ಪರ್ಜನ್ಯ ಹೋಮ: ವಿಧಾನಸಭೆಯಲ್ಲಿ ಪ್ರತಿಧ್ವನಿ

7
ಸರ್ಕಾರದ ನಿರ್ಧಾರವನ್ನು ಟೀಕಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌

ಪರ್ಜನ್ಯ ಹೋಮ: ವಿಧಾನಸಭೆಯಲ್ಲಿ ಪ್ರತಿಧ್ವನಿ

Published:
Updated:
ಪರ್ಜನ್ಯ ಹೋಮ: ವಿಧಾನಸಭೆಯಲ್ಲಿ ಪ್ರತಿಧ್ವನಿ

ಬೆಂಗಳೂರು: ಮಳೆಗಾಗಿ ಪ್ರಾರ್ಥಿಸಿ ಕೃಷ್ಣಾ ಮತ್ತು ಕಾವೇರಿ ಉಗಮ ಸ್ಥಾನದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು  ನಡೆಸಿದ ಪರ್ಜನ್ಯ ಹೋಮ ವಿಧಾನಸಭೆಯಲ್ಲಿ ಸೋಮವಾರ ನಂಬಿಕೆ– ಮೂಢನಂಬಿಕೆ ಕುರಿತ ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿತು.

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಬರ ಪರಿಹಾರಕ್ಕೆ ಪಾಟೀಲರು ಪರ್ಜನ್ಯ ಹೋಮದ ಪರಿಹಾರ ಕಂಡುಕೊಂಡಿದ್ದಾರೆ. ಇದು ಮೂರ್ಖತನದ ಪರಮಾವಧಿ’ ಎಂದು ಕುಟುಕಿದರು.

‘ಬಸವಣ್ಣನ ಕರ್ಮಭೂಮಿಯಿಂದ ಬಂದ ಪಾಟೀಲರು ಹೀಗೆ ಮಾಡುವುದು ಸರಿಯೇ? ಮುಖ್ಯಮಂತ್ರಿ ಏಕೆ ಸುಮ್ಮನಿದ್ದಾರೆ. ಜಯಚಂದ್ರ ಅವರ ಜೊತೆ ಸೇರಿ ಪಾಟೀಲರ ಕಿವಿ ಹಿಂಡಬೇಕು. ಇದು ನನ್ನ ವೈಯಕ್ತಿಕ ವಿಚಾರ ಎಂದು ಪಾಟೀಲರು ಹೇಳುವುದಾದರೆ ಸಚಿವ ಸ್ಥಾನದಿಂದ ಕಿತ್ತೊಗೆಯಿರಿ’ ಎಂದು ಆಗ್ರಹಿಸಿದರು.

‘ಮೌಢ್ಯ ವಿರೋಧಿಸುವ ಸ್ವಾಮೀಜಿಗಳು, ವಿಚಾರವಾದಿಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಯಾಕೆ’ ಎಂದೂ ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ‘ಜಾತಿ ಪದ್ಧತಿ, ಮೌಢ್ಯ ವಿರೋಧಿಸಿದ ಬಸವಣ್ಣನವರು ಆಣೆ ಪ್ರಮಾಣಗಳ ಬಗ್ಗೆ ಹೇಳಿದ್ದಾರೆಯೇ’ ಎಂದು ನಗುತ್ತಲೇ ಪ್ರಶ್ನಿಸಿದರು.

‘ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಮೂರು ವರ್ಷಗಳಿಂದ ಮುಖ್ಯಮಂತ್ರಿ ಹೇಳುತ್ತಲೇ ಇದ್ದಾರೆ. ವೈಯಕ್ತಿಕವಾಗಿ ನಾನು ಬಸವಣ್ಣನವರ ಅನುಯಾಯಿ. ಮೌಢ್ಯ ವಿರೋಧಿಸುತ್ತೇನೆ. ಮುಖ್ಯಮಂತ್ರಿ ಆಗಿದ್ದಾಗ ಚಾಮರಾಜನಗರಕ್ಕೆ ಹೋಗಿ ಬಂದಿದ್ದೇನೆ. ತಿರುಪತಿ, ಕೊಲ್ಲೂರಿಗೆ ಹೋಗಿ ದೇವರ ದರ್ಶನ ಮಾಡಿ ಬರುವುದು ನಂಬಿಕೆ.  ಅಲ್ಲಿಗೆ ಹೋದರೆ ಒಳ್ಳೆಯದಾಗುತ್ತದೆ ಎಂಬುದು ಮೂಢನಂಬಿಕೆ. ವೈಯಕ್ತಿಕವಾಗಿ ನೀವು ಏನೇ ಮಾಡಿದರೂ ಅದು ನಂಬಿಕೆ.  ಸಾರ್ವಜನಿಕ ಜೀವನದಲ್ಲಿ ಇರುವವರು ಮೂಢನಂಬಿಕೆ ಪ್ರೋತ್ಸಾಹಿಸಬಾರದು’ ಎಂದು ಶೆಟ್ಟರ್‌ ಅಭಿಪ್ರಾಯಪಟ್ಟರು.

‘ಅಧಿಕಾರದ ಕೊನೆಯ ವರ್ಷ ಪಾಟೀಲರಿಗೆ ಜ್ಞಾನೋದಯವಾಗಿದೆ. ಬರ ಆರಂಭವಾದ ದಿನಗಳಲ್ಲಿ ಹೋಮದ ಬಗ್ಗೆ ಅವರು ಏಕೆ ಆಲೋಚಿಸಲಿಲ್ಲ’ ಎಂದೂ ಅವರು  ಟೀಕಿಸಿದರು.                     

‘ವೈಯಕ್ತಿಕವಾಗಿ ನಾನು ಮೌಢ್ಯ ವಿರೋಧಿಸುತ್ತೇನೆ. ಪೂಜೆ, ಹೋಮ ಪಾಟೀಲರ ವೈಯಕ್ತಿಕ ವಿಷಯ. ಅವರು ಸಚಿವರಾಗಿ ಹೋಮ ಮಾಡಿಸಿಲ್ಲ. ಸ್ವಂತ ಹಣ ಖರ್ಚು ಮಾಡಿದ್ದಾರೆ. ತಲಕಾವೇರಿಯಲ್ಲಿ ಪೂಜೆ ಮಾಡಿಸಿದ್ದೇ ಅಪರಾಧ ಎಂದು ಬಿಂಬಿಸಬೇಡಿ. ಸಚಿವರು ಹೋಗಿದ್ದಾರೆ ಎಂಬ ಕಾರಣಕ್ಕೆ ಇಲಾಖೆ ಅಧಿಕಾರಿಗಳು ಹೋಗಿದ್ದಾರೆ’ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

ಬಿಜೆಪಿಯ ಸಿ.ಟಿ. ರವಿ, ‘ಪಾಟೀಲರು ಪರ್ಜನ್ಯ ಹೋಮ ಮಾಡಿದ್ದಕ್ಕೆ ನನ್ನ ಬೆಂಬಲವಿದೆ. ನಮ್ಮನ್ನು ಮೀರಿದ ಅಲೌಕಿಕವಾದ ಶಕ್ತಿ ಇದೆ. ಅದನ್ನು ನಾನು ನಂಬುತ್ತೇನೆ’ ಎಂದರು.

‘ಯಾವುದು ಸಮಾಜಕ್ಕೆ ಹಾನಿ, ಶೋಷಣೆ ಆಗುತ್ತವೋ ಅದು ಮೌಢ್ಯ. ಅದನ್ನು ವಿರೋಧಿಸಬೇಕು. ಪೂಜೆ ಮಾಡುವುದರಿಂದ ಸಮಾಜಕ್ಕೆ ಯಾವುದೇ ಹಾನಿ ಆಗುವುದಿಲ್ಲ. ತಿರುಪತಿಗೆ ಹೋಗಿ ಬರುವುದು, ಪೂಜೆ ಮಾಡುವುದು, ದೇವರು ಇದ್ದಾನೆ ಎನ್ನುವುದು ನಂಬಿಕೆ. ಅದರಿಂದ ಸಮಾಜಕ್ಕೆ ಹಾನಿ ಇಲ್ಲ ಎಂದಾದರೆ ನಾವು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದರು.

* ಮೂಢನಂಬಿಕೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಮಂಡಿಸುತ್ತೇವೆ. ಆಗ ಇದರ ಬಗ್ಗೆ ಚರ್ಚಿಸಿ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry