ಚಿಕ್ಕಮಗಳೂರಿನಲ್ಲಿ ಮೂವರು ನಕ್ಸಲರ ಶರಣಾಗತಿ

7

ಚಿಕ್ಕಮಗಳೂರಿನಲ್ಲಿ ಮೂವರು ನಕ್ಸಲರ ಶರಣಾಗತಿ

Published:
Updated:
ಚಿಕ್ಕಮಗಳೂರಿನಲ್ಲಿ ಮೂವರು ನಕ್ಸಲರ ಶರಣಾಗತಿ

ಚಿಕ್ಕಮಗಳೂರು:‌  ‘ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನಕ್ಸಲ್‌ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಮೂವರು, ಜಿಲ್ಲಾಡಳಿತ ಹಾಗೂ ಜಿಲ್ಲಾ  ಎಡಪಂಥೀಯ ಶರಣಾಗತಿ ಸಮಿತಿ ಮುಂದೆ ಶರಣಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇಲ್ಲಿ ಸೋಮವಾರ ತಿಳಿಸಿದರು.

‘ಮೂಡಿಗೆರೆ ತಾಲ್ಲೂಕಿನ ಹಳುವಳ್ಳಿಯ ಕನ್ಯಾಕುಮಾರಿ ಅಲಿಯಾಸ್‌ ಸುವರ್ಣ (31), ಗದಗ ಜಿಲ್ಲೆಯ ಚೆನ್ನಮ್ಮ ಅಲಿಯಾಸ್‌ ಸುಮಾ (32) ಹಾಗೂ ಬೆಂಗಳೂರಿನ ಶಿವು ಅಲಿಯಾಸ್‌ ಜ್ಞಾನದೇವ್‌ (31) ಶರಣಾದವರು. ಕನ್ಯಾಕುಮಾರಿ ಮತ್ತು ಶಿವು ದಂಪತಿಗೆ 6 ತಿಂಗಳ ಗಂಡು ಮಗು ಇದೆ’ ಎಂದರು.

‘ಕನ್ಯಾಕುಮಾರಿ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 15, ಉಡುಪಿ ಜಿಲ್ಲೆಯಲ್ಲಿ 17 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸೇರಿದಂತೆ 33 ಪ್ರಕರಣಗಳಿವೆ. ಅವರ ಸುಳಿವು ನೀಡಿದವರಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಲಾಗಿತ್ತು. ರಾಜ್ಯದ ಶರಣಾಗತಿ ನೀತಿ ಪ್ರಕಾರ ‘ಎ’ ಕೆಟಗರಿ ವ್ಯಾಪ್ತಿಗೊಳಪಡುತ್ತಾರೆ’ ಎಂದರು.

‘ಶಿವು ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ನಕ್ಸಲೀಯರ ಬಗ್ಗೆ ಅನುಕಂಪವುಳ್ಳವರಾಗಿದ್ದಾರೆ. ‘ಬಿ’ ಕೆಟಗರಿ ವ್ಯಾಪ್ತಿಗೊಳಪಡುತ್ತಾರೆ. ಚೆನ್ನಮ್ಮ ಅವರ ವಿರುದ್ಧದ ಮೂರು ಪ್ರಕರಣಗಳು ಖುಲಾಸೆಗೊಂಡಿವೆ. ಇವರಿಬ್ಬರನ್ನೂ ಶರಣಾಗತಿ ಪ್ರಕ್ರಿಯೆ ನಂತರ ಬಿಡುಗಡೆಗೊಳಿಸಲಾಗುವುದು’ ಎಂದರು. 

‘ಕರ್ನಾಟಕದ ಎಡಪಂಥೀಯ ಆತಂಕವಾದಿಗಳಿಗೆ (ಎಲ್‌ಡಬ್ಲ್ಯುಇ) ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಪ್ರಕಾರ ಶರಣಾಗತಿಯಾದವರಿಗೆ ₹ 5 ಲಕ್ಷ ನಗದು ನೀಡಲಾಗುತ್ತದೆ. ಜಮೀನು ಪಡೆದುಕೊಳ್ಳಲು ಅವಕಾಶ ಇದೆ. ಕೌಶಲ ತರಬೇತಿ ಪಡೆದುಕೊಳ್ಳಬಹುದು. ತರಬೇತಿ ಅವಧಿಯಲ್ಲಿ ಭತ್ಯೆ ಸಿಗುತ್ತದೆ. ಪ್ರಕರಣಗಳನ್ನು ಅವರೇ ನಿರ್ವಹಿಸಿಕೊಳ್ಳಬೇಕು’ ಎಂದು ಹೇಳಿದರು.

‘ಶರಣಾಗತಿ ಆದವರನ್ನು ನೋಡಿ ಇತರ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾಗಬೇಕು. ಕಾಡಿನೊಳಗಿರುವ ವಿಕ್ರಂ ಗೌಡ, ಸುರೇಶ ಅಂಗಡಿ, ವನಜಾಕ್ಷಿ ಇವರೆಲ್ಲರೂ ಈ ದಿಕ್ಕಿನಲ್ಲಿ ಯೋಚಿಸಬೇಕು. ನಕ್ಸಲ್‌ ಪ್ರದೇಶಗಳಲ್ಲಿ ವಿದ್ಯುತ್‌, ನೀರು,ಆರೋಗ್ಯ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಗಮನ ಹರಿಸಿದೆ’ ಎಂದರು.

‘ಹೆದರಿ ತಲೆಮರೆಸಿಕೊಂಡಿದ್ದೆ’: ‘ನಮ್ಮ ತಂದೆ ಜನಪದ ಹಾಡುಗಾರ. ಅವರೊಂದಿಗೆ ಕಾರ್ಯಕ್ರಮಗಳಿಗೆ ಊರೂರಿಗೆ ಹೋಗುತ್ತಿದ್ದೆ. ರೈತ ಕೂಲಿ ಸಂಘದದವರ ಜೊತೆ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೆ. 2007ರಲ್ಲಿ ಮೂರು ನಕ್ಸಲ್‌ ಪ್ರಕರಣ ದಾಖಲಿಸಿ ಕುಂದಾಪುರ ಪೊಲೀಸರು ನನ್ನನ್ನು ಬಂಧಿಸಿದರು. 2008ರಲ್ಲಿ ಪ್ರಕರಣಗಳು ಖುಲಾಸೆಯಾಗಿ ಬಿಡುಗಡೆಯಾ ಯಿತು’ ಎಂದು ಚೆನ್ನಮ್ಮ ಹೇಳಿದರು.

‘ಗ್ರಾಮಕ್ಕೆ ಪದೇಪದೇ ಪೊಲೀಸರು  ವಿಚಾರಣೆಗೆ ಬರುತ್ತಿದ್ದರು. ಹೀಗಾಗಿ, ಲಕ್ಷ್ಮೀಶ್ವರದ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದೆ. ತಮಿಳುನಾಡಿನ ನೀಲಮೇಗಂ ಎಂಬವರು ಮನೆಗೆ ಬರುತ್ತಿದ್ದರು. ಅವರೊಂದಿಗೆ 2009ರಲ್ಲಿ ನನ್ನನ್ನು ಮದುವೆ ಮಾಡಿಕೊಟ್ಟರು.  ತಮಿಳುನಾಡಿನ ಪೊಲೀಸರು ನೀಲಮೇಗಂ ಅವರನ್ನು ಎರಡು ವರ್ಷಗಳ ಹಿಂದೆ ಬಂಧಿಸಿದ್ದಾರೆ. ಈವರೆಗೆ ಅವರನ್ನು ಬಿಟ್ಟಿಲ್ಲ’ ಎಂದರು.

‘ಹೆದರಿಕೆಯಿಂದ ನಾನೂ ತಲೆಮರೆಸಿಕೊಂಡಿದ್ದೆ. ಪತಿ ಮನೆಗೂ ಹೋಗಿಲ್ಲ. ನೂರ್‌, ಸಿರಿಮನೆ ನಾಗರಾಜ್‌, ಪದ್ಮನಾಭ ಇವರೆಲ್ಲರೂ ಮುಖ್ಯವಾಹಿನಿಗೆ ಬಂದಿದ್ದನ್ನು ಪತ್ರಿಕೆಗಳಲ್ಲಿ ಓದಿದೆ. ಶರಣಾಗತಿಯಾಗಲು ನಿರ್ಧರಿಸಿ, ಗೌರಿ ಲಂಕೇಶ್‌, ದೊರೆಸ್ವಾಮಿ ಮತ್ತು ಎ.ಕೆ.ಸುಬ್ಬಯ್ಯ ಅವರಿದ್ದ ಸಮಿತಿಗೆ ಅರಿಕೆ ಮಾಡಿಕೊಂಡೆ’ ಎಂದರು.

‘ಮುಖ್ಯವಾಹಿನಿಯಲ್ಲಿ ಬದುಕಲು ನಿರ್ಧಾರ’

‘ನಮ್ಮದು ಆದಿವಾಸಿ ಸಮುದಾಯ. ಅಕ್ಕ ಯಶೋದಾ ಕರ್ನಾಟಕ ವಿಮೋಚನಾ ರಂಗ ಸಂಘಟನೆಯಲ್ಲಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಅಕ್ಕ ನಕ್ಸಲೈಟ್‌ ಎಂದು ಪೊಲೀಸರು ಮನೆಗೆ ಬಂದು ಬೆದರಿಸುತ್ತಿದ್ದರು. 2004ರಲ್ಲಿ ಸಂಘಟನೆ ಸೇರಿ ಅವರ ಜೊತೆ ಹೋದೆ’ ಎಂದು ಕನ್ಯಾಕುಮಾರಿ ಹೇಳಿದರು.

‘ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬಗ್ಗೆ ಹಳ್ಳಿಗಳಿಗೆ ಹೋಗಿ ಕರಪತ್ರ ಹಂಚುತ್ತಿದ್ದೆ. ಪದ್ಮನಾಭ, ದೇವಯ್ಯ, ಮನೋಹರ್‌ ತಂಡದಲ್ಲಿದ್ದೆ. 2008ರಲ್ಲಿ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತಂದರು. ಶಿವು ಅವರನ್ನು ಪರಿಚಯಿಸಿದರು. ಮುಖ್ಯವಾಹಿನಿಯಲ್ಲಿ ಬದುಕು ಕಟ್ಟಿಕೊಳ್ಳಲು ಈಗ ಶರಣಾಗಿದ್ದೇವೆ’ ಎಂದರು.

‘ಹೋರಾಟಗಳಲ್ಲಿ ಭಾವಹಿಸಿದ್ದೆ’

‘ಬೆಂಗಳೂರು ನಮ್ಮೂರು. ಮಗ್ಗದ ಕೆಲಸ ಮಾಡುತ್ತೇನೆ. ಸಂಘಟನೆಯೊಂದರ ಮೂಲಕ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. 2003ರಲ್ಲಿ ಕನ್ಯಾಕುಮಾರಿ ಪರಿಚಯವಾಯಿತು. ನಂತರ 5 ವರ್ಷ ಸಂಪರ್ಕ ಇರಲಿಲ್ಲ. ರಾಜೇಶ್‌ ಎಂಬುವರು 2008ರಲ್ಲಿ ಮತ್ತೆ ಅವರನ್ನು ಪರಿಚಯಿಸಿದರು. ಆಗ ಕನ್ಯಾಕುಮಾರಿಗೆ ಆರೋಗ್ಯ ಸಮಸ್ಯೆಯಾಗಿತ್ತು, ನಾನೇ ಆರೈಕೆ ಮಾಡಿದೆ. ಆಗಿನಿಂದಲೂ ಜೊತೆಯಲ್ಲೇ ಇದ್ದೆವು. 2016ರ ಫೆ. 25ರಂದು ವಿವಾಹವಾದೆ. ಮಗುವಿನ ಭವಿಷ್ಯ, ಎಲ್ಲವನ್ನೂ ಯೋಚಿಸಿ ಶರಣಾಗತಿಯಾಗಿದ್ದೇವೆ’ ಎಂದು ಶಿವು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry