜಿ ಚಿನ್ನ ಲೇಪಿಸಲು ಸಿದ್ಧತೆ ನಡೆದಿದೆ

30 ಮುಸ್ಲಿಂ ಯುವಕರಿಂದ ಕರಕುಶಲ ಕಾಮಗಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry