ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಮಾಂದ್ಯ ಮಕ್ಕಳ ‘ನವಚೇತನ’

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಬುದ್ಧಿಮಾಂದ್ಯ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಸೇವೆ ಒದಗಿಸುತ್ತಿರುವ ‘ನವಚೇತನ’ ಸಂಸ್ಥೆಗೆ ಈಗ 16ರ ಹರೆಯ.

ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಬಳಿಯ ಬಾರ್ಗಿಯ ವಿಜಯಾ ನಾಯಕ್ ಅವರು ಬುದ್ಧಿಮಾಂದ್ಯ ಮಕ್ಕಳ ಮೇಲಿನ ಅನುಕಂಪದಿಂದ ಸ್ಥಾಪಿಸಿರುವ ಸಂಸ್ಥೆಯಿದು. ಇದು ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿದೆ.

ವಿಜಯಾ ನಾಯಕ್ ಅವರು 1988ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಸೇವಾರ್ಥಿಯಾಗಿ ಕೆಲಸ ಮಾಡಿದ್ದರು. ಆಗ ಅಲ್ಲಿದ್ದ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿ ತಾವೂ ಅಂತಹ ಸಂಸ್ಥೆ ನಡೆಸುವ ನಿರ್ಧಾರ ಮಾಡಿದ್ದರು. ಅದಕ್ಕೆ ಪೂರಕವಾಗಿ ಡಿಪ್ಲೊಮಾ ತರಬೇತಿ ಪಡೆದರು. 1988ರಿಂದ 2001ರವರೆಗೆ ಸೇವಾ ಇನ್ ಆ್ಯಕ್ಷನ್ ಸಂಸ್ಥೆಯಲ್ಲಿ ಅನುಭವ ಪಡೆದರು.

2001ರಲ್ಲಿ ಮೂವರು ಸಹೋದ್ಯೋಗಿಗಳೊಡನೆ ಸೇರಿ ‘ನವಚೇತನ’ ಎಂಬ ಸಂಸ್ಥೆಯನ್ನು  ಆರಂಭಿಸಿದರು. ಆಗ ಇಲ್ಲಿದ್ದ ಮಕ್ಕಳ ಸಂಖ್ಯೆ ಐದು.  ಪ್ರಸ್ತುತ ಇಲ್ಲಿ ಪುಟ್ಟ ಮಕ್ಕಳಿಂದ 60 ವರ್ಷ ವಯಸ್ಸಿನವರೆಗೆ 78 ಸದಸ್ಯರಿದ್ದಾರೆ.

‘ಇವರಲ್ಲಿ ತೀವ್ರ ಪ್ರಮಾಣದ ನ್ಯೂನತೆಗಳನ್ನು ಹೊಂದಿರುವವರೇ ಹೆಚ್ಚು. ಮಕ್ಕಳ ಮನಸ್ಥಿತಿ, ಅವರ ಬುದ್ಧಿಮಟ್ಟ ಮತ್ತು ಆರೋಗ್ಯವನ್ನಾಧರಿಸಿ ಮೂರು ವರ್ಗಗಳಾಗಿ ವಿಂಗಡಿಸಿಕೊಂಡು ಅವರ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಸುತ್ತಿದ್ದೇವೆ’ ಎನ್ನುತ್ತಾರೆ ವಿಜಯಾ.

ಮೊದಲ ಎರಡು ವರ್ಗದ ಮಕ್ಕಳಿಗೆ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವ ಹಾಗೂ ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತರಬೇತಿ ನೀಡುತ್ತೇವೆ. ಆದರೆ ಮೂರನೇ ವರ್ಗದ ಮಕ್ಕಳು ಇನ್ನೊಬ್ಬರನ್ನು ಅವಲಂಬಿಸಲೇಬೇಕು. ಕುಳಿತಲ್ಲೇ ಕೂತಿರುತ್ತಾರೆ, ಓಡಾಡುತ್ತಲೇ ಇರುತ್ತಾರೆ, ಕಿರುಚಾಡುತ್ತಿರುತ್ತಾರೆ. ಹಾಗಾಗಿ ಇವರ ಕಡೆಗೆ ವಿಶೇಷ ಗಮನ ಅಗತ್ಯ’ ಎನ್ನುತ್ತಾರೆ.

ಚಟುವಟಿಕೆಯಲ್ಲಿ ನಿರತ ಬುದ್ಧಿಮಾಂದ್ಯ ಮಕ್ಕಳು

‘ಆರಂಭದಲ್ಲಿ ಮಕ್ಕಳನ್ನು ಬೆಳಗ್ಗಿನಿಂದ ಸಂಜೆವರೆಗೆ ಮಾತ್ರ  ನೋಡಿಕೊಳ್ಳುತ್ತಿದ್ದೆವು. 2005ರಲ್ಲಿ ವಸತಿ ಆರಂಭಿಸಿದೆವು. ಇದಕ್ಕೆ ಪತಿ ದೇವರಾಯ ಹಾಗೂ ಮನೆಯವರು ಪೂರ್ತಿ ಬೆಂಬಲ ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಸಂಸ್ಥೆಯ ಖರ್ಚು ವೆಚ್ಚಗಳನ್ನು ಕೆಲ ಪೋಷಕರು ಮತ್ತು ದಾನಿಗಳು ನೀಡುವ ಹಣದಿಂದಲೇ ನಿರ್ವಹಣೆ ಮಾಡುತ್ತಿದ್ದೇವೆ. ಕಳೆದ ವರ್ಷ ಖಾಸಗಿ ಕಂಪೆನಿಯೊಂದು ಒಂದಿಡೀ ವರ್ಷದ ಖರ್ಚು–ವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ವಿಜಯಾ.

‘ಇಲ್ಲಿ   ಒಂಬತ್ತು ಶಿಕ್ಷಕರು, ಐವರು ಸಹಾಯಕರು, ಅಡುಗೆಯವರೂ ಸೇರಿ 22 ಸಿಬ್ಬಂದಿ ಇದ್ದಾರೆ.  ಒಂದು ದಿನಕ್ಕೆ 12ರಿಂದ 13 ಸಾವಿರ ಖರ್ಚು ಬರುತ್ತದೆ. ಸ್ವಂತ ಕಟ್ಟಡವೂ ಇಲ್ಲ’ ಎಂದು ವಿಜಯಾ ಹೇಳುತ್ತಾರೆ.


ವಿಜಯಾ
ಸಂಪರ್ಕಕ್ಕೆ– 99000 87875. ಶ್ರೀನಿವಾಸಮೂರ್ತಿ ಎನ್ ಸುಂಡ್ರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT