ಅನಧಿಕೃತ ಹಾಲು ಉತ್ಪಾದನಾ ಘಟಕಗಳನ್ನು ತೆರವುಗೊಳಿಸಲು ಬಂದಾಗ ಎಮ್ಮೆಗಳನ್ನು ಮುಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು!

7

ಅನಧಿಕೃತ ಹಾಲು ಉತ್ಪಾದನಾ ಘಟಕಗಳನ್ನು ತೆರವುಗೊಳಿಸಲು ಬಂದಾಗ ಎಮ್ಮೆಗಳನ್ನು ಮುಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು!

Published:
Updated:
ಅನಧಿಕೃತ ಹಾಲು ಉತ್ಪಾದನಾ ಘಟಕಗಳನ್ನು ತೆರವುಗೊಳಿಸಲು ಬಂದಾಗ ಎಮ್ಮೆಗಳನ್ನು ಮುಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು!

ಭೋಪಾಲ್: ಅನಧಿಕೃತ ಹಾಲು ಉತ್ಪಾದನಾ ಘಟಕಗಳನ್ನು ತೆರವುಗೊಳಿಸುವುದನ್ನು ತಡೆಯುವುದಕ್ಕಾಗಿ ಮಧ್ಯಪ್ರದೇಶದ ಹಾಲು ಉತ್ಪಾದಕರು ಮತ್ತು ಡೇರಿ ಮಾಲೀಕರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಶನಿವಾರ ಸರ್ಕಾರಿ ಅಧಿಕಾರಿಗಳು ಹಾಲು ಉತ್ಪಾದನಾ ಘಟಕಗಳನ್ನು ತೆರವುಗೊಳಿಸುವುದಕ್ಕಾಗಿ ಜಬಲ್‍ಪುರ್‍‍ನ‍ ಇಮಾಲಿಯಾ ಗ್ರಾಮಕ್ಕೆ ಬಂದಾಗ ಹಾಲು ಉತ್ಪಾದಕರು ನೂರಾರು ಎಮ್ಮೆಗಳನ್ನು ಮುಂದೆ ನಿಲ್ಲಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ಸ್ಥಳೀಯ ಆಡಳಿತಾಧಿಕಾರಿಗಳು, ಜಬಲ್‌‍‍ಪುರ್ ಮುನ್ಸಿಪಲ್ ಕಾರ್ಪೊರೇಷನ್, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸ್ ಪಡೆ ತೆರವು ಕಾರ್ಯಕ್ಕಾಗಿ ಬಂದಾಗ ರಾಷ್ಟ್ರೀಯ ಹೆದ್ದಾರಿ -7ರಲ್ಲಿ ಮುಂದೆ ನೂರಾರು ಎಮ್ಮೆಗಳನ್ನು ನಿಲ್ಲಿಸಿ ರಸ್ತೆಗೆ ತಡೆಯೊಡ್ಡಲಾಗಿತ್ತು.

ತೆರವು ಕಾರ್ಯಕ್ಕಾಗಿ ಜೆಸಿಬಿ ಮತ್ತು ಟ್ರಕ್‍ ಬಂದಿದ್ದರೂ ಎಮ್ಮೆಗಳು ರಸ್ತೆಗೆ ಅಡ್ಡ ನಿಂತಿದ್ದರಿಂದ ಯಾವುದೇ ವಾಹನಗಳಿಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಎಮ್ಮೆಗಳನ್ನು ಬಳಸಿದ ಈ ಪ್ರತಿಭಟನೆಯಿಂದಾಗಿ ಜಬಲ್‍ಪುರ್ -ಸಿಹೋರಾ ಹೆದ್ದಾರಿಯಲ್ಲಿ ವಾಹನ ಸಂಚಾರವೂ ಸ್ಥಗಿತಗೊಂಡಿತು.

ಒಂದೂವರೆ ಗಂಟೆಗಳ ಕಾಲ 'ಎಮ್ಮೆಗಳ ಪ್ರತಿಭಟನೆ' ಮುಂದುವರಿದಾಗ, ಸ್ಥಳೀಯ ಆಡಳಿತಾಧಿಕಾರಿಗಳು ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಸಿದರು. ಆದರೆ ಹಾಲು ಉತ್ಪಾದಕರು ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ.

ಡೇರಿ ಮಾಲೀಕರು ಎಮ್ಮೆ ಗುಂಪಿನ ಹಿಂದೆ ನಿಂತು ಕಲ್ಲು ತೂರಾಟ ನಡೆಸಿದ್ದು, ಇದರಲ್ಲಿ ಹಲವಾರು ಪೊಲೀಸರಿಗೆ ಗಾಯಗಳಾಗಿವೆ. ಕಲ್ಲು ತೂರಾಟದಿಂದ ಹಲವಾರು ವಾಹನಗಳಿಗೂ ಹಾನಿಯಾಗಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದು, ಕೊನೆಗೆ ಹರ ಸಾಹಸಪಟ್ಟು ಎಮ್ಮೆಗಳನ್ನು ಅಲ್ಲಿಂದ ಚದುರಿಸಲಾಯಿತು.

ಪ್ರತಿಭಟನಾಕಾರರನ್ನು ಚದುರಿಸಲು ಎಂಟು ಸುತ್ತು ಅಶ್ರುವಾಯು ಪ್ರಯೋಗ ಮಾಡಲಾಯಿತು ಎಂದು ಎಸ್ಪಿ ಎಂ.ಎಸ್ ಶಿಖರಾವಾರ್ ಹೇಳಿದ್ದಾರೆ.

ಪೊಲೀಸರ ಪ್ರಕಾರ ಜಬಲ್‍ಪುರ್‍‍ನಲ್ಲಿ ಸರಿ ಸುಮಾರು 90 ಅನಧಿಕೃತ ಡೇರಿಗಳಿವೆ, ಇವುಗಳಿಂದಾಗಿ ಇಲ್ಲಿನ ನದಿಗಳು ಕಲುಷಿತಗೊಂಡಿವೆ. ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪತ್ರ ಪಡೆಯುವಂತೆ ಮಧ್ಯಪ್ರದೇಶ ಹೈಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶಿಸಿದ್ದರೂ ಇಲ್ಲಿನ ಡೇರಿ ಮಾಲೀಕರು ಆ ಆದೇಶವನ್ನು ಕಡೆಗಣಿಸಿದ್ದಾರೆ.

ಶನಿವಾರ ಇಲ್ಲಿನ ಪರಿಯಾತ್ ನದಿ ಪಕ್ಕದಲ್ಲಿರುವ 10 ಡೇರಿಗಳನ್ನು ತೆರವುಗೊಳಿಸುವುದಕ್ಕಾಗಿ ಸ್ಥಳೀಯ ಆಡಳಿತ ಮುಂದಾಗಿತ್ತು. ತೆರವು ಕಾರ್ಯದ ಬಗ್ಗೆ ಡೇರಿ ಮಾಲೀಕರಿಗೆ ತಿಳಿಸಿದ್ದರೂ, ಎಮ್ಮೆಗಳ ಮೂಲಕ ನಡೆಸಿದ ಪ್ರತಿಭಟನೆಯಿಂದಾಗಿ ತೆರವು ಕಾರ್ಯಕ್ಕೆ ಅಡಚಣೆಯುಂಟಾಗಿದೆ ಎಂದು ಉಪ ವಿಭಾಗೀಯ ಮೆಜಿಸ್ಟ್ರೇಟ್ ನಮಃ ಶಿವಾಯ್ ಅರ್ಜಾರಿಯಾ ಹೇಳಿದ್ದಾರೆ.

ಶನಿವಾರ 6 ಡೇರಿಗಳನ್ನು ನೆಲಸಮ ಮಾಡಲಾಯಿತು. ಇನ್ನುಳಿದ ಡೇರಿಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಆರ್. ಊಕೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry