ಜಿಎಸ್‌ಟಿ ಜಾರಿ ಸಿದ್ಧತೆ ಪರಿಶೀಲಿಸಿದ ಪ್ರಧಾನಿ

7

ಜಿಎಸ್‌ಟಿ ಜಾರಿ ಸಿದ್ಧತೆ ಪರಿಶೀಲಿಸಿದ ಪ್ರಧಾನಿ

Published:
Updated:
ಜಿಎಸ್‌ಟಿ ಜಾರಿ ಸಿದ್ಧತೆ ಪರಿಶೀಲಿಸಿದ ಪ್ರಧಾನಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಜುಲೈ 1ರಿಂದ ಜಾರಿಗೆ ತರಲು ನಡೆದಿರುವ ಪೂರ್ವಭಾವಿ ಸಿದ್ಧತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪರಿಶೀಲಿಸಿದರು.

ಹೊಸ ತೆರಿಗೆ ವ್ಯವಸ್ಥೆ ಜಾರಿಯು ಒಳಗೊಂಡಿರುವ  ಹಲವಾರು ವಿದ್ಯಮಾನಗಳ ಬಗ್ಗೆ  ಮಾಹಿತಿ ಪಡೆದರು.  ಐ.ಟಿ ವ್ಯವಸ್ಥೆಯ ಸೈಬರ್‌ ಸುರಕ್ಷತೆಗೆ ಗರಿಷ್ಠ ಗಮನ ನೀಡಲು  ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಒಂದು ದೇಶ, ಒಂದು ಮಾರುಕಟ್ಟೆ ಮತ್ತು ತೆರಿಗೆ ವ್ಯವಸ್ಥೆಯು ಜನಸಾಮಾನ್ಯರಿಗೆ ತುಂಬ ಉಪಯುಕ್ತವಾಗಿರಲಿದೆ. ಜಿಎಸ್‌ಟಿ ಜಾರಿಯು ದೇಶದ ಇತಿಹಾಸದಲ್ಲಿ ಅಸಾಮಾನ್ಯ ಘಟನೆಯಾಗಲಿದ್ದು,  ಆರ್ಥಿಕತೆಗೆ ಹೊಸ   ತಿರುವು ನೀಡುವ ಮಹತ್ವದ ವಿದ್ಯಮಾನ ಆಗಲಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.

ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಭಾಗವಹಿಸಿದ್ದರು.

ಹೊಸ ವ್ಯವಸ್ಥೆಯ ಜಾರಿಗೆ ಪೂರಕವಾದ ಐ.ಟಿ ಮೂಲ ಸೌಕರ್ಯ, ಅಧಿಕಾರಿಗಳ ತರಬೇತಿ, ಬ್ಯಾಂಕ್‌ಗಳ ಜತೆಗಿನ ಸಮನ್ವಯತೆ, ತೆರಿಗೆದಾರರ ನೋಂದಣಿ ಪ್ರಕ್ರಿಯೆಗಳು ಗಡುವಿನ ಒಳಗೆ ಪೂರ್ಣಗೊಳ್ಳಲಿವೆ ಎನ್ನುವುದನ್ನು  ಸಭೆಯಲ್ಲಿ ಪ್ರಧಾನಿ ಗಮನಕ್ಕೆ ತರಲಾಗಿದೆ. ಮಾಹಿತಿ ಸುರಕ್ಷತೆ ವ್ಯವಸ್ಥೆ ಬಗ್ಗೆ  ಚರ್ಚಿಸಲಾಗಿದೆ.

ರಾಜಕೀಯ ಪಕ್ಷಗಳು, ವ್ಯಾಪಾರ ಮತ್ತು ಉದ್ದಿಮೆ ಸಂಘಟನೆ ಸೇರಿ ಎಲ್ಲರ ಸಂಘಟಿತ ಪ್ರಯತ್ನದಿಂದ ಜಿಎಸ್‌ಟಿ ಜಾರಿಯಾಗುತ್ತಿದೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು @askGst_GOI ಟ್ವಿಟರ್‌ ಖಾತೆ ಆರಂಭಿಸಲಾಗಿದೆ.  ಉಚಿತ ಕರೆ ಸಂಖ್ಯೆ 1800–1200–232 ಸೇವೆಗೂ ಚಾಲನೆ ನೀಡಲಾಗಿದೆ.

* ದೇಶದ ಇತಿಹಾಸದಲ್ಲಿ ಜಿಎಸ್‌ಟಿ ಜಾರಿಯು ಅಸಾಮಾನ್ಯ ಗಳಿಗೆಯಾಗಲಿದ್ದು, ಆರ್ಥಿಕತೆಗೆ ಹೊಸ ತಿರುವು ನೀಡಲಿದೆ

–ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry