ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮ ಸಂಸ್ಕೃತಿ ಕೀಳಾಗಿ ಕಾಣದಿರಿ

Last Updated 6 ಜೂನ್ 2017, 5:17 IST
ಅಕ್ಷರ ಗಾತ್ರ

ತುಮಕೂರು: ‘ಯುವ ಸಮುದಾಯ ಶ್ರಮ ಸಂಸ್ಕೃತಿ ಕೀಳಾಗಿ ಕಾಣಬಾರದು. ಈ ಮನೋಭಾವದಿಂದ ಸಮಾಜದಲ್ಲಿ ತಾರತಮ್ಯ ಮತ್ತು ಒಡಕು ಸೃಷ್ಟಿಯಾಗುತ್ತದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ವಿಶ್ವ ಪರಿಸರದ ದಿನಾಚರಣೆ ಅಂಗವಾಗಿ ಸೋಮವಾರ ಸಿಜ್ಞಾ ಯುವ ಸಂವಾದ, ವಿಜ್ಞಾನ ಕೇಂದ್ರ ಹಾಗೂ ಯುವ ಮುನ್ನಡೆ ಸಂಘಟನೆಗಳು ನಗರದ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ನಿಸರ್ಗದ ಜೊತೆ ಬೆಸೆಯೋಣ’ ಯುವ ಜನರ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
‘ಮಣ್ಣನ್ನು, ಸಗಣಿಯನ್ನು ಕೀಳಾಗಿ ಕಾಣಬಾರದು. ವಿದ್ಯಾವಂತರಾಗುವುದು ಎಂದರೆ ಸುಲಭ ಜೀವಿಗಳಾಗುವುದಲ್ಲ. ಯುವ ಸಮುದಾಯ ಜವಾಬ್ದಾರಿಗಳನ್ನು ಅರಿತು ನಡೆಯಬೇಕು’ ಎಂದರು.

‘ಗ್ರಾಮ ಮತ್ತು ಪೇಟೆ ಜೀವನದಲ್ಲಿ ಒಳಿತು ಮತ್ತು ಕೆಡಕು ಎರಡೂ ಇವೆ. ಹಳ್ಳಿಗಳ ಶ್ರಮದ ಬದುಕನ್ನು ಉಳಿಸಿಕೊಳ್ಳಬೇಕು. ನಗರಗಳಿಂದ ವೈಜ್ಞಾನಿಕ ಬದುಕನ್ನು ಪಡೆದುಕೊಳ್ಳಬೇಕು. ಎರಡರಲ್ಲಿರುವ ಉತ್ತಮ ವಿಚಾರಗಳನ್ನು ಹೆಕ್ಕಿ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರವನ್ನು ಪೂರ್ಣವಾಗಿ ನೀವೇ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಸುತ್ತಲಿನ ಪರಿಸರ ಕಾಪಾಡಲು ಆದ್ಯತೆ ನೀಡಿ. ಗಿಡ ಮರಗಳನ್ನು ಕಾಪಾಡಿದರೆ ಮಾತ್ರ ತುಮಕೂರು ಹಸಿರಾಗುತ್ತದೆ. ಸ್ವಚ್ಛವೂ ಆಗುತ್ತದೆ’ ಎಂದರು.

‘ಕಸ ಹಿಂದೆಯೂ ಇತ್ತು. ಈಗಲೂ ಇದೆ. ಆದರೆ ಹಿಂದೆ ತಿಪ್ಪೆಗೆ ಕಸ ಹಾಕುತ್ತಿದ್ದರು. ಅದು ಗೊಬ್ಬರವಾಗಿ ಮತ್ತೆ ಉಪಯೋಗಕ್ಕೆ ಬರುತ್ತಿತ್ತು. ಆದರೆ ಈಗ ಕಸ ರಸವಾಗುತ್ತಿಲ್ಲ. ವಿಷದ ಪದಾರ್ಥಗಳನ್ನು ಪರಿಸರಕ್ಕೆ ಸೇರಿಸುತ್ತಿದ್ದೇವೆ. ವಾಹನಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ನಮ್ಮಿಂದ ಉತ್ಪಾದನೆಯಾಗುವ ಕಸದ ಪ್ರಮಾಣವನ್ನೂ ತಗ್ಗಿಸಬೇಕು’ ಎಂದು ಸಲಹೆ ನೀಡಿದರು.

ಗಿಡವನ್ನು ಮರವಾಗಿ ಬೆಳೆಸುತ್ತೇವೆ ಎನ್ನುವ ಪ್ರಮಾಣ ವಚನದೊಂದಿಗೆ ನಾಲ್ಕು ವಿದ್ಯಾರ್ಥಿಗಳಿಗೆ ಗಿಡ ನೀಡಲಾಯಿತು. ಪರಿಸರ ಅಳಿವು ಮತ್ತು ಉಳಿವಿನ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ವಿದ್ಯಾರ್ಥಿಗಳು ಸ್ವರಾಜ್ಯ ಪರಿಕಲ್ಪನೆ, ವಸ್ತುಗಳ ಬಳಕೆ, ಪರಿಸರ ರಕ್ಷಣೆ ಕುರಿತು ಪ್ರಸನ್ನ ಅವರಿಗೆ ಪ್ರಶ್ನೆ ಕೇಳಿ, ಉತ್ತರ ಪಡೆದರು. ಯುವ ಮುನ್ನಡೆಯ ಕವಿತಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಕೊಟ್ಟಾ ಶಂಕರ್, ಸಿಜ್ಞಾ ಸಂವಾದ ಕೇಂದ್ರದ ಜ್ಞಾನ ಸಿಂಧೂ ಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT