ರಿಯಲ್‌ ಎಸ್ಟೇಟ್‌ ಶೇ 8 ಕುಸಿತ

7
ನೋಟು ರದ್ದತಿಯಿಂದ ವಹಿವಾಟಿಗೆ ಧಕ್ಕೆ

ರಿಯಲ್‌ ಎಸ್ಟೇಟ್‌ ಶೇ 8 ಕುಸಿತ

Published:
Updated:
ರಿಯಲ್‌ ಎಸ್ಟೇಟ್‌ ಶೇ 8 ಕುಸಿತ

ನವದೆಹಲಿ: ನೂತನ ಕಾನೂನು ಹಾಗೂ ನೋಟು ರದ್ದತಿಯ ಪರಿಣಾಮದಿಂದಾಗಿ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮದ ವ್ಯವಹಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ  8ರಷ್ಟು ಕುಸಿತ ಕಂಡಿದೆ.

ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌, ಪುಣೆ, ಮುಂಬೈ ಮತ್ತು ಅಹಮದಾಬಾದ್‌ ನಗರಗಳಲ್ಲಿ 2017ರ ಮಾರ್ಚ್‌ಗೆ ಅಂತ್ಯಗೊಂಡ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗೃಹ ನಿರ್ಮಾಣ ಕ್ಷೇತ್ರದ ನೋಂದಣಿಯಲ್ಲಿ ಶೇ 16ರಷ್ಟು ಕುಸಿತ ದಾಖಲಾಗಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.

2016ರ ಮಾರ್ಚ್‌ನಲ್ಲಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೆರಾ) ಘೋಷಣೆಯಾದ ನಂತರದ ಪ್ರತಿ ತ್ರೈಮಾಸಿಕದ ವ್ಯವಹಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ಥಿರತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಕಳೆದ ನವೆಂಬರ್‌ನಲ್ಲಿ ನೋಟು ರದ್ದತಿ ನಿರ್ಧಾರ ಪ್ರಕಟಿಸಿದ್ದರ ಕಾರಣ ಕಳೆದ ನಾಲ್ಕು ತ್ರೈಮಾಸಿಕದ ಅವಧಿಯಲ್ಲಿ ಹೊಸ ಖರೀದಿಯಲ್ಲಿ ಕುಸಿತ ದಾಖಲಾಗಿದೆ.

2015–216ನೇ ಸಾಲಿನ ನಾಲ್ಕು ತ್ರೈಮಾಸಿಕ ಅವಧಿಗಳಿಗೆ ಹೋಲಿಸಿದರೆ 2016–17ನೇ ಸಾಲಿನ ಅವಧಿಯಲ್ಲಿ ಒಟ್ಟಾರೆ ಶೇ 8ರಷ್ಟು ಕುಸಿತ ಕಂಡುಬಂದಿದೆ ಎಂದು ಸೋಮವಾರ ಬಿಡುಗಡೆಯಾದ ಕುಷ್‌ಮನ್‌ ಅಂಡ್‌ ವೇಕ್‌ಫೀಲ್ಡ್‌ ಇಂಡಿಯಾ ಸಂಸ್ಥೆಯ ಸಮೀಕ್ಷಾ ವರದಿ ಹೇಳಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ  ಕೈಗೆಟುಕುವ ವಿಭಾಗದ ಪಾಲು ಕಳೆದೆರಡು ವರ್ಷಗಳಲ್ಲಿ ಈ ವರ್ಷ ಶೇ 25ರಿಂದ 30ಕ್ಕೆ ವೃದ್ಧಿಯಾಗಿದ್ದು, ಇದೇ ಅವಧಿಯಲ್ಲಿ ಉನ್ನತ ಹಾಗೂ ಐಷಾರಾಮಿ ವಿಭಾಗದ ಪಾಲು ಶೇ 11ರಿಂದ 13ಕ್ಕೆ ಇಳಿದಿದೆ. ಉನ್ನತ ಹಾಗೂ ಐಷಾರಾಮಿ ವಿಭಾಗದ ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಹೊಂದಾಣಿಕೆಯ ಕೊರತೆಯಿಂದಾಗಿ ಈ ಕುಸಿತ ದಾಖಲಾಗಿದ್ದು, ಎಲ್ಲ ವಿಭಾಗಗಳ ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.

ವಸತಿ ಕ್ಷೇತ್ರದಲ್ಲಿ ಮುಂದಿನ ಮೂರು ತ್ರೈಮಾಸಿಕಗಳಲ್ಲೂ ಈ ಪ್ರವೃತ್ತಿಯೇ ಮುಂದುವರಿಯುವ ಸಾಧ್ಯತೆಗಳಿವೆ. ರೆರಾ ನಿಯಮಗಳಿಗೆ ಅನುಸಾರ ಡವಲಪರ್‌ಗಳು ಕೆಲವು ಸ್ವಾಭಾವಿಕ ಬದಲಾವಣೆಗೆ ಮನಸ್ಸು ಮಾಡುವ ಸಾಧ್ಯತೆಗಳಿವೆ ಎಂದು ಕುಷ್‌ಮನ್‌ ಅಂಡ್‌ ವೇಕ್‌ಫೀಲ್ಡ್‌ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಶುಲ್‌ ಜೈನ್‌ ಅಭಿಪ್ರಾಯಪಡುತ್ತಾರೆ.

ದೀರ್ಘಕಾಲದ ಕುಸಿತದ ಪರಿಣಾಮ ದೆಹಲಿ, ಬೆಂಗಳೂರು ಮತ್ತು ಮುಂಬೈನ ಆಯ್ದ ಮಾರುಕಟ್ಟೆಯಲ್ಲಿ ಡವಲಪರ್ಸ್‌ಗಳನ್ನು ಬೆಲೆ ಇಳಿಕೆಯತ್ತ ಆಲೋಚಿಸುವಂತೆ ಪ್ರೇರೇಪಿಸಿದ್ದು ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಗೋಚರಿಸಿದೆ. ಬಂಡವಾಳ ಹೂಡಿಕೆಯ ಪ್ರಮಣದಲ್ಲಿ ಶೇ 13ರಷ್ಟು ಕಿಸಿತವು ದೆಹಲಿಯ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದ ಕೆಲವೆಡೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಮಧ್ಯಮ ಮತ್ತು ಐಷಾರಾಮಿ ವಸತಿಯ ವಿಭಾಗದಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕರು ಬೆಲೆಗೆ ಸಂಬಂಧಿಸಿದಂತೆ ಆಲೋಚಿಸುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry