ಉಗ್ರರಿಂದ ದೂರವಿದ್ದರಷ್ಟೇ ಶಾಂತಿ: ಪಾಕ್‌ಗೆ ಎಚ್ಚರಿಕೆ

7
ನಿಷ್ಠುರ ಸಂದೇಶ ರವಾನಿಸಿದ ಭಾರತದ ಸೇನೆ

ಉಗ್ರರಿಂದ ದೂರವಿದ್ದರಷ್ಟೇ ಶಾಂತಿ: ಪಾಕ್‌ಗೆ ಎಚ್ಚರಿಕೆ

Published:
Updated:
ಉಗ್ರರಿಂದ ದೂರವಿದ್ದರಷ್ಟೇ ಶಾಂತಿ: ಪಾಕ್‌ಗೆ ಎಚ್ಚರಿಕೆ

ನವದೆಹಲಿ: ಭಯೋತ್ಪಾದಕರಿಗೆ ಪ್ರಚೋದನೆ ಮತ್ತು ಉಗ್ರರ ಒಳನುಸುಳುವಿಕೆಗೆ ಕುಮ್ಮಕ್ಕು ನೀಡುವುದನ್ನು  ನಿಲ್ಲಿಸದಿದ್ದರೆ ಗಡಿಯಲ್ಲಿ ಶಾಂತಿ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಭಾರತವು ಸೋಮವಾರ ನಿಷ್ಠುರವಾಗಿ ಹೇಳಿದೆ.

ಭಾರತದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ಎ.ಕೆ. ಭಟ್‌ ಮತ್ತು ಪಾಕಿಸ್ತಾನದ ಡಿಜಿಎಂಒ ಮೇಜರ್‌ ಜನರಲ್‌ ಸಹೀರ್‌ ಸಂಶದ್‌ ಮಿರ್ಜಾ ನಡುವೆ ನಡೆದ ಪೂರ್ವನಿರ್ಧರಿತವಲ್ಲದ ದೂರವಾಣಿ ಮಾತುಕತೆಯಲ್ಲಿ ಭಾರತ ಈ ಸ್ಪಷ್ಟ ಸಂದೇಶ ರವಾನಿಸಿದೆ.

ಬೆಳಿಗ್ಗೆ 10.30ಕ್ಕೆ ನಡೆದಿರುವ ಈ ಮಾತುಕತೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿರುವ ಸದ್ಯದ ಪರಿಸ್ಥಿತಿಯ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. ಮಿರ್ಜಾ  ಮನವಿ ಮೇರೆಗೆ ಮಾತುಕತೆ ನಡೆದಿದೆ.  ಸಾಮಾನ್ಯವಾಗಿ ಡಿಜಿಎಂಒ ಕಚೇರಿ ಅಧಿಕಾರಿಗಳ  ನಡುವೆ ವಾರಕ್ಕೊಮ್ಮೆ ಮಾತುಕತೆ ನಡೆಯುತ್ತದೆ.

ಒಂದು ವೇಳೆ, ಒಳನುಸುಳುವಿಕೆಗೆ ಕುಮ್ಮಕ್ಕು ನೀಡುವುದನ್ನು ಮತ್ತು ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ಮಾಡುವುದನ್ನು ಪಾಕಿಸ್ತಾನ ಮುಂದುವರಿಸಿದರೆ ಭಾರತ ಪ್ರತೀಕಾರದ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಲೆಫ್ಟಿನೆಂಟ್‌ ಜನರಲ್‌ ಭಟ್‌ ಸ್ಪಷ್ಟಪಡಿಸಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ನಾಗರಿಕರ ಹತ್ಯೆಯ ಬಗ್ಗೆ ಪಾಕಿಸ್ತಾನ ಎತ್ತಿರುವ ಆಕ್ಷೇಪದ ಬಗ್ಗೆ ಸ್ಪಷ್ಟನೆ ನೀಡಿರುವ ಭಟ್‌, ಭಾರತದ ಸೇನೆಯು ವೃತ್ತಿಪರ ಪಡೆಯಾಗಿದ್ದು, ಯಾವ ರೂಪದಲ್ಲೂ ಯಾವುದೇ ನಾಗರಿಕನಿಗೆ ಹಾನಿ ಮಾಡುವುದಿಲ್ಲ ಎಂದಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿ ಎರಡೂ ರಾಷ್ಟ್ರಗಳು ಗುಂಡಿನ ಚಕಮಕಿಯಲ್ಲಿ ನಿರತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿಯೇ ಈ ಮಾತುಕತೆ ನಡೆದಿದೆ. 2017ರ ಮೊದಲ ಐದು ತಿಂಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 65 ಉಗ್ರರನ್ನು ಹತ್ಯೆ ಮಾಡಲಾಗಿದೆ. ಭಾರತದ 19 ಯೋಧರು ಹುತಾತ್ಮರಾಗಿದ್ದಾರೆ.

ಎರಡೂ ದೇಶಗಳ ಡಿಜಿಎಂಒ ಕಚೇರಿಗಳ ಅಧಿಕಾರಿಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಹಾಟ್‌ಲೈನ್‌ ಮೂಲಕ ದೂರವಾಣಿ ಮಾತುಕತೆ ನಡೆಸುತ್ತಾರೆ. ಪರಿಸ್ಥಿತಿಯ ಗಂಭೀರತೆಯ ಕಾರಣದಿಂದ ಇಬ್ಬರೂ ಡಿಜಿಎಂಒಗಳು ಈಗ ಪರಸ್ಪರ ಮಾತನಾಡಿದ್ದಾರೆ.

ಭಟ್‌ ಮತ್ತು ಮಿರ್ಜಾ ಅವರು ಕೊನೆಯ ಬಾರಿ ಮೇ  2ರಂದು ದೂರವಾಣಿಯಲ್ಲಿ ಮಾತನಾಡಿದ್ದರು.

ಆ ಸಂದರ್ಭದಲ್ಲಿ ತನ್ನ ಇಬ್ಬರು ಯೋಧರ ಶಿರಚ್ಛೇದ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದ ಭಾರತ, ಅನಾಗರಿಕ ಮತ್ತು ಹೇಡಿತನದ ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಎಚ್ಚರಿಕೆ ನೀಡಿತ್ತು.

ಮೋದಿ–ಷರೀಫ್‌ ಮಾತುಕತೆ ಇಲ್ಲ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗ ಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ಮಾತುಕತೆ ನಡೆಸುವ ಸಾಧ್ಯತೆ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ.

ಕಜಕಿಸ್ತಾನದ ಅಸ್ತಾನಾದಲ್ಲಿ ಇದೇ ಗುರುವಾರ ಮತ್ತು ಶುಕ್ರವಾರ ಎಸ್‌ಸಿಒ ಸಭೆ ನಡೆಯಲಿದೆ.

ಶಾಂತಿ ಸ್ಥಾಪನೆಗಾಗಿ...

* ಗಡಿಯಲ್ಲಿ ಗಂಭೀರ ಪರಿಸ್ಥಿತಿ ಕಾರಣ ಡಿಜಿಎಂಒ ನಡುವೆ ಮಾತುಕತೆ

* ಈ ಹಿಂದೆ ಮೇ 2ರಂದು ನಡೆದಿದ್ದ ಮಾತುಕತೆ

* ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry