ಉಪವಾಸ, ಪ್ರಾರ್ಥನೆಯಲ್ಲಿ ಮೀಯುತಿದೆ ನಗರ

7

ಉಪವಾಸ, ಪ್ರಾರ್ಥನೆಯಲ್ಲಿ ಮೀಯುತಿದೆ ನಗರ

Published:
Updated:
ಉಪವಾಸ, ಪ್ರಾರ್ಥನೆಯಲ್ಲಿ ಮೀಯುತಿದೆ ನಗರ

ಬಳ್ಳಾರಿ: ನಗರದ ಕಾಂಡ್ರಾ ಸಿದ್ದಪ್ಪ ಬೀದಿಯಲ್ಲಿರುವ ಜೆ.ಎಸ್‌.ಇಸಾಕ್‌ ಅಹ್ಮದ್‌ ಅವರ ಮನೆಯಲ್ಲಿ ಭಾನುವಾರ ಸಂಜೆ 5.30ರ ವೇಳೆಯಲ್ಲಿ ಅಣ್ಣಂದಿರೊಂದಿಗೆ ಕುಳಿತಿದ್ದ ಏಳು ವರ್ಷದ ಪೋರಿ ಜೆ.ಎಸ್‌.ಖರ್ಷಿಯಾ ಕೂಡ ಮಸೀದಿಯಿಂದ ಕರೆ (ಅಜಾ) ಬರುವುದಕ್ಕಾಗಿ ಕಾಯುತ್ತಿದ್ದಳು.

ರಂಜಾನ್‌ ಪ್ರಯುಕ್ತ ಉಪವಾಸವಿದ್ದ ಅಣ್ಣಂದಿರಾದ 6ನೇ ತರಗತಿಯ ಮಹ್ಮದ್‌ ಮೌಸಿನ್‌ ಮತ್ತು 10ನೇ ತರಗತಿಯ ಮಹ್ಮದ್‌ ಗೌಸ್‌ ಕರೆ ಬರುತ್ತಲೇ ಉಪವಾಸ ಕೊನೆಗೊಳಿಸಿ ಒಂದಿಷ್ಟು ಹಣ್ಣು ತಿಂದು ಮಸೀದಿಗೆ ಪ್ರಾರ್ಥನೆಗೆಂದು ತೆರಳಲು ಸಿದ್ಧರಾಗಿದ್ದರು, ಖರ್ಷಿಯಾ ಉಪವಾಸವೇನೂ ಇರಲಿಲ್ಲ. ಆದರೆ ವ್ರತದ ಆಚರಣೆಯಲ್ಲಿ ಅಣ್ಣಂದಿರೊಂದಿಗೆ ದಿನವೂ ಪಾಲ್ಗೊಳ್ಳುತ್ತಾಳೆ. ಅಣ್ಣಂದಿರೊಂದಿಗೆ ಸೇರಿ ತಾನೂ ಹಣ್ಣು ಸೇವಿಸುತ್ತಾಳೆ.

ಇಸಾಕ್‌ ಅಹ್ಮದ್‌ ಅವರ ಮನೆಯಲ್ಲಿ ಕೆಲವು ಹಿರಿಯರನ್ನು, ಹರ್ಷಿಯಾಳನ್ನು ಹೊರತುಪಡಿಸಿದರೆ ಎಲ್ಲರೂ ರಂಜಾನ್‌ ಉಪವಾಸ ವ್ರತಾಚರಣೆಯಲ್ಲಿದ್ದಾರೆ. ಮೌಸಿನ್‌ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಕೂಡಲೇ ಈಜುಕೊಳಕ್ಕೆ ಧಾವಿಸುತ್ತಾನೆ. ಒಂದು ಗಂಟೆ ಈಜಾ ಡುವ ಆತನಿಗೆ ಸುಸ್ತು ಎನ್ನಿಸುವುದೇ ಇಲ್ಲ!

ಅದೇ ಬೀದಿಯಲ್ಲಿರುವ ಬಾಲಾಂಜನೇಯ ಗುಡಿಯಲ್ಲಿ ಭಜನೆ ನಡೆಯುವ ವೇಳೆಯಲ್ಲೇ, ಈ ಮನೆಯಲ್ಲಿ ಮೌನ ಪ್ರಾರ್ಥನೆಯೂ ನಡೆದಿರುತ್ತದೆ. ಇದು ಈ ಬೀದಿಯದಷ್ಟೇ ಅಲ್ಲ, ನಗರದ ಎಲ್ಲೆಡೆ ನಡೆಯುತ್ತಿರುವ ವಿದ್ಯಮಾನ. ರಂಜಾನ್‌ ಮಾಸದಲ್ಲಿ ಆಚರಿಸುವ ಉಪವಾಸ ವ್ರತವು ನಮಗೆ ಹಸಿವಿನ ಮತ್ತು ಊಟದ ಮಹತ್ವವನ್ನು ಮನ ವರಿಕೆ ಮಾಡಿಕೊಡುತ್ತದೆ.

ಪ್ರಾರ್ಥನೆಯು ಎಲ್ಲರಿಗೂ ಒಳಿತನ್ನು ಬಯಸಬೇಕೆ ನ್ನುವ ಮಾನವೀಯ ಗುಣದ ಮಹತ್ವವನ್ನು ಹೇಳಿಕೊಡುತ್ತದೆ. ವರ್ಷದ ಉಳಿದೆಲ್ಲ ಕಾಲ ನಮಗೆ ನಮ್ಮದೇ ಬದುಕಿರುತ್ತದೆ. ಈ ತಿಂಗಳು ಮಾತ್ರ ದೇವರು ಹೇಳಿದಂತೆ ಕೇಳುತ್ತೇವೆ’ ಎಂದರು ಇಸಾಕ್‌ ಅಹ್ಮದ್‌.

ಐದು ಬಾರಿ ಪ್ರಾರ್ಥನೆ: ‘ಸಾಮಾನ್ಯ ದಿನಗಳಲ್ಲಿ ಒಂದೆರಡು ಬಾರಿ ನಮಾಜು ಮಾಡಿದರೆ ಹೆಚ್ಚು. ಆದರೆ ಈ ಮಾಸ ದಲ್ಲಿ ವ್ರತನಿಷ್ಠರು ಐದು ಬಾರಿ ಕಡ್ಡಾಯ ವಾಗಿ ನಮಾಜು ಮಾಡಲೇಬೇಕು. ಬೆಳಗಿನ ಜಾವ ಮಸೀದಿ ಕರೆಯುತ್ತಲೇ ಮಾಡುವ ಮೊದಲ ನಮಾಜು ಫಸರ್‌, ಮಧ್ಯಾಹ್ನ 1ಗಂಟೆಗೆ ಜೊಹರ್‌, ಸಂಜೆ 5 ಗಂಟೆಗೆ ಅಸರ್‌, ಸೂರ್ಯ ಮುಳುಗಿದ ಬಳಿಕ ಮಕ್ರೀಬ್‌ ಮತ್ತು ರಾತ್ರಿ 8.30ಕ್ಕೆ ತರಾವಿ ಪ್ರಾರ್ಥನೆಯನ್ನು ಮಾಡಿದ ಮುಸ್ಲಿಮರು ದೇವರಿಗೆ ಸಮೀಪವಾಗುತ್ತಾರೆ. 

ಹೀಗೆ ವ್ರತನಿಷ್ಠರೊಂದಿಗೆ ಕುಳಿತು ಊಟ, ಉಪಹಾರ ಸೇವಿಸಿದರೆ  ವ್ರತ ಆಚರಿಸಿದಷ್ಟೇ ಪುಣ್ಯ ದೊರಕುತ್ತದೆ’ ಎಂದು ಹೇಳಿ ಅವರು ತಮ್ಮ ಮಗಳ ಕಡೆ ನೋಡಿದರು. ಆಕೆ ಅಣ್ಣಂದಿರೊಂದಿಗೆ ಹಣ್ಣು ತಿನ್ನುವದರಲ್ಲಿ ತಲ್ಲೀನಳಾಗಿದ್ದಳು. ನೆಂಟರ ಮಕ್ಕಳೂ ಜೊತೆಗೂಡಿದ್ದರು.

ರಾತ್ರಿಯೇ ಸಿದ್ಧತೆ: ‘ಬೆಳಿಗ್ಗೆ ಉಪವಾಸ ಆರಂಭಿಸುವವರು ಸೂರ್ಯೋದಯಕ್ಕೆ ಮುನ್ನ ಊಟ ಮಾಡಬೇಕು. ಅದಕ್ಕಾಗಿ ಮನೆಯ ಹೆಣ್ಣುಮಕ್ಕಳು ರಾತ್ರಿಯೇ ಸಿದ್ಧತೆ ನಡೆಸಬೇಕು. ಉಪವಾಸ ಮುರಿಯುವ ವರೆಗೂ ಒಂದು ತೊಟ್ಟು ನೀರನ್ನೂ ಸೇವಿಸು ವಂತಿಲ್ಲ.

ಮುರಿದ ಬಳಿಕ ಮತ್ತೆ ಪುಷ್ಕಳ ಊಟ ಮಾಡಬೇಕು. ಹೆಣ್ಣು ಮಕ್ಕಳು ಶ್ರಮವಹಿಸದಿದ್ದರೆ ಮನೆ ಮಂದಿ ವ್ರತಾಚರಣೆ ಮಾಡುವುದು ಸುಲಭ ಸಾಧ್ಯವಲ್ಲ’ ಎಂದು ಹೇಳುತ್ತಿದ್ದ ವೇಳೆ ಯಲ್ಲೇ ಅವರ ಪತ್ನಿ ಅಡುಗೆ ಕೋಣೆ ಯಲ್ಲಿ ಸದ್ದಿಲ್ಲದೆ ಸಿದ್ಧತೆ ನಡೆಸಿದ್ದರು. ಈ ನಡುವೆಯೇ, ಹಣ್ಣು ತಿಂದು, ನೀರು ಕುಡಿದು ಉಪವಾಸ ಮುರಿದ ಮಕ್ಕಳು ನಮಾಜಿಗೆಂದು ಹತ್ತಿರದ ತಿರುಮಲಖೇಡಿ ಪ್ರದೇಶದಲ್ಲಿರುವ ಝೀನತ್‌ ಉಲ್‌ ಇಸ್ಲಾಂ ಮಸೀದಿಯ ಕಡೆಗೆ ಓಡಿದರು.

ರಂಜಾನ್‌ ಮಾಸ ಆರಂಭವಾಗಿ ಒಂದು ವಾರ ಮುಗಿದಿದೆ. ಭಕ್ತಿ, ಶ್ರದ್ಧೆಯೇ ಮೈವೆತ್ತ ನಗರದ ಮುಸ್ಲಿಮರು ಉಪವಾಸ–ಪ್ರಾರ್ಥನೆಯ ದಾರಿಯಲ್ಲಿ ಧನ್ಯತೆಯ ಹುಡುಕಾಟ ನಡೆಸಿದ್ದಾರೆ. ಎಲ್ಲರಲ್ಲೂ ಶಾಂತತೆ ಮನೆ ಮಾಡಿದೆ. ನಗರದ ಮಸೀದಿಗಳು ಪ್ರತಿ ದಿನವೂ ಐದು ಬಾರಿ ತಪ್ಪದೇ ನಮಾಜು ಸಲ್ಲಿಸುವ ವ್ರತನಿಷ್ಠರಿಗೆ ಸ್ವಾಗತ ಹೇಳುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry