ಸಂಚಾರಕ್ಕೆ ಮೆಟ್ರೊ ನಿಗಮ ಸನ್ನದ್ಧ

7
ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗ

ಸಂಚಾರಕ್ಕೆ ಮೆಟ್ರೊ ನಿಗಮ ಸನ್ನದ್ಧ

Published:
Updated:
ಸಂಚಾರಕ್ಕೆ ಮೆಟ್ರೊ ನಿಗಮ ಸನ್ನದ್ಧ

ಬೆಂಗಳೂರು: ‘ರೈಲು ಸುರಕ್ಷತಾ ಆಯುಕ್ತರಿಂದ  ಪ್ರಮಾಣಪತ್ರ ಸಿಕ್ಕ ಮರುದಿನವೇ, ಉತ್ತರ ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ– ಸಂಪಿಗೆ ರಸ್ತೆ ನಡುವೆ ರೈಲು ಸಂಚಾರ ಆರಂಭಿಸಲು ಸನ್ನದ್ಧವಾಗಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ತಿಳಿಸಿದರು.

ರೈಲು ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಜೂನ್‌ 1ರಂದು ಈ ಮಾರ್ಗದ ತಪಾಸಣೆ ಪೂರ್ಣಗೊಳಿಸಿದ್ದಾರೆ. ತಪಾಸಣೆ ವೇಳೆ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದೆ.

ಕಾರಿಡಾರ್‌ನ ಸುರಂಗ ಮಾರ್ಗದಲ್ಲಿ ಚಿಕ್ಕಪೇಟೆ ಹಾಗೂ ಕೆ.ಆರ್‌.ಮಾರುಕಟ್ಟೆ ನಿಲ್ದಾಣಗಳ ಕಾಮಗಾರಿಗಳು ಬಾಕಿ ಉಳಿದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಖರೋಲ, ‘ಎರಡೂ ನಿಲ್ದಾಣಗಳ ಪ್ರಮುಖ ಕಾಮಗಾರಿಗಳು ಮುಗಿದಿವೆ. ಪ್ರತಿ ನಿಲ್ದಾಣದಲ್ಲೂ ತಲಾ

ನಾಲ್ಕು ಪ್ರವೇಶದ್ವಾರಗಳಿವೆ. ಸಿಆರ್‌ಎಸ್‌ ಅವರ ಅನುಮತಿ ಸಿಕ್ಕರೆ ಮೂರು ಪ್ರವೇಶದ್ವಾರಗಳನ್ನು ಬಳಸಿ ನಾಳೆಯಿಂದಲೇ

ಕಾರ್ಯಾಚರಣೆ ಆರಂಭಿಸಬಹುದು’ ಎಂದು ಅವರು ಹೇಳಿದರು.

ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಿಆರ್‌ಎಸ್‌ ವರದಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಸೂಚಿಸಬಹುದು. ಹಾಗಾಗಿ ವರದಿ ಕೈ ಸೇರದೆ ಏನನ್ನೂ ಪ್ರತಿಕ್ರಿಯಿಸಲಾರೆ’ ಎಂದರು.

ಶುಕ್ರವಾರದೊಳಗೆ ಸಿಆರ್‌ಎಸ್‌ ವರದಿ

‘ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆಯ ವರದಿಯನ್ನು ಶುಕ್ರವಾರದ ಒಳಗೆ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ರೈಲು ಸುರಕ್ಷತಾ ಆಯುಕ್ತ (ದಕ್ಷಿಣ ವೃತ್ತ) ಕೆ.ಎ.ಮನೋಹರನ್‌ ತಿಳಿಸಿದರು.

‘ಚಿಕ್ಕಪೇಟೆ ಹಾಗೂ ಕೆ.ಆರ್‌.ಮಾರುಕಟ್ಟೆ ನಿಲ್ದಾಣಗಳಲ್ಲಿ ಪ್ರವೇಶದ್ವಾರದ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ರೈಲು ಸಂಚಾರ ಆರಂಭಿಸಲು ಅಡ್ಡಿ ಇಲ್ಲ.  ನಿಲ್ದಾಣದ ನಾಲ್ಕು ಪ್ರವೇಶದ್ವಾರಗಳ ಪೈಕಿ ಎರಡನ್ನು ಮಾತ್ರ ಬಳಸಿಯೂ ಕಾರ್ಯಾಚರಣೆ ಆರಂಭಿಸಬಹುದು. ಆದರೆ, ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry