ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಬಾಕಿ ಪಾವತಿಗೆ ಪಟ್ಟು

Last Updated 6 ಜೂನ್ 2017, 5:42 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರಸಭೆಯಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ಬಾಕಿ ವೇತನ ಹಾಗೂ ಕಸ ವಿಲೇವಾರಿ ವಿಚಾರವು ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಯಿತು. ‘ಮೂರ್ನಾಲ್ಕು ತಿಂಗಳಿಂದಲೂ ವೇತನ ಬಾಕಿ ಇದ್ದು, ಪೌರ ಕಾರ್ಮಿಕರು ಕಸ ತೆಗೆಯುತ್ತಿಲ್ಲ. ವಾರ್ಡ್‌ಗಳಲ್ಲಿ ಕಸದ ರಾಶಿ ಬಿದ್ದಿದೆ. ನೀವು ಕಸ ತೆಗೆಯಿರಿ’ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರು ತಿರುಗಿ ಬಿದ್ದರು.

‘ಪೌರಕಾರ್ಮಿಕರಿಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಸಂಬಳ ನೀಡಿಲ್ಲ. ಇದರಿಂದ ಅವರು ಕಸ, ಕಡ್ಡಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ನಗರದ ಹಾದಿ ಬೀದಿಗಳಲ್ಲಿ ಕಸ, ಕಡ್ಡಿಗಳ ರಾಶಿ ಬಿದ್ದಿದೆ. ನಾಗರಿಕರಿಂದ ನಾವು ನಿಂದನೆ ಕೇಳಬೇಕಾಗಿದೆ. ನೀವು ಪೌರ ಕಾರ್ಮಿಕರಿಗೆ ಸಂಬಳ ಕೊಟ್ಟು ಕೆಲಸ ಮಾಡಿಸುವುದಾದರೆ ಮಾಡಿಸಿ, ಇಲ್ಲ ಅಂದ್ರೆ ನೀವೇ ಬಂದು ನಮ್ಮ ವಾರ್ಡ್‌ಗಳಲ್ಲಿ ಕಸ ಕಡ್ಡಿ ತೆಗೆಯಿರಿ’ ಎಂದು ಆಯುಕ್ತ ಹರೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಪ್ರತಿ ಸಭೆಯಲ್ಲೂ ಕಸ ಕಡ್ಡಿ ವಿಲೇವಾರಿ ಸಮಸ್ಯೆ ಕುರಿತು ಚರ್ಚಿಸಲಾಗುತ್ತಿದ್ದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಬರೀ ಭರವಸೆಗಳಷ್ಟೆ ಸಿಗುತ್ತಿವೆ. ನಾವು ನಮ್ಮ ವಾರ್ಡ್‌ ಜನರಿಗೆ ಹೇಳಿ ಹೇಳಿ ಸಾಕಾಗಿದೆ. ಹಾಗಾಗಿ ಇದಕ್ಕೆ ಈ ಸಭೆಯಲ್ಲೆ ಪರಿಹಾರ ಸಿಗಬೇಕು ಎಂದು ಪಟ್ಟು ಹಿಡಿದರು.

‘ಪೌರಕಾರ್ಮಿಕರ ಬಾಕಿ ವೇತನಕ್ಕೆ ನೀಡುವ ಬಗ್ಗೆ ಇದೆ ಸಭೆಯಲ್ಲಿ ಇತ್ಯರ್ಥ ಆಗಬೇಕು. ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ’ ಎಂದು ಹಠಕ್ಕೆ ಬಿದ್ದರು.

ನಂತರ ಅಧ್ಯಕ್ಷರು ಈ ಸಭೆ ಮುಗಿದಾದ ಮೇಲೆ ಪೌರಕಾರ್ಮಿಕರ ಗುತ್ತಿಗೆದಾರರನ್ನು ಕರೆಸಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT