ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಕೃಷಿಗೆ ಬಹುಮಹಡಿ ಬೆಳೆ!

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಹರೀಶ್ ಬಿ.ಎಸ್.
ಅಪ್ಪನಿಗೀಗ ಅರವತ್ತೆರಡು ವರ್ಷ. ಕೃಷಿಯಿಂದಲೇ ಬದುಕು ಕಟ್ಟಿಕೊಂಡವರು. ಅವರು ಹಾಕಿದ ಭದ್ರ ಕೃಷಿ ಅಡಿಪಾಯದ ಮೇಲೆಯೇ ನನ್ನ ಬದುಕು ಗಟ್ಟಿಯಾಗಿ ನಿಂತಿದೆ’

–‘ಹೇಗಿದೆ ನಿಮ್ಮ ಕೃಷಿ ಅನುಭವ’ ಎಂಬ ನನ್ನ ಪ್ರಶ್ನೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮೂವತ್ತರ ಆಸುಪಾಸಿನ ಯುವಕೃಷಿಕ ಅನಿಲ್ ಅವರ ಪ್ರತಿಕ್ರಿಯೆ ಇದು. ಸುತ್ತ-ಮುತ್ತಲಿನ ಕೃಷಿಕರೆಲ್ಲ ಈಗಲೂ ಭತ್ತ, ಕಬ್ಬಿನ ಸಾಂಪ್ರದಾಯಿಕ ಕೃಷಿಯಲ್ಲೇ ತೊಡಗಿದ್ದರೆ, ಅನಿಲ್ ಮತ್ತವರ ತಂದೆಯವರ ಯೋಚನೆ ಮತ್ತು ಯೋಜನೆ ತುಸು ಭಿನ್ನ ಮತ್ತು ಹೆಚ್ಚು ಸುಸ್ಥಿರ.

ಉಳಿದವರು ಭತ್ತ–ಕಬ್ಬು ಬೆಳೆಯಲು ಪ್ರಮುಖ ಕಾರಣ ಅದು ಕಾವೇರಿ ನೀರಾವರಿ ಪ್ರದೇಶ. ದಶಕಕ್ಕೂ ಮೊದಲು ಇವರೂ ಅದೇ ಕೃಷಿ ಮಾಡಿಕೊಂಡಿದ್ದರು. ಶ್ರಮಕ್ಕೆ ತಕ್ಕ ಫಲ ಸಿಗುತ್ತಿರಲಿಲ್ಲ. ಆದಾಯ ಅನಿಶ್ಚಿತವಾಗಿತ್ತು. ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಪರ್ಕ ಇವರು ಸಮಗ್ರ ಕೃಷಿಯತ್ತ ಒಲವು ತೋರಲು ಕಾರಣವಾಯಿತು. ಭತ್ತ-ಕಬ್ಬು ಬೆಳೆಯುತ್ತಿದ್ದ ಮೂರೂವರೆ ಎಕರೆಯಲ್ಲೀಗ ಬಹುವಿಧದ ಬೆಳೆಗಳು ತಲೆಯೆತ್ತಿ ಫಸಲು ಕೊಡುತ್ತಿವೆ.

ಬಹು ಮಹಡಿ ಬೆಳೆ ಪದ್ಧತಿ: ಮೂರೂವರೆ ಎಕರೆ ಜಮೀನಿನಲ್ಲಿ ಒಂದಿಂಚೂ ಜಾಗ ವ್ಯರ್ಥವಾಗದಂತೆ ಬೆಳೆ ಹಾಗೂ ಬೆಳೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ತೊಂಬತ್ತೆಂಟು ತೆಂಗು ಅದರಲ್ಲಿ ಉಪ ಬೆಳೆಯಾಗಿ ನೂರಿಪ್ಪತ್ತು ಸಪೋಟ, ಇಪ್ಪತ್ತೈದು ಜಾಯಿಕಾಯಿ, ಬಿಸಿಲು ಹೆಚ್ಚು ಬೀಳುವೆಡೆ ಇಪ್ಪತ್ತು ಮಲ್ಲಿಕಾ ಮಾವಿನ ಗಿಡಗಳು, ಎಂಟು ಹಲಸು, ಆರು ಬೆಣ್ಣೆಹಣ್ಣು, ಇಪ್ಪತ್ತು ಕ್ಯಾರಂಬೋಲ (ಕಮರಾಕ್ಷಿ), ಇರಲೆಂದು ಹಾಕಿದ ನಲವತ್ತು ಅಡಿಕೆ, ಅದಕ್ಕೇ ಹಬ್ಬಿಸಿರುವ ಕಾಳುಮೆಣಸು ಮುಂತಾದ ಹತ್ತಾರು ಬೆಳೆಗಳಿವೆ. ಇನ್ನೂ ಕಟಾವಿಗೆ ಬಾರದ ಹಿಂಗು ಮತ್ತು ಚೆರಿ ಗಿಡಗಳೂ ಇವೆ. ಒಂದೆರಡು ಚಕ್ಕೆ ಗಿಡಗಳಿಗೂ ಸ್ಥಳ ನೀಡಿದ್ದಾರೆ.

ನಿರಂತರ ಆದಾಯ: ವರ್ಷದ ಬೇರೆ ಬೇರೆ ಸಮಯದಲ್ಲಿ ಕಟಾವಿಗೆ ಬರುವಂತಹ ಬೆಳೆ ಆಯ್ದುಕೊಳ್ಳುವಲ್ಲಿ ಅನಿಲ್‌ ಅವರ ತಂದೆ ಶ್ರೀನಿವಾಸ್ ಜಾಣ್ಮೆ ಮೆರೆದಿದ್ದಾರೆ. ‘ಸಾರ್, ನಿಮಗ್ಹೆಂಗೆ ಸರ್ಕಾರದವರು ಪ್ರತೀ ತಿಂಗ್ಳು ಸಂಬಳ ಕೊಡ್ತಾರಲ್ಲ, ಹಂಗೇ ರೈತನಿಗೂ ಪ್ರತೀ ತಿಂಗಳೂ ಆದಾಯ ಬರೋ ಹಂಗೆ ಪ್ಲಾನ್ ಮಾಡ್ಕೋಬೇಕು’ ಎನ್ನುತ್ತಾರೆ ಅವರು.

ತೆಂಗಿನ ಕಾಯಿ ಮಾರದೆ ಕೊಬ್ಬರಿ ಮಾಡಿ ತಿಪಟೂರಿಗೇ ಕೊಂಡೊಯ್ದು ಮಾರುತ್ತಾರೆ. ‘ಒಂದು ತೆಂಗಿನ ಕಾಯಿ ಮಾರಿದರೆ ಹತ್ತು ರೂಪಾಯಿ ಸಿಗಬಹುದಷ್ಟೆ. ಅದರಿಂದ ನೂರೈವತ್ತು ಗ್ರಾಂ ಕೊಬ್ಬರಿ ಮಾಡಿದರೆ ಈಗಿನ ದರದಲ್ಲಿ ಕನಿಷ್ಠ ಹದಿನೈದು ರೂಪಾಯಿ ಸಿಗುತ್ತೆ. ಚಿಪ್ಪು ಸಿಪ್ಪೆ ನಮಗೇ ಉಳಿಯುತ್ತೆ. ಅಪ್ಪ ಮೊದಮೊದಲು ಕಾಯಿಯನ್ನೇ ಮಾರ್ತಿದ್ರು. ನಾನು ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ ಅಷ್ಟೆ. ಹೆಚ್ಚು ದುಡ್ಡು ಬರ್ತಿರೋದ್ರಿಂದ ಅಪ್ಪನದ್ದೇನೂ ತಕರಾರಿಲ್ಲ’ ಅಂತಾರೆ ಅನಿಲ್.

ತೋಟಗಾರಿಕೆ ವಿದ್ಯಾರ್ಥಿಗಳಿಗೆ ಅನಿಲ್‌ ಅವರಿಂದ ಪಾಠ

ಅಡಿಕೆ ಗಿಡ ಹೆಚ್ಚಿಲ್ಲವಾದ್ದರಿಂದ ಹಸಿ ಅಡಿಕೆಯನ್ನೇ ಮಾರುತ್ತಾರೆ. ಅದರಿಂದ ಆದಾಯ ಫೆಬ್ರುವರಿ-ಮಾರ್ಚಿಯಲ್ಲೇ ಸಿಗುತ್ತದೆ. ಮೇನಲ್ಲಿ ಅವರೇ ಸ್ವತಃ ಮಾವಿನಹಣ್ಣು ಮಾರುವುದರಿಂದ ಬರುವ ಆದಾಯ ಗಣನೀಯವಾಗಿದೆ. ಐದಾರು ವರ್ಷದ ನಲವತ್ತು ಮೆಣಸಿನ ಗಿಡಗಳಿಂದ ಹದಿನೈದು ಸಾವಿರ ರೂಪಾಯಿ ಸಿಕ್ಕಿದ್ದು ಜುಲೈನಲ್ಲಿ. ಇರುವ ಆರೇ ಗಿಡಗಳಿಂದ ಕಳೆದ ಮೇ-ಜೂನ್‌ನಲ್ಲಿ ಸಿಕ್ಕ ಬೆಣ್ಣೆ ಹಣ್ಣು ಇನ್ನೂರು ಕೆ.ಜಿ. ಅದರಿಂದ ಬಂದ ಆದಾಯ ಎಂಟು ಸಾವಿರ ರೂಪಾಯಿ. ಬದುವಿನ ಮೇಲೆ ಹಾಕಿದ ಇಪ್ಪತ್ತು ಕ್ಯಾರಂಬೋಲ ಗಿಡಗಳಿಂದ ಕಳೆದ ಸಲ ಸಿಕ್ಕ ಆದಾಯ ಹನ್ನೆರಡು ಸಾವಿರ ರೂಪಾಯಿ.

ದಿನಕ್ಕೆ ಸಾವಿರ ರೂಪಾಯಿ: ‘ಇದೇನಿದು ಪನ್ನೀರು ಗಿಡನೂ ಹಾಕಿದ್ದೀರಾ, ಈ ಕಡೆ ಇದು ಅಪರೂಪದ ಬೆಳೆಯಲ್ವಾ’ ಎಂಬುದು ನನ್ನ ಪ್ರಶ್ನೆ. ‘ಸಾರ್ ಅದೇ ಲಕ್ಷ್ಮಿ ನಮಗೆ; ಒಂದು ಸಾವಿರ ಗಿಡ ಇವೆ. ದಿನಕ್ಕೆ ಕನಿಷ್ಠ ನಲವತ್ತು ಕೆ.ಜಿ ಎಲೆ ಸಿಗುತ್ತೆ; ಸರಾಸರಿ ದರ ಕಿಲೋಗೆ ಇಪ್ಪತ್ತೈದು ರೂಪಾಯಿ. ದಿನಾಲೂ ಒಂದು ಸಾವಿರ ರೂಪಾಯಿ ಆದಾಯ ಗ್ಯಾರಂಟಿ’ ನಗುತ್ತಲೇ ಉತ್ತರಿಸುತ್ತಾರೆ ಈ ಯುವ ಕೃಷಿಕ. ‘ನಾವು ಕೂಲಿ ಕಾರ್ಮಿಕರಿಗೆ ಕೊಡಬೇಕಾದ ಅಷ್ಟೂ ಹಣವನ್ನೂ ಪನ್ನೀರು ಗಿಡದ ಆದಾಯದಿಂದಲೇ ಪಡೆಯುತ್ತೇವೆ’ ಎನ್ನುತ್ತಾರೆ.

ಅಪ್ಪ-ಮಗ ಇಬ್ಬರೂ ಆದಾಯ ಹೆಚ್ಚಿಸುವ ಬಗ್ಗೆ ಆಗಾಗ್ಗೆ ಸಮಾಲೋಚನೆ ಮಾಡುವುದುಂಟು. ನಾಲ್ಕು ವರ್ಷದ ಹಿಂದಿನ ಅಂತಹ ಒಂದು ಸಮಾಲೋಚನೆಯ ಫಲವಾಗಿ ಈಗ ಅಲ್ಲಿ ಅಷ್ಟೇ ವರ್ಷಗಳ ಮೂರುಸಾವಿರ ಅರೇಬಿಕಾ ಕಾಫಿ ಗಿಡಗಳಿವೆ.  ಮಂಡ್ಯದಲ್ಲೂ ಕಾಫಿ ಬೆಳೆದು ತೋರಿಸಿದ ಹೆಮ್ಮೆ ಈ ಜೋಡಿಯದ್ದು. ಕಳೆದ ಸಾಲಿನಲ್ಲಿ ಸಿಕ್ಕ ಒಂದು ಟನ್ ಚೆರಿ ಕಾಫಿಯಿಂದ ಬಂದ ಆದಾಯ ಎಪ್ಪತ್ತು ಸಾವಿರ ರೂಪಾಯಿ.

‘ನೋಡಿ ಸಾರ್ ಹೆಂಗಿದೆ ನಮ್ಮ ಪ್ಲಾನು?’ ಪ್ರಶ್ನಿಸುವ ಸರದಿ ಅವರದ್ದು. ‘ಇದೇನು ಸ್ಪ್ರಿಂಕ್ಲರ್ ಹಾಕಿ ನೀರು ಕೊಡುತ್ತಿದ್ದೀರಿ ಬೆಳೆಗಳಿಗೆ, ಇದರಿಂದ ಕಾಫಿ ಯಾವ್ಯಾವಾಗಲೋ ಹೂಬಿಟ್ಟು ಕಾಯಾಗಿ ಕೊಯ್ಲಿಗೆ ಬರುತ್ತಲ್ವಾ’ ಎಂದಾಗ, ‘ಹೌದು, ಅದಕ್ಕೇ ನಮ್ದು ರನ್ನಿಂಗ್ ಬ್ಲಾಸಂ; ಸ್ಪ್ರಿಂಕ್ಲರ್ ಬದಲು ಡ್ರಿಪ್ ಮಾಡ್ಬೇಕು, ಇಲ್ಲಾಂದ್ರೆ ಕಾಫಿ ನಿರ್ವಹಣೆ ಕಷ್ಟ, ಲೇಬರ್ ಕೂಡ ಜಾಸ್ತಿ ಬೇಕು” ಎಂಬುದು ಅವರ ಅನುಭವಕ್ಕೆ ಈಗಾಗಲೇ ಬಂದಿರುವ ವಿಚಾರ.

ಬಹುವಾರ್ಷಿಕ ಬೆಳೆ, ವಾರ್ಷಿಕ ಬೆಳೆ, ಮಿಶ್ರ ಬೆಳೆ, ಅಂತರ ಬೆಳೆ ಮುಂತಾದ ಬಗೆಬಗೆಯ ಬೆಳೆಗಳು ಇರುವುದರಿಂದ ಅಂತರ ಬೇಸಾಯಕ್ಕೆ ಅವಕಾಶವೇ ಇಲ್ಲ. ಮೊದಲೊಮ್ಮೆ ವಿಷಯ ತಿಳಿಯದೆ ಉಳುಮೆ ಮಾಡ ಹೊರಟಾಗ ಕೆಲವು ಬೆಳೆಗಳ ಬೇರಿಗೆ ಹಾನಿಯಾದ ಮೇಲೆ ಜಮೀನಿಗೆ ನೇಗಿಲು ತಾಕಿಸಿಯೇ ಇಲ್ಲ. ಬಹುವಾರ್ಷಿಕ ಬೆಳೆಗಳಿಗೆ ವರ್ಷಕ್ಕೊಮ್ಮೆ ಪಾತಿ ಮಾಡಿಸಿ ತಾವೇ ತಯಾರಿಸಿರುವ ಸಾವಯವ ಗೊಬ್ಬರ ಕೊಟ್ಟು ಸಾವಯವ ಹೊದಿಕೆ ಮಾಡುತ್ತಾರಷ್ಟೆ. ನೆರಳು ಹೆಚ್ಚಿರುವುದರಿಂದ ಕಳೆ ಸಮಸ್ಯೆ ಕಡಿಮೆ.

ಹೊಸ ಪ್ರಯತ್ನ ಮೇರಿಗೋಲ್ಡ್
‘ಸಾರ್ ಮೇರಿಗೋಲ್ಡ್ ಅಂದ್ರೆ ಚೆಂಡು ಹೂ ಅಂದ್ಕೋಬೇಡಿ; ಅದು ಸೇವಂತಿಗೆಯ ತಳಿ; ಒಂದು ವಾರ ಇಟ್ರೂ ಬಾಡಲ್ಲ. ಮಾರ್ಕೆಟ್‌ನಲ್ಲಿ ಡಿಮ್ಯಾಂಡ್ ಜಾಸ್ತಿ. ಮಾಮೂಲಿ ಸೇವಂತಿಗೆಯ ದರ ಕಿಲೋಗೆ ಇಪ್ಪತೈದಿದ್ರೆ, ಇದಕ್ಕೆ ನಲವತ್ತು ರೂಪಾಯಿ’ ಎಂದು ವಿವರಿಸುತ್ತಾರೆ. ಹಬ್ಬದ ಸೀಸನ್ ಮುಗಿದ ಮೇಲೆ ಹೂವಿನ ದರ ತೀರಾ ಕಡಿಮೆಯಾದಾಗ, ಮೊಗ್ಗು ಕಿತ್ತು, ಬರುವ ಹೆಚ್ಚಿನ ಮರಿಗಿಡಗಳನ್ನು ಪ್ರತ್ಯೇಕಿಸಿ ಗಿಡ ಮಾಡಿ ಲಾಭ ಮಾಡಿಕೊಳ್ಳುವಷ್ಟು ಜಾಣ ಕೃಷಿಕರಿವರು.

ಆದಾಯ ಹೆಚ್ಚಿಸಲು ನರ್ಸರಿ?: ‘ರೈತ ಅಂದ್ಮೇಲೆ ಅವನಿಗೆ ಬೇಕಾಗಿರೋ ಗಿಡಗಳನ್ನು ಅವನೇ ಮಾಡ್ಕೊಂಡ್ರೆ ಒಳ್ಳೆಯದು. ಸುತ್ತ-ಮುತ್ತಲ ಆಸಕ್ತರಿಗೆ ಕೊಟ್ರೆ ಇನ್ನೂ ಒಳ್ಳೆಯದು. ಇದರಿಂದ ಸಮಯದ ಸದ್ಬಳಕೆ ಆಗುತ್ತೆ. ಜೊತೆಗೆ ಕಾಸು ಉಳಿಯುತ್ತೆ. ಉಪಕಸುಬಾಗಿ ಸ್ವಲ್ಪ ಹೆಚ್ಚಾಗಿ ಮಾಡಿದ್ರೆ ಒಳ್ಳೆಯ ಆದಾಯ ಕೂಡ ಗ್ಯಾರಂಟಿ’ ಎನ್ನುತ್ತಾರೆ ಅನಿಲ್.

ಬೇಡಿಕೆಯ ಆಧಾರದ ಮೇಲೆ ಅಡಿಕೆ, ಬೆಣ್ಣೆಹಣ್ಣು, ತೆಂಗು, ಕಾಫಿ, ಕಾಳುಮೆಣಸು, ಮೇರಿಗೋಲ್ಡ್ ಸೇವಂತಿಗೆ ಮುಂತಾದ ಬೆಳೆಗಳ ಗುಣಮಟ್ಟದ ಸಸಿಗಳನ್ನು ಉತ್ಪಾದನೆ ಮಾಡಿ ಆಸಕ್ತರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ಇವರ ವಿಶೇಷ. ಗಿಡ ತೆಗೆದುಕೊಳ್ಳಲು ಬರುವವರಲ್ಲಿ ಅನೇಕರಿಗೆ ಇವರ ತೋಟ ಹಾಗೂ ಕೃಷಿ ಕಸುಬು-ಉಪಕಸುಬುಗಳು ಸ್ಫೂರ್ತಿದಾಯಕವೂ ಹೌದು. ಸಣ್ಣ ಪ್ರಮಾಣದ ಈ ನರ್ಸರಿ ಚಟುವಟಿಕೆಯಲ್ಲಿ ಪ್ರತಿವರ್ಷ ಸಿಗುತ್ತಿರುವ ಸರಾಸರಿ ಆದಾಯ ಒಂದು ಲಕ್ಷ ರೂಪಾಯಿಗೂ ಅಧಿಕ. 

ಆದಾಯ ಹೆಚ್ಚಿಸಲು ಮತ್ತಿನ್ನೇನು?
‘ಜೇನು ಸಾಕು, ಮತ್ತಿನ್ನೇನೂ ಬೇಡ’ ಅಂತ ಕಳೆದ ವರ್ಷವಷ್ಟೇ ಸಾಕಲು ಶುರು ಮಾಡಿರುವ ಜೇನಿನ ಬಗ್ಗೆ ಅನಿಲ್ ಹೇಳಿದ್ದು ಹೀಗೆ. ತೆಂಗು, ಅಡಿಕೆ, ಕಾಫಿ ಮುಂತಾದ ಬೆಳೆಗಳ ಪರಾಗ ಸ್ಪರ್ಶಕ್ಕೆ ಜೇನು ಹೆಚ್ಚು ಸಹಕಾರಿಯೆಂಬುದು ತಿಳಿದದ್ದೇ ತಡ, ತಡಮಾಡದೆ ಆರು ಜೇನು ಗೂಡುಗಳನ್ನು ತೋಟದಲ್ಲಿ ಇಟ್ಟೇ ಬಿಟ್ಟರು. ‘ಈ ಸಲ ತೆಂಗಿನಲ್ಲಿ ಕಾಯಿ ಕಳೆದ ಸಲಕ್ಕಿಂತ ಹೆಚ್ಚೇ ಇದೆ. ಗೊನೆ ನೋಡಿ, ಕಾಫಿಯಲ್ಲೂ ಫಲ ಚೆನ್ನಾಗೇ ಕಚ್ಚಿದೆ, ಜೇನಿನದೇ ಈ ಕೆಲಸ. ಸಿಕ್ಕ ತುಪ್ಪ ಬೋನಸ್ಸು ಸಾರ್’ ಎಂದು ಮಾತು ಮುಂದುವರೆಸುತ್ತಾರೆ ಈ ಜಾಣ ಕೃಷಿಕ.

ಪೂರಕ ಅಂಶಗಳು: ತೋಟದ ಸುತ್ತಲೂ ತೇಗ ಹಾಗೂ ಸಿಲ್ವರ್ ಓಕ್‌ಗಳ ಗಾಳಿ ತಡೆಗೋಡೆ ಮತ್ತು ಸಜೀವ ಬೇಲಿಯಿದೆ. ಅಲ್ಪಾವಧಿ ಬೆಳೆ ಬೆಳೆದ ನಂತರ ಕಡ್ಡಾಯವಾಗಿ ಬೆಳೆ ಪರಿವರ್ತನೆ ಮಾಡಲಾಗುತ್ತಿದೆ. ಪೋಷಕಾಂಶ ನಿರ್ವಹಣೆಗೆಂದು ಎರೆಗೊಬ್ಬರ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ. ಬದುಗಳ ಮೇಲೆ ಗ್ಲಿರಿಸೀಡಿಯಾ ಬೆಳೆಯಲಾಗುತ್ತಿದ್ದು, ಇದನ್ನು ಹಸಿರೆಲೆ ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದೆ.

ರೈಝೋಬಿಯಂ, ಅಝಟೋಬ್ಯಾಕ್ಟರ್ ಮತ್ತು ರಂಜಕ ಕರಗಿಸುವ ಸೂಕ್ಷ್ಮಾಣು ಜೀವಾಣು ಗೊಬ್ಬರಗಳ ತಪ್ಪದ ಬಳಕೆ. ರೋಗ ನಿರ್ವಹಣೆಗೆ ಟ್ರೈಕೋಡರ್ಮ, ಸುಡೋಮೋನಾಸ್ ಮತ್ತು ಸಮಗ್ರ ಪೀಡೆ ನಿರ್ವಹಣಾ ಕ್ರಮಗಳ ತಪ್ಪದ ಅಳವಡಿಕೆ. ವೆಂಚುರಿಯ ಮೂಲಕ ಎಲ್ಲ ಬೆಳೆಗಳಿಗೂ ತಪ್ಪದೇ ಜೀವಸಾರ ಘಟಕದಿಂದ ಬರುವ ‘ಜೀವರಸದ’ ಪೂರೈಕೆ. ಸಾಧ್ಯವಾದಷ್ಟು ಉತ್ಪನ್ನಗಳನ್ನು ಸ್ವತಃ ಮಾರಾಟ ಮಾಡಿ ಉಳಿದದ್ದನ್ನು ಹಾಪ್‌ಕಾಮ್ಸ್‌ಗೆ ಕೊಡಲಾಗುತ್ತಿದೆ.

ತಂದೆಯ ಅನುಭವ ಮತ್ತು ಮಗನ ಸ್ವಯಂ ಜಾಣ್ಮೆ-ತಾಳ್ಮೆಯಿಂದಾಗಿ ಅಪ್ಪ-ಮಗನ ಈ ಕೃಷಿಯಲ್ಲಿ ಖುಷಿ, ನೆಮ್ಮದಿ ಮತ್ತು ಸಂತೃಪ್ತಿಯಿದೆ ಹಾಗೂ ಆಸಕ್ತರಿಗೆ ಮಾದರಿಯಾಗಿದೆ. ಕಡೆಯಲ್ಲಿ ಅವರು ಹೇಳಿದ ಮಾತು: ‘ಕೃಷಿ ಬಿಟ್ಟರೆ ನಮಗೆ ಮತ್ತೇನೂ ಇಲ್ಲ. ಅದೇ ನಮ್ಮ ಬದುಕು’. 
ಸಂಪರ್ಕಕ್ಕೆ: 80957 77255.
(ಲೇಖಕರು: ವಿಸ್ತರಣಾ ಮುಂದಾಳು, ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT