40 ವರ್ಷಗಳಿಂದ ಒಂದು ಗುಂಡೂ ಹಾರಿಲ್ಲ: ಮೋದಿ ಹೇಳಿಕೆಗೆ ಚೀನಾ ಸ್ವಾಗತ

7

40 ವರ್ಷಗಳಿಂದ ಒಂದು ಗುಂಡೂ ಹಾರಿಲ್ಲ: ಮೋದಿ ಹೇಳಿಕೆಗೆ ಚೀನಾ ಸ್ವಾಗತ

Published:
Updated:
40 ವರ್ಷಗಳಿಂದ ಒಂದು ಗುಂಡೂ ಹಾರಿಲ್ಲ: ಮೋದಿ ಹೇಳಿಕೆಗೆ ಚೀನಾ ಸ್ವಾಗತ

ಬೀಜಿಂಗ್‌: ಭಾರತ ಹಾಗೂ ಚೀನಾ ಮಧ್ಯೆ ಗಡಿವಿವಾದ ಇದ್ದರೂ 40 ವರ್ಷಗಳಿಂದ ಗಡಿಯಲ್ಲಿ ಒಂದೇ ಒಂದು ಗುಂಡೂ ಹಾರಿಲ್ಲ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿರುವುದನ್ನು ಚೀನಾ ಸ್ವಾಗತಿಸಿದೆ.

‘ಪ್ರಧಾನಿ ಮೋದಿ ಅವರ  ಸಕಾರಾತ್ಮಕ ಹೇಳಿಕೆಯನ್ನು ಗಮನಿಸಿದ್ದೇವೆ. ಇದನ್ನು ನಾವು ಸ್ವಾಗತಿಸುತ್ತೇವೆ’ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನಿಯಿಂಗ್‌ ತಿಳಿಸಿದರು.

ಭಾರತ ಹಾಗೂ ಚೀನಾ ನಡುವೆ ಗಡಿವಿವಾದವಿದೆ. ಆದರೆ ಇಲ್ಲಿ 40 ವರ್ಷಗಳಿಂದ ಒಂದೇ ಒಂದು ಗುಂಡಿನ ದಾಳಿ ನಡೆದಿಲ್ಲ ಎಂದು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಆರ್ಥಿಕ ಸಮಾವೇಶದಲ್ಲಿ ಮೋದಿ ತಿಳಿಸಿದ್ದರು.

ಜಗತ್ತಿನಲ್ಲಿ ಪರಸ್ಪರ ಅವಲಂಬನೆ ಹೆಚ್ಚುತ್ತಿದೆ.  ಭಾರತ ಹಾಗೂ ಚೀನಾ ನಡುವೆ ಬಗೆಹರಿಸಲಾಗದ ಗಡಿ ವಿವಾದವಿದ್ದರೂ, ಎರಡು ರಾಷ್ಟ್ರಗಳ ನಡುವೆ  ಹೂಡಿಕೆ ಹಾಗೂ ವ್ಯಾಪಾರದ ವಿಷಯದಲ್ಲಿ ಅವಲಂಬನೆ ಹೆಚ್ಚಿದೆ ಎಂದು ಮೋದಿ  ಅಭಿಪ್ರಾಯಪಟ್ಟಿದ್ದರು.

ಚೀನಾ ಹಾಗೂ ಭಾರತದ ನಡುವೆ ದ್ವಿಪಕ್ಷೀಯ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತಿರುವುದು ಮಹತ್ತರ ಬೆಳವಣಿಗೆಯಾಗಿದೆ ಎಂದು ಹುವಾ ಹೇಳಿದರು.

ಎನ್‌ಎಸ್‌ಜಿ ಸೇರ್ಪಡೆಗೆ ಚೀನಾ ಅಪಸ್ವರ:  ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯತ್ವ (ಎನ್‌ಎಸ್‌ಜಿ) ಸೇರ್ಪಡೆಗೆ ಭಾರತದ ಯತ್ನವು ಈಗಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಮತ್ತಷ್ಟು ಸಂಕೀರ್ಣವಾಗಿದೆ ಎಂದು ಚೀನಾ ತಿಳಿಸಿದೆ.

ಎನ್‌ಎಸ್‌ಜಿಯ ಬಹುತೇಕ  ಸದಸ್ಯ ರಾಷ್ಟ್ರಗಳು ಭಾರತ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದರೂ, ಚೀನಾ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ.

ಕೈ ಜೋಡಿಸಿದರೆ ರೈಲ್ವೆ ಸುಧಾರಣೆ: ರೈಲ್ವೆ ಸುಧಾರಣೆ ವಿಚಾರದಲ್ಲಿ ಭಾರತವು ಚೀನಾದ ಜತೆಗೆ  ಕೈ ಜೋಡಿಸಿದರೆ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಜತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಚೀನಾದ  ಪ್ರಮುಖ ದೈನಿಕ ‘ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry