ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಯಾಗದ ಮಹಾವೀರ ರಸ್ತೆ!

Last Updated 5 ಜೂನ್ 2017, 10:22 IST
ಅಕ್ಷರ ಗಾತ್ರ

ಕಳಸ: ಮೂರು ವರ್ಷಗಳಿಂದ ಮಳೆ ಗಾಲದಲ್ಲಿ ಕೆಸರಿನ ರಾಡಿಯ ನಡುವೆ ಯೇ ಬಳಲಿದ್ದ ಪಟ್ಟಣದ ಮಹಾವೀರ ರಸ್ತೆ ಬದಿಯ ನಿವಾಸಿಗಳು ಈ ಬಾರಿ ಯೂ ಅದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮೂರು ವರ್ಷಗಳಿಂದ ಕೆಸರು ಮಯವಾಗಿದ್ದ, ಗುಂಡಿಗಳಿಂದ ಆವರಿಸಿದ್ದ ರಸ್ತೆಯಲ್ಲೇ ಸಾಗುತ್ತಿದ್ದ ಜನರು ಆ ಕಷ್ಟಕ್ಕೆ ಹೊಂದಿಕೊಂಡಿದ್ದರು.

ಆದರೆ ಈಗ ಅಲ್ಲಿರುವ ಅಂಗಡಿ ಮತ್ತು ಮನೆಯ ಮುಂದೆ ಆಳವಾದ ಚರಂಡಿ ನಿರ್ಮಿಸಲಾಗಿದ್ದು, ಜನರು ಈ  ಆಳದ ಚರಂಡಿಗೆ ತಮ್ಮ ಮನೆಯ ಸದಸ್ಯರು ಅಥವಾ ಗ್ರಾಹಕರು ಬೀಳದಂತೆ ಎಚ್ಚರ ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಅನೇಕ ಪ್ರತಿಭಟನೆ, ಹೋರಾಟ ಮತ್ತು ಆಗ್ರಹದ ಬಳಿಕ ರಸ್ತೆ ದುರಸ್ತಿಗೆ ₹ 1 ಕೋಟಿ ಮಂಜೂರಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ನಿವಾಸಿಗಳು ತಮ್ಮ ಸಂಕಟ ತೀರಿತು ಎಂದು ಸಂತಸ ಪಟ್ಟಿದ್ದರು. ದುರದೃಷ್ಟ ಎಂದರೆ ಈ ರಸ್ತೆಯ ಕಾಮಗಾರಿಯು ಮಳೆಗಾಲ ಆರಂಭವಾದರೂ ಶೇ 25 ರಷ್ಟೂ ಮುಗಿದಲ್ಲ. ಈ ಮಳೆಗಾಲಕ್ಕೂ ಹದಗೆಟ್ಟ ರಸ್ತೆಯಲ್ಲಿ ಸಾಗುವುದು ಅನಿವಾರ್ಯ.

ಶಾಸಕ ಬಿ.ಬಿ.ನಿಂಗಯ್ಯ ಗ್ರಾಮೀಣಾ ಭಿವೃದ್ಧಿ ಸಚಿವರನ್ನು  ಭೇಟಿ ಮಾಡಿ ₹1ಕೋಟಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪೈಕಿ  ಬಾಕ್ಸ್‌ ಚರಂಡಿಗೆ ₹ 50 ಲಕ್ಷ ಮತ್ತು ಕಾಂಕ್ರೀಟ್‌ ರಸ್ತೆಗೆ ₹ 50 ಲಕ್ಷ  ಅನುದಾನ ಇರಿಸಲಾಗಿತ್ತು. ರಸ್ತೆಯ ಒಂದು ಬದಿಯ ಬಾಕ್ಸ್‌ ಚರಂಡಿಯನ್ನು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗ ಕೈಗೊಂಡರೆ ಮತ್ತೊಂದು ಬದಿಯ ಬಾಕ್ಸ್‌ ಚರಂಡಿ ಕೆಲಸ ಭೂ ಸೇನಾ ನಿಗಮಕ್ಕೆ ವಹಿಸಲಾಗಿದೆ.

ಜಿಲ್ಲಾ ಪಂಚಾಯಿತಿ ವಿಭಾಗ ವಹಿಸಿಕೊಂಡ ಬಾಕ್ಸ್‌ ಚರಂಡಿ ಕಾಮಗಾರಿ ಪೂರ್ಣ ವಾಗಿದೆ. ಆದರೆ ಈ ಚರಂಡಿಯ ಮೇಲೆ ಕಾಂಕ್ರೀಟ್‌ ಮುಚ್ಚಳಗಳನ್ನು ಮುಚ್ಚದೆ ಇರುವುದು ಅಪಾಯಕಾರಿಯಾಗಿದೆ. ‘ಒಂದು ಬದಿ ಚರಂಡಿ ಕೆಲಸ ಮುಗಿ ಯುವಾಗ ಮಳೆಗಾಲ ಶುರು ಆಗಿದೆ. ಇನ್ನೊಂದು ಬದಿಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಮಳೆಗಾಲದ ನೀರು ಎಲ್ಲಿ ಹರಿಯುವುದೋ, ಶಾಲಾ ಮಕ್ಕಳ ಪರಿಸ್ಥಿತಿ ಏನಾಗುವುದೋ?’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮ ಮೂರ್ತಿ ಬೇಸರ ವ್ಯಕ್ತಪಡಿಸುತ್ತಾರೆ.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಿರಿಯ ಎಂಜಿನಿಯರ್‌ ವೀರಪ್ಪ ಅವರನ್ನು ಪ್ರಶ್ನಿಸಿ ದಾಗ, ‘ಬಾಕ್ಸ್‌ ಚರಂಡಿ ಕಾಮಗಾರಿ ಮುಗಿದಿದೆ. ಕಾಂಕ್ರೀಟ್ ಮುಚ್ಚಳವನ್ನು ಸದ್ಯದಲ್ಲೇ ಅಳವಡಿಸುತ್ತೇವೆ. ಮಳೆಗಾಲ ದ ನಂತರ ಕಾಂಕ್ರೀಟ್‌ ರಸ್ತೆ ನಿರ್ಮಾಣ ಆಗಲಿದೆ’ ಎನ್ನುತ್ತಾರೆ. ಇನ್ನೊಂದು ಬದಿಯ ಬಾಕ್ಸ್ ಚರಂಡಿಯ ಬಗ್ಗೆ ಭೂ ಸೇನಾ ನಿಗಮದ ಕಿರಿಯ ಎಂಜಿನಿಯರ್‌ ತಿಪ್ಪಾರೆಡ್ಡಿ ಅವರು ಕರೆ ಸ್ವೀಕರಿಸಿಲ್ಲ.

ಎರಡು ಇಲಾಖೆಗಳಿಗೆ ಒಂದೇ ಕಾಮಗಾರಿಯನ್ನು ಹಂಚಿರುವ ತಾಂತ್ರಿಕ ತೊಂದರೆಯ ಬಗ್ಗೆ ಸ್ಥಳೀಯರಿಗೆ ಅರಿ ವಿಲ್ಲ. ಈ ಮಳೆಗಾಲದ ಒಳಗೆ ಮಹಾ ವೀರ ರಸ್ತೆ ಕಾಮಗಾರಿ ಮುಗಿಯುತ್ತದೆ. ದೀರ್ಘಕಾಲದ ಬವಣೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಸಂತಸ ಗೊಂಡಿದ್ದ ಸ್ಥಳೀಯರ ಮುಖದಲ್ಲಿ ಈಗ ಚಿಂತೆಯ ಗೆರೆಗಳು ಹೆಚ್ಚಾಗಿವೆ.

‘ರಸ್ತೆ ಬದಿಯ ಎತ್ತರದ ಚರಂಡಿ ಗಳನ್ನು ಏರಿ ತಮ್ಮ ಅಂಗಡಿಗೆ ಗ್ರಾಹಕರು ಬರುವ ಸಾಹಸ ಮಾಡದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ. ಮಹಾವೀರ ರಸ್ತೆಯತ್ತ ಜನರು ಸುಳಿಯುತ್ತಿಲ್ಲ. ನಮಗೆ ನಷ್ಟ ತುಂಬಿಕೊಡುವವರು ಯಾರು?’ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಾರೆ.

ನಿರ್ಲಕ್ಷ್ಯ: ಟೀಕೆ
‘ಮೂರರಿಂದ ನಾಲ್ಕು ಅಡಿ ಆಳದ ಚರಂಡಿಯ ಒಳಕ್ಕೆ ಅನೇಕ ಮಕ್ಕಳು ಮತ್ತು ವೃದ್ಧರು ಬಿದ್ದು ಈಗಾಗಲೇ ಪೆಟ್ಟು ಮಾಡಿಕೊಂಡಿದ್ದಾರೆ. ಆದರೆ ಚರಂಡಿ ಕಾಮಗಾರಿ ಮುಗಿದು ತಿಂಗಳೇ ಕಳೆದರೂ ಮುಚ್ಚಳದ ಕಾಮಗಾರಿ ಆರಂಭಗೊಂಡಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ’ ಎಂದು ಮಹಾವೀರ ರಸ್ತೆಯ ವ್ಯಾಪಾರಿ ರಾಘವೇಂದ್ರ ಹೇಳುತ್ತಾರೆ.
                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT