‘ಹುಟ್ಟುಹಬ್ಬಕ್ಕೊಂದು ಗಿಡ ನೆಡಿ, ದತ್ತು ಪಡೆಯಿರಿ’

7

‘ಹುಟ್ಟುಹಬ್ಬಕ್ಕೊಂದು ಗಿಡ ನೆಡಿ, ದತ್ತು ಪಡೆಯಿರಿ’

Published:
Updated:
‘ಹುಟ್ಟುಹಬ್ಬಕ್ಕೊಂದು ಗಿಡ ನೆಡಿ, ದತ್ತು ಪಡೆಯಿರಿ’

ಹಾವೇರಿ: ಜೂನ್‌ನಲ್ಲಿ ಮುಂಗಾರು ಆರಂಭದ ನಿರೀಕ್ಷೆ ಇದೆ. ಇದೇ 5ರಂದು ‘ಪರಿಸರ ದಿನ’ವೂ ಬಂದಿದೆ. ಸತತ ಬರಕ್ಕೆ ತುತ್ತಾದ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ಪ್ರದೇಶದಲ್ಲಿ ‘ಹುಟ್ಟುಹಬ್ಬಕ್ಕೊಂದು ಸಸಿ ನೆಡಿ ಮತ್ತು ಸಸಿಯನ್ನು ದತ್ತು ಪಡಿ’ ಎಂದು ನಾಗರಿಕರನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತವು ಸ್ಥಳೀಯಾಡಳಿತ ಸಂಸ್ಥೆಗಳ ಜೊತೆ ಸಿದ್ಧತೆ ನಡೆಸಿದೆ.

ಹಸಿರು ಕೊರತೆಯಿಂದ ನಗರ ಪ್ರದೇಶದ ಬವಣೆ ವರ್ಷಂಪ್ರತಿ ವೃದ್ಧಿಸು ತ್ತಿದೆ. ಹೀಗಾಗಿ ಸಸ್ಯಸಂಕುಲ ಹೆಚ್ಚಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಆಯ್ದ ಸ್ಥಳಗಳನ್ನು ಗುರುತಿಸಿ, ಸಸಿ ನಾಟಿಗೆ ಯೋಜಿಸಲಾಗಿದೆ.

ಆದರೆ,  ಜನರನ್ನು ತೊಡಗಿಸುವ ಹಿನ್ನೆಲೆಯಲ್ಲಿ ಆಸಕ್ತ ನಾಗರಿಕರಿಗೆ ‘ಹುಟ್ಟುಹಬ್ಬಕ್ಕೆ ಸಸಿ ನಾಟಿ’ ಮಾಡಲು ಸ್ಥಳಾವಕಾಶ ಕಲ್ಪಿಸಲಿದೆ. ಆ ಗಿಡಕ್ಕೆ ಅವರ ಹೆಸರನ್ನು ಇಡಲು ಅನುಮತಿ ನೀಡಲಿದೆ. ಆದರೆ, ಆ ಸಸಿಯನ್ನು ಪೋಷಿಸಿ, ಬೆಳೆಸುವುದು ನೆಟ್ಟವರ ಜವಾಬ್ದಾರಿ. 

‘ಹಸಿರೀಕರಣಕ್ಕಾಗಿ ಸರ್ಕಾರಿ ಖಾಲಿ ಜಾಗ, ಹೆಗ್ಗೇರಿ ಮತ್ತಿತರ ಕೆರೆಗಳ ಏರಿ ಹಾಗೂ ಸಮೀಪದ ಜಾಗ, ಉದ್ಯಾನ, ರಸ್ತೆ ಬದಿ ಮತ್ತಿತರೆಡೆ ಸ್ಥಳ ಗುರುತಿಸಲಾಗುವುದು. ಗಿಡದ ಬೆಳವಣಿಗೆ ಮೂಲಕ ಆ ವ್ಯಕ್ತಿಯ ಹೆಸರೂ ಚಿರಸ್ಥಾಯಿ ಆಗಲಿದೆ. ಗಿಡಕ್ಕೊಂದು ಸಣ್ಣ ಬೇಲಿ ಹಾಕಿ ಸ್ವಂತ ಹೆಸರನ್ನೂ ಇಡಬಹುದು.

ಅಲ್ಲದೇ, ಉದ್ಯಾನ ಮತ್ತಿತರೆಡೆ ಗಿಡಗಳನ್ನು ಪೋಷಿಸಲು ಮುಂದಾಗುವವರಿಗೆ ‘ದತ್ತು’ ಕೂಡಾ ನೀಡಲಾಗುವುದು. ಸಂಘ–ಸಂಸ್ಥೆಗಳೂ ಮುಂದೆ ಬರಬೇಕು’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. 

ಜಿಲ್ಲಾಡಳಿತ ‘ಹಸಿರೀಕರಣ’: ಜಿಲ್ಲಾಡಳಿತದ ಆವರಣದಲ್ಲಿ 2 ಸಾವಿರ ಸಸಿ ನಾಟಿಯ  ಗುರಿ ಹೊಂದಿದ್ದು, ಇದೇ 5ರಂದು ಚಾಲನೆ ನೀಡಲಾಗುವುದು. ಕೇವಲ ಹಸಿರು ಮಾತ್ರವಲ್ಲ ‘ಜೀವ ವೈವಿಧ್ಯ’ ಸಮತೋಲನ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಜಾತಿಯ ಹಣ್ಣು–ಹೂವಿನ ಸಸ್ಯಗಳ ನಾಟಿ ಮಾಡಲಿದ್ದೇವೆ. ವಿವಿಧ ಹಣ್ಣಗಳು, ಆಕರ್ಷಕ ಹಾಗೂ ಕಂಪು ಬೀರುವ ಹೂವಿನ ಗಿಡಗಳು, ಔಷಧೀಯ ಸಸ್ಯಗಳಿಗೆ ಒತ್ತು ನೀಡಲಾಗುವುದು. ಅಕೇಶಿಯಾ ಹಾಗೂ ನೀಲಗಿರಿಯನ್ನು ಬದಲಾವಣೆ ಮಾಡಲು ಸರ್ಕಾರದ ಆದೇಶದನ್ವಯ ಸೂಚನೆ ನೀಡಲಾಗಿದೆ’ ಎಂದರು.

ನಗರಸಭೆ: ನಗರದಲ್ಲಿ ಮೂರು ಸಾವಿರ ಸಸಿ ನಾಟಿ ಮಾಡುವ ಯೋಜನೆಯನ್ನು ನಗರಸಭೆ ಕೈಗೆತ್ತಿಕೊಂಡಿದೆ. ಹಾವೇರಿ ನಗರಸಭೆಯು ಈ ಬಾರಿ ಪರಿಸರ ದಿನದಿಂದ ಸತತ ಒಂದು ತಿಂಗಳ ಕಾಲ ನಗರದ ವಿವಿಧೆಡೆ ಸಸಿಗಳನ್ನು ನಾಟಿ ಮಾಡುವ ಯೋಜನೆ ರೂಪಿಸಿದೆ.

‘ನಗರದ ಉದ್ಯಾನ, ಶಾಲಾ–ಕಾಲೇಜು ಆವರಣ, ನಗರಸಭೆಯ ಖಾಲಿ ಜಾಗೆ, ರಸ್ತೆ ಬದಿ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಸಸಿ ನಾಟಿ ಮಾಡ ಲಾಗುವುದು. ಬೆಳೆಸುವ ಜವಾಬ್ದಾರಿ ವಹಿಸುವವರಿಗೆ ಸಸಿ ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತರಾದ ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ ತಿಳಿಸಿದರು.

ಅರಣ್ಯ ಇಲಾಖೆ: ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನ್ಯಾಯಾಂಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನ, ವಿವಿಧ ಇಲಾಖೆ, ಕಚೇರಿಗಳ ಆವರಣ ಸೇರಿದಂತೆ ನಗರದ ವಿವಿಧೆಡೆ ಸಸಿ ನಾಟಿಗೆ ಇಲಾಖೆ ಯೋಜನೆ ರೂಪಿಸಿದೆ.

ಹಾವೇರಿ ವ್ಯಾಪ್ತಿಯಲ್ಲಿ ಸುಮಾರು 4ರಿಂದ 5 ಸಾವಿರ ಸಸಿಗಳ ನಾಟಿಗೆ ಸಿದ್ಧತೆ ನಡೆಯುತ್ತಿದೆ’ ಎನ್ನುತ್ತಾರೆ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಓ) ಸೋನಾಲ್ ವೃಷ್ಣಿ. ಡಿಎಫ್‌ಓ, ಎಎಫ್‌ಓ ಎನ್‌.ಎಸ್‌. ರಾಘವೇಂದ್ರ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

‘ಸೆಲ್ಫಿಗಾಗಿ ಸಸಿ ಕೊಲ್ಲಬೇಡಿ’

‘ಬೀಜ, ಗೊಬ್ಬರ, ನೀರು, ಮಣ್ಣು ಹಾಕಿ ಆರೈಕೆ ಮಾಡಿ ಒಂದು ಸಸಿಯನ್ನು ಬೆಳೆಸಲು ಸುಮಾರು 9 ತಿಂಗಳ ಶ್ರಮವಿದೆ. ಅದಕ್ಕಾಗಿ ಇಲಾಖೆಯು ಯಾರಿಗೂ ಉಚಿತವಾಗಿ ಸಸಿ ನೀಡುವುದಿಲ್ಲ. ಅಲ್ಲದೇ, ಫೋಟೊ, ಸೆಲ್ಫಿ, ಫೇಸ್‌ಬುಕ್, ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಸಸಿ ನಾಟಿ ಮಾಡಬೇಡಿ.

‘ಸಸಿ ಬೆಳೆಸುತ್ತೇನೆ’ ಎಂಬ ಸಂಕಲ್ಪದಿಂದ ನಾಟಿ ಮಾಡಿ. ಆ ಸಸಿಯನ್ನು ಬೆಳೆಸುವ ಜವಾಬ್ದಾರಿ ವಹಿಸಿ. ಬಿಟ್ಟಿ ಪ್ರಚಾರಕ್ಕಾಗಿ ಸಸಿ ನೆಟ್ಟು ಕೊಲ್ಲಬೇಡಿ. ನಿಮ್ಮ ಪ್ರತಿಷ್ಠೆಗಾಗಿ ‘ಒಣ’ ಮಹೋತ್ಸವ ಬೇಡ’ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

* * 

ಸತತ ಬರ, ನೀರು, ಹವಾಮಾನ ವೈಪರೀತ್ಯ ಸಮಸ್ಯೆಯಿಂದ ಬಳಲಿದ ನಗರ ಪ್ರದೇಶದಲ್ಲಿ ಜನರೇ ಹಸಿರು ಬೆಳೆಸುವತ್ತ ಹೆಜ್ಜೆ ಇಡಬೇಕು. ಜಿಲ್ಲಾ ಆಡಳಿತ ಸಹಕಾರ ನೀಡಲಿದೆ

ಡಾ. ವೆಂಕಟೇಶ್ ಎಂ.ವಿ.

ಜಿಲ್ಲಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry