ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿಗೆ ಮನೆ ಕಟ್ಟಿದರು

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಔಪಚಾರಿಕ ಎನ್ನಲಾಗದ, ಅನೌಪಚಾರಿಕವೂ ಅಲ್ಲದ ಒಂದು ಸಣ್ಣ ಸಭೆ ಅದು. ಅಲ್ಲಿ ಸೇರಿದವರು ಹೆಚ್ಚೆಂದರೆ 35 ಜನ. ಅವರೆಲ್ಲ ನೀರ ನೆಮ್ಮದಿಯ ನಿರೀಕ್ಷೆಯಲ್ಲಿ ಬಂದವರು. ಹಾಗೆಂದು ಅವರ್ಯಾರೂ ಜಲತಜ್ಞರಾಗಿರಲಿಲ್ಲ. ಜಲ ಕಾರ್ಯಕರ್ತರೂ ಆಗಿರಲಿಲ್ಲ. ಅಷ್ಟೇ ಅಲ್ಲ, ಇಂತಹದ್ದೊಂದು ಪುಟ್ಟ ಸಮ್ಮಿಲನ ಕೆರೆ ಕಾಯಕದ ಪರ್ವಕ್ಕೆ ನಾಂದಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.

ಯುಗಾದಿ ಹಬ್ಬದ ಮುನ್ನಾ ದಿನ (ಮಾರ್ಚ್ 27) ಶಿರಸಿಯ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ನಗರದ ನಾಗರಿಕರ ಸಭೆ ಕರೆದಿದ್ದರು. ‘ಒಂದು ಕ್ಷಣ ಸರ್ಕಾರವನ್ನು ಮರೆತು ನಾಳೆಯ ನೀರಿಗಾಗಿ ನಾವೇನು ಮಾಡೋಣ’ ಎಂಬ ಆಶಯದೊಂದಿಗೆ ಆರಂಭವಾದ ಸಭೆಯಲ್ಲಿ ಜಲ ಕಾರ್ಯಕರ್ತ ಶಿವಾನಂದ ಕಳವೆ ರಾಜ್ಯದ ಬರದ ಬದುಕು, ಜಲಕ್ಷಾಮದ ಜ್ವಲಂತ ಸಮಸ್ಯೆಗಳ ಚಿತ್ರಣ ತೆರೆದಿಟ್ಟರು. ಕಣ್ಣರೆಪ್ಪೆ ಅಲುಗಿಸದೇ ಬರದ ಬವಣೆಯ ಚಿತ್ರಗಳನ್ನು ಪರದೆಯಲ್ಲಿ ವೀಕ್ಷಿಸಿದ ಶಿರಸಿಗರು ಜಲ ಸಂರಕ್ಷಣೆಗಾಗಿ ಕಾರ್ಯಪಡೆಯೊಂದನ್ನು ರಚಿಸುವ ದಿಟ್ಟ ನಿರ್ಧಾರ ತಳೆದರು. ಎರಡು ತಿಂಗಳ ಹಿಂದೆ ಜನ್ಮ ತಾಳಿದ ಈ ‘ಶಿರಸಿ ಜೀವಜಲ ಕಾರ್ಯಪಡೆ’ ಇಡೀ ರಾಜ್ಯದ ಗಮನ ಸೆಳೆದಿದೆ.

ತಡವಿಲ್ಲ, ಯುಗಾದಿ ಹಬ್ಬದ ದಿನವೇ ಆನೆ ಹೊಂಡ ಎಂಬ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹಿಂದೆ ಕಾಡಾನೆಗಳು, ಸರ್ಕಸ್ ಕಂಪೆನಿಯವರು ತರುವ ಆನೆಗಳು ಈ ಕೆರೆಗೆ ಬಂದು ಮೈ ತಣಿಸಿಕೊಂಡು ಹೋಗುತ್ತಿದ್ದವು. ಅದೇ ಕಾರಣಕ್ಕಾಗಿ ಆನೆ ಹೊಂಡವೆಂಬ ನಾಮಾಂಕಿತ ಪಡೆದ ಕೆರೆ ಕಾಲ ಕ್ರಮೇಣ ಮುಳ್ಳುಕಂಟಿ, ಕಸ, ಮಣ್ಣು ತುಂಬಿಕೊಂಡು ಹಂದಿಗಳ ಆಟದ ಅಂಗಳವಾಗಿತ್ತು. ನಗರದ ಅಂಚಿಗೆ ಕಾಡಿಗೆ ಸನಿಹವಿರುವ ಈ ಕೆರೆಯ ಕಾಯಕಲ್ಪವೇ ಕಾರ್ಯಪಡೆಯ ಮೊದಲ ಹೆಜ್ಜೆ.

ಪುನಶ್ಚೇತನದ ಪೂರ್ವದಲ್ಲಿ ಗಿಡಗಂಟಿ ಬೆಳೆದುಕೊಂಡಿದ್ದ ರಾಯರ ಕೆರೆಯಲ್ಲಿ ಬೆಳ್ಳಕ್ಕಿಗಳ ಹಿಂಡು

ಕೆಲಸ ಶುರು ಮಾಡುವ ಹೊತ್ತಿಗೆ ಒಂದು ರೂಪಾಯಿ ಕಾಸಿಲ್ಲ. ಗುದ್ದಲಿ ಪೂಜೆಗೆ ಬಂದವರಲ್ಲಿ ಬೋಣಿಗೆ ಮಾಡಿದವರು ರೋಟರಿ ಕ್ಲಬ್ ಅಧ್ಯಕ್ಷ ಡಾ. ದಿನೇಶ ಹೆಗಡೆ. ಅವರು ವೈಯಕ್ತಿಕ ಕೊಡುಗೆ ಘೋಷಿಸಿದ್ದೇ ತಡ ಶಾಲೆಯಲ್ಲಿ ಮಕ್ಕಳು ಹಾಜರಿ ಹಾಕುವಾಗ ಎದ್ದು ನಿಲ್ಲುವಂತೆ ಒಬ್ಬೊಬ್ಬರಾಗಿ ಸರಸರನೆ ಎದ್ದುನಿಂತು ₹5000, ₹10ಸಾವಿರ, ₹25ಸಾವಿರ... ಹೀಗೆ ಹೇಳುತ್ತ ಹೋದರು. ನಾಲ್ಕು ನಿಮಿಷದಲ್ಲಿ ₹4 ಲಕ್ಷ ಮೊತ್ತ ನೀರ ನೆರವಿಗೆ ಹರಿದು ಬಂತು. ಉದ್ಯಮಿಗಳು, ಗುತ್ತಿಗೆದಾರರು ಜೆಸಿಬಿ, ಟಿಪ್ಪರ್, ಲಾರಿಗಳಿಗೆ ಇಂಧನ ತುಂಬಿಸಿ ಕೆರೆ ಕಾಯಕಕ್ಕೆ ಕಳುಹಿಸಿದರು.

ಆನೆ ಹೊಂಡಕ್ಕೆ ಹೊಸ ಅಂಗಿ
ಕಾರ್ಯಪಡೆ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಅವರಿಗೆ ಆನೆ ಹೊಂಡವೇ ಮನೆಯಾಯಿತು. ದಿನವಿಡೀ ಕೆರೆಯಂಗಳದಲ್ಲಿ ನಿಂತು ಕೆಲಸದ ಉಸ್ತುವಾರಿ ನೋಡಿಕೊಂಡರು. ಜಲ ಕಾಯಕ ನೋಡಲು ಬರುವವರಿಗೆ ಅವರದು ಉಚಿತ ತಂಪು ಪಾನೀಯದ ಸೇವೆ. ಎಳನೀರು, ಕೋಕಂ, ಎಳ್ಳು ನೀರು, ಮಜ್ಜಿಗೆ, ಬಾದಾಮಿ ಹಾಲು ದಿನಕ್ಕೊಂದು ಬಗೆಯ ಆಸರಿ (ಪಾನೀಯ).

ವೃತ್ತಿ ಜಂಜಾಟದ ನಡುವೆ ನಿತ್ಯವೂ ಅತ್ಯುತ್ಸಾಹದಿಂದ ಬರುತ್ತಿದ್ದ ಕಾರ್ಯಪಡೆ ಸದಸ್ಯರು ಮರದ ನೆರಳಿನಲ್ಲಿ ನಿಂತು ಬರದ ಮಾತುಕತೆ ನಡೆಸಿದರು. ಕೆರೆ ಕೆಲಸ ನೋಡಲು ಬರುತ್ತಿದ್ದ ಲಾಂಡ್ರಿಯ ಹುಡುಗ, ಬಟ್ಟೆ ಹೊಲಿಯುವ ದರ್ಜಿ ನೀರ ನಿಧಿಗೆ ಅಳಿಲು ಕಾಣಿಕೆ ಕೊಟ್ಟು ಹೋಗುತ್ತಿದ್ದರು. ಕುಂಬಾರಕುಳಿಯ ಅಜ್ಜಿ ಗಂಗಾ ಹೆಗಡೆ ತಾವು ಕೂಡಿಟ್ಟ ₹25ಸಾವಿರವನ್ನು ಕೆರೆಗೆ ಧಾರೆಯೆರೆದರು. ಅರ್ಧ ಎಕರೆ ವಿಸ್ತೀರ್ಣದ ಕೆರೆ ಕೇವಲ 15 ದಿನಗಳಲ್ಲಿ 80 ಲಕ್ಷ ಲೀಟರ್ ನೀರು ಹಿಡಿದಿಟ್ಟುಕೊಳ್ಳುವ ಪಾರಂಪರಿಕ ಜಲಪಾತ್ರೆಯಾಗಿ ಮೈದಳೆದಿದೆ. ಆನೆ ಹೊಂಡ ಹೊಸ ಅಂಗಿತೊಟ್ಟು ವರುಣನಿಗಾಗಿ ಕಾಯುತ್ತಿದೆ.

‘ಕೆರೆಯಲ್ಲಿ ಸರಾಸರಿ 10 ಅಡಿಗಳಷ್ಟು ಹೂಳೆತ್ತಲಾಗಿದೆ. ಹೂಳೆತ್ತಲು ಸರ್ಕಾರ ನಿಗದಿಪಡಿಸಿದ ವೆಚ್ಚ ಪ್ರತಿ ಕ್ಯೂಬಿಕ್ ಮೀಟರ್‌ಗೆ ₹ 124 ಆಗಿದ್ದರೆ, ಇಲ್ಲಿ ಪ್ರತಿ ಕ್ಯೂಬಿಕ್ ಮೀಟರ್‌ಗೆ ತಗುಲಿರುವ ಖರ್ಚು ₹70 ಮಾತ್ರ. ಹೀಗಾಗಿ ₹8 ಲಕ್ಷ ವೆಚ್ಚವಾಗಬಹುದೆಂದು ಅಂದಾಜಿಸಿದ್ದ ಕಾಮಗಾರಿ ₹4 ಲಕ್ಷಕ್ಕೆ ಪೂರ್ಣಗೊಂಡಿದೆ’ ಎನ್ನುತ್ತಾರೆ ಶ್ರೀನಿವಾಸ್ ಹೆಬ್ಬಾರ್.

ಕಾರ್ಯಪಡೆಯ ಭೀಮಹೆಜ್ಜೆ ರಾಯರ ಕೆರೆ
ಆನೆ ಹೊಂಡದಲ್ಲಿ ಜಲ ವಿಜಯ ಸಾಧಿಸಿದ ಕಾರ್ಯಪಡೆಯ ಭೀಮ ಹೆಜ್ಜೆ ‘ರಾಯರ ಕೆರೆ’. ಜಲಮೂಲಗಳ ಪುನಶ್ಚೇತನವೇ ಧ್ಯೇಯವಾಗಿಸಿಕೊಂಡಿರುವ ಕಾರ್ಯಪಡೆ ಮುಂದಿನ ಕೆರೆ ಯಾವುದೆಂದು ಯೋಚಿಸಿದಾಗ ಕಣ್ಣಿಗೆ ಬಿದ್ದಿದ್ದು ರಾಯರ ಕೆರೆ. ಬಡಾವಣೆಗಳ ನಡುವೆ ಇದ್ದರೂ ಬಡವಾಗಿದ್ದ ಈ ಬೃಹತ್ ಜಲ ಕಡಾಯಿ ಹೂಳು ತುಂಬಿ ಬಟಾಬಯಲಿನಂತಾಗಿತ್ತು. ಕೆರೆ ಕಾಮಗಾರಿಗೆ ರಚನೆಯಾಗಿರುವ ಉಪಸಮಿತಿ, ಸ್ಥಳೀಯ ನಿವಾಸಿಗಳೇ ರಾಯರ ಕೆರೆಯ ಕೆಲಸಕ್ಕೆ ಆನೆ ಬಲ ತಂದುಕೊಟ್ಟವರು. ಪ್ರತಿ ಮನೆಯವರು ವಂತಿಗೆ ನೀಡಿದ್ದಾರೆ. ಮಹಿಳೆಯರು, ನಿವೃತ್ತ ಜೀವನ ನಡೆಸುತ್ತಿರುವವರು ನಿತ್ಯ ಸಂಜೆ ಗಲ್ಲಿಗಲ್ಲಿ ಸಂಚಾರ ಮಾಡಿ ಮನೆ ಮನೆಯ ಕದ ತಟ್ಟುತ್ತ ಕೆರೆಗೆ ನೆರವಾಗುವಂತೆ ವಿನಂತಿಸುತ್ತಿದ್ದಾರೆ.

ಆರಂಭದ ದಿನದಿಂದಲೇ ಕೆಲವರು ಲಾರಿ, ಟಿಪ್ಪರ್ ಬಿಟ್ಟು ಹೂಳು ಸಾಗಾಟಕ್ಕೆ ಸಹಾಯ ಮಾಡುತ್ತಿದ್ದಾರೆ. ಇದರಿಂದ ಸುಮಾರು ₹9 ಲಕ್ಷ ಉಳಿತಾಯವಾಗಿದೆ. ಕೆರೆಯ ಹೂಳಿನಲ್ಲಿ ಖಾಲಿ ನಿವೇಶನ ಸಮತಟ್ಟುಗೊಂಡಿದೆ. ತೋಟಕ್ಕೆ ಹೊಸ ಮಣ್ಣು ಬಂದಿದೆ. ರಾಯರ ಕೆರೆಯೀಗ 5 ಕೋಟಿ ಲೀಟರ್ ಜೀವಜಲ ಹೊರುವ ಜಲ ದೇಗುಲವಾಗಿ ರೂಪುಗೊಳ್ಳುತ್ತಿದೆ.

‘3.26 ಎಕರೆ ವಿಶಾಲವಾದ ರಾಯರಕೆರೆ ಹೂಳೆತ್ತಲು ₹40 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ. ನಮ್ಮ ಬಡಾವಣೆಯ ಅನೇಕ ಯುವಜನರು ಮಹಾನಗರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವೆರಲ್ಲ ಕೈ ಜೋಡಿಸಿದರೆ ನಿರಾಯಾಸವಾಗಿ ಕೆಲಸ ಪೂರ್ಣಗೊಳಿಸಬಹುದು. ಎಲ್ಲರ ವಿಳಾಸ ಸಂಗ್ರಹಿಸಿ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಉಪಸಮಿತಿ ಅಧ್ಯಕ್ಷ ರಮೇಶ ದುಬಾಶಿ.

ಕೆರೆಯಲ್ಲೀಗ ಹೂಳೆತ್ತುವ ಭರಾಟೆ, ಜೆಸಿಬಿಯ ಸದ್ದು

ಸಮಷ್ಟಿಯ ಹಿತ ಸಮುದಾಯದ ಸೂತ್ರ: ‘ಮಳೆ ನಮ್ಮ ಕೈಯಲ್ಲಿಲ್ಲ. ಆದರೆ ಮಳೆ ನೀರು ನಮ್ಮ ಕೈಯಲ್ಲಿದೆ. ಭೂಮಿಗೆ ಕನ್ನ ಹಾಕಿ ಬೋರ್‌ವೆಲ್ ಕೊರೆದರೆ ಹಿರಿಯರು ಕೂಡಿಟ್ಟ ಹಣ ಖಾಲಿ ಮಾಡಿದಂತೆ. ಅದರ ಬದಲಾಗಿ ಸಾಂಪ್ರದಾಯಿಕ ತೆರೆದ ಬಾವಿ, ಕೆರೆಗಳಲ್ಲಿ ಮಳೆ ನೀರು ಸಂಗ್ರಹಿಸಿಟ್ಟುಕೊಂಡರೆ ಬರ ಬರಲಾರದು ಎಂಬ ಸರಳ ತತ್ವವನ್ನು ಮನವರಿಕೆ ಮಾಡಿಕೊಟ್ಟಾಗ ಶಿರಸಿಯ ಜನರು ಸ್ಪಂದಿಸಿರುವ ರೀತಿ ಅಭೂತಪೂರ್ವ. ಸಮಷ್ಟಿಯ ಹಿತಕ್ಕಾಗಿ ಸಮುದಾಯ ಎದ್ದುನಿಂತ ಈ ಉದಾಹರಣೆ ಇಡೀ ರಾಜ್ಯಕ್ಕೆ ಮಾದರಿ’ ಎನ್ನುತ್ತಾರೆ ಕೆರೆ ಕಾಯಕದ ಕನಸು ಬಿತ್ತಿದ್ದ ಉಪವಿಭಾಗಾಧಿಕಾರಿ ಮೊಗವೀರ.

‘ಜನರೇ ಮುಂದಾಗಿ ಕೆರೆ ಕೆಲಸಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಜನ ಸಂಘಟನೆ, ಹೂಳಿನ ಪ್ರಮಾಣ, ಕೆರೆ ವಿನ್ಯಾಸ, ಕೆರೆ ನೀರಿನ ಒಳ ಹರಿವು, ಹೊರ ಹರಿವುಗಳ ಅರಿವು ಮೂಡುತ್ತಿದೆ. ವಿವಿಧ ವರ್ಗಗಳ ಜನ ಒಂದಾಗಿ ನೂರಾರು ವರ್ಷ ಬಾಳುವ ಕೆಲಸ ಮಾಡಿದ ಸಮಾಧಾನ ಕಾಣಿಸುತ್ತಿದೆ. ಕೆರೆ ಹೂಳು ತೆಗೆಯುವ ಪ್ರಾಯೋಗಿಕ ಅನುಭವ ನಿಜವಾದ ವೆಚ್ಚದ ಅರಿವು ಮೂಡಿಸಿದ್ದರಿಂದ ಸರ್ಕಾರಿ ಕಾಯಕವನ್ನು ಹದ್ದಿನ ಕಣ್ಣಿನಲ್ಲಿ ಜನ ನೋಡಲು ಆರಂಭಿಸಿದ್ದಾರೆ’ ಎನ್ನುತ್ತಾರೆ  ಕಳವೆ.

ಹಳ್ಳಿಗಳಲ್ಲಿ ಜಲ ಸಂಚಲನ: ಶಿರಸಿ ಜೀವಜಲ ಕಾರ್ಯಪಡೆಯ ಚಟುವಟಿಕೆ ಎಲ್ಲೆಡೆ ಸಂಚಲನ ಮೂಡಿಸಿದೆ. ಹೂಳೆತ್ತುವ ಕಾಯಕ ಅಭಿಯಾನದ ರೂಪ ಪಡೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಯಲ್ಲಾಪುರ, ಕುಮಟಾ, ಶಿರಸಿ ಸುತ್ತಲಿನ ಇಸಳೂರು, ಎಕ್ಕಂಬಿ, ಹಳದೋಟ, ಉಲ್ಲಾಳ, ಹಂಚಿನಕೇರಿ, ನೆರೆಯ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆರೆಯೆಡೆಗೆ ಜನರು ಮುಖ ಮಾಡಿದ್ದಾರೆ.

ದಶಕಗಳ ಹಿಂದೆ ಕೆರೆ ಒತ್ತುವರಿ ಮಾಡಿ ತೋಟ ಬೆಳೆಸಿದ್ದ ಅತಿಕ್ರಮಣದಾರರು ಜಲಮೂಲ ಸಮೃದ್ಧಿಗಾಗಿ ಫಲಕೊಡುವ ಅಡಿಕೆ, ತೆಂಗಿನ ಮರಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿ ಕೆರೆಯ ಸಂರಕ್ಷಣೆಗೆ ಕಟಿಬದ್ಧರಾಗಿದ್ದಾರೆ. ಹೌದು, ಹೇವಿಳಂಬಿ ಸಂವತ್ಸರದ ಪುಟದಲ್ಲಿ ಶಿರಸಿಯ ಜಲ ಜಾಗೃತಿಯ ಕ್ರಾಂತಿ ದಾಖಲಾಗಿದೆ. 

****
ಇವರು ಕಾರ್ಯಪಡೆಯ ಕಾರ್ಯಕರ್ತರು

ಶಿರಸಿ ಜೀವಜಲ ಕಾರ್ಯಪಡೆ ಜಲ ಚಿಂತನೆಗಾಗಿ ರೂಪುಗೊಂಡ ಸಂಘಟನೆ. ಇದರಲ್ಲಿ ಉದ್ಯಮಿಗಳು, ಗುತ್ತಿಗೆದಾರರು, ವೈದ್ಯರು, ಲೆಕ್ಕ ಪರಿಶೋಧಕರು, ಕಿರಾಣಿ ವರ್ತಕರು, ಎಂಜಿನಿಯರ್‌ಗಳು, ರಾಜಕಾರಣಿಗಳು, ಪತ್ರಕರ್ತರು, ಕೃಷಿಕರು, ಆಟೊರಿಕ್ಷಾ ಚಾಲಕರು, ಲಾರಿ ಮಾಲೀಕರು ಇದ್ದಾರೆ. ಇವರೆಲ್ಲ ಹಳ್ಳಿಗೆ ಭೇಟಿ ನೀಡಿ ಜಲಪಾಠ ಮಾಡುತ್ತಾರೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ ಬಿತ್ತರಿಸುತ್ತಾರೆ. ತಮ್ಮ ಮನೆಯ ಕೆಲಸವೆಂಬಂತೆ ಕೆರೆ ಕಾಳಜಿ ತೋರುತ್ತಾರೆ.

ಸ್ವಾದಿ ಟ್ರಸ್ಟ್, ಶಂಕರ ದಿವೇಕರ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹೀಗೆ ಅನೇಕರು ಕಾರ್ಯಪಡೆಯ ಬ್ಯಾಂಕ್‌ ಖಾತೆಗೆ ಜೀವ ತುಂಬಿದ್ದಾರೆ. ಶಿರಸಿಯ ಶ್ರೀಕಾಂತ ಹೆಗಡೆಯವರ ಸ್ನೇಹಿತ ವಿದೇಶದಲ್ಲಿರುವ ಅಬ್ದುಲ್ ಮಜೀದ್‌ ಅವರು ಕಾರ್ಯಪಡೆಯ ಕಾರ್ಯ ಮೆಚ್ಚಿ ₹15 ಸಾವಿರ ದೇಣಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಅಸೆಟ್ಸ್ ಪ್ರೀಮಿಯಂ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಿಎಸ್‌ಆರ್ ಅನುದಾನದಲ್ಲಿ ₹ 5ಲಕ್ಷ ನೆರವು ನೀಡಿದೆ. ಕೆರೆ ಅಭಿಯಾನ ಮುನ್ನಡೆದು ಪ್ರಾಣಿ, ಪಕ್ಷಿ, ಜೀವಸಂಕುಲ ಉಳಿಸಲು ಇನ್ನೂ ಹಲವರ ನೆರವನ್ನು ಕಾರ್ಯಪಡೆ ನಿರೀಕ್ಷಿಸುತ್ತಿದೆ. (ಸಂಪರ್ಕ ಸಂಖ್ಯೆ: 9448023715)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT