ಇಂದು ವಿಶ್ವ ಪರಿಸರ ದಿನ; ಗಿಡ ನೆಡಲು ಮನವಿ

7

ಇಂದು ವಿಶ್ವ ಪರಿಸರ ದಿನ; ಗಿಡ ನೆಡಲು ಮನವಿ

Published:
Updated:
ಇಂದು ವಿಶ್ವ ಪರಿಸರ ದಿನ; ಗಿಡ ನೆಡಲು ಮನವಿ

ಕೊಪ್ಪಳ: ಶಾಶ್ವತ ಒತ್ತಡ ರಹಿತ ಬದುಕು, ನೆಮ್ಮದಿ ಬೇಕೇ? ಮನೆ ಮುಂದೆ ಹಸಿರು ಬೆಳೆಸಿ. ಕನಿಷ್ಠ ಒಂದೆರಡು ಗಿಡ ನೆಡಿ.– ಇದು ನಗರದ ಗವಿಮಠದ ತೋಟಗಾರಿಕಾ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೊಟ್ರಪ್ಪ ಅವರು ಕಾಳಜಿಯಿಂದ ಹೇಳುವ ಮಾತು.

‘ಬರಗಾಲದ ಜತೆಗೆ ಬಿಸಿಲಿನ ಮಿತಿಮೀರಿದ ತಾಪಮಾನ ನಮಗೆ ಪ್ರಕೃತಿ ಮುನಿಸಿನ ಪರಿಣಾಮ ತೋರಿಸಿಕೊಟ್ಟಿದೆ. ಕೊನೇ ಪಕ್ಷ ಇರುವ ಅಲ್ಪಸ್ವಲ್ಪ ಜಾಗದಲ್ಲಾದರೂ ಹಸಿರು ಬೆಳೆಸಿ’ ಎಂದು ಅವರು ಸಲಹೆ ಮಾಡುತ್ತಾರೆ.

ನಗರದ ಸೌಂದರ್ಯ ವೃದ್ಧಿಯ ಮಾತು ಕೇಳಿಬರುತ್ತದೆ. ಈ ಬಾರಿಯಾದರೂ ರಸ್ತೆಯ ಇಕ್ಕೆಲಗಳಲ್ಲಿ ಮಧ್ಯಮ ಗಾತ್ರದಲ್ಲಿ ಬೆಳೆಯುವ (ಅಶೋಕ, ಲಾಂಗಿ ಪೋಲಿ, ಬಂಗಾಳಿ ಗಿಡ) ಇತ್ಯಾದಿ ಬೆಳೆಸಬಹುದು. ಮನೆಯ ಮುಂದೆ ಜಾಗವಿಲ್ಲವೇ? ಪುಟ್ಟ ತಾರಸಿ ತೋಟ ಮಾಡಿ. ಅತ್ತ ಅಡುಗೆ ಮನೆಗೂ ರಾಸಾಯನಿಕ ಮುಕ್ತ ತಾಜಾ ತರಕಾರಿ ಸಿಗುತ್ತದೆ.

ಸ್ವಲ್ಪವಾದರೂ ಜಾಗ ಇರುವವರು ಮಾವು, ಸಪೋಟ, ಬಾದಾಮಿ, ಸಿಂಗಾಪುರ ಚೆರ್ರಿಯಂಥ ಗಿಡ ನೆಟ್ಟರೆ ಮನೆ ಮುಂದಿನ ಸೌದರ್ಯ ಮಾತ್ರವಲ್ಲ. ಪಕ್ಷಿಗಳಿಗೂ ಅದು ಆಸರೆಯ ತಾಣವಾಗುತ್ತದೆ. ಸಾವಿರಾರು ಹಣ್ಣುಗಳು ಹಕ್ಕಿಗಳ ಹೊಟ್ಟೆ ತಣಿಸುತ್ತವೆ. ಮಕ್ಕಳೂ ಕೂಡಾ ಹಸಿರಿನಡಿಯಲ್ಲಿ ಖುಷಿಯಿಂದ ಕಾಲ ಕಳೆಯುತ್ತಾರೆ ಎಂಬುದು ಅವರ ನಿಲುವು.

ಮನಸ್ಸು ಮಾಡಿ ಹಸಿರು ನೀಡಿ: ಗವಿಮಠದ ಈ ಪುಟ್ಟ ತೋಟದಲ್ಲಿ ಸಾವಿರಾರು ಸಸಿಗಳನ್ನು ಬೆಳೆಸಿದ್ದೇವೆ. ಇದಕ್ಕೆ ನಯಾಪೈಸೆ ಖರ್ಚು ಮಾಡಿಲ್ಲ. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನಿರ್ದೇಶನದಲ್ಲಿ ಮಾಡಿದ್ದೇವೆ. ಎಲ್ಲೋ ಒಂದು ಹೊಸ ರೀತಿಯ ಗಿಡ ಸಿಕ್ಕರೆ ಅದರ ಒಂದು ಟೊಂಗೆ ಕತ್ತರಿಸಿ ತಂದು ಇಲ್ಲಿ ಬೆಳೆಸಿದ್ದೇವೆ.

ಒಂದೊಂದು ಜಾತಿಯ ಸಾವಿರಾರು ಸಸಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆರ್ಥಿಕವಾಗಿ ಶಕ್ತಿಯುಳ್ಳವರು ಮಾರುಕ ಟ್ಟೆಯಲ್ಲಿ ಗಿಡಗಳನ್ನು ಕೊಳ್ಳಬಹುದು. ಆದರೆ, ಅಷ್ಟೊಂದು ಸಾಮರ್ಥ್ಯ ಇಲ್ಲದವರು. ಮನೆಯಲ್ಲಿ ವ್ಯರ್ಥವೆನಿಸುವ ಡಬ್ಬಿ, ಬಾಕ್ಸ್‌ಗಳಲ್ಲೂ ಸಸ್ಯ ಬೆಳೆಸಬಹುದು ಎಂದು ಸಲಹೆ ನೀಡಿದರು.

ಯಾರಿವರು ?

ಕೊಟ್ರಪ್ಪ ಅವರು ಮುನಿರಾಬಾದ್‌ನ ತುಂಗಭದ್ರಾ ಅಣೆಕಟ್ಟೆಯ ತೋಟಗಾರಿಕಾ ವಿಭಾಗದ ಲ್ಲಿ ಹಿರಿಯ ಕಾಮಗಾರಿ ನಿರೀಕ್ಷಕರಾಗಿ ನಿವೃತ್ತರಾ ದವರು. 41 ವರ್ಷಗಳ ಸೇವಾನುಭವ ಅವರದ್ದು. ಸುಮಾರು 10 ವರ್ಷಗಳಿಂದ ಗವಿಮಠದಲ್ಲಿ ತೋಟಗಾರಿಕಾ ವಿಭಾಗವನ್ನು ನೋಡಿ ಕೊಳ್ಳುತ್ತಿ ದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆ  ಇಲ್ಲದೆ  ಹಸಿರಿನ ನಡುವೆ ಕಾಲ ಕಳೆಯಲು ನಿವೃತ್ತಿಯ ಬದುಕು ಮೀಸಲಿಟ್ಟಿದ್ದಾರೆ. ನಾಡಿನ ಪ್ರಮುಖ ಯೋಜನೆಗಳ, ಸಂಸ್ಥೆಗಳ ಬೃಹತ್‌ ಉದ್ಯಾನಗಳು ಇವರ ಉಸ್ತುವಾರಿ ಯಲ್ಲಿ ನಿರ್ಮಾಣಗೊಂಡಿವೆ. 

ಗಿಡಗಳ ವೈಜ್ಞಾನಿಕ ಹೆಸರು, ಬಳಕೆಯ ಮಾಹಿತಿ ಇವರ ಬಾಯಲ್ಲಿದೆ. ಯಾರಾದರೂ ಉದ್ಯಾನ, ಗಿಡ ನೆಡುವ ಯೋಜನೆ ಕೈಗೊಂಡರೆ ಅದಕ್ಕೆ ಮಾರ್ಗದ ರ್ಶನ ನೀಡುತ್ತಾರೆ. ಗವಿಮಠದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ   ಕೊಟ್ರಪ್ಪ ಅವರ ಕಲ್ಪನೆಗಳಿಗೆ ಬೆಂಬಲ ನೀಡಿದ್ದಾರೆ.

ಒಂದು ದೊಡ್ಡ ಕನಸು

ಪ್ರಪಂಚದಲ್ಲಿರುವ ಎಲ್ಲ ಜಾತಿಯ ಸಸ್ಯಗಳು ಈ ಪುಟ್ಟ ತೋಟದ ಆವರಣದಲ್ಲಿ ಸಿಗಬೇಕು. ಈಗಾಗಲೇ ಅಪರೂಪದ ಮರಗಳು ಇಲ್ಲಿವೆ. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಔಷಧ ತಯಾರಿಗೂ ಬಳಕೆಯಾಗುತ್ತವೆ ಎಂದರು ಕೊಟ್ರಪ್ಪ.

ನರ್ಸರಿಯ ಸಸ್ಯಗಳ ಮೌಲ್ಯ

₹5–2,000  ಗಿಡಗಳ ಸರಾಸರಿ ಮೌಲ್ಯ

ಅದ್ಭುತ ಅನುಭವ

ನಾವೇ ಸಸಿ ನೆಟ್ಟು ಅದರ ಬೆಳವಣಿಗೆ ನೋಡುತ್ತಾ ಅದು ಫಲ ಕೊಡುವವರೆಗೆ ಗಮನಿಸುತ್ತಾ ಬರುವುದೇ ಒಂದು ಅದ್ಭುತ ಅನುಭವ’ ಎಂದು ಕೊಟ್ರಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry