ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪ್ರದೇಶ ಹೆಚ್ಚಾಗಿಲ್ಲ ಏಕೆ

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ
Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದಾಖಲೆಗಳ ಪ್ರಕಾರ ಪ್ರತಿವರ್ಷ 6ರಿಂದ 8 ಕೋಟಿ ಸಸಿಗಳನ್ನು ನೆಡುತ್ತಿದ್ದರೂ ಶೇಕಡಾವಾರು ಅರಣ್ಯ ಪ್ರದೇಶ ಹೆಚ್ಚಳ ಆಗಿಲ್ಲ ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸೋಮವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ಸಮತೋಲನದಲ್ಲಿ ಇರಬೇಕೆಂದರೆ ಒಟ್ಟು ಭೂ ಪ್ರದೇಶದಲ್ಲಿ ಮೂರನೇ ಒಂದು ಭಾಗವಾದರೂ ಅರಣ್ಯ ಇರಬೇಕು. ಆದರೆ, ರಾಜ್ಯದಲ್ಲಿ ಶೇ 19ರಷ್ಟು ಮಾತ್ರ ಅರಣ್ಯ  ಇದೆ ಎಂದರು.

‘ನಾನು 25 ವರ್ಷದಿಂದಲೂ ಇದೇ ಅಂಕಿ– ಅಂಶ ಕೇಳುತ್ತಿದ್ದೇನೆ.  ಪ್ರತಿವರ್ಷ ಕೋಟಿಗಟ್ಟಲೆ ಸಸಿ ನೆಟ್ಟರೂ ಶೇಕಡಾವಾರು ಪ್ರಮಾಣ ಸ್ವಲ್ಪವೂ  ಏರಿಕೆಯಾಗಿಲ್ಲ ಎಂದರೆ ಏನರ್ಥ. ಕಳೆದ ವರ್ಷ 8 ಕೋಟಿ ಸಸಿ ನೆಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೆಟ್ಟರೋ, ಬಿಟ್ಟರೋ, ಲೆಕ್ಕ ಮಾತ್ರ ಇದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅರಣ್ಯ ನಾಶದಿಂದ ಮಲೆನಾಡಿನಲ್ಲೇ ಮಳೆ ಇಲ್ಲವಾಗಿದೆ. ಉದ್ಯಾನನಗರಿ ಎಂಬ ಖ್ಯಾತಿ ಈಗ ಬೆಂಗಳೂರಿಗೆ ಇಲ್ಲ. ಕೆರೆಗಳು ನೊರೆ ತುಂಬಿಕೊಂಡು ಕಲುಷಿತಗೊಂಡಿವೆ. ಅರಣ್ಯ ರಕ್ಷಣೆ ಮರೆತರೆ ಮುಂದೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.

ಸಾಲುಮರದ ತಿಮ್ಮಕ್ಕ ‘ವೃಕ್ಷ ಉದ್ಯಾನವನ’
ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ‘ವೃಕ್ಷ ಉದ್ಯಾನವನ’ಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ  ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ 50 ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು.

ಈ ವರ್ಷ ರಾಜ್ಯದಾದ್ಯಂತ 6 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ಬೆಳೆಸಿದರೆ ‘ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆ’ ಅಡಿ ಸಹಾಯಧನ  ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT