ಗಿಡ ನೆಟ್ಟ ನೂತನ ವಧುವರರು

7

ಗಿಡ ನೆಟ್ಟ ನೂತನ ವಧುವರರು

Published:
Updated:
ಗಿಡ ನೆಟ್ಟ ನೂತನ ವಧುವರರು

ಚಿತ್ರದುರ್ಗ: ಎಸ್‌ಜೆ ಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್ ಮತ್ತು ಮುರುಘಾ ಮಠದ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ 27ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 56 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.

ಮುರುಘಾಮಠದ ಶಿವಮೂರ್ತಿ ಶರಣರು ಸೇರಿದಂತೆ ನಾಡಿನ ವಿವಿಧ ಮಠಾಧೀಶರ ನವದಂಪತಿಗೆ ಪುಷ್ಪವೃಷ್ಟಿ ಮೂಲಕ ಹಾರೈಸಿದರು. ನಂತರ ಎಸ್ ಜೆ ಎಂ ಪಾಲಿಹೌಸ್‌ ಸಂಸ್ಥೆಯವರು ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿ ಜೋಡಿಯಿಂದ ಒಂದೊಂದು ಗಿಡ ನೆಡಿಸಿದರು.

ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಮುರುಘಾ ಶರಣರು, ‘ಮೋಸ, ವಂಚನೆಯಿಂದ ಗಳಿಸಿದ ಸಂಪತ್ತು ಶೋಭೆ ತರುವುದಿಲ್ಲ. ಸಂಪತ್ತು ಬಿಟ್ಟು, ಆದರ್ಶದ ಜೀವನ ನಡೆಸಿ’ ಎಂದು ಕಿವಿಮಾತು ಹೇಳಿದರು.

ಕಲಬುರ್ಗಿ ಜಿಲ್ಲೆ ಸುಲೇಪೇಟೆ ಖಟವಾಂಗೇಶ್ವರ ಮಠದ ಗುರುಲಿಂಗ ಸ್ವಾಮೀಜಿ, ಬೆಳಗಾವಿ ಜಿಲ್ಲೆ ನೇಗಿನಹಾಳ ಮಡಿವಾಳೇಶ್ವರ ಮಠದ ಬಸವಸಿದ್ಧ ಲಿಂಗ ಸ್ವಾಮೀಜಿ, ‘27 ವರ್ಷಗಳಿಂದ ಮುರುಘಾ ಶರಣರು ನಡೆಸುತ್ತಿರುವ ಸಾಮೂಹಿಕ ಕಲ್ಯಾಣ ಮಹೋತ್ಸವನ್ನು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸವಾಗ ಬೇಕು’ ಎಂದು ಅಭಿಪ್ರಾಯಪಟ್ಟರು.

ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ‘ಈ ಕಾಯ ಒಂದುದಿನ ಮಣ್ಣಾಗುತ್ತದೆ. ಆದರೆ ಬಂದು ಹೋಗುವ ಮಧ್ಯದಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕು. ಬದುಕಿನಲ್ಲಿ ವಿವಾಹ ಎನ್ನುವುದು ಪ್ರಮುಖ ಘಟ್ಟ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಾಗುವುದು ಜೀವನ. ಸತಿಪತಿ ಗಳೊಂದಾದ ಭಕ್ತಿ ಶಿವಂಗೆ ಹಿತವಪ್ಪುದು ಎಂಬ ವಚನದಂತೆ ಜೀವಿಸಬೇಕು’ ಎಂದು ಸಲಹೆ ನೀಡಿದರು.

ಖಾನಾಪುರದ ಉದ್ಯಮಿ ಋತುರಾಜ್ ಜೆ.ಮಾಕಾವಿ, ಅಥಣಿಯ ಪಾಟೀಲಗೌಡ, ನಿಪ್ಪಾಣಿ ಮುರುಘೇಂದ್ರ ಮಠದ ಕಾರ್ಯದರ್ಶಿ ವಜ್ರಕಾಂತ ಬಾಳಪ್ಪ ಸದಲಗಿ, ಕಾರ್ಯಕ್ರಮ ದಾಸೋಹಿ ರಂಗನಾಥ್ ಮೋಟಾರ್ಸ್‌ ಮಾಲೀಕ ರವಿಕುಮಾರ್ ವೇದಿಕೆಯಲ್ಲಿ ದ್ದರು.  ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಹೊಳಲ್ಕೆರೆಯ ಬಸವಪ್ರಜ್ಞಾ ಸ್ವಾಮೀಜಿ, ಚಳ್ಳಕೆರೆ ನಾಗಗೊಂಡನ ಹಳ್ಳಿಯ  ಚಿಲುಮೆರುದ್ರಸ್ವಾಮಿ ಮಠದ ಬಸವ ಕಿರಣ ಸ್ವಾಮೀಜಿ, ನಾಯಕನ ಹಟ್ಟಿಯ ತಿಪ್ಪೇರುದ್ರ ಸ್ವಾಮೀಜಿ, ರುದ್ರಾಣಿ ಗಂಗಾಧರ್, ಮಲ್ಲಿಕಾರ್ಜುನಪ್ಪ ಜಿ.ಸಿ., ಪೈಲ್ವಾನ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ರೈಸ್ತ ವರ-ಆದಿಕರ್ನಾಟಕ ವಧು, ಲಂಬಾಣಿ ವಧು-ಲಿಂಗಾಯತ ವರ, ಒಕ್ಕಲಿಗ ವರ - ಮಡಿವಾಳ ವಧು, ಆದಿಕರ್ನಾಟಕ ವರ - ಕುಂಚಿಟಿಗ ವಧು ಅಂತರ್ಜಾತಿ ವಿವಾಹ ನೆರವೇರಿತು. ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ದೇವರಾಜ್ ಮತ್ತು ತೋಟಪ್ಪ ಇದ್ದರು.  ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಸಿ.ವಿ. ಸಾಲಿಮಠ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry