ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ವಿಶ್ವಾಸದಲ್ಲಿ ಭಾರತ

ಇಂದು ನೇಪಾಳ ವಿರುದ್ಧ ಸೌಹಾರ್ದ ಪಂದ್ಯ
Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಎಎಫ್‌ಸಿ ಏಷ್ಯಾಕಪ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಭಾರತ ಫುಟ್‌ಬಾಲ್‌ ತಂಡದವರು ಅದಕ್ಕೂ ಮುನ್ನ ಪರೀಕ್ಷೆಯೊಂದನ್ನು ಎದುರಿಸಲು ಸಜ್ಜಾಗಿದ್ದಾರೆ.

ಮಂಗಳವಾರ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ ಸೆಣಸಲಿದೆ. ಉಭಯ ತಂಡಗಳ ನಡುವಣ ಈ ಹೋರಾಟಕ್ಕೆ ಅಂಧೇರಿ ಕ್ರೀಡಾ ಸಂಕೀರ್ಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಹೋದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 4–0 ಗೋಲುಗಳಿಂದ ಪೊರ್ಟೊರಿಕಾ ತಂಡವನ್ನು ಮಣಿಸಿ ಫಿಫಾ ವಿಶ್ವ ಕ್ರಮಾಂಕಪಟ್ಟಿಯಲ್ಲಿ 100ನೇ ಸ್ಥಾನ ಪಡೆದಿರುವ ಭಾರತ ತಂಡ ರ್‍ಯಾಂಕಿಂಗ್‌ನಲ್ಲಿ ತನಗಿಂತಲೂ ಕೆಳಗಿನ ಸ್ಥಾನ ಹೊಂದಿರುವ ನೇಪಾಳ ವಿರುದ್ಧ ಸುಲಭ ಗೆಲುವಿನ ಲೆಕ್ಕಾಚಾರ ಹೊಂದಿದೆ.

ಗಾಯಗೊಂಡಿದ್ದ ಸುನಿಲ್‌ ಚೆಟ್ರಿ ಸಂಪೂರ್ಣವಾಗಿ ಗುಣಮುಖರಾಗಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಮುಂಚೂಣಿ ವಿಭಾಗಕ್ಕೆ ಆನೆ ಬಲ ಬಂದಂತಾಗಿದೆ.

ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ಏಷ್ಯಾಕಪ್‌ ‘ಎ’ ಗುಂಪಿನ ಅರ್ಹತಾ ಪಂದ್ಯದಲ್ಲಿ 1–0 ಗೋಲಿನಿಂದ ಮ್ಯಾನ್ಮಾರ್‌ ತಂಡವನ್ನು ಮಣಿಸಿದ್ದ ಭಾರತ ತಂಡ ಜೂನ್‌ 13ರಂದು ಬೆಂಗಳೂರಿನಲ್ಲಿ ಜರುಗುವ ಪಂದ್ಯದಲ್ಲಿ ಕಿರ್ಗಿಸ್ತಾನ ವಿರುದ್ಧ ಸೆಣಸಲಿದೆ.

ಈ ಪಂದ್ಯಕ್ಕೂ ಮುನ್ನ ನೇಪಾಳ ವನ್ನು ಮಣಿಸಿ ಮನೋಬಲ ಹೆಚ್ಚಿಸಿ ಕೊಳ್ಳಲು ಭಾರತ ತಂಡದ ಆಟಗಾರರು ಕಾದಿದ್ದಾರೆ.  ಮುಂಚೂಣಿ ವಿಭಾಗದ ಆಟಗಾರರಾದ ರಾಬಿನ್‌ ಸಿಂಗ್‌, ಜೆಜೆ ಲಾಲ್‌ಪೆಕ್ಲುವಾ, ಸಿ.ಕೆ. ವಿನೀತ್‌ ಮತ್ತು ಡೇನಿಯಲ್‌ ಲಾಲಿಂಪುಯಿಯಾ ಅವರು ನೇಪಾಳ ತಂಡದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಬಲ್ಲವರಾಗಿದ್ದಾರೆ.

ಉದಾಂತ್‌ ಸಿಂಗ್‌ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯ ರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ  ಯೂಜೆನ್ಸನ್‌ ಲಿಂಗ್ಡೊ, ಜಾಕಿಚಾಂದ್‌ ಸಿಂಗ್‌, ಹರಿಚರಣ್‌ ನರ್ಜರಿ, ಧನಪಾಲ್‌ ಗಣೇಶ್‌ ಮತ್ತು ಮಿಲಾನ್‌ ಸಿಂಗ್‌ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ.

ರಕ್ಷಣಾ ವಿಭಾಗದ ಆಟಗಾರರಾದ ಅರ್ನಾಬ್‌ ಮಂಡಲ್‌, ಚಿಂಗ್ಲೆನ್‌ಸನಾ .ಸಿಂಗ್‌, ನಿಶುಕುಮಾರ್‌ ಮತ್ತು ಸಂದೇಶ್‌ ಜಿಂಗಾನ್‌ ಅವರೂ ಮಿಂಚುವ ಉತ್ಸಾಹದಲ್ಲಿದ್ದಾರೆ.

ವಿಶ್ವಾಸದಲ್ಲಿ ನೇಪಾಳ: ಜಪಾನ್‌ನ ಕೋಚ್‌ ಕೊಜಿ ಗ್ಯೊಟೊಕೊ ಅವರ ಮಾರ್ಗದರ್ಶನದಲ್ಲಿ ತರಬೇತು ಗೊಂಡಿರುವ ನೇಪಾಳ ತಂಡ ಭಾರತವ ನ್ನು ಅದರದ್ದೇ ನೆಲದಲ್ಲಿ ಮಣಿಸುವ ವಿಶ್ವಾಸದಲ್ಲಿದೆ.

2013ರಲ್ಲಿ ಕಠ್ಮಂಡುವಿನ ದಶರಥ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸ್ಯಾಫ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ನೇಪಾಳ 2–1ರಿಂದ ಭಾರತವನ್ನು ಮಣಿಸಿತ್ತು. ಈ ಗೆಲುವಿನ ಬಲದೊಂದಿಗೆ  ಪ್ರವಾಸಿ ತಂಡ ಅಂಗಳಕ್ಕಿಳಿಯಲಿದೆ.

ಬಿರಾಜ್‌ ಮಹಾರಾಜನ್‌ ಸಾರಥ್ಯದ ತಂಡ ರಕ್ಷಣಾ ವಿಭಾಗದಲ್ಲಿ ಬಲಿಷ್ಠ ವಾಗಿದೆ. ಅನಂತ ತಮಾಂಗ್‌, ಆದಿತ್ಯ ಚೌಧರಿ, ಕಮಲ್‌ ಶ್ರೇಷ್ಠ ಮತ್ತು ದೇವೇಂ ದ್ರ ತಮಾಂಗ್‌ ಅವರು ಭಾರತದ ಗೋಲುಗಳಿಕೆಯ ಪ್ರಯತ್ನಗ ಳಿಗೆ ಅಡ್ಡಿಯಾಗಬಲ್ಲರು.

ಮುಂಚೂಣಿ ವಿಭಾಗದ ಆಟಗಾರರಾದ ಭರತ್‌ ಖವಾಸ್‌, ಬಿಮಲ್‌ ಗಾರ್ತಿ ಮಗರ್‌ ಮತ್ತು ನವಯುಗ್‌ ಶ್ರೇಷ್ಠ ಅವರ ಮೇಲೂ ಭರವಸೆ ಇಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT