ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನ ಹಾದಿ ಹಿಡಿದ ಅಣ್ಣ

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನ ಹತ್ತನೇ ಆವೃತ್ತಿಯ ಫೈನಲ್‌ನಲ್ಲಿ ಪಂದ್ಯ ಪುರುಷೋತ್ತಮ ಗೌರವ ಪಡೆದ ಕೃನಾಲ್ ಪಾಂಡ್ಯ ಅವರ ನೀಳವದನ ಕಾಡುತ್ತಿದೆ. ಮೇ 1ರ ಸಂಜೆ ಅವರು ನೋವಿನಿಂದ ನರಳಿದ್ದರು. ಅದನ್ನು ಕಂಡ ಮುಂಬೈ ಇಂಡಿಯನ್ಸ್ ತಂಡದವರು ‘ಇನ್ನು ಈ ಕ್ರಿಕೆಟಿಗ ಮನೆಗೆ ಹೋಗಬೇಕು’ ಎಂದುಕೊಂಡಿದ್ದರು.

ಆ ದಿನ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೃನಾಲ್ ಚೆಂಡಿನ ಮೇಲೆ ಬಿದ್ದಿದ್ದರು. ಅವರ ಪೃಷ್ಠದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಶ್ರೀಲಂಕಾದಲ್ಲಿ ಎಲಿಯಂತ ವೈಟ್ ಎಂಬ ಅಪರೂಪದ ಚಿಕಿತ್ಸಕ ಇದ್ದಾರೆ.

ಲಸಿತ್ ಮಾಲಿಂಗ ಹಾಗೂ ಸಚಿನ್ ತೆಂಡೂಲ್ಕರ್ ಪೃಷ್ಠದ ನೋವಿನಿಂದ ಒದ್ದಾಡಿದ್ದಾಗ ಗುಣಪಡಿಸಿದ್ದವರು ಅವರೇ. ಮುಂಬೈ ಇಂಡಿಯನ್ಸ್ ತಂಡದವರು ಅವರಿಗೆ ಫೋನಾಯಿಸಿ, ಬೇಗ ಹೊರಟು ಬರುವಂತೆ ಕೋರಿದರು. ತಕ್ಷಣಕ್ಕೆ ವೀಸಾ ಸಿಗಲಿಲ್ಲ.

ಮರುದಿನ ತಂಡದ ಫಿಸಿಯೊ ಅವರನ್ನು ಜೊತೆಮಾಡಿ, ಚಾರ್ಟರ್ಡ್ ವಿಮಾನದಲ್ಲಿ ಕೃನಾಲ್ ಅವರನ್ನೇ ಕೊಲಂಬೊಗೆ ಕಳುಹಿಸಿಕೊಡಲು ತಂಡದ ವ್ಯವಸ್ಥಾಪಕ ಸಮಿತಿ ನಿರ್ಧರಿಸಿತು. ಅದೃಷ್ಟವಶಾತ್ ಮರುದಿನ ಎಲಿಯಂತ ಅವರಿಗೆ ವೀಸಾ ಸಿಕ್ಕಿತು. ಭಾರತ ತಲುಪಿದ ಅವರು ಕೃನಾಲ್‌ಗೆ ಚಿಕಿತ್ಸೆ ನೀಡಿದರು. ಫೈನಲ್‌ನಲ್ಲಿ ಕೃನಾಲ್ ಆಡಿದ ರೀತಿ ಅಭಿಮಾನಿಗಳ ಕಣ್ಣಿಗೆ ಕಟ್ಟಿದ ಹಾಗಿದೆ.

2015ರ ಡಿಸೆಂಬರ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕೃನಾಲ್ ತನ್ನ ತಮ್ಮ ಹಾರ್ದಿಕ್ ಪಾಂಡ್ಯ ಆಡುವುದನ್ನು ನೋಡುತ್ತಾ ಕುಳಿತಿದ್ದರು. ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ತೋರಿದ ಸ್ಥಿರ ಪ್ರದರ್ಶನದಿಂದ (8 ಪಂದ್ಯಗಳಲ್ಲಿ 45.75ರ ಸರಾಸರಿಯಲ್ಲಿ 366 ರನ್, ಪ್ರತಿ ಓವರ್‌ಗೆ ಸರಾಸರಿ 4.82 ರನ್ ನೀಡಿ 11 ವಿಕೆಟ್) ಮರುವರ್ಷವೇ ಅವರು ಐಪಿಎಲ್ ಕ್ರಿಕೆಟ್ ಆಡಲು ಆಯ್ಕೆಯಾದದ್ದು.

ರಣಜಿ ತಂಡಕ್ಕೆ ಆಯ್ಕೆಯಾದದ್ದೂ ಅದೇ ವರ್ಷ. ಕಳೆದ ಐಪಿಎಲ್‌ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಎದುರಿನ ಪಂದ್ಯವೊಂದರ ಒಂದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದು ಈ ನಿಧಾನಗತಿಯ ಎಡಗೈ ಬೌಲರ್ ಗಮನ ಸೆಳೆದಿದ್ದರು.

ಅದೇ ಋತುವಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಂದಿತ್ತು (ವಿಶಾಖಪಟ್ಟಣದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ 37 ಎಸೆತಗಳನ್ನು ಆಡಿ 86 ರನ್ ಗಳಿಸಿದ್ದರು. ಕ್ವಿಂಟನ್ ಡಿ ಕಾಕ್ ಹಾಗೂ ಜಹೀರ್ ಖಾನ್ ವಿಕೆಟ್‌ಗಳನ್ನೂ ಪಡೆದಿದ್ದರು). ಆದರೂ ಎಲ್ಲರೂ ಅವರನ್ನು ಹಾರ್ದಿಕ್ ಪಾಂಡ್ಯನ ಅಣ್ಣ ಎಂದೇ ಮೊನ್ನೆ ಮೊನ್ನೆಯವರೆಗೆ ಗುರುತಿಸುತ್ತಿದ್ದುದು. ಈ ವರ್ಷದ ಐಪಿಎಲ್‌ನಲ್ಲಿ ಕೃನಾಲ್ ತಮ್ಮ ಅಸ್ಮಿತೆಯ ದರ್ಶನ ಮಾಡಿಸಿದರು.

‘ಕೃನಾಲ್ ಜಾಣ ಆಲ್್ರೌಂಡರ್’ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಹೇಳಲು ಅಂಕಿಅಂಶಗಳ ಬಲವಿದೆ. ಜಯದೇವ್ ಉನದ್ಕತ್ ಬೌಲಿಂಗ್‌ನಲ್ಲಿ ರನ್ ಗಳಿಸಲು ಫೈನಲ್ಸ್‌ನಲ್ಲಿ ಎಲ್ಲರೂ ತಡಬಡಾಯಿಸಿದ್ದರು. ವಿವೇಚನೆಯಿಂದ ಆಡಿ ಇನಿಂಗ್ಸ್ ಕಟ್ಟಿದ ಕೃನಾಲ್, ಆ ಬೌಲರ್ ಎಸೆತದಲ್ಲಿ ಒಂದು ಸಿಕ್ಸರ್ ಕೂಡ ಹೊಡೆದಿದ್ದು ಪ್ರತಿಭೆಗೆ ಸಾಕ್ಷಿ.

ಅಹಮದಾಬಾದ್‌ನ ಕೃನಾಲ್ ಗತಿ ಬದಲಾವಣೆಯಿಂದ ತಮ್ಮ ಬೌಲಿಂಗ್‌ನಲ್ಲಿ ವೈವಿಧ್ಯ ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಸಂಯಮವೂ ಮುಖ್ಯ ಎಂಬ ಅರಿವು ಇದೆ. 4, 5, 6, 7 ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದರೂ ಒಗ್ಗಿಕೊಳ್ಳುವ ಈ ಎಡಗೈ ಆಟಗಾರನ ಕ್ಷಮತೆಯನ್ನು ರೋಹಿತ್ ಶರ್ಮ ಬಾಯಿ ತುಂಬಾ ಹೊಗಳಿದರು.

‘ತರಬೇತುದಾರ ಜಿತೇಂದರ್ ಸಿಂಗ್ ಕೊಟ್ಟ ಸಲಹೆಗಳನ್ನು ಕಣ್ಣಿಗೊತ್ತಿಕೊಂಡಿದ್ದರ ಫಲ ಈಗ ಕಾಣುತ್ತಿದೆ’ ಎಂಬ ಕೃನಾಲ್ ಮಾತು ಗುರುಭಕ್ತಿಗೆ ಕನ್ನಡಿ ಹಿಡಿಯುತ್ತದೆ. ಈ ಹುಡುಗನಿಗೆ ಒಳ್ಳೆಯ ಭವಿಷ್ಯವಿದೆ ಎಂದೇ ಅನೇಕರು ಹೇಳುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT