ಅದೇ ದಂಡು, ಅದೇ ಪಾಳ್ಯ!

7

ಅದೇ ದಂಡು, ಅದೇ ಪಾಳ್ಯ!

Published:
Updated:
ಅದೇ ದಂಡು, ಅದೇ ಪಾಳ್ಯ!

‘ಸಿನಿಮಾ ನೋಡಿ ಯಾರಾದರೂ ಕೆಟ್ಟುಹೋಗಬಹುದು ಅಥವಾ ಒಳ್ಳೆಯವರಾಗಬಹುದು ಎಂಬುದನ್ನು ನಾನು ನಂಬುವುದಿಲ್ಲ’ – ಹೀಗೆಂದು ಘೋಷಿಸುತ್ತಲೇ ‘2’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮುಂದೆ ಎದುರಾಗುವ ಪ್ರಶ್ನೆಗಳಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡರು ನಿರ್ದೇಶಕ ಶ್ರೀನಿವಾಸರಾಜು.

ಅವರು ಈ ಪ್ರಶ್ನೆಗೆ ಉತ್ತರಿಸಿದ್ದು ‘ಈ ಸಿನಿಮಾ ಅಪರಾಧ ಕೃತ್ಯಗಳಿಗೆ ಪ್ರೇರಣೆ ಆಗಬಹುದಲ್ಲವೇ?’ ಎಂಬ ಪ್ರಶ್ನೆಗೆ.

ಅಷ್ಟಕ್ಕೇ ನಿಲ್ಲದೇ ‘ಈ ಚಿತ್ರ ಅಪರಾಧಗಳಿಗೆ ಪ್ರೇರಣೆ ಆಗಬಹುದಾದರೆ ಅದರ ವಿರುದ್ಧ ಜನರು ಜಾಗೃತಗೊಳ್ಳಲೂ ಕಾರಣ ಆಗಬಹುದಲ್ಲವೇ?’ ಎಂದು ಮರುಪ್ರಶ್ನೆಯನ್ನೂ ಎಸೆದರು.

‘2’ ಸಿನಿಮಾದಲ್ಲಿ ನಾನು ಅಪರಾಧವನ್ನು, ಹಿಂಸೆಯನ್ನು ವೈಭವೀಕರಿಸಿಲ್ಲ’’ ಎಂಬ ಅವರ ಮಾತನ್ನು ಕಾರ್ಯಕ್ರಮಕ್ಕೂ ಮುನ್ನ ಪ್ರದರ್ಶಿಸಲಾಗಿದ್ದ ಸಿನಿಮಾದ ಟ್ರೈಲರ್‌ ನೋಡಿದ ಯಾರೂ ಒಪ್ಪಲು ಸಾಧ್ಯವಿರಲಿಲ್ಲ.

ಹಿಂಸೆಯ ಅಫೀಮನ್ನು ಉಣಿಸಿಯೇ ಪ್ರೇಕ್ಷಕರನ್ನು ಸೆಳೆದ ಸಿನಿಮಾ ‘ದಂಡುಪಾಳ್ಯ’. ಇದರ ಮುಂದುವರಿದ ರೂಪವೇ ‘2’. ‘ದಂಡುಪಾಳ್ಯ’ ಎಂಬ ಹೆಸರನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿರುವುದರಿಂದ ತುಂಬ ಬುದ್ಧಿವಂತಿಕೆ ಉಪಯೋಗಿಸಿದ ಚಿತ್ರತಂಡ, ‘ಫ್ರಂ ದ ಡೈರೆಕ್ಟರ್‌ ಆಫ್‌ ದಂಡುಪಾಳ್ಯ’ ಎಂಬುದನ್ನು ‘2’ ಶೀರ್ಷಿಕೆಯ ಜತೆ ಸೇರಿಸಿಕೊಂಡಿದೆ. ಕಾನೂನುಬದ್ಧವಾಗಿ ಈ ಚಿತ್ರದ ಹೆಸರು ‘2’ ಆದರೆ, ಅದನ್ನು ‘ದಂಡುಪಾಳ್ಯ 2’ ಎಂದೇ ಓದಿಕೊಳ್ಳುವಂತೆ ಅಕ್ಷರ ವಿನ್ಯಾಸ ಮಾಡಲಾಗಿದೆ.

ರವಿಶಂಕರ್‌

‘2’ ಚಿತ್ರದ ನಿರ್ಮಾಪಕ ವೆಂಕಟ್‌. ಚಿಕ್ಕ ಮಕ್ಕಳು ನೋಡಬಾರದು ಎಂಬ ಕಾರಣಕ್ಕೆ ಮಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿ ‘ದಂಡುಪಾಳ್ಯ’ ಸಿನಿಮಾ ನೋಡಿ ಸಂತೋಷಪಟ್ಟ ಅವರು, ನಂತರ ಅದನ್ನು ತೆಲುಗಿಗೂ ಡಬ್‌ ಮಾಡಿ ಬಿಡುಗಡೆ ಮಾಡಿದ್ದರು. ಈಗ ‘2’ ಸಿನಿಮಾಗೂ ಅವರೇ ಹಣ ಹೂಡುತ್ತಿದ್ದಾರೆ.

‘ತಾವು ಕಣ್ಣಾರೆ ನೋಡಿದ ಘಟನೆಗಳ ಶೇ. 20ರಷ್ಟು ಮಾತ್ರ ತೆರೆಯಲ್ಲಿ ತೋರಿಸಿದ್ದೇನೆ. ಇದು ಕ್ರೈಂ ಪ್ರಕಾರದ ಕಥೆ. ಆದ್ದರಿಂದ ಅದನ್ನು ಬೋಲ್ಡ್‌ ಆಗಿಯೇ ತೋರಿಸಿದ್ದೇನೆ. ದಂಡುಪಾಳ್ಯ ಸಿನಿಮಾವನ್ನೂ ಜನ ಮೆಚ್ಚಿಕೊಂಡಿದ್ದಾರೆ’ ಎಂದರು ಶ್ರೀನಿವಾಸರಾಜು.

‘ದಂಡುಪಾಳ್ಯ’ ಸಿನಿಮಾದ ಹಾಗೆಯೇ ‘2’ ಸಿನಿಮಾ ಕೂಡ ಹಲವು ಕೋರ್ಟ್‌ ಕೇಸ್‌ಗಳನ್ನು ಎದುರಿಸಿದೆ. ಆ ಎಲ್ಲ ಪ್ರಕರಣಗಳಲ್ಲಿ ವಾದಿಸಿ ಕಾನೂನು ತೊಡಕು ನಿವಾರಿಸಿದ ವಕೀಲ ರವಿಶಂಕರ್‌ ಅವರನ್ನೂ ವೇದಿಕೆಯ ಮೇಲೆ ಕರೆಯಲಾಯಿತು.

‘ಈ ಸಿನಿಮಾದ ಮೇಲೆ ಬಳ್ಳಾರಿ ಜೈಲಿನಲ್ಲಿರುವ ದಂಡುಪಾಳ್ಯದ ಆರೋಪಿಗಳು ಪ್ರಕರಣ ದಾಖಲು ಮಾಡಿದ್ದರು. ನಾನು ಕೋರ್ಟ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುವುದು ಸಾಮಾಜಿಕ ಅವಶ್ಯಕತೆ ಎಂದು ವಾದಿಸಿದೆ. ಅದನ್ನು ಒಪ್ಪಿಕೊಂಡ ಕೋರ್ಟ್‌ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ತಮ್ಮ ಬುದ್ಧಿವಂತಿಕೆಯಿಂದ ‘2’ ಸಿನಿಮಾ ಸಾಮಾಜಿಕ ಜಾಗೃತಿಯನ್ನು ಮೂಡಿಸುವಂಥ ಸಿನಿಮಾ ಎಂದು ಕೋರ್ಟ್‌ ಅನ್ನು ನಂಬಿಸಿದ ಹಮ್ಮು ಅವರ ಮಾತಿನಲ್ಲಿ ಎದ್ದು ತೋರುತ್ತಿತ್ತು.

ಈ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರವಿಶಂಕರ್‌, ‘ಸಾಮಾನ್ಯವಾಗಿ ಸಿನಿಮಾದಲ್ಲಿ ಒಂದು ಸಕಾರಾತ್ಮಕ ಪಾತ್ರ ಇನ್ನೊಂದು ನಕಾರಾತ್ಮಕ ಪಾತ್ರ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ಎಲ್ಲವೂ ನಕಾರಾತ್ಮಕ ಪಾತ್ರವೇ’ ಎಂದು ಹೇಳಿದರು.ಶ್ರೀನಿವಾಸರಾಜು

‘ಇಂಥ ಪಾತ್ರಗಳು ನನ್ನೊಳಗಿನ ಕಲಾವಿದೆಗೆ ಸವಾಲು ಹಾಕುವಂಥವು. ಇದೇ ನಿರ್ದೇಶಕರು ‘2’ ನಂತರ ‘3’ ಎಂಬ ಚಿತ್ರವನ್ನು ಮಾಡಲಿದ್ದಾರೆ. ಅದರಲ್ಲಿನ ನನ್ನ ಪಾತ್ರವನ್ನು ಸಾಯುವವರೆಗೂ ಮರೆಯಲಾರರು’ ಎಂದರು. ಆದರೆ ‘ಸಾಯುವವರೆಗೆ ಮರೆಯದಿರುವವರು’ ಪ್ರೇಕ್ಷಕರೋ ಅಥವಾ ತಾವೋ ಎಂಬುದನ್ನು ಮಾತ್ರ ಸ್ಪಷ್ಟಪಡಿಸಲಿಲ್ಲ.

ಬಹುತೇಕ ‘ದಂಡುಪಾಳ್ಯ’ದಲ್ಲಿದ್ದ ಪೂಜಾ ಗಾಂಧಿ, ರವಿ ಕಾಳೆ, ರವಿಶಂಕರ್‌, ಪೆಟ್ರೋಲ್‌ ಪ್ರಸನ್ನ, ಜಯದೇವ ಅವರ ತಾರಾಗಣವೇ ಈ ಚಿತ್ರದಲ್ಲಿಯೂ ಇದೆ. ಅವಿನಾಶ್‌, ಶ್ರುತಿ, ಸಂಜನಾ, ಭಾಗ್ಯಶ್ರೀ ಹೊಸದಾಗಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry