ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ ಮಾಲೀಕರ ವಿರುದ್ಧ ‘ಎಸ್ಮಾ’ ಅಸ್ತ್ರ

Last Updated 5 ಜೂನ್ 2017, 6:30 IST
ಅಕ್ಷರ ಗಾತ್ರ

ಕೋಲಾರ: ದಿನ ಬೆಳಗಾದರೆ ನೀರು ಪೂರೈಕೆ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿಯುತ್ತಿದ್ದ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ನಗರಸಭೆ ಆಡಳಿತ ಯಂತ್ರವು ಮೂಗುದಾರ ಹಾಕಲು ಮುಂದಾಗಿದೆ. ಟ್ಯಾಂಕರ್‌ ಮಾಲೀಕರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ (ಎಸ್ಮಾ) ಅಸ್ತ್ರ ಪ್ರಯೋಗಿಸಿರುವ ನಗರಸಭೆಯು ಧರಣಿ ನಡೆಸದಂತೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 1.75 ಲಕ್ಷ ಮೀರಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈಗೀನ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ.

ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಆದರೆ, ಸತತ ಬರದಿಂದ ಬಡಾವಣೆಗಳ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಈ ಕಾರಣಕ್ಕಾಗಿ ಜಿಲ್ಲಾಡಳಿತವು ಇ–ಟೆಂಡರ್‌ನಡಿ ಖಾಸಗಿ ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಿಸುತ್ತಿದೆ.

ಬಹುಪಾಲು ಬಡಾವಣೆಗಳಲ್ಲಿ ನೀರು ಸರಬರಾಜಿಗೆ ಕೊಳವೆ ಮಾರ್ಗ (ಪೈಪ್‌ಲೈನ್‌), ನೆಲಮಟ್ಟದ ಸಂಪ್‌ ಮತ್ತು ಓವರ್‌ಹೆಡ್‌ ಟ್ಯಾಂಕ್‌ಗಳಿಲ್ಲ. ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದಿದ್ದು, 1,500 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ಜನ ನಗರಸಭೆಯ ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

500 ಲೋಡ್‌: ಇ–ಟೆಂಡರ್‌ನಲ್ಲಿ ನಗರಕ್ಕೆ ಪ್ರತಿನಿತ್ಯ ಸುಮಾರು 150 ಲೋಡ್‌ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ. ಇಷ್ಟು ನೀರು ಸಾಕಾಗದ ಕಾರಣ ಹೆಚ್ಚುವರಿಯಾಗಿ ದಿನಕ್ಕೆ ಸುಮಾರು 350 ಲೋಡ್‌ ನೀರನ್ನು ಸರಬರಾಜು ಮಾಡಿಸಲಾಗುತ್ತಿದೆ. ಇ–ಟೆಂಡರ್‌ನಲ್ಲಿ ಟ್ಯಾಂಕರ್‌ ಮಾಲೀಕರು ಪ್ರತಿ ಲೋಡ್‌ಗೆ ₹ 369ರಿಂದ ₹ 444ರವರೆಗೆ ದರ ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ ನೀರು ಪೂರೈಸುತ್ತಿರುವ ಟ್ಯಾಂಕರ್‌ ಮಾಲೀಕರಿಗೆ ಪ್ರತಿ ಲೋಡ್‌ ನೀರಿಗೆ ₹ 369 ದರ ನಿಗದಿಪಡಿಸಲಾಗಿದೆ.

ನೀರು ಪೂರೈಕೆ ಕಾರ್ಯಾದೇಶದ ಅವಧಿ 2016ರ ಡಿ.31ಕ್ಕೆ ಕೊನೆಗೊಂಡಿದ್ದು, ಟ್ಯಾಂಕರ್‌ ಮಾಲೀಕರು ಹಳೆ ದರದಲ್ಲಿ ನೀರು ಸರಬರಾಜು ಮಾಡಿದರೆ ತಮಗೆ ನಷ್ಟವಾಗುತ್ತದೆ. ಆದ ಕಾರಣ ದರ ಪರಿಷ್ಕರಿಸಿ ಹೊಸದಾಗಿ ಕಾರ್ಯಾದೇಶ ಕೊಡಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ಬಿಲ್‌ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕಳೆದ ಐದು ತಿಂಗಳಲ್ಲಿ ಏಳೆಂಟು ಬಾರಿ ನೀರು ಪೂರೈಕೆ ಸ್ಥಗಿತಗೊಳಿಸಿ ಧರಣಿ ಮಾಡಿದ್ದಾರೆ. ಟ್ಯಾಂಕರ್‌ ಮಾಲೀಕರು ಧರಣಿ ಮಾಡಿದಾಗಲೆಲ್ಲಾ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೊಂದರೆಯಾಗಿದೆ.

ಶಿಸ್ತುಕ್ರಮದ ಎಚ್ಚರಿಕೆ: ಟ್ಯಾಂಕರ್‌ ಮಾಲೀಕರ ಧರಣಿಯನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಆಡಳಿತ ಯಂತ್ರವು ದರ ಪರಿಷ್ಕರಣೆ ಮತ್ತು ಬಾಕಿ ಬಿಲ್‌ನ ನೆಪ ಮಾಡಿಕೊಂಡು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ನೀರು ಸರಬರಾಜು ಸ್ಥಗಿತಗೊಳಿಸಿ ಧರಣಿ ಮಾಡಬಾರದೆಂದು 100ಕ್ಕೂ ಹೆಚ್ಚು ಟ್ಯಾಂಕರ್‌ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

ಬರ ಪರಿಸ್ಥಿತಿಯಿಂದ ನಗರದೆಲ್ಲೆಡೆ ನೀರಿಗೆ ಹಾಹಾಕಾರವಿದೆ. ನೀರು ಸಾರ್ವಜನಿಕರ ಅತ್ಯಗತ್ಯ ಬೇಡಿಕೆಯಾಗಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ 1994ರ ಸೆಕ್ಷನ್‌ 2(1)ರ ಅಡಿ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸುವುದಾಗಿ ನಗರಸಭೆ ಆಯುಕ್ತರು ಟ್ಯಾಂಕರ್‌ ಮಾಲೀಕರಿಗೆ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಯುಕ್ತರ ಈ ಕ್ರಮದಿಂದ ಅಡಕತ್ತರಿಯಲ್ಲಿ ಸಿಲುಕಿರುವ ಟ್ಯಾಂಕರ್‌ ಮಾಲೀಕರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

**

ಜಿಲ್ಲಾಧಿಕಾರಿ ಸೂಚನೆಯಂತೆ ಎಸ್ಮಾ ಅಡಿ ಪ್ರಕರಣ ದಾಖಲಿಸುವುದಾಗಿ ಟ್ಯಾಂಕರ್‌ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ
-ಎಸ್‌.ಎ. ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

**

ಆಯುಕ್ತರು ಟ್ಯಾಂಕರ್‌ ಮಾಲೀಕರ ನ್ಯಾಯಯುತ ಹೋರಾಟ ಹತ್ತಿಕ್ಕಲು ಎಸ್ಮಾ ಪ್ರಯೋಗಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಲಾಗುವುದು
-ನಾರಾಯಣಸ್ವಾಮಿ, ಅಧ್ಯಕ್ಷ
ಟ್ಯಾಂಕರ್‌ ನೀರು ಸರಬರಾಜುದಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT