ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂದು ಜಿಪಂ ಅಧ್ಯಕ್ಷ ರಾಜೀನಾಮೆ’

ಸದಸ್ಯ ಎ.ಮಂಜುಗೆ ಅಧ್ಯಕ್ಷ ಸ್ಥಾನ – ಶಿವಕುಮಾರ್‌ *ಸಿ.ಪಿ.ರಾಜೇಶ್‌ ದಕ್ಷತೆಗೆ ಮೆಚ್ಚುಗೆ
Last Updated 5 ಜೂನ್ 2017, 8:50 IST
ಅಕ್ಷರ ಗಾತ್ರ

ಕನಕಪುರ: ಜಿಲ್ಲಾ ರಾಜಕಾರಣದ ಬಗ್ಗೆ ಶಾಸಕ ಸಿ.ಪಿ.ಯೋಗೇಶ್ವರ್‌ ಅವರೊಂದಿಗೆ ಮಾತುಕತೆ ನಡೆಸಿದ್ದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್‌ ತಮ್ಮ ಸ್ಥಾನಕ್ಕೆ ಸೋಮವಾರ ಸಂಜೆ ರಾಜೀನಾಮೆ ನೀಡಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಎಲ್ಲಾ ತಾಲ್ಲೂಕುಗಳಿಗೂ ಅಧಿಕಾರಿದ ಅವಕಾಶ ಮಾಡಿ ಕೊಡಬೇಕೆಂದು ಮಾತುಕತೆ ಆಗಿತ್ತು, ಅದರಂತೆ ಸಿ.ಪಿ.ಯೋಗೇಶ್ವರ್‌ ಅವರಲ್ಲಿ ಮಾತನಾಡಿದ್ದು ರಾಜೀನಾಮೆ ಕೊಡಿಸುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದರು.

ಮಾಗಡಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರಿಗೆ ಕೊಟ್ಟ ಮಾತಿನಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನೀಡಲಾಗುವುದು. ಉಳಿದಂತೆ ರಾಮನಗರ ಮತ್ತು ಕನಕಪುರ ತಾಲ್ಲೂಕಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸಿ.ಪಿ.ರಾಜೇಶ್‌ ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಅವರನ್ನು ಪಕ್ಷದ ವತಿಯಿಂದ ಹಾಗೂ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು.

ಕಾಂಗ್ರೆಸ್‌ ಸೇರ್ಪಡೆ: ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಮಾತನಾಡಿದ್ದಾರೆ. ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.

‘ಮೊದಲಿಗೆ ನಾನು ಕೆ.ಪಿ.ಸಿ.ಸಿ. ಅಧ್ಯಕ್ಷನಾಗಬೇಕೆಂದು ಬಯಸಿರಲಿಲ್ಲ. ರಾಜ್ಯದಲ್ಲಿ ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡುವುದಾಗಿ ಪಕ್ಷದ ವರಿಷ್ಠರು ಹೇಳಿದಾಗ ಪಕ್ಷದ ಕಾರ್ಯಕರ್ತರು ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಬೇಕಂದು ಬಯಸಿ ಒತ್ತಾಯಿಸಿದ್ದರು, ಇದರಲ್ಲಿ ಬೇಸರ ಎನೂ ಇಲ್ಲ’ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಪಕ್ಷಕ್ಕೆಲಾಭ: ಡಾ.ಜಿ.ಪರಮೇಶ್ವರ್‌ ಅವರು ಪಕ್ಷವನ್ನು ಸದೃಢವಾಗಿ ರಾಜ್ಯದಲ್ಲಿ ಮುನ್ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರನ್ನೇ ಮುಂದುವರಿಸಿದ್ದರಿಂದ ಪಕ್ಷಕ್ಕೆ ಲಾಭವಾಗಲಿದೆ. ಕೊಟ್ಟಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅಲೆ ಬೀಸಲಿದೆಯೇ ಎಂಬ ಪ್ರಶ್ನೆಗೆ ಮೋದಿ ಅಲೆಯೂ ಇಲ್ಲ, ಯಾವ ಅಲೆಯೂ ಇಲ್ಲ. ಇಲ್ಲಿ ಕಾಂಗ್ರೆಸ್‌ ಪಕ್ಷ ಮಾಡುತ್ತಿರುವ ಅಭಿವೃದ್ಧಿಯ ಅಲೆ ಕೆಲಸ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್‌ ಸ್ಪರ್ಧಿಸುವ ಕುರಿತು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಟಿ.ಎ.ಪಿ.ಸಿ.ಎಂ.ಎಸ್‌. ಮಾಜಿ ಅಧ್ಕಕ್ಷ ಜೆ.ರಾಮು, ಪಕ್ಷದ ಮುಖಂಡ ಚೀರಣಕುಪ್ಪೆ ಮಹೇಶ್‌, ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಮರಸಪ್ಪರವಿ ಉಪಸ್ಥಿತರಿದ್ದರು.

**

ಯೋಗೇಶ್ವರ್‌ ಪಕ್ಷ ಬಿಡುವುದಿಲ್ಲ

ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷ ಬಿಡುವುದಾಗಿ ಹೇಳಿದ್ದಾರೆಂದು ಕೇಳಿದ ಪ್ರಶ್ನೆಗೆ, ‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಚೆನ್ನಾಗಿ ಬೆಳೆಯಲು ಶ್ರಮಿಸಿದ ಅವರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ’ ಎಂದು ತಿಳಿಸಿದರು.

ಮದ್ದೂರು ಕ್ಷೇತ್ರಕ್ಕೆ ಹೋಗುತ್ತಾರೆ ಎಂದು ಕೇಳಿದಾಗ ‘ಚನ್ನಪಟ್ಟಣದಲ್ಲಿ ಶಾಶ್ವತ ನೀರಾವರಿ ಕಲ್ಪಿಸಿಕೊಟ್ಟಿದ್ದಾರೆ. ಅದನ್ನು ಗಮನಿಸಿದ ಮದ್ದೂರಿನ ಜನತೆ ತಮ್ಮ ಕ್ಷೇತ್ರದಲ್ಲೂ ನೀರಾವರಿ ತಂದು ಅಭಿವೃದ್ಧಿ ಪಡಿಸಲು ಸ್ಪರ್ಧಿಸಲು ಯೋಗೇಶ್ವರ್‌ ಅವರನ್ನು ಒತ್ತಾಯಿಸಿದ್ದಾರೆ. ಅದು ಅಲ್ಲಿನ ಜನರ ಅಭಿಲಾಷೆ; ಯೋಗೇಶ್ವರ್‌  ಇಚ್ಛೆಯಲ್ಲ’ ಎಂದು ಹೇಳಿದರು.

**

ಗೃಹಖಾತೆ ಆಕಾಂಕ್ಷಿ ನಾನಲ್ಲ, ನಾನಾಗಿ ಕೇಳಿಲ್ಲ, ಪಕ್ಷ ಕೊಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ
–ಡಿ.ಕೆ.ಶಿವಕುಮಾರ್‌ , ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT