ಸಿಬಿಐಯಿಂದ ಪ್ರಣಯ್‌ ರಾಯ್‌ ಮನೆ ಶೋಧ

7

ಸಿಬಿಐಯಿಂದ ಪ್ರಣಯ್‌ ರಾಯ್‌ ಮನೆ ಶೋಧ

Published:
Updated:
ಸಿಬಿಐಯಿಂದ ಪ್ರಣಯ್‌ ರಾಯ್‌ ಮನೆ ಶೋಧ

ನವದೆಹಲಿ: ಎನ್‌ಡಿಟಿವಿಯ ಸ್ಥಾಪಕ ಪ್ರಣಯ್‌ ರಾಯ್‌ ಅವರ ಮನೆಯಲ್ಲಿ ಸಿಬಿಐ ಸೋಮವಾರ ಶೋಧ ನಡೆಸಿದೆ.

ಷೇರು ವಹಿವಾಟೊಂದನ್ನು ಅವರು ಸೆಬಿಯಿಂದ (ಭಾರತೀಯ ಷೇರು ನಿಯಂತ್ರಣ ಮಂಡಳಿ) ಮುಚ್ಚಿಟ್ಟಿದ್ದಾರೆ ಮತ್ತು ಖಾಸಗಿ ಬ್ಯಾಂಕೊಂದಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪದ ಸಂಬಂಧ ಈ ಶೋಧ ನಡೆಸಲಾಗಿದೆ.

‘ಅದೇ ಹಳೆಯ ಹುಸಿ ಆರೋಪಗಳ ಆಧಾರದಲ್ಲಿ ಶೋಧದ ಹೆಸರಿನಲ್ಲಿ ದ್ವೇಷ ಸಾಧನೆ ಮಾಡಲಾಗಿದೆ’ ಎಂದು ಎನ್‌ಡಿಟಿವಿ ಹೇಳಿದೆ.

ರಾಯ್‌, ಅವರ ಹೆಂಡತಿ ರಾಧಿಕಾ, ಐಸಿಐಸಿಐ ಬ್ಯಾಂಕ್‌ನ ಕೆಲವು ಅಧಿಕಾರಿಗಳು, ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಪ್ರೈ. ಲಿ. ವಿರುದ್ಧ ಅಪರಾಧ ಒಳಸಂಚು, ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.

ರೋಪ ಏನು: ಎನ್‌ಡಿಟಿವಿಯ ಶೇ 20ರಷ್ಟು ಷೇರುಗಳನ್ನು ಸಾರ್ವಜನಿಕರಿಂದ ಖರೀದಿಸುವುದಕ್ಕಾಗಿ ಇಂಡಿಯಾ ಬುಲ್ಸ್‌  ಪ್ರೈ. ಲಿ. ಸಂಸ್ಥೆಯಿಂದ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ₹500 ಕೋಟಿ ಸಾಲ ಪಡೆದುಕೊಂಡಿತ್ತು.

ಇಂಡಿಯಾ ಬುಲ್ಸ್‌ನಿಂದ ಪಡೆದ ಸಾಲ ಮರುಪಾವತಿಗೆ ಐಸಿಐಸಿಐ ಬ್ಯಾಂಕ್‌ನಿಂದ ಶೇ 19ರ ಬಡ್ಡಿ ದರದಲ್ಲಿ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ₹375 ಕೋಟಿ ಸಾಲ ಪಡೆದಿತ್ತು. ಎನ್‌ಡಿಟಿವಿಯ ಪ್ರವರ್ತಕರು ತಮ್ಮಲ್ಲಿದ್ದ ಎನ್‌ಡಿಟಿವಿಯ ಎಲ್ಲ ಷೇರುಗಳನ್ನು ಐಸಿಐಸಿಐಯಿಂದ ಪಡೆದ ಸಾಲಕ್ಕೆ ಖಾತರಿಯಾಗಿ ನೀಡಿದ್ದರು.

ಷೇರುಗಳನ್ನು ಖಾತರಿಯಾಗಿ ನೀಡಿದ ವಿಚಾರವನ್ನು ಸೆಬಿ, ಷೇರು ವಿನಿಮಯ ಕೇಂದ್ರ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ

ತಿಳಿಸಿಲ್ಲ ಎಂದು ಸಿಬಿಐ ಹೇಳಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪ್ರಕಾರ, ಬ್ಯಾಂಕ್‌ಗಳು ಯಾವುದೇ ಕಂಪೆನಿಯಲ್ಲಿ ಷೇರುಗಳನ್ನು ಹೊಂದುವಂತಿಲ್ಲ. ಕಂಪೆನಿಯ ಶೇ 30ಕ್ಕಿಂತ ಹೆಚ್ಚಿನ ಷೇರುಗಳನ್ನು ಖಾತರಿಯಾಗಿಯೂ ಪಡೆಯುವಂತಿಲ್ಲ. ಆದರೆ ಐಸಿಐಸಿಐ ಸಾಲದಖಾತರಿ ರೂಪದಲ್ಲಿ ಎನ್‌ಡಿಟಿವಿಯ ಶೇ 61ರಷ್ಟು ಷೇರುಗಳನ್ನು ಪಡೆದುಕೊಂಡಿತ್ತು. ಹಾಗಾಗಿಯೇಈ ಮಾಹಿತಿಯನ್ನು ಮುಚ್ಚಿಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

ಸಾಲಕ್ಕೆ ವಿಧಿಸಲಾಗಿದ್ದ ಶೇ 19ರ ಬಡ್ಡಿಯಲ್ಲಿ ಶೇ 10ರಷ್ಟಕ್ಕೆ ನಂತರ ಐಸಿಐಸಿಐ ವಿನಾಯಿತಿ ನೀಡಿತ್ತು. ಇದರಿಂದಾಗಿ ಐಸಿಐಸಿಐ ಬ್ಯಾಂಕ್‌ಗೆ ₹48 ಕೋಟಿ ನಷ್ಟವಾದರೆ ಆ ಹಣ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ಗೆ ಲಾಭವಾಗಿದೆ ಎಂದು ಸಿಬಿಐ ಹೇಳಿದೆ.

ಶೋಧ ಎಲ್ಲಿ: ದೆಹಲಿಯ ಎರಡು ಸ್ಥಳಗಳು ಮತ್ತು ಡೆಹ್ರಾಡೂನ್‌ನ ಒಂದು ಸ್ಥಳದಲ್ಲಿ ಶೋಧ ನಡೆದಿದೆ.

ಎನ್‌ಡಿಟಿವಿ ಪ್ರತಿಕ್ರಿಯೆ: ಹಳೆಯ ಕೊನೆಯಿಲ್ಲದ ಹುಸಿ ಆರೋಪಗಳ ಆಧಾರದಲ್ಲಿ ಎನ್‌ಡಿಟಿವಿ ಮತ್ತು ಅದರ ಪ್ರವರ್ತಕರಿಗೆ ಕಿರುಕುಳ ನೀಡುವುದನ್ನು ಸಿಬಿಐ ತೀವ್ರಗೊಳಿಸಿದೆ.

ಎನ್‌ಡಿಟಿವಿ ಮತ್ತು ಅದರ ಪ್ರವರ್ತಕರು ಸರ್ಕಾರದ ವಿವಿಧ ಸಂಸ್ಥೆಗಳ ದ್ವೇಷ ಸಾಧನೆಯ ವಿರುದ್ಧ ನಿರಂತರ ಹೋರಾಟ ನಡೆಸಲಿದ್ದಾರೆ. ಪ್ರಜಾಪ್ರಭುತ್ವ ಮತ್ತು ವಾಕ್‌ ಸ್ವಾತಂತ್ರ್ಯವನ್ನು ಕಡೆಗಣಿಸುವ ಇಂತಹ ಪ್ರಯತ್ನಗಳಿಗೆ ಮಣಿಯುವುದಿಲ್ಲ ಎಂದು ಎನ್‌ಡಿಟಿವಿ ಪ್ರತಿಕ್ರಿಯೆ ನೀಡಿದೆ.

ದ್ವೇಷ ಸಾಧನೆ ಅಲ್ಲ: ಸಿಬಿಐ

ದ್ವೇಷ ಸಾಧನೆಗಾಗಿ ಈ ಶೋಧ ನಡೆಸಲಾಗಿದೆ ಎಂದು ಆರೋಪವನ್ನು ಸಿಬಿಐ ಸಾರಾಸಗಟಾಗಿ ಅಲ್ಲಗಳೆದಿದೆ. ಕಾನೂನಿನ ಪ್ರಕ್ರಿಯೆಗಳ ಅನ್ವಯವೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ರಾಯ್‌ ಅವರ ಮನೆಗಳಲ್ಲಿ ಶೋಧ ನಡೆಸಿರುವುದರ ಹಿಂದೆ ರಾಜಕೀಯ ಕೈವಾಡ ಇಲ್ಲ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry