ಅರಸು ಆಡಳಿತದ ನೆನಪುಗಳು

7

ಅರಸು ಆಡಳಿತದ ನೆನಪುಗಳು

Published:
Updated:
ಅರಸು ಆಡಳಿತದ ನೆನಪುಗಳು

ದೇವರಾಜ ಅರಸು 1972ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರು ಹೊಂದಿದ್ದ ಒಟ್ಟು ಜಮೀನು 28 ಎಕರೆ. ಅವರು ಮುಖ್ಯಮಂತ್ರಿಯಾಗಿ 8 ವರ್ಷ ಅಧಿಕಾರ ನಡೆಸಿದರು. ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಾಗ ಅವರ ಆಸ್ತಿಯಲ್ಲಿ 4 ಎಕರೆ ಕಡಿಮೆಯಾಗಿತ್ತು!

ಅರಸು, ಹುಣಸೂರು ತಾಲ್ಲೂಕು ಕಲ್ಲಹಳ್ಳಿ ಗ್ರಾಮದಲ್ಲಿ ಹೊಂದಿದ್ದ 28 ಎಕರೆ ಜಮೀನನ್ನು  ಚಲುವಯ್ಯ ಎಂಬ ದಲಿತ ಕಾರ್ಮಿಕ ಸಾಗುವಳಿ ಮಾಡುತ್ತಿದ್ದರು. ಅರಸು ತುಂಬ ಆಸಕ್ತಿ ವಹಿಸಿ ಈ ಭೂಮಿಯನ್ನು ತೆಂಗಿನ ತೋಟವಾಗಿ ರೂಪಿಸಿದ್ದರು. ಅವರು ಶಾಸಕರಾಗಿದ್ದಾಗ ಬಿಡುವು ಮಾಡಿಕೊಂಡು ಇಲ್ಲಿಗೆ ಬಂದು ಉಳುಮೆ ಮಾಡುತ್ತಿದ್ದರು. ಅವರು ನೆಟ್ಟ 40 ತೆಂಗಿನಮರಗಳು ಅವರ ನೆನಪಿನಲ್ಲಿ ಈಗಲೂ ನಳನಳಿಸುತ್ತಾ ನಿಂತಿವೆ.

ಮುಖ್ಯಮಂತ್ರಿಯಾದ ಬಳಿಕ 1973–74ರಲ್ಲಿ ಅವರು ಕ್ರಾಂತಿಕಾರಕ ಭೂ ಸುಧಾರಣೆ ಕಾನೂನು ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯ ಎಂಬುದು ಈ ಕಾನೂನಿನ ಮುಖ್ಯ ಕ್ರಾಂತಿಕಾರಕ ಅಂಶ.

ತಮ್ಮ ಜಮೀನು ಸಾಗುವಳಿ ಮಾಡುತ್ತಿದ್ದ ಚಲುವಯ್ಯಗೆ 4 ಎಕರೆ ಜಮೀನು ಬಿಟ್ಟು ಕೊಡಲು ಅರಸು ನಿರ್ಧರಿಸಿದರು. ಅವರು ಹೊಂದಿದ್ದ 28 ಎಕರೆ ಜಮೀನು, ಗರಿಷ್ಠ ಮಿತಿಯ ವ್ಯಾಪ್ತಿಯಲ್ಲಿ ಬರುತ್ತಿರಲಿಲ್ಲ. ಗೇಣಿದಾರನಿಗೆ ಬಿಟ್ಟುಕೊಡುವ ಅವಶ್ಯಕತೆಯೂ ಇರಲಿಲ್ಲ. ತಾವು ತಂದ ಮಹತ್ವದ ಭೂಸುಧಾರಣೆ ಕಾನೂನಿಗೆ ಬದ್ಧರಾಗಿ ತಾವೇ ಮುಂದಾಗಿ ಹುಣಸೂರು ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯರನ್ನು ಕರೆದು ಚಲುವಯ್ಯ ಅವರಿಂದ ಅರ್ಜಿ ಪಡೆಯಲು ಸೂಚಿಸಿದರು.

ಅರಸು ಅವರ ಆಶಯದಂತೆ ಭೂನ್ಯಾಯ ಮಂಡಳಿಯವರು ಚಲುವಯ್ಯಗೆ ಅರ್ಜಿ ಸಲ್ಲಿಸಲು ಕೇಳಿಕೊಂಡರು. ಚಲುವಯ್ಯ ಒಪ್ಪಲಿಲ್ಲ. ದುಂಬಾಲು ಬಿದ್ದರೂ ಮಾತು ಕೇಳಲಿಲ್ಲ. ಬೇರೆ ಹಳ್ಳಿಗೆ ಹೋಗಿ ವಾಸಿಸತೊಡಗಿದರು. ಸ್ವತಃ ಅರಸು ಅವರೇ ಸೂಚಿಸಿದ್ದಾರೆ ಎಂದು ತಿಳಿದ ಮೇಲೂ ಅರ್ಜಿ ಸಲ್ಲಿಸಲಿಲ್ಲ. ಅರಸು ಅವರೇ ಚಲುವಯ್ಯ ಅವರನ್ನು ಕರೆಸಿ ಅರ್ಜಿ ಪಡೆದು ಭೂನ್ಯಾಯ ಮಂಡಳಿಗೆ ಸಲ್ಲಿಸಿದರು. ಮಂಡಳಿಈ ಅರ್ಜಿಯನ್ನು ಪರಿಶೀಲಿಸಿ  ಅರಸು ಅವರಿಗೆ ಸೇರಿದ 28 ಎಕರೆ ಜಮೀನು ವಿಭಜಿಸಿ ಚಲುವಯ್ಯ ಅವರಿಗೆ 4 ಎಕರೆ ಜಮೀನು  ಮಂಜೂರು ಮಾಡಿತು.

ಅರಸು ಅವರಿಂದ ಪ್ರಭಾವಿತರಾಗಿ ಅವರ ಆತ್ಮೀಯ ಸ್ನೇಹಿತ ಮತ್ತು ಆಗ ಶಾಸಕರಾಗಿದ್ದ ಆರ್.ಎಂ. ದೇಸಾಯಿ ಅವರು ಬೀಳಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿನ ತಮ್ಮ 200  ಎಕರೆ ಜಮೀನನ್ನು ಸ್ವಸಂತೋಷದಿಂದ ಗೇಣಿದಾರರಿಗೆ ನೀಡಿದರು.

ಹುಲ್ಲುಗಾವಲು: ಅರಸು ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಚಾಲನೆ ದೊರೆಯಿತು ಎಂಬ ಆರೋಪ ತೀವ್ರಗೊಂಡಿತ್ತು. ಈ ಬಗ್ಗೆ ಕುತೂಹಲಕರ ಚರ್ಚೆಗಳು ನಡೆದಿದ್ದವು. ಇದಕ್ಕೆ ಅವರು ನೀಡಿದ ಕಾರಣಗಳು ಕೂಡ ಗಮನಾರ್ಹ. ಅರಸು ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅನೌಪಚಾರಿಕವಾಗಿ ಮಾತನಾಡುವಾಗ ಒಬ್ಬ ಹಿರಿಯ ಪತ್ರಕರ್ತ ‘... ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ವಿಪರೀತ ಹೆಚ್ಚಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ’ ಎಂದು ನೇರವಾಗಿ ಹೇಳಿದರು.

ಆರಾಮ ಕುರ್ಚಿಯ ಮೇಲೆ ಮಲಗಿಕೊಂಡು ಮಾತನಾಡುತ್ತಿದ್ದ ಅರಸು ಒಮ್ಮೆಲೇ ಎದ್ದು ಕುಳಿತರು. ‘ಬಡವರಿಗೆ, ಕೆಳವರ್ಗದವರಿಗೆ ಶಕ್ತಿ ತುಂಬುವ, ಸಾಮಾಜಿಕ ಪರಿವರ್ತನೆಯ ಕನಸು ನನಗಿದೆ. ಇದನ್ನು ಸಾಕಾರಗೊಳಿಸಲು ಅಧಿಕಾರದಲ್ಲಿರಬೇಕು. ನಮ್ಮ ದೇಶದಲ್ಲಿ ಅಧಿಕಾರದಲ್ಲಿರಬೇಕಾದರೆ ಪರಂಪರೆಯ ಬಲ ಬೇಕು, ಇಲ್ಲವೇ ಬಿರ್ಲಾ,  ಟಾಟಾ ಆಶೀರ್ವಾದ ಬೇಕು. ಜಾತಿಯ ಬೆಂಬಲವೂ ಬೇಕು. ಇದಾವುದೂ ಇಲ್ಲದ ನಾನು ಅಧಿಕಾರದಲ್ಲಿರಬೇಕಲ್ಲ, ಅದು  ಹೇಗೆ ನೀವೇ ಹೇಳಿ?

ನಾನು ಬರೀ ತತ್ವ ಬೋಧನೆ, ಆದರ್ಶದ ಪಾಠ ಹೇಳುತ್ತಾ ಕುಳಿತರೆ ಎಂ.ಎಲ್.ಎ.ಗಳು ನನ್ನನ್ನು ಯಾವಾಗಲೋ ಒದ್ದು ಓಡಿಸುತ್ತಿದ್ದರು.  ತಮಗೇನಾದರೂ ಲಾಭ ಬೇಕು ಎಂದು ಈ ಶಾಸಕರು ನನ್ನ ಹಿಂದೆ ಇದ್ದಾರೆ. ಇವರು ಬಹಳ ಹಸಿದ ಜನ. ದಿನಾಲೂ ಏನಾದರೂ ಸಿಗಬೇಕು ಅವರಿಗೆ. ಇದಕ್ಕೆಲ್ಲ ನನ್ನಲ್ಲಿ ಆಸ್ತಿ, ದುಡ್ಡು ಇಲ್ಲ. ಯಾರಿಂದಲೋ ಕಿತ್ತು ಇವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಅಥವಾ ಆಸ್ತಿ ಮಾಡಲು ಇದನ್ನೆಲ್ಲ ನಾನು ಮಾಡುತ್ತಿಲ್ಲ’ ಎಂದು ಸ್ವಲ್ಪ ಗಂಭೀರವಾಗಿ ಹೇಳಿದರು.

ದೇವರಿಗೆ ಅರ್ಪಿಸುವ ಹೂ: ಸಾಹಿತಿ ಚದುರಂಗ ಅವರು,  ಅರಸು ಅವರಿಗೆ ಸಂಬಂಧದಲ್ಲಿ ಚಿಕ್ಕಪ್ಪ ಆಗಬೇಕು. 1995ರಲ್ಲಿ ಮುಧೋಳಕ್ಕೆ ಬಂದ ಚದುರಂಗರು  ಪತ್ರಕರ್ತರೊಂದಿಗೆ ಮಾತನಾಡುವಾಗ ಅರಸು ಆಡಳಿತ ಅವಧಿಯ ಭ್ರಷ್ಟಾಚಾರ ವಿಷಯ ಪ್ರಸ್ತಾಪವಾಯಿತು. ಅದಕ್ಕೆ ಚದುರಂಗರ ಪ್ರತಿಕ್ರಿಯೆ ತುಂಬ ಮಾರ್ಮಿಕವಾಗಿತ್ತು: ‘ಸಾಮಾಜಿಕ, ರಾಜಕೀಯ ಪರಿವರ್ತನೆ ತರುವುದು ಅರಸು ಗುರಿಯಾಗಿತ್ತು. ಅದಕ್ಕಾಗಿ ಅವರಿಗೆ ಅಧಿಕಾರ ಬೇಕಾಗಿತ್ತು. ತಮಗೆ ಅಧಿಕಾರ ಕೊಟ್ಟ ಶಾಸಕರಿಗೆ  ಖುಷಿಯಾಗಿ ಮೇಯಲು ಅವರು ಹುಲ್ಲುಗಾವಲು ತೋರಿಸಿದರು.

ಭ್ರಷ್ಟಾಚಾರದ ಕಳಂಕ ಒಂದಿಲ್ಲದಿದ್ದರೆ ಅರಸು ಅವರು ದೇವರಿಗೆ ಅರ್ಪಿಸುವ ಹೂವಾಗಬಹುದಾಗಿತ್ತು. ಅಂಥ ಘನವಾದ ವ್ಯಕ್ತಿತ್ವ ಅವರದು’ ಎಂದು ಬಣ್ಣಿಸಿದರು.

ತಾಯಿ ಲಕ್ಷ್ಮೀಬಾಯಿ: ಅರಸು ಅವರ ಆತ್ಮೀಯ ಸ್ನೇಹಿತ   ಆರ್.ಎಂ. ದೇಸಾಯಿ ಅವರ ಮನೆಯಲ್ಲಿ ಅರಸು ಅವರ ಮೂವರೂ ಪುತ್ರಿಯರು ಶಾಲಾ ಬಿಡುವಿನ ದಿನಗಳಲ್ಲಿ ಬಂದು ತಂಗುತ್ತಿದ್ದರು.  ದೇಸಾಯಿ ಅವರ ತಾಯಿ ಲಕ್ಷ್ಮೀಬಾಯಿ ಅವರು ಅರಸು ಪುತ್ರಿಯರಿಗೆ ಖಾಸಾ ಅಜ್ಜಿಯಂತೆ ಪ್ರೀತಿ ತೋರುತ್ತಿದ್ದರು. ಇದು ಅರಸು ಅಂತರಂಗವನ್ನು ಬಹಳ ಕಲಕುತ್ತಿತ್ತು.

ಲಕ್ಷ್ಮೀಬಾಯಿ 1972ರಲ್ಲಿ ನಿಧನರಾದಾಗ ಅರಸು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂದು ತೀರಾ ಭಾವುಕರಾದ ಅರಸು, ‘ನನ್ನ ನಿಧನಾನಂತರ ನನ್ನ ಅಂತ್ಯಕ್ರಿಯೆ, ತಾಯಿ ಲಕ್ಷ್ಮೀಬಾಯಿ ಸಮಾಧಿ ಬಳಿ ನಡೆಯಬೇಕು ಎಂಬುದು ನನ್ನ ಅಪೇಕ್ಷೆ. ಈ ಅವ್ವ ನನಗೆ ಹಾಗೂ ನನ್ನ ಮಕ್ಕಳಿಗೆ ತೋರಿದ ಪ್ರೀತಿ ಬಹಳ ದೊಡ್ಡದು’ ಎಂದು ಹೇಳಿದ್ದರು.

ಅರಸು 1982ರ ಜೂನ್ 6ರಂದು ನಿಧನರಾದರು.  ಅಂತ್ಯಕ್ರಿಯೆ ಅವರ ಹುಟ್ಟೂರು ಕಲ್ಲಹಳ್ಳಿಯಲ್ಲಿ ನಡೆಯಿತು. ಆದರೆ ಅರಸು ತಮ್ಮ ಅಂತ್ಯಕ್ರಿಯೆ ಲಕ್ಷ್ಮೀಬಾಯಿ ಅವರ ಸಮಾಧಿ ಬಳಿ ನಡೆಯಲಿ ಎಂದು ಹೇಳಿದ ಮಾತನ್ನು ಅವರ ಕುಟುಂಬದವರು ಮರೆತಿರಲಿಲ್ಲ. ಅರಸರ ಅಂತ್ಯಸಂಸ್ಕಾರ  ನಡೆದ ಸ್ಥಳದಲ್ಲಿಯ ಮಣ್ಣನ್ನು ಅರಸರ ಕುಟುಂಬದ ಸದಸ್ಯರು ಒಂದು ಕಲಶದಲ್ಲಿ ತಂದು ದೇಸಾಯಿ ಅವರ ತಾಯಿಯ ಸಮಾಧಿ ಬಳಿ ಸ್ಥಾಪಿಸಿದ್ದಾರೆ. ದಿವಗಂತ ಅರಸು ಹಾಗೂ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿಯ ಪೂಜೆ ಇಲ್ಲಿ ನಡೆಯುತ್ತಿದೆ. ಅರಸು ಹಾಗೂ ದೇಸಾಯಿ ಕುಟುಂಬದ ಪ್ರೀತಿಗೆ ಇದು ಸಾಕ್ಷಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry