ಕಂಡಿರಾ, ಈ ಸಿದ್ಧರ ಕೈಚಳಕ?

7

ಕಂಡಿರಾ, ಈ ಸಿದ್ಧರ ಕೈಚಳಕ?

Published:
Updated:
ಕಂಡಿರಾ, ಈ ಸಿದ್ಧರ ಕೈಚಳಕ?

ತಲೆ ಮೇಲೊಂದು ಪೇಟಾ ಸುತ್ತಿಕೊಂಡು, ಅದರಲ್ಲಿ ನವಿಲುಗರಿಗಳ ಗುಚ್ಛವನ್ನು ಚುಚ್ಚಿಕೊಂಡು, ಕೊರಳ ತುಂಬಾ ರುದ್ರಾಕ್ಷಿ, ಮಣಿ ಸರಗಳನ್ನು ಧರಿಸಿರುತ್ತಾರೆ. ಕೈಯಲ್ಲಿ ಜಾಗಟೆ ಮತ್ತು ಶಂಖ ಹಿಡಿದು ಬರುವ ಅವರು, ನೋಡುನೋಡುತ್ತಿದ್ದಂತೆ ಕಲ್ಲುಗಳನ್ನು ಒಂದೊಂದಾಗಿ ನುಂಗಿ ಹೊರತೆಗೆಯುತ್ತಾರೆ. ಕೈಯಲ್ಲಿ ಕಪ್ಪೆಯನ್ನು ಮುಚ್ಚಿಟ್ಟು ತಕ್ಷಣವೇ ಈರುಳ್ಳಿಯನ್ನಾಗಿ ಪರಿವರ್ತಿಸಿ ತೋರುತ್ತಾರೆ!

ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಇದ್ದಕ್ಕಿದ್ದಂತೆ ಬರುವ ಈ ಸುಡುಗಾಡು ಸಿದ್ಧರನ್ನು ನೋಡುವುದೇ ಖುಷಿ. ಕ್ಷಣಮಾತ್ರದಲ್ಲಿ ತಮ್ಮ ಕೈಚಳಕದಿಂದ ಯಾವುದನ್ನೋ ಮಾಯಮಾಡಿ, ಇನ್ನೇನನ್ನೋ ಸೃಷ್ಟಿಸಿ ವಿಸ್ಮಯ ಮೂಡಿಸಿ, ಜನರಿಗೆ ರಂಜನೆ ಒದಗಿಸುತ್ತಾರೆ. ಊರಿಂದ ಊರಿಗೆ ಸಾಗಿ, ಅಲ್ಲಿ ಮುಂದೆ ಆಗುವ ಶುಭ ಅಶುಭ, ಮಳೆ-ಬೆಳೆಗಳ ಬಗ್ಗೆ ಭವಿಷ್ಯ ಹೇಳುವುದು ಕೂಡ ಇವರ ಮೇಲಿರುವ ಹೊಣೆ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಈ ಕಲೆಯನ್ನು ಬೆಳೆಸಿಕೊಂಡು ಬಂದ ಕುಟುಂಬಗಳಿವೆ.

‘ಸುಡುಗಾಡಿನಲ್ಲಿ ಇದ್ದು ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳುವುದರಿಂದ ನಮಗೆ ಸುಡುಗಾಡು ಸಿದ್ಧರೆಂಬ ಹೆಸರು ಬಂದಿದೆ’ ಎನ್ನುತ್ತಾರೆ ಈ ಕುಟುಂಬಗಳ ಯಜಮಾನ ವಿರೂಪಾಕ್ಷ.

ಪಣಕಟ್ಟುವ ವಿಧಾನ: ಈ ಸುಡುಗಾಡು ಸಿದ್ಧರು ಊರಿಂದ ಊರಿಗೆ ಹೋಗಿ ಪಣಕಟ್ಟುವ ಪದ್ಧತಿಯಿದೆ. ಅವರು ಯಾವ ಊರಿನಲ್ಲಿ ಪಣ ಕಟ್ಟುತ್ತಾರೋ ಆ ಊರಿನಲ್ಲಿ ರಾತ್ರಿ 12 ಹಾಗೂ ಬೆಳಗಿನ 4 ಗಂಟೆಗೆ ಶಂಖ ಊದುತ್ತಾ ಬೀದಿಬೀದಿಯಲ್ಲಿ ಅಲೆದಾಡುತ್ತಿರುತ್ತಾರೆ. ಸುಡುಗಾಡ ಸಿದ್ಧರು ತೋರಿಸುವ ಕೈಚಳಕ ರಾಜಮೋಡಿಯ ಗುಂಪಿಗೆ ಸೇರಿದ್ದು.

ಹಬ್ಬ, ಜಾತ್ರೆ, ಸಂತೆ ಸಂದರ್ಭಗಳಲ್ಲಿ ಮಲ್ಲಿಕಾರ್ಜುನ ದೇವರನ್ನು ನೆನೆದು ಈ ಜಾದೂ ವಿದ್ಯೆ ಪ್ರದರ್ಶಿಸುತ್ತಾರೆ. ಒಂದು ರೂಪಾಯಿ ನಾಣ್ಯದಲ್ಲಿ ಬಸವಣ್ಣನ ಮೂರ್ತಿ ಮಾಡುವುದು, ನೋಡುನೋಡುತ್ತಿದ್ದಂತೆ ಶಿವಲಿಂಗ ಮಾಯ ಮಾಡುವುದು, ಮೂರು ಕಲ್ಲುಗಳನ್ನು ನುಂಗಿ ಅದಕ್ಕಿಂತಲೂ ದೊಡ್ಡ ಕಲ್ಲನ್ನು ಹೊರತೆಗೆಯುವುದು... ಹೀಗೆ ಮೋಡಿ ಮಾಡುವ ಜಾದೂ ಅವರದು.

ಈ ಸುಡುಗಾಡು ಸಿದ್ಧರು ಮೂರು ಜನರ ತಂಡ ಕಟ್ಟಿಕೊಂಡು ಸುತ್ತುತ್ತಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಬಲ್ಲ ಇವರು ರಾಜ್ಯ ಮಾತ್ರವಲ್ಲದೆ ಆಂಧ್ರದಲ್ಲೂ ತಮ್ಮ ಮೋಡಿ ಪ್ರದರ್ಶಿಸುತ್ತಾರೆ. ವಿರೂಪಾಕ್ಷ ಅವರಂತಹ ಹಿರಿಯರು ಹೊಸ ಪೀಳಿಗೆಗೆ ಈ ಕಲೆಯನ್ನು ದಾಟಿಸುತ್ತಿದ್ದಾರೆ.

‘ನಮ್ಮಿಂದಾದಷ್ಟು ಈ ವಿದ್ಯೆಯನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಯವರು ಕೂಡ ಇದನ್ನು ಮುಂದುವರಿಸಬೇಕೆಂಬ ಆಸೆಯಿದೆ. ಆದರೆ ಬದಲಾಗುತ್ತಿರುವ ಸಾಮಾಜಿಕ ಜೀವನದಲ್ಲಿ ಅದು ಅಸಾಧ್ಯವಾಗಿದೆ’ ಎಂದು ನಿಟ್ಟುಸಿರು ಬಿಡುತ್ತಾರೆ ವಿರೂಪಾಕ್ಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry