ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಜಲಪಾತಗಳಿಗೂ ಜೀವರಕ್ಷಕರು!

Last Updated 5 ಜೂನ್ 2017, 9:43 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಬಂತೆಂದರೆ ಜಿಲ್ಲೆಯ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಎತ್ತರದಿಂದ ಧುಮ್ಮಿಕ್ಕಿ ಹರಿಯುವ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ನೀರಿಗಿಳಿದು ಜೀವ ಕಳೆದುಕೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಪ್ರಮುಖ ಜಲಪಾತಗಳಲ್ಲಿ ಜೀವರಕ್ಷಕರನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ.

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಜಲಪಾತಗಳಲ್ಲಿ 17 ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಯಲ್ಲಾಪುರದ ಸಾತೋಡಿ ಜಲಪಾತದಲ್ಲಿ 5, ಶಿರಲೆ ಜಲಪಾತದಲ್ಲಿ 1, ಶಿವಗಂಗಾ ಜಲಪಾತದಲ್ಲಿ 3, ಸಿದ್ದಾಪುರದ ಬುರುಡೆ ಜಲಪಾತದಲ್ಲಿ 4, ಜೋಗ ಜಲಪಾತದಲ್ಲಿ 2 ಹಾಗೂ ದೇವಿಮನೆ ಜಲಪಾತದಲ್ಲಿ 2  ಸಾವು ಸಂಭವಿಸಿವೆ.

ಜೀವರಕ್ಷಕರ ನೇಮಕ ಎಲ್ಲೆಲ್ಲಿ?:  ಸಾತೋಡಿ, ಬುರುಡೆ, ಜೋಗ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತಗಳಲ್ಲಿ ಡಾ.ರವೀಂದ್ರನಾಥ ಟ್ಯಾಗೋರ್‌ ಕಡಲತೀರಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ವತಿಯಿಂದ ಜೀವರಕ್ಷಕರನ್ನು ನೇಮಕ ಮಾಡಲು ಸಿದ್ಧತೆ ನಡೆಸಲಾಗಿದೆ. ಇದೇ 5ರಿಂದ ಗೋಕರ್ಣದಲ್ಲಿ ಜೀವರಕ್ಷಕ ಅಭ್ಯರ್ಥಿಗಳಿಗೆ ಐದು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ.

‘ಜಿಲ್ಲೆಯ ಜಲಪಾತಗಳಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸಂಭವಿಸಿದ ಅನಾಹುತಗಳ ಮಾಹಿತಿಯನ್ನು ತಹಶೀಲ್ದಾರ್‌ಗಳ ಮೂಲಕ ಪಡೆದಿದ್ದೇವೆ. ಜೀವಹಾನಿ ಬಗ್ಗೆ ಪೊಲೀಸರಿಂದಲೂ ವರದಿ ಕೇಳಿದ್ದೇವೆ. ಮೊದಲ ಹಂತದಲ್ಲಿ ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಜೀವರಕ್ಷಕರನ್ನು ನೇಮಕ ಮಾಡಲಾಗುತ್ತಿದೆ.

ಅನೇಕ ಜಲಪಾತಗಳು ಅರಣ್ಯ ಪ್ರದೇಶದಲ್ಲಿದ್ದು, ಅವುಗಳ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿ ನೋಡಿಕೊಳ್ಳುತ್ತಿದೆ. ಈ ಸಮಿತಿಯು ಅಲ್ಲಿನ ಸ್ವಚ್ಛತೆ ಹಾಗೂ ಭದ್ರತೆ ವಿಷಯದಲ್ಲಿ ನಮ್ಮ ಜೊತೆ ಕೈಜೋಡಿಸಿದರೆ ಅನಾಹುತ ನಡೆಯುವುದನ್ನು ತಪ್ಪಿಸಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯರಿಗೆ ಉದ್ಯೋಗ ಸೃಷ್ಟಿ: ‘ಜಿಲ್ಲೆಯ ರವೀಂದ್ರನಾಥ ಟ್ಯಾಗೋರ್‌ ಕಡಲತೀರ, ಮುರ್ಡೇಶ್ವರ ಕಡಲತೀರ, ಗೋಕರ್ಣ ಪ್ರಮುಖ ಕಡಲತೀರ,  ಓಂ ಬೀಚ್‌ ಹಾಗೂ ಕುಡ್ಲೆ ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ ನಾಲ್ಕೈದು ತಿಂಗಳ ಹಿಂದೆ ಒಟ್ಟು 14 ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಕಾರವಾರ ನಡೆಸಿದ ತರಬೇತಿಯಲ್ಲಿ 40 ಅಭ್ಯರ್ಥಿಗಳು ಹಾಗೂ ಮುರ್ಡೇಶ್ವರದಲ್ಲಿ ನಡೆಸಿದ ತರಬೇತಿಯಲ್ಲಿ 27 ಅಭ್ಯರ್ಥಿಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗಿದೆ. ಕಾರವಾರದ ಟ್ಯಾಗೋರ್‌ ಕಡಲತೀರ ಹಾಗೂ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡಾ ಚಟುವಟಿಕೆ ಆರಂಭಗೊಂಡಿದ್ದು, ಇಲ್ಲಿ ಜೀವರಕ್ಷಕರಾಗಿ ನಮ್ಮಲ್ಲಿ ತರಬೇತಿ ಪಡೆದ ಅನೇಕ ಅಭ್ಯರ್ಥಿಗಳೇ ನೇಮಕಗೊಂಡಿದ್ದಾರೆ. ಜಂಗಲ್‌ ರೆಸಾರ್ಟ್‌ನಲ್ಲೂ ಇಬ್ಬರಿಗೆ ಉದ್ಯೋಗ ದೊರೆತಿದೆ’ ಎಂದು ಮಾಹಿತಿ ನೀಡಿದರು. ‘ಜಿಲ್ಲೆಯ ತೀಳಮಾತಿ, ಮಾಜಾಳಿ, ಹನಿ ಬೀಚ್‌ ಹಾಗೂ ಕಾಸರಗೋಡು ಕಡಲತೀರಗಳಲ್ಲೂ ಜೀವರಕ್ಷಕರನ್ನು ನೇಮಕ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.

* * 

ಪ್ರಮುಖ ಕಡಲ ತೀರಗಳಲ್ಲಿ ನೇಮಕವಾಗಿರುವ ಜೀವ ರಕ್ಷಕರು ಈವರೆಗೆ ಒಟ್ಟು 5 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಜಲಪಾತ ಗಳಲ್ಲಿ ನೇಮಕವಾಗುವ ಜೀವರಕ್ಷಕರು ಪ್ರವಾಸಿಗರ ಹಿತ ಕಾಯುವರು
ಎಚ್‌.ಪ್ರಸನ್ನ
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT