ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆಗೆ ಕೊಳಚೆ ನೀರು!

ನಗರದ ಜನರಿಗೆ ಮಹಾನಗರ ಪಾಲಿಕೆಯಿಂದ ಸಾಂಕ್ರಾಮಿಕ ರೋಗಗಳ ಕೊಡುಗೆಯ ಭಾಗ್ಯ
Last Updated 5 ಜೂನ್ 2017, 6:39 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿ, ನಗರ ಸ್ವಚ್ಛತೆ, ಪರಿಸರ ಸಂರಕ್ಷಣೆ, ಶುದ್ಧ ಕುಡಿಯುವ ನೀರು, ಮಾಲಿನ್ಯ ಮುಕ್ತ ಹಸಿರು ತುಮಕೂರು ಹೀಗೆ ಹತ್ತಾರು ಕನಸು ಸಾಕಾರಕ್ಕೆ ಸಂಘ ಸಂಸ್ಥೆಗಳು ಕಾಳಜಿ ಮೆರೆಯುತ್ತಿದ್ದರೆ, ಮಹಾನಗರ ಪಾಲಿಕೆಯು ಇದ್ಯಾವುದೂ ತನಗೆ ಸಂಬಂಧವೇ ಇಲ್ಲ ಎಂಬುವ ರೀತಿ ಇದ್ದು ಬಿಟ್ಟಿದೆ.

ಹೇಮಾವತಿ ನಾಲೆಯಿಂದ ತುಮಕೂರು ಮತ್ತು ಕುಣಿಗಲ್‌ಗೆ ಕುಡಿಯುವ ನೀರು ಪೂರೈಸುವ ನಗರದ ಹೊರವಲಯದಲ್ಲಿರುವ ನಾಲೆಗೆ ನಗರದ ಹೃದಯಭಾಗದ ಬಡಾವಣೆಯ ಕೊಳಚೆ ನೀರನ್ನೇ ಹರಿಸಲಾಗುತ್ತಿದೆ.

ರಾಜಕಾಲುವೆಯಲ್ಲಿ ಹರಿಯಬೇಕಾದ ಕೊಳಚೆ ನೀರು ಇಲ್ಲಿ ಕುಡಿಯುವ ನೀರು ಪೂರೈಕೆಯ ನಾಲಾದಲ್ಲಿಯೇ ಹರಿಯುತ್ತಿದೆ. ಇದು ನಿನ್ನೆ ಮೊನ್ನೆಯ ವಿಷಯವಲ್ಲ. ಕಳೆದ ಮೂರು ವರ್ಷಗಳಿಂದಲೂ ಇದೇ ಸ್ಥಿತಿ ಇದೆ.

ಕುಡಿಯುವ ನೀರು ಸರಬರಾಜಾಗುವ ಈ ನಾಲೆಯಲ್ಲಿಯೇ ಕೊಳಚೆ ನೀರು ಸೇರಿಕೊಳ್ಳುತ್ತಿದ್ದು, ತುಮಕೂರು ನಗರ ಮತ್ತು ಕುಣಿಗಲ್‌ಗೆ ಇದೇ ನೀರು ಸರಬರಾಜಾಗುತ್ತಿದೆ!

ಎಷ್ಟೇ ಶುದ್ಧೀಕರಣ ಮಾಡಿದರೂ ಕೊಳಚೆ ನೀರಿನಲ್ಲಿನ ರೋಗಾಣುಗಳು ಇದ್ದೇ ಇರುತ್ತವೆ. ಇದೇ ನೀರನ್ನು ನಗರದ ನಿವಾಸಿಗಳಿಗೆ ಪೂರೈಸಿ ರೋಗ ರುಜಿನಕ್ಕೆ ತುತ್ತಾಗುತ್ತಿದ್ದಾರೆ.

ಒಳಚರಂಡಿ ನಿರ್ಮಾಣಕ್ಕೆ ಮಹಾನಗರಕ್ಕೆ ನೂರಾರು ಕೋಟಿ ಹರಿದು ಬಂದಿದೆ. ಎಷ್ಟೇ ಪ್ರಭಾವಿಗಳಿರಲಿ. ರಾಜಕಾಲುವೆ ಅತಿಕ್ರಮಿಸಿ ಅದರ ಮೇಲೆ ಕಟ್ಟಡ ಕಟ್ಟಿಸಿದ್ದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪದೇ ಪದೇ ಹೇಳಿದ್ದಾರೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಏನೂ ಕ್ರಮ ಕೈಗೊಂಡಿಲ್ಲ.

ಇದು ಕುಡಿಯುವ ನೀರು ಹರಿಸುವ ನಾಲಾ ಅಲ್ಲ. ಕೊಳಚೆ ನೀರು ಹರಿಸುವ ನಾಲಾ. ಕೊಳಚೆ ನೀರು ಹರಿಸುವುದಕ್ಕಾಗಿಯೇ ಇದನ್ನು ಮಾಡಿಕೊಟ್ಟಂತಾಗಿದೆ. ಇಲ್ಲಿನ ದೃಶ್ಯ ನೋಡಿದರೆ ಮನೆಯಲ್ಲಿ ನಾವು ನೀರೂ ಕುಡಿಯುವುದಿರಲಿ. ವಾಂತಿ ಮಾಡಿಕೊಳ್ಳಬೇಕಾಗುತ್ತದೆ. ನಗರದ ಹೊರವಲಯದಲ್ಲಿರುವುದರಿಂದ ಯಾರ ಕಣ್ಣಿಗೂ ಕಾಣುವುದಿಲ್ಲ ಎಂದು ಗುಬ್ಬಿ ರಸ್ತೆ ಬದಿಯ ಅಂಗಡಿಯೊಂದರ ಕೆಲಸಗಾರ ನಾಗೇಶ್ ಪ್ರಜಾವಾಣಿಗೆ ತಿಳಿಸಿದರು.

ಹಾಗೆಯೇ ಸ್ವಲ್ಪ ಕಾಲುವೆಯ ಮೇಲೆ ನಡೆದು ಸಾಗಿದರೂ ಇನ್ನೂ ಕೆಟ್ಟ ಸನ್ನಿವೇಶ ಗೋಚರಿಸುತ್ತದೆ. ಕೊಳಚೆ ನೀರು ಹರಿಬಿಟ್ಟಿರುವುದಷ್ಟೇ ಅಲ್ಲ. ಸಾರ್ವಜನಿಕರು ಕಟ್ಟಡ ತ್ಯಾಜ್ಯ, ಕಸ, ಸತ್ತ ನಾಯಿಗಳನ್ನು ತಂದು ಹಾಕಿ ಕಾಲುವೆಯನ್ನೇ ಮುಚ್ಚಿಹಾಕಿಬಿಟ್ಟಿದ್ದಾರೆ. ಕಾಲುವೆಯ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದಾರೆ.

ಯಾಕೆ ಹೀಗೆ? ಯಾರು ತಂದು ಸುರಿದರು ಎಂದು ಅಕ್ಕಪಕ್ಕದ ನಿವಾಸಿಗಳನ್ನು ಪ್ರಶ್ನಿಸಿದರೆ ಯಾರೊಬ್ಬರು ಉತ್ತರಿಸಲಿಲ್ಲ. ನಾವಲ್ಲ. ಯಾರ್‍ಯಾರೊ ಬಂದು ಸುರಿಯುತ್ತಾರೆ ಎಂದು ಹೇಳುತ್ತಾರೆ.

ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೆ ಮುಂದಾಗುತ್ತಿರುವ ಇಂತಹ ನಗರದಲ್ಲಿ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲವಲ್ಲ ಎಂದು ಜನರು ಪ್ರಶ್ನಿಸುತ್ತಾರೆ.

**

ಕೊಳಚೆ ನೀರು ಹರಿಯಲು ಪರ್ಯಾಯ ವ್ಯವಸ್ಥೆ: ಆದೇಶ

‘ನಾಲೆಗೆ ಕೊಳಚೆ ನೀರು ಹರಿಸುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಮಹಾನಗರ ಪಾಲಿಕೆಯ ಆಯುಕ್ತರು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಹರಿಯುವ ನಾಲೆ ಇರಲಿ. ಜಮೀನಿಗೆ ನೀರು ಹರಿಸುವ ನಾಲೆ ಇರಲಿ. ಯಾವ ನಾಲೆಗೂ ಕೊಳಚೆ ನೀರು ಸೇರಿಸುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಹೇಳಿದ್ದಾರೆ.

‘ಕೊಳಚೆ ನೀರು ನಾಲೆಗೆ ಹರಿಸುವುದು ಅತ್ಯಂತ ಅಪಾಯಕಾರಿ. ವಿಷಯ ಗಮನಕ್ಕೆ ಬಂದಿದ್ದು, ತ್ವರಿತವಾಗಿ ಕಾಮಗಾರಿ ಕೈಗೊಂಡು ಕೊಳಚೆ ನೀರು ಹರಿಯುವದನ್ನು ತಡೆಯಬೇಕು ಎಂದು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

**

ಇಡೀ ಊರಿಗೆ ಕೊಳಚೆ ನೀರು ಕುಡಿಸುತ್ತಿದ್ದೀರಿ; ಶಾಸಕರ ಆಕ್ರೋಶ

ಎರಡೂವರೆ ವರ್ಷದ ಹಿಂದೆಯೇ ನಾಲೆಗೆ ಕೊಳಚೆ ನೀರು ಹರಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಗಮನಕ್ಕೆ ತರಲಾಗಿದೆ. ಮಹಾನಗರ ಪಾಲಿಕೆಯೂ ಗಮನಹರಿಸಿಲ್ಲ. ತುಮಕೂರು ಮತ್ತು ಕುಣಿಗಲ್‌ಗೆ ಕೊಳಚೆ ನೀರು ಹರಿಯುವ ಈ ನಾಲೆಯಲ್ಲಿಯೇ ಹೇಮಾವತಿ ನಾಲಾ ನೀರು ಹರಿಸಿ ಪೂರೈಸಲಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ಸಾಂಕ್ರಾಮಿಕ ರೋಗಕ್ಕೆ ತುತ್ತಾದರೆ ಯಾರು ಹೊಣೆ? ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಪ್ರಶ್ನಿಸುತ್ತಾರೆ.

ಪದೇ ಪದೇ ಕೊಳಚೆ ನೀರು ಹರಿಬಿಡಲಾಗುತ್ತದೆ. ಪಾಲಿಕೆಯು ಈ ಬಗ್ಗೆ ಯಾವುದೇ ರೀತಿ ಮುತುವರ್ಜಿ ವಹಿಸಿಲ್ಲ. ಒಳಚರಂಡಿ ಮಂಡಳಿಯವರು ಚರಂಡಿ ನಿರ್ಮಾಣಕ್ಕೆ ರಸ್ತೆ ಉದ್ದಕ್ಕೂ ಕೊಳವೆ ತಂದು ಸುರಿದಿದ್ದು ಬಿಟ್ಟರೆ ಏನೂ ಕೆಲಸ ಮಾಡಿಲ್ಲ. ಹೀಗಾಗಿ, ಕೊಳಚೆ ನೀರು ಹರಿಯುತ್ತಿದೆ ಎಂದು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT