ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ ಗುಣಮಟ್ಟ ಸರಿಯಿಲ್ಲ; ಸಿ.ಎಂ

ಕೊನೆಗೂ ‘ಟ್ರಿನ್‌ ಟ್ರಿನ್‌’ ಸೈಕಲ್‌ ಯೋಜನೆಗೆ ಚಾಲನೆ, ಇಂದಿನಿಂದ ಬಳಕೆಗೆ ಲಭ್ಯ
Last Updated 5 ಜೂನ್ 2017, 7:14 IST
ಅಕ್ಷರ ಗಾತ್ರ

ಮೈಸೂರು: ದೇಶದ ಮೊದಲ ಸಾರ್ವಜನಿಕ ಸೈಕಲ್‌ ಬಳಕೆ ಯೋಜನೆ ‘ಟ್ರಿನ್‌ ಟ್ರಿನ್‌’ಗೆ ಕೊನೆಗೂ ಚಾಲನೆ ಲಭಿಸಿತು.

ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸ್ಥಾಪಿಸಿರುವ ಸೈಕಲ್‌ ಡಾಕಿಂಗ್‌ ಕೇಂದ್ರದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದರು. ಅಲ್ಲದೆ, ವೃತ್ತದ ಸುತ್ತ ಸೈಕಲ್‌ ಸವಾರಿ ಮಾಡಿ ಗಮನ ಸೆಳೆದರು.

‘ಸೈಕಲ್‌ಗಳ ಗುಣಮಟ್ಟ ಸರಿಯಿಲ್ಲ. ಅದರ ಮೇಲೆ ಕುಳಿತಾಗಲೇ ನನ್ನ ಅನುಭವಕ್ಕೆ ಬಂತು. ಅಲ್ಲದೆ, ಹಿರಿಯ ನಾಗರಿಕರು ಸವಾರಿ ಮಾಡಲು ಸಾಧ್ಯವಾಗದ ರೀತಿಯಲ್ಲಿವೆ. ರ‍್ಯಾಲಿಯಲ್ಲಿ ಬಳಸುವ ಸೈಕಲ್‌ ರೀತಿ ಇರಬೇಕು. ಒಂದೇ ವಾರಕ್ಕೆ ಕಿತ್ತು ಹೋಗದಂತಿರ­ಬೇಕು. ಬಳಕೆದಾರರಿಗೆ ಅನುಕೂಲ­ವಾಗುವ ರೀತಿಯಲ್ಲಿ ಇರಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಯುವಕರಿಗಾಗಿ 100 ಸೈಕಲ್‌ ಇಟ್ಟುಕೊಂಡು ಉಳಿದವುಗಳನ್ನು ಬದಲಾವಣೆ ಮಾಡಿ. ತುಸು ಎತ್ತರದ ಸೈಕಲ್‌ಗಳನ್ನು ಇಡಿ. ಆಗ ಹಿರಿಯ ನಾಗರಿಕರು ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗಿರುವ ಸೈಕಲ್‌ಗಳಲ್ಲಿ ದೂರ ಸವಾರಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದರು.

‘ಮೈಸೂರು ಸುಂದರ ನಗರಿ. ಬೆಂಗಳೂರಿನಂತೆ ಇದು ಕೂಡ ವೇಗವಾಗಿ ಬೆಳೆಯುತ್ತಿದೆ. ಈ ನಗರದ ಪರಿಸರ, ಸೌಂದರ್ಯ ಕಾಪಾಡುವುದು ಅವಶ್ಯ.  ನಗರದಲ್ಲಿ 12 ಲಕ್ಷ  ಜನಸಂಖ್ಯೆ ಇದ್ದು, ಆರೂವರೆ ಲಕ್ಷ ವಾಹನಗಳಿವೆ. ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಕಾರಣ ಹೆಚ್ಚಾಗಿ ಪರಿಸರಸ್ನೇಹಿ ವಾಹನ­ಗಳನ್ನು ಸಂಚಾರಕ್ಕೆ ಬಳಸುವುದು ಸೂಕ್ತ’ ಎಂದು ಸಲಹೆ ನೀಡಿದರು.

₹ 20.52 ಕೋಟಿ ಮೊತ್ತದ ಈ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಜಾರಿಗೊಳಿಸಿದೆ. ವಿಶ್ವಬ್ಯಾಂಕ್‌ ಕೂಡ ಅನುದಾನ ನೀಡಿದೆ. ಗ್ರೀನ್‌ ವೀಲ್‌ ರೈಡ್‌ ಸಂಸ್ಥೆ ಯೋಜನೆ­ಯನ್ನು ಅನುಷ್ಠಾನಗೊಳಿಸಿದ್ದು, ಕಾರ್ಯನಿರ್ವಹಣೆ ಮಾಡಲಿದೆ.

450 ಸೈಕಲ್‌ಗಳು ಬಾಡಿಗೆಗೆ ಲಭ್ಯವಿದ್ದು, 20 ಸೈಕಲ್‌ಗಳಲ್ಲಿ ಗೇರ್‌ ವ್ಯವಸ್ಥೆಯಿದೆ. ಅರಮನೆ, ಮೃಗಾಲಯ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆರ್‌ಟಿಒ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿಸೈಕಲ್‌ ನಿಲ್ದಾಣ ನಿರ್ಮಿಸಲಾಗಿದೆ. ಯೋಜನೆಯ ಮಾಹಿತಿಗೆ ಹಾಗೂ ನೋಂದಣಿಗೆ ವೆಬ್‌ಸೈಟ್‌ www.mytrintrin.com ಸಂಪರ್ಕಿಸಬಹುದು. ಯಾವುದಾ­ದರೊಂದು ನೋಂದಣಿ ಕೇಂದ್ರದಲ್ಲಿ  ಗುರುತಿನ ಚೀಟಿ, ವಿಳಾಸದ ಚೀಟಿ ತೋರಿಸಿ ನೋಂದಣಿ ಮಾಡಿಸಿ­ಕೊಳ್ಳಬಹುದು.

ಸಚಿವ ಡಾ.ಎಚ್‌.ಸಿ.­ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌, ಸಂಸದ ಆರ್‌. ಧ್ರುವನಾರಾಯಣ, ಶಾಸಕ ಎಂ.ಕೆ. ಸೋಮಶೇಖರ್‌, ಮೇಯರ್‌ ಎಂ.ಜೆ. ರವಿಕುಮಾರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌ ಇದ್ದರು.

**

ಬಾಲ್ಯದ ಸ್ನೇಹಿತನಿಗೆ ₹ 2 ಸಾವಿರ ...
ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಲ್ಯದ ಸೇಹಿತನಿಗೆ ₹ 2 ಸಾವಿರ ನೀಡಿದರು.

ಅವರು ಟ್ರಿಣ್  ಟ್ರಿಣ್ ಸೈಕಲ್ ಯೋಜನೆ ಉದ್ಘಾಟಿಸಿ ತೆರಳುವಾಗ ಬಾಲ್ಯದ ಸ್ನೇಹಿತ ಹೊಸಹಳ್ಳಿಯ ಸಿದ್ದಯ್ಯ ಎಂಬುವರು ಕಾರಿನ ಬಳಿ ಬಂದರು. ‘ನಾನು ನಿಮ್ಮ ಬಾಲ್ಯದ ಸೇಹಿತ. ನೇರ ಸಾಲ ಯೋಜನೆಯಡಿ ಸಾಲ ಕೊಡಿಸಿ’ ಎಂದು ಅರ್ಜಿಯೊಂದನ್ನು ನೀಡಿದರು.

ಆಗ ಸಿದ್ದರಾಮಯ್ಯ ‘ಏನಯ್ಯ, ಇಲ್ಲಿದ್ದೀಯಾ, ಏನು ಬೇಕು’ ಎಂದು ಪರ್ಸ್‌ನಿಂದ ₹ 2 ಸಾವಿರ ನೋಟು ತೆಗೆದು ನೀಡಿದರು.

**

ನಾನೂ ಬಹಳಷ್ಟು ಸೈಕಲ್‌ ಸವಾರಿ ಮಾಡಿದ್ದೇನೆ. 1961ರಲ್ಲಿ ನಮ್ಮೂರಿಗೆ ಇದ್ದದ್ದು ಒಂದೇ ಬಸ್‌. ಹೀಗಾಗಿ, ಪ್ರತಿ ಶನಿವಾರ ಊರಿಗೆ ಸೈಕಲ್‌ನಲ್ಲೇ ಹೋಗುತ್ತಿದ್ದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT