ಇದು ಪರಿಸರ ಸ್ನೇಹಿ ಸೋಲಾರ್‌ ಸೈಕಲ್‌

7
ಗೆಳೆಯನಿಂದ ಪ್ರೇರೇಪಿತನಾಗಿ ಕೆಎಸ್‌ಆರ್‌ಪಿ ಹೆಡ್‌ ಕಾನ್‌ಸ್ಟೆಬಲ್‌ ವಿನ್ಯಾಸಗೊಳಿಸಿದ ಬೈಸಿಕಲ್‌

ಇದು ಪರಿಸರ ಸ್ನೇಹಿ ಸೋಲಾರ್‌ ಸೈಕಲ್‌

Published:
Updated:
ಇದು ಪರಿಸರ ಸ್ನೇಹಿ ಸೋಲಾರ್‌ ಸೈಕಲ್‌

ಹಾಸನ: ಪೆಟ್ರೋಲ್ ಹಾಕಿಸುವಂತಿಲ್ಲ, ಪೆಡಲ್ ಮಾಡುವಂತಿಲ್ಲ. ಮೂರು ತಾಸು ಬಿಸಿಲಿಗೆ ನಿಲ್ಲಿಸಿ ಚಾರ್ಜ್ ಮಾಡಿದರೆ ಅದರ ಮೇಲೆ ಕುಳಿತು 60-70 ಕಿಲೋ ಮೀಟರ್ ದೂರ ಹೋಗಬಹುದು.

ಇಂತಹ ಅಪರೂಪದ ಸೈಕಲ್‌ ವಿನ್ಯಾಸ ಮಾಡಿರುವುದು ರಾಜ್ಯ ಮೀಸಲು ಪೊಲೀಸ್‌ ಪಡೆಯ 11ನೇ ಬೆಟಾಲಿಯನ್‌ ಹೆಡ್‌ ಕಾನ್‌ಸ್ಟೆಬಲ್ ವೈ.ಬಿ.ಕಾಂತರಾಜು.

ಪರಿಸರ ಸ್ನೇಹಿ ಸೋಲಾರ್‌ ಸೈಕಲ್‌ ತಯಾರಿಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.

ಅಂದಾಜು ₹ 35 ಸಾವಿರ ಖರ್ಚು ಮಾಡಿ ಸಿದ್ದಪಡಿಸಿರುವ ಈ ಸೈಕಲ್‌ ಹಿಂಭಾಗ 12 ವೋಲ್ಟ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ. ಅದರಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಸೈಕಲ್‌ನ ಮಧ್ಯಭಾಗದಲ್ಲಿರುವ ಬ್ಯಾಟರಿಗಳು ಚಾರ್ಜ್‌ ಆಗಲಿವೆ. ಹ್ಯಾಂಡಲ್‌ನಲ್ಲಿ ಅಳವಡಿಸಿರುವ ಸ್ವಿಚ್‌ಗೆ ಕೀ ಹಾಕಿ ಆನ್‌ ಮಾಡಿ ನಿಧಾನವಾಗಿ ಆಕ್ಸಲೇಟರ್ ಕೊಟ್ಟರೆ ಸವಾರಿ ಆರಂಭಗೊಳ್ಳುತ್ತದೆ.

ಸುಮಾರು ಮೂರು ಗಂಟೆ ಬಿಸಿಲಿ ನಲ್ಲಿ ನಿಲ್ಲಿಸಿ ಚಾರ್ಜ್‌ ಮಾಡಿದರೆ ಸೈಕಲ್ ಅನ್ನು ಪೆಡೆಲ್‌ ತುಳಿಯದೆ 70 ಕಿ.ಮೀ. ದೂರ ಕ್ರಮಿಸಬಹುದು ಎನ್ನುತ್ತಾರೆ.

ಬ್ಯಾಟರಿಗಳನ್ನು ಸೂರ್ಯರಶ್ಮಿ ಅಥವಾ ವಿದ್ಯುತ್‌ನಿಂದ ಚಾರ್ಜ್‌ ಮಾಡಬಹುದು. ಒಂದು ವೇಳೆ ಚಾರ್ಜ್‌ ಕಡಿಮೆಯಾದರೆ ಸೋಲಾರ್ ಪ್ಯಾನೆಲ್‌ ಚಾಲನೆಗೊಳ್ಳುತ್ತದೆ. ಸೋಲಾರ್ ಕೈಕೊಟ್ಟಾಗ ಪೆಡಲ್ ಮಾಡಿದರೆ ಮುಂದೆ ಸಾಗಬಹುದು. 50 ಕೆ.ಜಿ ತೂಕ ಸಾಮರ್ಥ್ಯ ಹೊಂದಿದೆ.

ಸ್ನೇಹಿತ ಶಿವಯೋಗಿ ತಯಾರಿಸಿದ್ದ ಸೋಲಾರ್ ಸೈಕಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಪ್ರೇರಣೆಗೊಂಡು ವಿನ್ಯಾಸಗೊಳಿಸಿದ್ದಾರೆ.

ಸರ್ಕಾರಿ ನೌಕರರಾಗಿದ್ದರು ಪರಿ ಸರದ ಮೇಲೆ ಕಾಂತರಾಜು ಹೆಚ್ಚು ಆಸಕ್ತಿ ಹೊಂದಿದವರು.

ಹಾಸನದ ಯಲಗುಂದ ಬಳಿಯ ಅರಣ್ಯ ಪ್ರದೇಶದಲ್ಲಿ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

‘ಸಸಿಗಳನ್ನು ಒಯ್ಯಲು ನಿತ್ಯ ಪೆಟ್ರೋಲ್‌ಗೆ ₹100 ಖರ್ಚಾಗುತ್ತಿತ್ತು. ಈ ಸೋಲಾರ್ ಸೈಕಲ್ ಬಳಸಿದರೆ ಗಿಡ ಒಯ್ಯಲು ಅನುಕೂಲವಾಗಲಿದೆ ಎಂಬ ಯೋಚನೆಯಲ್ಲಿ ವಿನ್ಯಾಸಗೊಳಿಸಿದ್ದೇನೆ’ ಎನ್ನುತ್ತಾರೆ ಕಾಂತರಾಜು.

ನಗರದೆಲ್ಲೆಡೆ ಸೋಲಾರ್ ಸೈಕಲ್ ಸಂಚರಿಸುತ್ತಿರುವುದು ಸಾರ್ವಜನಿಕ ರಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳ ಗಮನವನ್ನೂ ಸೆಳೆಯುತ್ತಿದೆ.

**

ಇಲಾಖೆಯಲ್ಲಿ ಮಾನಸಿಕ, ದೈಹಿಕ ಒತ್ತಡ ಇರುತ್ತದೆ. ಆ ನಡುವೆ ಸೋಲಾರ್ ಸೈಕಲ್ ತಯಾರಿಸಿ ಇಲಾಖೆಗೆ ಗೌರವ ತಂದಿದ್ದಾರೆ. ಅವರ ಪರಿಸರ ಕಾಳಜಿಗೆ ಅಭಿನಂದನೆ.

-ರಾಹುಲ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ

**

ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಮೇಕ್‌ ಇನ್ ಇಂಡಿಯಾಗೆ ಕೊಡುಗೆ ನೀಡುವ ಬಯಕೆ ಇದೆ. ಅದಕ್ಕಾಗಿ ಈ ಸೈಕಲ್‌ ಸಿದ್ದಪಡಿಸಿದ್ದೇನೆ

-ಕಾಂತರಾಜು, ಹೆಡ್‌ ಕಾನ್‌ಸ್ಟೆಬಲ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry