ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಉಗ್ರರ ಗುರುತು ಪತ್ತೆ: ತೆರೆಸಾ

ಹೊಣೆ ಹೊತ್ತ ಐ.ಎಸ್‌
Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಶನಿವಾರ ಇಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ  ಮೂವರು ಉಗ್ರರನ್ನು ಗುರುತಿಸಲಾಗಿದೆ. ಅವರ ಹೆಸರನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು.  ಎಂದು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಸೋಮವಾರ ಹೇಳಿದ್ದಾರೆ.

ಲಂಡನ್‌ ಸೇತುವೆ ಬಳಿ ಶನಿವಾರ ನಡೆಸಿದ ದಾಳಿಗೆ ಈ ಮೂವರು ಉಗ್ರರು ಸಂಪೂರ್ಣ ಹೊಣೆಗಾರರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ದಾಳಿಯ ಹೊಣೆಯನ್ನು ಐ.ಎಸ್‌ ಹೊತ್ತುಕೊಂಡಿದೆ.

ಶನಿವಾರ ರಾತ್ರಿ ಮೂವರು ದುಷ್ಕರ್ಮಿಗಳು ವ್ಯಾನನ್ನು ಜನರ ಮೇಲೆ ಹರಿಸಿದ್ದಲ್ಲದೆ 7 ಮಂದಿಯನ್ನು ಇರಿದು ಹತ್ಯೆ ಮಾಡಿದ್ದರು. 48 ಮಂದಿಯನ್ನು ಗಾಯಗೊಳಿಸಿದ್ದರು. ನಂತರ ಈ ಮೂವರನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು.

ಒಬ್ಬ ಉಗ್ರಗಾಮಿ ಐರಿಷ್‌ ಗುರುತಿನ ಚೀಟಿ ಹೊಂದಿದ್ದ ಎಂದು ಸ್ಕಾಟ್‌ಲೆಂಡ್‌ ಯಾರ್ಡ್‌ ಹೇಳಿದೆ.

ಮೂವರು ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಮೂಲದವನು ಎಂದು ವರದಿಯಾಗಿದೆ.  ಆತನನ್ನು ಅಬ್ಜ್‌(27ವರ್ಷ) ಎಂದು ಗುರುತಿಸಲಾಗಿದೆ. ಇವನೇ ತಂಡದ ನಾಯಕ ಎಂದು ‘ದಿ ಮಿರರ್‌’ ವರದಿ ಮಾಡಿದೆ.

ಇಬ್ಬರು ಮಕ್ಕಳ ತಂದೆಯಾದ ಅಬ್ಜ್‌  ಟಿವಿ ಸಾಕ್ಷ್ಯಚಿತ್ರವೊಂದರಲ್ಲಿ  ಲಂಡನ್‌ ಉದ್ಯಾನದಲ್ಲಿ ಇಸ್ಲಾಮಿಕ್  ಸ್ಟೇಟ್‌ ಧ್ವಜಕ್ಕೆ ಪ್ರಾರ್ಥನೆ ಸಲ್ಲಿಸಿರುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಎಂದು ವರದಿಯಾಗಿದೆ.  

ಸವಾಲು: ‘ಬ್ರಿಟನ್‌ನಲ್ಲಿ ಮೂರು ತಿಂಗಳಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಐ.ಎಸ್‌ ಉಗ್ರರ ಬೆದರಿಕೆ ಎದುರಿಸುವುದು ನಮಗಿರುವ  ಬಹುದೊಡ್ಡ  ಸವಾಲು’ ಎಂದು ತೆರೆಸಾ ಮೇ  ಹೇಳಿದ್ದಾರೆ.

‘ಐ.ಎಸ್‌ ಸೇರಿದಂತೆ ಜಗತ್ತಿನಾದ್ಯಂತ ಇರುವ ಭಯೋತ್ಪಾದಕ ಗುಂಪುಗಳನ್ನು ಹಿಮ್ಮೆಟ್ಟಿಸಲು  ಬ್ರಿಟನ್‌ ತೊಡಗಿದೆ. ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜಗತ್ತಿನ ಹಿತಾಸಕ್ತಿಯೂ ಇದೆ ಆಗಿದೆ ಎಂದು ನಂಬಿದ್ದೇವೆ’ ಎಂದಿದ್ದಾರೆ.

‘ಆದರೆ, ಉಗ್ರರನ್ನು ಮಣಿಸುವ ಸಾಗರೋತ್ತರದ  ನಮ್ಮ  ಪ್ರಯತ್ನಗಳು ಸಫಲವಾಗಿವೆ. ಆದರೆ, ಅವರು ತಮ್ಮ ವಿಷಪೂರಿತ ಸಿದ್ಧಾಂತಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿ,  ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಹೇಳಿದ್ದಾರೆ.

‘ಇರಾಕ್‌ ಮತ್ತು ಸಿರಿಯಾದಲ್ಲಿ ಐಎಸ್‌ ನಾಶಪಡಿಸುವ ಸೇನಾ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಭಯೋತ್ಪಾದನೆಯ ವಿರುದ್ಧ ಇತರ ಪ್ರಜಾಪ್ರಭುತ್ವದ ಸರ್ಕಾರಗಳು ಕೈಗೊಳ್ಳುವ ಕ್ರಮಗಳಿಗೂ ನಮ್ಮ ಸಹಕಾರ ಇದೆ’ ಎಂದು ತೆರೆಸಾ ಹೇಳಿದ್ದಾರೆ.

ಬಂಧನ
ಘಟನೆ ಸಂಬಂಧ 19ರಿಂದ 60 ವರ್ಷದೊಳಗಿನ ಏಳು ಮಹಿಳೆಯರು ಮತ್ತು ಐವರು ಪುರುಷರನ್ನು ಭಯೋತ್ಪಾದಕ ಕಾಯ್ದೆಯಡಿ ಬಂಧಿಸಲಾಗಿದೆ. 55 ವರ್ಷದ ವ್ಯಕ್ತಿಯೊಬ್ಬರನ್ನು ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT