ಹರ್ಮನ್‌ಪ್ರೀತ್‌ ಕೈಚಳಕ

7
ಆಹ್ವಾನಿತ ಹಾಕಿ; ಬೆಲ್ಜಿಯಂ ಮಣಿಸಿದ ಭಾರತ

ಹರ್ಮನ್‌ಪ್ರೀತ್‌ ಕೈಚಳಕ

Published:
Updated:
ಹರ್ಮನ್‌ಪ್ರೀತ್‌ ಕೈಚಳಕ

ಡಸ್ಸೆಲ್‌ಡಾರ್ಫ್‌, ಜರ್ಮನಿ: ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಕೈಚಳಕದ ಬಲದಿಂದ ಭಾರತ ತಂಡ ತ್ರಿಕೋನ ಆಹ್ವಾನಿತ ಹಾಕಿ ಸರಣಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಭಾರತ 3–2 ಗೋಲುಗಳಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿದೆ. ಈ ಮೂಲಕ ಸರಣಿಯ ಆರಂಭಿಕ ಪಂದ್ಯದಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೋತು ನಂತರ 2–2 ಗೋಲುಗಳಿಂದ ಜರ್ಮನಿ ವಿರುದ್ಧ ಡ್ರಾ ಮಾಡಿಕೊಂಡಿದ್ದ ಭಾರತ ತಂಡ  ಸೋಮವಾರ ಆಕ್ರಮಣಕಾರಿ ಆಟದ ಮೂಲಕ ಗಮನಸೆಳೆಯಿತು.

ಜರ್ಮನಿ ವಿರುದ್ಧದ ಹಿಂದಿನ ಪಂದ್ಯ ದಲ್ಲಿ 1–2 ಗೋಲುಗಳಿಂದ ಸೋತಿದ್ದ ಬೆಲ್ಜಿಯಂ ತಂಡ ಶುರುವಿನಿಂದಲೇ ವೇಗದ ಆಟಕ್ಕೆ ಒತ್ತು ನೀಡಿತು.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ಬೆಲ್ಜಿಯಂ ತಂಡದ ಆಟಗಾರರು ಆರಂಭದಲ್ಲಿ ಭಾರತದ ರಕ್ಷಣಾ ವಿಭಾಗಕ್ಕೆ ಸವಾಲಾದರು.

ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಅವರಿಗೆ ಆಗಲಿಲ್ಲ. ಇಷ್ಟಾದರೂ ಛಲ ಬಿಡಲಿಲ್ಲ. ಈ ತಂಡದ ಆಟಗಾರರ ಪ್ರಯತ್ನಕ್ಕೆ 13ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು.

ಅಮೌರಿ ಕೆವುಸ್ಟರ್ಸ್‌ ಅವರು ಫೀಲ್ಡ್‌ ಗೋಲು ದಾಖಲಿಸಿ ಬೆಲ್ಜಿಯಂ ಪಾಳಯ ದಲ್ಲಿ ಸಂಭ್ರಮ ಮನೆಮಾಡುವಂತೆ ನೋಡಿ ಕೊಂಡರು. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಗುಣಮಟ್ಟದ ಆಟ ಆಡಿದರು. 23 ಮತ್ತು 24ನೇ ನಿಮಿಷಗಳಲ್ಲಿ ಪ್ರವಾಸಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭ್ಯವಾಗಿದ್ದವು. ಹರ್ಮನ್‌ಪ್ರೀತ್‌ ಫ್ಲಿಕ್ ಮಾಡಿದ ಚೆಂಡನ್ನು ಎದುರಾಳಿ ರಕ್ಷಣಾ ವಿಭಾಗದ ಆಟಗಾರರು ತಡೆದರು.

ಹೀಗಾಗಿ ಬೆಲ್ಜಿಯಂ 1–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದಲ್ಲಿ ಭಾರತದ ಆಟ ಕಳೆಗಟ್ಟಿತು. 34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ತಂಡ ಸದುಪಯೋಗಪಡಿಸಿಕೊಂಡಿತು. ಹರ್ಮನ್‌ ಪ್ರೀತ್‌ ಚಾಕಚಕ್ಯತೆಯಿಂದ ಚೆಂಡನ್ನು ಗುರಿ ಮುಟ್ಟಿಸಿ 1–1ರ ಸಮಬಲಕ್ಕೆ ಕಾರಣರಾದರು.

38ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಮತ್ತೊಮ್ಮೆ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವರು ಭಾರತಕ್ಕೆ 2–1ರ ಮುನ್ನಡೆ ತಂದು ಕೊಟ್ಟರು.

40ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಬೆಲ್ಜಿಯಂ ತಂಡದ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಗೋಲ್‌ ಕೀಪರ್‌ ವಿಕಾಸ್‌ ದಹಿಯಾ ಅಮೋಘ ರೀತಿಯಲ್ಲಿ ತಡೆದು ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು. ಆದರೆ 45ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ತಂಡದ ತಾಂಗಯ್‌ ಕೊಸಿನ್ಸ್‌ ಗೋಲು ಗಳಿಸಿ ಮಿಂಚಿದರು.

49ನೇ ನಿಮಿಷದಲ್ಲಿ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಮುಂಚೂಣಿ ಆಟಗಾರ ರಮಣದೀಪ್‌ ಸಿಂಗ್‌ ಅದನ್ನು ಗುರಿ ಮುಟ್ಟಿಸುತ್ತಿದ್ದಂತೆ ಭಾರತದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಮಂಗಳವಾರ ನಡೆಯುವ ಪಂದ್ಯದ ಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ ಬಲಿಷ್ಠ ಜರ್ಮನಿ ವಿರುದ್ಧ ಸೆಣಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry