ಪರಿಸರ ಸಂರಕ್ಷಣೆಗೆ ಅರ್ಥ ನೀಡುವ ಪರಿಸರವಾದಿ

7
ಸಾವಿರಾರು ಗಿಡ ನೆಟ್ಟು, ಲಕ್ಷಾಂತರ ಬೀಜ ಬಿತ್ತಿದ ಮುಕುಂದರಾವ್‌ ರಾಜ್ಯ ಪರಿಸರ ಪ್ರಶಸ್ತಿಗೆ ಆಯ್ಕೆ

ಪರಿಸರ ಸಂರಕ್ಷಣೆಗೆ ಅರ್ಥ ನೀಡುವ ಪರಿಸರವಾದಿ

Published:
Updated:
ಪರಿಸರ ಸಂರಕ್ಷಣೆಗೆ ಅರ್ಥ ನೀಡುವ ಪರಿಸರವಾದಿ

ಚನ್ನಪಟ್ಟಣ: ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಟ್ಟು, ಲಕ್ಷಾಂತರ ಬೀಜಗಳನ್ನು ಬಿತ್ತಿ ಅವುಗಳ ರಕ್ಷಣೆಗೂ ನಿಲ್ಲುವ, ಪರಿಸರ ಸಂರಕ್ಷಣೆಗೆ ಹೊಸ ಅರ್ಥ ನೀಡುವ ಪರಿಸರವಾದಿ ಮುಕುಂದರಾವ್ ಲೋಕಂಡೆ ಇಲ್ಲಿದ್ದಾರೆ.

ಪರಿಸರಕ್ಕೆ ಸಂಬಂಧವೇ ಇಲ್ಲದ ವಾಣಿಜ್ಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅವರು ಚನ್ನಪಟ್ಟಣದ ಕೋಟೆಯವರು. ಅವರಿಗೆ ಪರಿಸರ ಪ್ರೇಮ ಹುಟ್ಟಿಕೊಂಡದ್ದು 2007ರಲ್ಲಿ.

ತಾಲ್ಲೂಕಿನ ಉದ್ದಗಲಕ್ಕೂ ಇರುವ ಬೆಟ್ಟಗುಡ್ಡಗಳು ಬೋಳಾಗಿರುವುದನ್ನು ಗಮನಿಸಿದ ಲೋಕಂಡೆ ಹಾಗೂ ಅವರ ಸ್ನೇಹಿತರು ಪರಿಸರ ಸಂರಕ್ಷಣಾ ಒಕ್ಕೂಟ ಸ್ಥಾಪಿಸಿದರು. ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡು ಗಿಡ ನೆಟ್ಟು, ವಿವಿಧ ಜಾತಿಯ ಮರಗಳ ಬೀಜಗಳನ್ನು ಬಿತ್ತಿ ಪರಿಸರ ರಕ್ಷಣೆ ಮುಂದಾದರು.

ಗಿಡ ನೆಟ್ಟು ಸುಮ್ಮನಾಗದ ಈ ತಂಡ ವಿನೂತನ ಪ್ರಯೋಗಗಳಿಗೆ ಒತ್ತು ನೀಡಿತು. ಬೆಟ್ಟಗುಡ್ಡಗಳಲ್ಲಿ ಬೀಜ ಬಿತ್ತುವ ಆಲೋಚನೆ ಬಂದೊಡನೆ,  ಈ ತಂಡ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿತು. ಸುಮಾರು 4,500 ಎಕರೆ ಅರಣ್ಯ ಪ್ರದೇಶದಲ್ಲಿ 8 ಲಕ್ಷ ವಿವಿಧ ಜಾತಿ ಮರಗಳ ಬೀಜಗಳನ್ನು ಬಿತ್ತನೆ ಮಾಡಿದರು.

ನಂತರದ ದಿನಗಳಲ್ಲಿ ಪಾಳೇಕರ್ ವಿಧಾನದಲ್ಲಿ ಬೀಜಗಳ ಸಂರಕ್ಷಣೆ ಮಾಡಿದರು. ಬೇವು, ಹಿಪ್ಪೆ, ಅಂಟುವಾಳ, ಬಿದಿರು ಸೇರಿದಂತೆ ಕಾಡುಮರಗಳ ಬೀಜಗಳನ್ನು ಶಾಲಾ ಮಕ್ಕಳ ಸಹಕಾರದೊಂದಿಗೆ ಬಿತ್ತನೆ ಮಾಡಿ ಯಶಸ್ವಿಯಾದರು.

ಬಡಾವಣೆಯಲ್ಲಿ ಹೊಂಗೆ: ಇದಾದ ನಂತರ 2008ರಲ್ಲಿ ನಗರ ಪ್ರದೇಶದತ್ತ ವಾಲಿದ ಒಕ್ಕೂಟ ಕುವೆಂಪು ಬಡಾವಣೆಯಾದ್ಯಂತ 3,500 ಹೊಂಗೆ ಗಿಡ ನೆಡುವ ಕಾರ್ಯ ಕೈಗೆತ್ತಿಕೊಂಡಿತು. ಆ ಗಿಡಗಳ ಸುತ್ತ ಕಬ್ಬಿಣದ ಬೇಲಿ ನಿರ್ಮಿಸಿ, ತಿಂಗಳುಗಟ್ಟಲೆ ನೀರುಣಿಸಿತು. ಇದರ ಫಲವಾಗಿ ಇಂದು ಸುಮಾರು 500ಕ್ಕೂ ಹೆಚ್ಚು ಹೊಂಗೆ ಮರಗಳು ಬಡಾವಣೆಯಲ್ಲಿ ನೆರಳೊದಗಿಸುತ್ತಿವೆ.

ಇವರ ಪರಿಸರ ಕಾಳಜಿಯನ್ನು ಇಂದು ತಾಲ್ಲೂಕಿನಲ್ಲಿ ಸಾವಿರಾರು ಮರಗಳು ಸಾಕ್ಷೀಕರಿಸುತ್ತಿವೆ. ಈ ಸಾಧನೆಗಾಗಿ 2013-14ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿ ಲೋಕಂಡೆ ಅವರ ಸಂಸ್ಥೆಯನ್ನು ಹುಡುಕಿಕೊಂಡು ಬಂದಿದೆ.

ಪ್ರಶಸ್ತಿ ಮಕ್ಕಳಿಗೆ ಅರ್ಪಣೆ: ಸಂಸ್ಥೆಗೆ ಬಂದಿರುವ ರಾಜ್ಯ ಪರಿಸರ ಪ್ರಶಸ್ತಿಯನ್ನು ತಾಲ್ಲೂಕಿನಲ್ಲಿರುವ ಎಲ್ಲಾ ಶಾಲೆಗಳ 45 ಸಾವಿರ ಮಕ್ಕಳಿಗೆ ಅರ್ಪಿಸುವುದಾಗಿ ಮುಕುಂದರಾವ್ ತಿಳಿಸುತ್ತಾರೆ. ಬಿಸಿಲಿನಲ್ಲಿ ಕಲ್ಲು ಮುಳ್ಳುಗಳಿರುವ ಬೆಟ್ಟಗಳನ್ನು ಹತ್ತಿ ಬೀಜ ಬಿತ್ತನೆ ಮಾಡಿದ ಮಕ್ಕಳೇ ಈ ಸಾಧನೆಗೆ ಕಾರಣ, ಒಕ್ಕೂಟ ಕೇವಲ ನೆಪಮಾತ್ರ ಎನ್ನುತ್ತಾರೆ.

2015ರಲ್ಲಿ ನಿವೃತ್ತಿ ಪಡೆದ ನಂತರ ಸುಮ್ಮನಿರದ ಮುಕುಂದರಾವ್, 2016 ರಲ್ಲಿ ಬೆಳಗಾವಿಯಲ್ಲಿ, ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿಯ ಇಸ್ರೋ ಬಡಾವಣೆಯಲ್ಲಿ ಸುಮಾರು 4 ಸಾವಿರ ಹೊಂಗೆ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ್ದಾರೆ. ಈ ಬಾರಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಉತ್ತಮ ಮಳೆ ಆರಂಭವಾಗಿರುವುದಿಂದ ಶೀಘ್ರವೇ ಬೆಟ್ಟ ಗುಡ್ಡೆಗಳಲ್ಲಿ ಸಸಿ ನೆಡುವ ಬೀಜ ಬಿತ್ತನೆ ಮಾಡುವ ಕಾರ್ಯಕ್ಕೆ ಮುಂದಾಗುವುದಾಗಿ ಅವರು  ತಿಳಿಸಿದ್ದಾರೆ.

ಮುಂದೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡು ಪರಿಸರಕ್ಕೆ ಕೊಡುಗೆ ನೀಡುವ ಗುರಿಯೊಂದಿಗೆ ಈ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ.  - ಎಚ್.ಎಂ. ರಮೇಶ್

**

ಮತ್ತೆ 7 ಲಕ್ಷ ಬೀಜ ಬಿತ್ತನೆ

ಪ್ರತಿವರ್ಷ ಗ್ರಾಮೀಣ ಭಾಗದಲ್ಲಿ, ರಸ್ತೆಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದ ಒಕ್ಕೂಟ ಮತ್ತೆ 2013ರಲ್ಲಿ ಬೀಜ ಬಿತ್ತನೆ ಮಾಡುವ ನಿರ್ಧಾರ ಕೈಗೊಂಡಿತು.

ಬಿ.ವಿ.ಹಳ್ಳಿ ಬಳಿಯ ಮುತ್ತುರಾಯಸ್ವಾಮಿ ಬೆಟ್ಟವನ್ನು ಅದು ಆಯ್ಕೆ ಮಾಡಿಕೊಂಡಿತು. ಇಲ್ಲಿಯೂ ಹೊಂಗೆ, ಬೇವು, ತೊರೆಮತ್ತಿ, ಮತ್ತಿ, ಅಂಟುವಾಳ, ಬಿದಿರು, ಕಾಡುಮರಗಳು ಸೇರಿದಂತೆ ವಿವಿಧ ಜಾತಿಯ 7 ಲಕ್ಷ ಬೀಜಗಳನ್ನು ಶಾಲಾ ಮಕ್ಕಳ ಸಹಕಾರದೊಂದಿಗೆ ಬಿತ್ತನೆ ಮಾಡಿತು.

**

ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ 15 ಲಕ್ಷ ಹುಣಸೆ, ಹೊಂಗೆ, ಬೇವು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ

-ಮುಕುಂದರಾವ್ ಲೋಕಂಡೆ,

ಪರಿಸರವಾದಿ, ಚನ್ನಪಟ್ಟಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry