ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನೀರಿನ ಬರ

7

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನೀರಿನ ಬರ

Published:
Updated:
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನೀರಿನ ಬರ

ಶಹಾಪುರ: ನೀರಾವರಿ ಕ್ಷೇತ್ರದ ಜೊತೆಗೆ ದೊಡ್ಡ ಕೆರೆಗಳ ಸೌಲಭ್ಯ ಹೊಂದಿರುವ ಹಾಗೂ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಗರ ಗ್ರಾಮಸ್ಥರು ಕನಿಷ್ಠ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.

ಗ್ರಾಮದ ಸುತ್ತಮುತ್ತಲು ನಿಜಾಮರ ಆಳ್ವಿಕೆಯಲ್ಲಿ ಕಟ್ಟಿದ ಹಳೆಯ 28 ಬಾವಿಗಳಿವೆ. ಸದಾ ಬಾವಿಯಲ್ಲಿ ನೀರು ಇದೆ. ಆದರೆ ನಿರ್ವಹಣೆ ಇಲ್ಲದ ಕಾರಣ ಹಾಗೂ ಗ್ರಾಮಸ್ಥರ ನಿಷ್ಕಾಳಜಿಯಿಂದ ಈಗ ಅವೆಲ್ಲವು ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ. ಹೆಚ್ಚಿನ ಬಾವಿಯಲ್ಲಿ ಹೂಳು ತುಂಬುವುದರ ಜೊತೆಯಲ್ಲಿ ಜಾಲಿಗಿಡ ಬೆಳೆದು ನಿಂತಿವೆ.

ಇಂತಹ ಬಾವಿಗಳನ್ನು ಜೀರ್ಣೋ ದ್ಧಾರಗೊಳಿಸಿ ಆಯಾ ಬಡಾವಣೆಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಸಾಕಷ್ಟು ಅವಕಾಶವಿದೆ. ಆದಾಗ್ಯೂ ಗ್ರಾಮಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲೂ ಕೆಲ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಸಮೃದ್ಧವಾಗಿ ನೀರು ಇದ್ದರೂ ಸಹ ನಿರ್ವಹಣೆ ಬರ ಎದುರಾಗಿದೆ.

ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಕಡೆ ಚರಂಡಿ ನಿರ್ಮಿಸಿದ್ದರೂ ಸಹ ಚರಂಡಿಯಲ್ಲಿನ ಹೂಳು ಸ್ವಚ್ಛಗೊಳಿಸದ್ದರಿಂದ ಅಲ್ಲಿನ ನಿವಾಸಿಗರು ಬವಣೆ ಪಡುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವು ಜನತೆ ಯಿಂದ ದೂರವಾಗಿದೆ. ವೈದ್ಯರು ಸಮರ್ಪಕವಾಗಿ ಕರ್ತವ್ಯಕ್ಕೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಅಗತ್ಯವಾದ ನೀರಿನ ವ್ಯವಸ್ಥೆ ಇಲ್ಲ. ಹೆರಿಗೆ ಬಂದವರ ಪಾಡು ಹೇಳ ತೀರದು.

ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರೂ ಯಾರು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಮಹೇಶ ಸುಬೇದಾರ. ಗ್ರಾಮವು 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಶುದ್ಧ ಕುಡಿ ಯುವ ನೀರಿನ ಘಟಕ ಸ್ಥಾಪಿಸಿದ್ದೆ ಸಾಧನೆಯಾಗಿದೆ. ಹನಿ ಶುದ್ಧ ನೀರು ಜನತೆ ಪಡೆದಿಲ್ಲ.

ದಾಖಲೆಯಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಎಂದು ದಾಖಲಿಸಿದ್ದಾರೆ. ಇಲ್ಲಿ ಸಾರ್ವ ಜನಿಕರ ಹಣ ಪೋಲಾದರೂ ಯಾರು ಪ್ರಶ್ನಿಸದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರೊಬ್ಬರು. ಇನ್ನು ಮಹಿಳೆಯರ ಸಮಸ್ಯೆ ಬೆಟ್ಟದಷ್ಟಿವೆ. ಮಹಿಳೆಯರಿಗೆ ಸುಲಭ ಶೌಚಾಲಯವಿಲ್ಲ.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜಾಗೃತಿ ಇಲ್ಲದ ಕಾರಣ ಯಾರೂ ಮುಂದೆ ಬರುತ್ತಿಲ್ಲ. ರಾಜ ಕೀಯ ತಿಕ್ಕಾಟದಿಂದ ಬಡ ಜನತೆಗೆ ಸಿಗಬೇಕಾದ ಸೂರು ಕೂಡ ಮರೀಚಿಕೆ ಯಾಗಿವೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ.  ಇಂತಹ ಹಲವಾರು ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿ ಗಳು ಗಮನ ಹರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

* * 

ಎರಡು ದಿನಕೊಮ್ಮೆ ನೀರು ಸರಬರಾಜು ಮಾಡುತ್ತೇವೆ. ಗ್ರಾಮದಲ್ಲಿ 28 ಬಾವಿಗಳಿವೆ. ಸಾಧ್ಯವಾದಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಶರ್ಮುದ್ದೀನ ಮುಲ್ಲಾ

ಪಿಡಿಒ, ಸಗರ ಗ್ರಾಮ ಪಂಚಾಯಿತಿ

* * 

ಗ್ರಾಮದಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಜನತೆ ಪರದಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಶೌಚಾಲಯ ಹೊಂದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಇಲ್ಲ.

ಮಹೇಶ ಸುಬೇದಾರ

ಗ್ರಾಮದ ಮುಖಂಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry