ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ಮರ ಬೆಳೆಸಿದ್ದ ಸಾಹುಕಾರ್‌ ಲಕ್ಷ್ಮಯ್ಯ!

ದಾರಿ ಹೋಕರಿಗಾಗಿ ನೆರಳಿನ ವ್ಯವಸ್ಥೆ, 12 ಕಿ.ಮೀ. ಉದ್ದದ ರಸ್ತೆ ಪಕ್ಕದಲ್ಲಿ ಮರಗಳು
Last Updated 5 ಜೂನ್ 2017, 7:23 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಹಣವಂತರಿಗೆ ಸಾಮಾ ಜಿಕ ಕಾಳಜಿ ಇರುವುದಿಲ್ಲ, ಕಾಳಜಿ ಇದ್ದವರ ಬಳಿ ಹಣ ಇರುವುದಿಲ್ಲ ಎಂಬ ಮಾತಿಗೆ ಅಪವಾದ ಕೊಡಿಯಾಲದ ಸಾಹುಕಾರ್‌ ಲಕ್ಷ್ಮಯ್ಯ.

ಮೈಸೂರು ರಾಜ ಮನೆತನದ ಜತೆ ನಿಕಟ ಸಂಪರ್ಕ ಹೊಂದಿದ್ದ ಸಾಹುಕಾರ್‌ ಲಕ್ಷ್ಮಯ್ಯ 80 ವರ್ಷಗಳ ಹಿಂದೆಯೇ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ಪರಿಸರ ಕ್ಷೇತ್ರಗಳಲ್ಲಿ ಮಾದರಿ ಕೆಲಸ ಮಾಡುವ ಮೂಲಕ ಜನರಿಂದ ಸೈ ಎನ್ನಿಸಿಕೊಂಡಿದ್ದರು.

ತಾಲ್ಲೂಕಿನ ಮಂಡ್ಯಕೊಪ್ಪಲು ವೃತ್ತದಿಂದ ಚಿಂದೇಗೌಡನಕೊಪ್ಪಲು– ಅರಕೆರೆ– ತಡಗವಾಡಿ– ಕೊಡಿಯಾಲ– ಹುಣಸನಹಳ್ಳಿ– ಮಂಡ್ಯ ತಾಲ್ಲೂಕಿನ ಯಲಿಯೂರು ವೃತ್ತದವರೆಗೆ ಸ್ವಂತ ಹಣದಿಂದ ರಸ್ತೆ ಅಭಿವೃದ್ಧಿಪಡಿಸಿದ್ದರು. ಪಾದಚಾರಿಗಳ ಅನುಕೂಲಕ್ಕಾಗಿ ಈ ರಸ್ತೆಯ ಎರಡೂ ಬದಿಯಲ್ಲಿ ನೂರಾರು ಮರಗಳನ್ನು ನೆಡಿಸಿ ನೆರಳಿನ ವ್ಯವಸ್ಥೆಯನ್ನೂ ಮಾಡಿದ್ದರು.

ಸಾಹುಕಾರ್‌ ಲಕ್ಷ್ಮಯ್ಯ ಅವರು ನೆಡಿಸಿರುವ ಆಲದ ಮರಗಳು ತಾಲ್ಲೂಕಿನ ಚಿಂದೇಗೌಡನಕೊಪ್ಪಲು– ಅರಕೆರೆ ಗ್ರಾಮಗಳ ಮಧ್ಯೆ ಇರುವ ರಸ್ತೆಯ ಇಕ್ಕೆಲಗಳಲ್ಲಿ ಈಗಲೂ ಉಳಿದಿದ್ದು, ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿವೆ. ‘ಆಲದ ಕೊನೆಗಳನ್ನು ನೆಡಿಸಿ ಅವುಗಳಿಗೆ ನೀರುಣಿಸಲು ಕೆಲಸಗಾರರನ್ನು ನಿಯೋಜಿಸಲಾಗಿತ್ತು.
ಬೇಸಿಗೆ ಕಾಲದಲ್ಲಿ ಎಳೆಯ ಸಸಿಗಳು ಒಣಗಿ ಹೋಗದಂತೆ ಎತ್ತಿನ ಗಾಡಿಗಳ ಮೂಲಕ ಹಳಗೆ (ಮಣ್ಣಿನ ದೊಡ್ಡ ಮಡಕೆ)ಗಳಲ್ಲಿ ನೀರು ತಂದು ಹಾಕುತ್ತಿದ್ದರು.

ಕೊಡಿಯಾಲದಲ್ಲಿ ತಾವೇ ನಿರ್ಮಿಸಿದ್ದ ದೊಡ್ಡ ಕಲ್ಯಾಣಿ (ಕಲ್ಯಾಣಿ ಈಗಲೂ ಇದೆ) ಇಲ್ಲವೆ ಆಸುಪಾಸಿನ ನೆಲ ಬಾವಿಗಳಿಂದ ನೀರು ತಂದು ಮರಗಳ ಪೋಷಣೆ ಮಾಡಲಾಗುತ್ತಿತ್ತು. ಮರ ಬೆಳೆಸುವ ಕೆಲಸವನ್ನು ಖುದ್ದು ಲಕ್ಷ್ಮಯ್ಯ ಅವರೇ ನೋಡಿಕೊಳ್ಳುತ್ತಿದ್ದರು’ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

‘ಜವಳಿ ಉದ್ಯಮಿಯಾಗಿದ್ದ ಲಕ್ಷ್ಮಯ್ಯ ಕೊಡಿಯಾಲ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕೈಮಗ್ಗಗಳನ್ನು ನಡೆಸುತ್ತಿದ್ದರು. ಬಟ್ಟೆ ನೇಯಲು ಅಗತ್ಯವಾದ ರೇಷ್ಮೆ ಮತ್ತು ಹತ್ತಿಯ ನೂಲು ಹಾಗೂ ಕಲಾಪತ್ತಿನ ಜರಿಯನ್ನು ಬೆಂಗಳೂರಿನಿಂದ ಯಲಿಯೂರು ವರೆಗೆ ರೈಲಿನಲ್ಲಿ ತರಿಸಿಕೊಳ್ಳುತ್ತಿದ್ದರು.

ಅಲ್ಲಿಂದ ಕೊಡಿಯಾಲ ಗ್ರಾಮದ ವರೆಗೆ ಎತ್ತಿನ ಗಾಡಿಗಳಲ್ಲಿ ಕಚ್ಛಾ ಸಾಮಗ್ರಿ ತರಲಾಗುತ್ತಿತ್ತು. ಎತ್ತಿನ ಗಾಡಿಗಳು ಮತ್ತು ಜನರ ಸುಗಮ ಸಂಚಾರಕ್ಕಾಗಿ ರಸ್ತೆ ಮಾಡಿಸಿದ ಲಕ್ಷ್ಮಯ್ಯ, ದಾರಿಹೋಕರಿಗೆ ಅನುಕೂಲವಾಗಲೆಂದು ನೆರಳಿಗಾಗಿ ಮರಗಳನ್ನು ನೆಡಿಸಿದ್ದರು. ದೂರದೃಷ್ಟಿ ಹೊಂದಿದ್ದ ಲಕ್ಷ್ಮಯ್ಯ ಅವರು ದೀರ್ಘ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಆಲದ ಮರಗಳನ್ನೇ ನೆಡಿಸಿದ್ದರು’ ಎಂದು ಗ್ರಾಮದ ಶಂಕರಪ್ಪ ಹೇಳುತ್ತಾರೆ.

ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಾಹುಕಾರ್‌ ಲಕ್ಷ್ಮಯ್ಯ ಅವರು ನೆಟ್ಟು ಬೆಳೆಸಿದ ಮರಗಳಲ್ಲಿ ಸಾಕಷ್ಟು ಮರಗಳನ್ನು ರಸ್ತೆ ವಿಸ್ತರಣೆ ಮತ್ತು ಇತರ ಉದ್ದೇಶಗಳಿಗೆ ಕಡಿಯಲಾಗಿದೆ. ಸೌದೆಗಾಗಿ ಕೆಲವರು ರಾತ್ರೋ ರಾತ್ರಿ ಕೊಡಲಿ ಹಾಕುತ್ತಿದ್ದಾರೆ. ಅಲ್ಲಲ್ಲಿ ಕೆಲವು ಮರಗಳು ಮಾತ್ರ ಉಳಿದಿವೆ. ಅವುಗಳನ್ನಾದರೂ ಉಳಿಸಿಕೊಳ್ಳಲು ಅರಣ್ಯ ಇಲಾಖೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT