ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಮಗ್ಗ ಉತ್ಪನ್ನ ರಫ್ತಿಗೆ ಉತ್ತೇಜನ

Last Updated 6 ಜೂನ್ 2017, 5:32 IST
ಅಕ್ಷರ ಗಾತ್ರ

ತುಮಕೂರು: ‘ನೇಕಾರಿಕೆ’ ಒಂದು ಕುಶಲ ಕಲೆ. ಈ ಕಲೆ ಉಳಿಸಿ ಕೈಮಗ್ಗ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ. ನೇಕಾರರ ಸಮಸ್ಯೆಗಳು ಮತ್ತು ಕೈಮಗ್ಗ ಉತ್ಪನ್ನಗಳ ರಫ್ತು ಉತ್ತೇಜನಕ್ಕೆ ಇರುವ ತೊಡಕು ನಿವಾರಿಸಲು ದೇಶವ್ಯಾಪಿ ಅಧ್ಯಯನ ಮಾಡಲಾಗುತ್ತಿದೆ ಎಂದು ಕೇಂದ್ರ ಜವಳಿ ಇಲಾಖೆ ನಿರ್ದೇಶಕಿ ಪೂರ್ಣಿಮಾ ಪ್ರಕಾಶ್ ಹೇಳಿದರು.

‘ನೇಕಾರಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ವಿದ್ಯುತ್ ಮಗ್ಗ (ಪವರ್ ಲೂಮ್) ಬಳಕೆಯತ್ತ ವಾಲುತ್ತಿದ್ದಾರೆ. ಕೈಮಗ್ಗ ಉತ್ಪನ್ನಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಬೇಡಿಕೆಯೂ ಇದೆ. ಉತ್ಪಾದನಾ ವೆಚ್ಚ, ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಸಮಸ್ಯೆಗಳಾಗಿವೆ. ವಿದೇಶದಲ್ಲೂ ಬೇಡಿಕೆ ಇದೆ. ಹೀಗಾಗಿ, ಇದಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ಈ ಕಾರಣಕ್ಕಾಗಿಯೇ ದೇಶದಲ್ಲಿರುವ ನೇಕಾರ ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸುವುದು, ಮುದ್ರಾ ಯೋಜನೆಯಿಂದ ಸಾಲ ಕಲ್ಪಿಸುವುದು, ರಫ್ತು ಮಾಡಲು ಅಗತ್ಯ ಮಾರ್ಗದರ್ಶನ ನೀಡುವುದು, ಮಾರುಕಟ್ಟೆ ತಾಂತ್ರಿಕತೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುವುದು’ ಎಂದು ವಿವರಿಸಿದರು.

‘ಜಿಲ್ಲೆಯ ಗುಬ್ಬಿ, ತುಮಕೂರು, ತಿಪಟೂರು ತಾಲ್ಲೂಕುಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ತಿಂಗಳು ಪಾವಗಡ ಮತ್ತು ವೈ.ಎನ್.ಹೊಸಕೋಟೆಗೆ ಭೇಟಿ ನೀಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಅಂದಾಜು 40ರಿಂದ 50 ಸಾವಿರ ನೇಕಾರರು ಇದ್ದಾರೆ. ಬಹುತೇಕ ಎಲ್ಲರೂ ಕುಶಲ ನೇಕಾರರೇ ಆಗಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರಕ್ಕೂ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

‘ನೇಕಾರರು ಸಹಾಯವಾಣಿ– 18002084800 ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಹವಾಲು ಸಲ್ಲಿಸಬಹುದು’ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಅಧ್ಯಕ್ಷ ನಂದೀಶ್, ಭಾರತಿ ಹೆಗಡೆ ಇದ್ದರು.

ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಮನವಿ
ನೇಕಾರರಿಗೆ ಸರ್ಕಾರವೇ ಮೂಲ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಕಾರ್ಯದರ್ಶಿ ಧನಿಯಾಕುಮಾರ್ ನೇತೃತ್ವದಲ್ಲಿ ಪೂರ್ಣಿಮಾ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.

‘ನೇಕಾರರಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಸರ್ಕಾರವೇ ಖರೀದಿಸಿ ಸಂಸ್ಥೆಯ ಮೂಲಕ ನೇಕಾರರಿಗೆ ನೇರವಾಗಿ ಪೂರೈಸಬೇಕು. ನೇಕಾರರಿಗೆ ಕಡ್ಡಾಯವಾಗಿ ಸರ್ಕಾರದಿಂದ ಉಚಿತ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ವಿದ್ಯಾರ್ಥಿ ವೇತನದಲ್ಲಿ ಹೆಚ್ಚಳ, ಸರ್ಕಾರವೇ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವಂತಹ ಆರೋಗ್ಯ ಭಾಗ್ಯ ಯೋಜನೆಯನ್ನು ನೇಕಾರರಿಗೆ ಕಲ್ಪಿಸಬೇಕು. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ನೇಕಾರ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಗ್ಗದ ಖರೀದಿಯಲ್ಲಿ ಶೇ 50ರಷ್ಟು ವಿನಾಯಿತಿ ನೀಡಬೇಕು. ಸರ್ಕಾರಿ ಉದ್ಯೋಗದಲ್ಲಿ ನೇಕಾರರಿಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ನೇಕಾರರಿಗೆ ಗುರುತಿನ ಚೀಟಿ
‘ಶ್ವಾಸಕೋಶ, ಹೃದಯ ಸಂಬಂಧಿ, ಚರ್ಮ ರೋಗ ಮುಂತಾದ ಕಾಯಿಲೆಗಳಿಗೆ ನೇಕಾರರು ತುತ್ತಾಗುತ್ತಾರೆ. ಮಕ್ಕಳಿಗೆ ಶಿಕ್ಷಣ, ಉದ್ಯೋಗ ಪಡೆಯಲು ಸಾಕಷ್ಟು ತೊಂದರೆಪಡುತ್ತಾರೆ. ಹೀಗಾಗಿ ನೇಕಾರರಿಗೆ ವೃತ್ತಿ ಆಧಾರಿತ ಕಾರ್ಡ್ ಕೊಡಬೇಕು. ನೇಕಾರರಿಗೆ ಗುರುತಿನ ಚೀಟಿ ಕೊಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶೀಲನೆ ಹಂತದಲ್ಲಿದೆ’ ಎಂದು ಪೂರ್ಣಿಮಾ ಪ್ರಕಾಶ್ ಹೇಳಿದರು.

ಗುಜರಾತ್‌ನಲ್ಲಿ ಜವಳಿ ಪ್ರದರ್ಶನ
‘ಗುಜರಾತಿನ ಗಾಂಧಿನಗರದಲ್ಲಿ ಜವಳಿ ಪ್ರದರ್ಶನವನ್ನು (ಟೆಕ್ಸ್‌ಟೈಲ್‌ ಎಕ್ಸ್‌ಪೋ) ಜೂನ್ 30ರಿಂದ ಆಯೋಜಿಸಲಾಗಿದೆ. ದೇಶದ ಕೈಮಗ್ಗ ಉತ್ಪಾದನೆಯಲ್ಲಿ ಹೆಸರು ಗಳಿಸಿರುವ ಕೈಮಗ್ಗ ಉತ್ಪನ್ನ ಸಂಸ್ಥೆಗಳು ಭಾಗವಹಿಸಲಿವೆ. ಕೈಮಗ್ಗ ಉತ್ಪನ್ನ ಖರೀದಿಸಲು ವಿದೇಶಿ ಸಂಸ್ಥೆಗಳು ಬರಲಿವೆ’ ಎಂದು ಪೂರ್ಣಿಮಾ ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT