ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ್ತಿನಿಂದ ಕರೆಯುವ ಗುತ್ತಿನ ಮನೆ

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಸುಮನಾ ಜಿ. ಪ್ರಸಾದ್‌
ಮಂಗಳೂರು ಹೆಂಚು ಹೊದೆಸಿದ್ದ ದೊಡ್ಡದಾದ ಆ ಮನೆಯನ್ನು ಹೊರಗಿನಿಂದ ನೋಡಿದರೆ ‘ಅಬ್ಬಾ ಅದೆಷ್ಟು ದೊಡ್ಡ ಮನೆ’ ಎಂದು ಎನಿಸದೇ ಇರದು. ಮೆಟ್ಟಿಲುಗಳನ್ನು ಹತ್ತಿ ಒಳಹೊಕ್ಕರೋ ಅಲ್ಲಿ ಅದ್ಭುತ ಪ್ರಪಂಚವೇ ತೆರೆದುಕೊಳ್ಳುತ್ತದೆ. ನಮ್ಮ ಮನಸ್ಸು ತಾತ, ಮುತ್ತಾತರ ಕಾಲಕ್ಕೆ ಹಿಂದೋಡುತ್ತದೆ. ಗತವೈಭವವನ್ನು ಸಾರುವ ನಾಲ್ಕು ಸೂತ್ರದ ಬೃಹತ್‌ ಮನೆಯದು. ‘ಗುತ್ತಿನ ಮನೆ’ ಎಂದು ಕರೆಸಿಕೊಳ್ಳುವ ಈ ಮನೆಯೊಳಗೆ ದಕ್ಷಿಣ ಕನ್ನಡದ ಶ್ರೀಮಂತ ಪರಂಪರೆಯೇ ಅನಾವರಣಗೊಂಡಿದೆ.

ಹೌದು, ಈ ‘ಗುತ್ತಿನ ಮನೆ’ ಗತವೈಭವದ ಪ್ರತೀಕ. ದೊಡ್ಡದಾದ ನಾಲ್ಕು ಸೂತ್ರದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ದೊಡ್ಡ ಹಜಾರ, ಅಲ್ಲಿ ಲಾಟೀನಿನ ದೀಪ, ಒಳಗಿನ ಒಂದು ದೊಡ್ಡ ಹಾಲ್‌ನಲ್ಲಿ ಅಜ್ಜಿ ಮೊಮ್ಮಕ್ಕಳಿಗೆ ಕಥೆ ಹೇಳುವ ವಿನ್ಯಾಸದ ಮಾದರಿ, ಅದರ ಬೆನ್ನಲ್ಲೇ ಕೇಳಿ ಬರುವ ರೆಕಾರ್ಡೆಡ್‌ ಅಜ್ಜಿ ಕಥೆ ಮಕ್ಕಳನ್ನು ರಂಜಿಸುತ್ತದೆ.

ದಕ್ಷಿಣ ಕನ್ನಡದ ದೈವಾರಾಧನೆಯ ಪ್ರತೀಕದಂತಿರುವ ಭೂತದ ಪರಿಕರಗಳು, ಯಕ್ಷಗಾನದ ‘ಚೌಕಿ’ (ವೇಷ ಹಾಕಿಕೊಳ್ಳುವ ಜಾಗ) ಹಳೆಯ ಕಾಲದ ಅಡುಗೆ ಮನೆಯ ಪ್ರತಿರೂಪ ಎಲ್ಲವೂ ಇಂದಿನ ಮಕ್ಕಳಿಗೆ ಉತ್ತಮ ಮಾಹಿತಿ ನೀಡುತ್ತವೆ. ಮಂಗಳೂರಿನ ವಾಮಂಜೂರು ಸಮೀಪದ ಪಿಲಿಕುಳದಲ್ಲಿರುವ ಶಿವರಾಮ ಕಾರಂತ ನಿಸರ್ಗ ಧಾಮದಲ್ಲಿ ಇರುವ ಈ ‘ಗುತ್ತಿನ ಮನೆ’ ಪ್ರವಾಸಿಗರನ್ನು ಗತ್ತಿನಿಂದ ಕರೆಯುತ್ತದೆ. ಪ್ರವಾಸಿ ತಾಣವಾಗಿರುವ ಈ ಗುತ್ತಿನ ಮನೆಯೊಳಗಿರುವ ಸಿಬ್ಬಂದಿ ಕೂಡ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ.

ಹೆರಿಟೇಜ್‌ ವಿಲೇಜ್‌: ಪಿಲಿಕುಳ ನಿಸರ್ಗಧಾಮದಲ್ಲಿ ದಿನವಿಡೀ ನೋಡುವಷ್ಟು ತಾಣಗಳಿವೆ. ಜ್ಞಾನಾರ್ಜನೆಗೆ ಅನುಕೂಲವಾಗುವ ವಿಜ್ಞಾನ ಮ್ಯೂಸಿಯಂ, ಮೋಜಿಗಾಗಿ ಮಾನಸ ವಾಟರ್‌ಪಾರ್ಕ್‌, ಆಯುರ್ವೇದ, ಔಷಧ ವಿಜ್ಞಾನದ ಪರಿಚಯಕ್ಕಾಗಿ ಔಷಧವನ, ಬಯೊಲಾಜಿಕಲ್‌ ಪಾರ್ಕ್‌, ವನ್ಯಧಾಮಗಳಿವೆ. ಇವೆಲ್ಲದಕ್ಕೂ ಮೇಲ್ಪಂಕ್ತಿ ಹಾಕುವುದು ಇಲ್ಲಿನ ‘ಹೆರಿಟೇಜ್‌ ವಿಲೇಜ್‌’.

ಬಿದಿರಿನ ಕುರ್ಚಿ ತಯಾರಿಕೆಯಲ್ಲಿ...

ಪ್ರಾದೇಶಿಕತೆಗೆ ತಕ್ಕಂತೆ ನಮ್ಮಲ್ಲಿ ಕಲೆ, ಸಂಸ್ಕೃತಿ, ಆಹಾರ ವಿಹಾರ ಎಲ್ಲವೂ ಶ್ರೀಮಂತ ಪರಂಪರೆಯಿಂದ ಕೂಡಿವೆ. ದಕ್ಷಿಣ ಕನ್ನಡದ ಪರಂಪರೆಯನ್ನು ಒಂದೇ ಜಾಗದಲ್ಲಿ ಕಲೆ ಹಾಕಲಾಗಿದೆ. ಈ ಸಣ್ಣ ಗ್ರಾಮದೊಳಗೆ ನಾವು ನಮ್ಮ ಪರಂಪರೆಯ ಅನೇಕ ವಿಚಾರಗಳನ್ನು ಒಂದೆಡೆ ನೋಡಬಹುದು, ಆಸ್ವಾದಿಸಬಹುದು. ಗ್ರಾಮೀಣ ಕರಕುಶಲ ಕಲೆಗಾರಿಕೆ ಇಲ್ಲಿ ನಾಜೂಕಾಗಿ ಮಿಳಿತಗೊಂಡಿದೆ. ಸಂಸ್ಕೃತಿ ಮೇಳೈಸಿದೆ. ಈ ಗ್ರಾಮದಲ್ಲಿರುವ ಹಲವು ಕಾಟೇಜ್‌ ಹೌಸ್‌ಗಳಲ್ಲಿ ಮಣ್ಣಿನಿಂದ ಮಡಿಕೆ, ಬಿದಿರಿನ ಕುರ್ಚಿ, ಟೊಪ್ಪಿಗೆ, ಬುಟ್ಟಿ, ಮರದ ಕಲಾಕೃತಿ, ನೂಲಿನಿಂದ ನೇಯ್ದ ಬಟ್ಟೆ, ಶಿಲ್ಪಕಲೆ, ಗಾಣದೆತ್ತಿನ ಸಹಾಯದಿಂದ ತೆಗೆದ ಎಣ್ಣೆ, ಕುಟ್ಟವಲಕ್ಕಿ... ಹೀಗೆ ಹಳೆಯ ಕಾಲದ ಸಾಧನಗಳಿಂದ ಮಾಡುವ ಹಲವು ಉತ್ಪನ್ನಗಳು ಗಮನಸೆಳೆಯುವಂತಿವೆ.

ಪಾರಂಪರಿಕ ಕರಕುಶಲ ಕಲಾ ಪರಂಪರೆಯನ್ನು ಕಣ್ತುಂಬಿಕೊಳ್ಳಬೇಕಾದರೆ ಪಿಲಿಕುಳದ ‘ಹೆರಿಟೇಜ್‌ ವಿಲೇಜ್‌’ ನೋಡಬೇಕು. ಈ ಮಾದರಿ ಗ್ರಾಮದಲ್ಲಿ ಸಾಂಪ್ರದಾಯಿಕತೆ ಎದ್ದು ಕಾಣುತ್ತದೆ. ಪ್ರತಿಯೊಂದು ಕಾಟೇಜ್‌ನಲ್ಲೂ ಒಂದೊಂದು ಬಗೆಯ ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆಯನ್ನು ಪ್ರವಾಸಿಗರಿಗಾಗಿಯೇ ನಡೆಸಿಕೊಡುವವರಿದ್ದಾರೆ.

ಬಿದಿರಿನಿಂದ ಹಲವು ವಿಧ: ಕರಕುಶಲಗಾರರು ಬಿದಿರಿನಿಂದ ತಯಾರಿಸಿರುವ ಬೆತ್ತ, ಬಾಸ್ಕೆಟ್‌, ಕುರ್ಚಿ, ಸೋಫಾ, ತೊಟ್ಟಿಲು, ಹೂದಾನಿ ಮುಂತಾದವು ಬಹಳ ಆಕರ್ಷಕವಾಗಿವೆ.

ರುಚಿಕರ ಅವಲಕ್ಕಿ: ಅವಲಕ್ಕಿಯಲ್ಲೂ ಅದೆಷ್ಟು ಬಗೆ! ಮಾರುಕಟ್ಟೆಯಿಂದ ಸಿದ್ಧ ಅವಲಕ್ಕಿ ತಂದು ತಿಂದು ತಿನ್ನುವ ನಮಗೆ ಅದನ್ನು ಮಿಲ್‌ನಲ್ಲಿ ಮಾಡುವುದು ಎಂದು ಗೊತ್ತು. ಇದನ್ನು ಕೈಯಿಂದ ಕುಟ್ಟಿ ರುಚಿಕರ ಅವಲಕ್ಕಿ ಮಾಡಬಹುದು. ಭತ್ತವನ್ನು ಹಿಂದಿನ ದಿನವೇ ನೆನೆಹಾಕಿ ಮರುದಿನ ಬೇಯಿಸಿ ಒಣಗಿಸಿ ಅದನ್ನು ಕುಟ್ಟುವ ಸಾಧನದ ಮೂಲಕ ಕುಟ್ಟಿದರೆ ರುಚಿಯಾದ ಅವಲಕ್ಕಿ ಸಿದ್ಧ. ಇದನ್ನು ಹೆರಿಟೇಜ್‌ ವಿಲೇಜ್‌ನಲ್ಲಿರುವ ಕಾಟೇಜ್‌ನಲ್ಲಿ ನೋಡಬಹುದು. ಹೋದವರು ಎರಡು ಕಾಳು ಅವಲಕ್ಕಿಯನ್ನೂ ಸವಿಯಬಹುದು.

ಎತ್ತಿನ ಗಾಣ: ಹಿಂದೆಲ್ಲ ಅಜ್ಜಿ ಹೇಳುತ್ತಿದ್ದ ನೆನಪು. ತೆಂಗಿನ ಎಣ್ಣೆಯನ್ನು ಎತ್ತುಗಳ ಸಹಾಯದಿಂದ ಗಾಣದಲ್ಲಿ ಹಾಕಿ ಎತ್ತು ಗಾಣಕ್ಕೆ ಸುತ್ತ ಬಂದಾಗ ಮಧ್ಯೆ ಇಟ್ಟಿರುವ ಸಾಧನದಲ್ಲಿ ಎಣ್ಣೆ ತಯಾರಾಗುತ್ತದೆ ಎಂದು. ಪಿಲಿಕುಳದಲ್ಲಿ ಈ ನೈಜ ಎತ್ತುಗಳ ಗಾಣವನ್ನು ನೋಡಿ ಕಣ್ತುಂಬಿಕೊಳ್ಳಬಹುದು.

ಮಂಗಳೂರು ಜಿಲ್ಲಾಡಳಿತ ನಿರ್ವಹಣೆ ಮಾಡುವ ಪಿಲಿಕುಳ ನಿಸರ್ಗಧಾಮದಲ್ಲಿ ಅತ್ಯಾಧುನಿಕ ವಾಟರ್‌ಪಾರ್ಕ್‌, ವಿಜ್ಞಾನ ಮ್ಯೂಸಿಯಂ, ವನ್ಯಧಾಮ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುತ್ತವೆ. ಹೆರಿಟೇಜ್‌ ವಿಲೇಜ್‌ ಪ್ರವೇಶಕ್ಕೆ ₹50 ಶುಲ್ಕ ಪಾವತಿಸಬೇಕು. ಮಕ್ಕಳಿಗೆ ₹20, ಸೋಮವಾರ ವಾರದ ರಜೆ.
ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT