‘ಕನ್ನಡ ಪ್ರೀತಿ’ಯ ನಿಲ್ದಾಣ

7

‘ಕನ್ನಡ ಪ್ರೀತಿ’ಯ ನಿಲ್ದಾಣ

Published:
Updated:
‘ಕನ್ನಡ ಪ್ರೀತಿ’ಯ ನಿಲ್ದಾಣ

ಬಸ್‌ನಿಲ್ದಾಣ ಎಂದಾಕ್ಷಣ ಕಿತ್ತು ಹೋದ ಬೆಂಚು, ಗೋಡೆಗಳ ತುಂಬೆಲ್ಲಾ ಜಾಹೀರಾತು ಫಲಕಗಳ ರಾಶಿ ಕಣ್ಮುಂದೆ ಬರುತ್ತದೆ. ಆದರೆ ಸಹಕಾರ ನಗರದ ಬಸ್‌ ನಿಲ್ದಾಣ ಹೀಗಿಲ್ಲ. ಸ್ವಚ್ಛತೆ ಮಾತ್ರವಲ್ಲದೆ ಕನ್ನಡದ ಒಲವನ್ನು ಬಿತ್ತರಿಸುವ ತಾಣವಾಗಿಯೂ ನಿಲ್ದಾಣ ಗುರುತಿಸಿಕೊಳ್ಳುತ್ತಿದೆ.

ಈ ನಿಲ್ದಾಣಕ್ಕೆ ದಣಿದು ಬಂದ ಪ್ರಯಾಣಿಕರು ಕನ್ನಡದ ಹಾಡುಗಳನ್ನು ಕೇಳುತ್ತಾ, ಕನ್ನಡದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇಲ್ಲಿ ಕನ್ನಡ ವರ್ಣಮಾಲೆಯಿಂದ ಹಿಡಿದು ಕನ್ನಡ ನಾಡಿನ ಸಂಪೂರ್ಣ ಪರಿಚಯ ಇದೆ. ಕನ್ನಡದ ಪ್ರಸಿದ್ಧ ಕವಿಗಳು, ಲೇಖಕರು, ಶಾಸನಗಳು, ಪ್ರಸಿದ್ಧ ಕೃತಿಗಳು, ಪ್ರವಾಸಿ ತಾಣಗಳು... ಹೀಗೆ ಕನ್ನಡ ಸಾಹಿತ್ಯ ಲೋಕ ಹಾಗೂ ಕನ್ನಡ ನಾಡಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಗೋಡೆಯಲ್ಲಿ ಗ್ಲಾಸ್‌ ಷೋಕೇಸ್‌ನಲ್ಲಿ ಅಳವಡಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ, ಕನ್ನಡ ಸಾಹಿತ್ಯ ಅಕಾಡೆಮಿ, ಹಿರಿಯ ಚಿತ್ರಕಲಾವಿದರು, ಸಿನಿಮಾ ನಟರ ಬಗ್ಗೆ ಪರಿಚಯ, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ವಚನಕಾರರು, ಸಂಗೀತ ಲೋಕದ ದಿಗ್ಗಜರು, ಸಾಧಕರು, ವಿಜ್ಞಾನಿಗಳು ಹೀಗೆ ಮಾಹಿತಿಯ ಕಣಜವೇ ಇಲ್ಲಿದೆ.

ಈ ಬಸ್‌ ನಿಲ್ದಾಣ ಬ್ಯಾಟರಾಯನಪುರ ಕ್ಷೇತ್ರದ ಸಹಕಾರ ನಗರದಲ್ಲಿದೆ. ಬಿಲ್ಡರ್‌ ಎಂ.ಎಸ್‌ ಸುರೇಶ್‌ ಎಂಬುವರು ‘ವಿಧಾನಸೌಧ’ ಮಾದರಿಯಲ್ಲಿ ಈ ನಿಲ್ದಾಣವನ್ನು ಕಟ್ಟಿಸಿದ್ದಾರೆ.

‘ತಾಯಿ –ತಂದೆ ಸ್ಮರಣಾರ್ಥವಾಗಿ ಇದನ್ನು ಕಟ್ಟಿಸಿದೆ. ಚಿಕ್ಕಂದಿನಿಂದಲೂ ನನಗೆ ಕನ್ನಡ ಅಂದ್ರೆ ಅಭಿಮಾನ. ಹೀಗಾಗಿ ಕನ್ನಡದ ಬಗ್ಗೆ ಮಾಹಿತಿ ಸಂಗ್ರಹಿಸಿ ಬಸ್‌ ನಿಲ್ದಾಣದಲ್ಲಿ ಅಳವಡಿಸಿದೆ’ ಎಂದು ಹೇಳುತ್ತಾರೆ ಸುರೇಶ್‌.

ಈ ನಿಲ್ದಾಣಕ್ಕೆ ಪ್ರತಿದಿನ ನಾಲ್ಕು ಪ್ರಮುಖ ದಿನಪತ್ರಿಕೆಯನ್ನು ಸುರೇಶ್‌ ತರಿಸುತ್ತಾರೆ. ಪ್ರಯಾಣಿಕರು ದಿನದ ಪ್ರಮುಖ ವಿದ್ಯಮಾನಗಳನ್ನು ಅಲ್ಲಿಯೇ ಓದಿ, ಇಡಬೇಕು.

ಇಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸುಸಜ್ಜಿತವಾದ ಬೆಂಚು ಕಲ್ಲುಗಳನ್ನು ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೊಡ್ಡ ಗಡಿಯಾರವನ್ನು ಇಟ್ಟಿದ್ದಾರೆ. ಸಿ.ಸಿ ಟಿವಿ ಕ್ಯಾಮೆರಾವೂ ಇದೆ.

ಈ ನಿಲ್ದಾಣದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ನಿರಂತರವಾಗಿ ಹಾಡುಗಳು ಪ್ರಸಾರವಾಗುತ್ತಿರುತ್ತವೆ. ಬೆಳಿಗ್ಗೆ 7 ಗಂಟೆಯಿಂದ ಸುಪ್ರಭಾತ, ವಿಷ್ಣು ಸಹಸ್ರನಾಮ, ದೇವರ ನಾಮಗಳು, ಭಕ್ತಿಗೀತೆ, ವಚನಗಳು, ಬೆಳಿಗ್ಗೆ 8ರಿಂದ 1 ಜನಪದ, ಭಾವಗೀತೆ, 1ರಿಂದ 4ಗಂಟೆ ತನಕ ಶಾಸ್ತ್ರೀಯ ಸಂಗೀತ, ಸಂಜೆ 4ರಿಂದ 6 ಗಂಟೆತನಕ ಹಳೆಯ ಸಿನಿಮಾಗಳ ಹಾಡು, ರಾತ್ರಿ 6ರಿಂದ 9ಗಂಟೆವರೆಗೆ ಹೊಸ ಸಿನಿಮಾಗಳ ಹಾಡುಗಳನ್ನು ಕೇಳಬಹುದು.

ಈ ಹಾಡಿನ ನಡುವೆ ಕನ್ನಡ ನಾಡಿನ ಪರಿಚಯ, ವಚನಗಳ ಮಹತ್ವ ಹೀಗೆ ಕೆಲ ವಿಷಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ವಾರದ ಎಲ್ಲಾ ದಿನ ನಿರಂತರವಾಗಿ ಸ್ವಯಂಚಾಲಿತವಾಗಿ ಈ ಹಾಡುಗಳು ಪ್ರಸಾರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಬಸ್‌ ನಿಲ್ದಾಣವನ್ನು 500 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಸಂಜೆ ವೇಳೆಗೆ ವಿದ್ಯುತ್‌ ದೀಪಗಳಿಂದ ಬೆಳಗುವ ಈ ನಿಲ್ದಾಣ ಮಿನಿ ವಿಧಾನಸೌಧವೇನೋ ಎಂಬಂತೆ ಭಾಸವಾಗುತ್ತದೆ.

ಸುರೇಶ್‌ ಅವರು ಪರಿಸರ ಪ್ರೇಮಿಯೂ ಆದ್ದರಿಂದ ಸಹಕಾರನಗರದ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಿಸುವ ಕೆಲಸವನ್ನೂ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry